ರಾಷ್ಟ್ರೀಯ

ಮೊಬೈಲ್ ಕ್ರಾಂತಿ ಗ್ರಹಿಸುವಲ್ಲಿ ಮೈಕ್ರೊಸಾಫ್ಟ್‌ ಮಿಸ್ಟೇಕ್: ನಾದೆಳ್ಳ

Pinterest LinkedIn Tumblr

1507-2-2-NADELLAಒರ‌್ಲಾಂಡೊ: ಮೊಬೈಲ್ ಫೋನ್‌ಗಳ ತಂತ್ರಜ್ಞಾನದ ಕ್ರಾಂತಿಕಾರಕ ಪರಿವರ್ತನೆಯ ಬಗ್ಗೆ ಮೊದಲೇ ಗ್ರಹಿಸುವಲ್ಲಿ ಮೈಕ್ರೊಸಾಫ್ಟ್ ವಿಫಲವಾಗಿತ್ತು. ಹಾಗೂ ಇದು ಕಂಪನಿಯ ಅತಿ ದೊಡ್ಡ ಪ್ರಮಾದವೆಂದು ಅದರ ಸಿಇಒ, ಭಾರತೀಯ ಮೂಲದ ಸತ್ಯ ನಾದೆಳ್ಳ ಹೇಳಿದ್ದಾರೆ.

”ಮೈಕ್ರೊಸಾಫ್ಟ್ ಈ ಹಿಂದೆ ಮಾಡಿದ್ದ ಪ್ರಮಾದವೇನೆಂದರೆ, ಪರ್ಸನಲ್ ಕಂಪ್ಯೂಟರ್‌ಗಳು ಎಲ್ಲ ಕಾಲಕ್ಕೂ, ಎಲ್ಲ ಕಡೆಗಳಲ್ಲಿಯೂ ತಮ್ಮ ಪ್ರಾಬಲ್ಯ ಉಳಿಸಿಕೊಂಡಿರುತ್ತವೆ ಎಂದು ಭಾವಿಸಿದ್ದು. ಆದರೆ ಈಗ ಅತಿ ಹೆಚ್ಚು ಮಾರಾಟವಾಗುತ್ತಿರುವುದು 6 ಇಂಚಿನ ಫೋನ್. ನಾನು ಇದನ್ನು ಒಪ್ಪಿಕೊಳ್ಳುತ್ತೇನೆ” ಎಂದು ಸತ್ಯ ನಾದೆಳ್ಳ ತಂತ್ರಜ್ಞಾನ ವೆಬ್‌ಸೈಟ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರತಿಯೊಬ್ಬರೂ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಕಾರ್ಯಪ್ರವೃತ್ತವಾಗಬೇಕು. ಮೈಕ್ರೊಸಾಫ್ಟ್ ಈ ನಿಟ್ಟಿನಲ್ಲಿ ವಿಂಡೋಸ್ ಬಗ್ಗೆ ನವೀನ ಸಂಶೋಧನೆಗಳನ್ನು ಮಾಡಿದೆ. ಹೊಸತನದ ಅನುಕೂಲಗಳನ್ನು ವಿಂಡೋಸ್‌ನಲ್ಲಿ ಅಳವಡಿಸಲು ಇದೇ ಕಾರಣ. ಫೋನ್‌ನಲ್ಲೂ ಅಷ್ಟೇ, ಕೇವಲ ಮತ್ತೊಂದು ಫೋನನ್ನು ಮಾತ್ರ ಉತ್ಪಾದಿಸಲು ಬಯಸುವುದಿಲ್ಲ ಎಂದರು.

ಮೈಕ್ರೊಸಾಫ್ಟ್‌ಗೆ 1992ರಲ್ಲಿ ನಾನು ಸೇರಿದಾಗ ಪ್ರತಿಯೊಂದು ಮನೆಗೂ, ಪ್ರತಿಯೊಂದು ಡೆಸ್ಕ್‌ಗೂ ಪರ್ಸನಲ್ ಕಂಪ್ಯೂಟರನ್ನು ತರುವ ಗುರಿ ಕಂಪನಿಯದ್ದಾಗಿತ್ತು. ಹಾಗೂ ಕಂಪನಿ ಅದರಲ್ಲಿ ಯಶಸ್ವಿಯಾಯಿತು. ಯಾವುದೇ ಕಂಪನಿಯ ಯಶಸ್ಸಿಗೆ ಇಂತಹ ಮಹತ್ತ್ವಾಕಾಂಕ್ಷೆಯ ಗುರಿ ಇರಬೇಕು. ಮೈಕ್ರೊಸಾಫ್ಟ್ ದಿನಕ್ಕೊಂದು ಫೋನ್ ಬಿಡುಗಡೆಗೊಳಿಸುವುದಿಲ್ಲ. ಬದಲಿಗೆ ವಿನೂತನವಾಗಿರುವ ಕೆಲವು ಫೋನ್‌ಗಳನ್ನು ಬಿಡುಗಡೆಗೊಳಿಸಲಿದೆ ಎಂದರು.

Write A Comment