ರಾಷ್ಟ್ರೀಯ

ಅಮರನಾಥ ಯಾತ್ರೆ: ಮೂವರ ಸಾವು, ಒಟ್ಟು ಸಂಖ್ಯೆ 18ಕ್ಕೆ

Pinterest LinkedIn Tumblr

amarnathಶ್ರೀನಗರ: ದಕ್ಷಿಣ ಕಾಶ್ಮೀರದ ಹಿಮಾಲಯದ 3.880 ಮೀಟರ್ ಎತ್ತರದಲ್ಲಿರುವ ಅಮರನಾಥ ಗುಹಾ ದೇವಾಲಯಕ್ಕೆಹೋಗುವ ಹಾದಿಯಲ್ಲಿ ಇಬ್ಬರು ಯಾತ್ರಿಗಳು ಹಾಗೂ ಒಬ್ಬ ಸಹಾಯಕ ಮೃತರಾಗಿದ್ದು, ಸಾವನ್ನಪ್ಪಿದವರ ಸಂಖ್ಯೆ 18ಕ್ಕೇರಿದೆ.

ಕಡಿದಾದ, ದುರ್ಗಮ ಬೆಟ್ಟದ ಹಾದಿ ಹಾಗೂ ಅತಿ ಶೀತ, ಮಳೆಯ ವಾತಾವರಣದಿಂದ ಈ ಬಾರಿಯ ಪವಿತ್ರ ಯಾತ್ರೆಗೆ ಹೊರಟವರ ಪೈಕಿ 18 ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅನಂತನಾಗ್‌ ಜಿಲ್ಲೆಯಲ್ಲಿರುವ ಸಾಂಪ್ರದಾಯಿಕ 45 ಕಿಮೀ ದೂರದ ಪಹಲ್ಗಾಮ್-ಗುಹೆ ಮಾರ್ಗದಲ್ಲಿ ಗುರುವಾರ ಸಂಜೆ ಹೃದಯ ಸ್ತಂಭನ ಸಂಭವಿಸಿದ್ದರಿಂದ ಮುಂಬಯಿ ನಿವಾಸಿ ಉಜೇಶ್‌ ರಾವಲ್‌(47) ಎಂಬವರು ಸಾವನ್ನಪ್ಪಿದ್ದಾರೆ. ಪಂಜಾಬ್‌ನ ಚರಣ್‌ಜಿತ್‌ ಮಕಾರ್‌ ಎಂಬ 58 ವರ್ಷದ ವ್ಯಕ್ತಿ ಗಂದೇರ್‌ಬಾಲ್‌ ಜಿಲ್ಲೆಯ ಬಲ್ತಾರ್‌ ಗುಹಾ ಮಾರ್ಗದಲ್ಲಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ.

ಇನ್ನೊಂದೆಡೆ ಯಾತ್ರಿಕರ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಮನ್ಸೂರ್ ಅಹ್ಮದ್‌ ಶೇಖ್‌ ಅವರ ಮೇಲೆ ಸಿಡಿಲು ಹೊಡೆದ ಪರಿಣಾಮವಾಗಿ ಪಂಚ್‌ತರಣಿ ಪ್ರದೇಶದಲ್ಲಿ ಗುರುವಾರ ಸಂಜೆ ಮೃತರಾಗಿದ್ಧಾರೆ.

ಅಮರನಾಥಕ್ಕೆ ಹೋಗುವ ಎರಡೂ ಮಾರ್ಗಗಳಲ್ಲಿ ನಡೆದ ಸಾವಿನ ಹಿನ್ನೆಲೆಯಲ್ಲಿ ಈ ಬಾರಿಯ ಯಾತ್ರೆಯಲ್ಲಿ ಸಾವಿಗೀಡಾದವರ ಸಂಖ್ಯೆ 18ಕ್ಕೇರಿದೆ. ಮೃತರಲ್ಲಿ ಒಬ್ಬ ಸಿಆರ್‌ಪಿಎಫ್‌ ಜವಾನನೂ ಸೇರಿದ್ದಾನೆ.

ನೈಸರ್ಗಿಕವಾಗಿ ಮಂಜುಗಡ್ಡೆಯಿಂದ ರೂಪುಗೊಳ್ಳುವ ಅಮರನಾಥ ಗುಹೆಯಲ್ಲಿನ ಶಿವಲಿಂಗ ದರ್ಶನವನ್ನು ಜುಲೈ 2ರಿಂದ ಇಲ್ಲಿವರೆಗೆ 2.25 ಲಕ್ಷ ಯಾತ್ರಿಕರು ಮಾಡಿದ್ದಾರೆ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

Write A Comment