ನವದೆಹಲಿ: ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ ಬೈಕ್ ಸವಾರರನ್ನು ತಡೆದು ದಂಡ ಹಾಕಲು ಮುಂದಾದ ಕಾರಣಕ್ಕೆ ಇಬ್ಬರು ಪೊಲೀಸರನ್ನು ಬೈಕ್ ಸವಾರರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ನವದೆಹಲಿಯ ಗೋಕುಲ್‌ಪುರಿಯಲ್ಲಿ ನಡೆದಿದೆ.
ಒಂದೇ ಬೈಕ್‌ನಲ್ಲಿ ಮೂವರು ಪಯಣಿಸುತ್ತಿದ್ದುದನ್ನು ನೋಡಿದ ಪೊಲೀಸರು ಅವರನ್ನು ತಡೆದು ನಿಲ್ಲಿಸಿದ್ದಾರೆ. ನೀವು ಟ್ರಾಫಿಕ್ ನಿಯಮವನ್ನು ಮೀರಿದ್ದೀರಿ, ದಂಡ ನೀಡಿ ಎಂದು ಪೊಲೀಸರು ರಸೀದಿ ಹರಿಯಲು ಮುಂದಾಗಿದ್ದಾರೆ. ಅಷ್ಟಕ್ಕೆ ಮೂವರು ಯುವಕರು ವಾಗ್ವಾದ ನಡೆಸಲು ಪ್ರಾರಂಭಿಸಿದ್ದಾರೆ. ನಾವು ದಂಡ ನೀಡುವುದಿಲ್ಲ ಎಂದು ಜಗಳಕ್ಕಿಳಿದ ಬೈಕ್ ಸವಾರರು ನಂತರ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ.
ಸುತ್ತಮುತ್ತಲು ಓಡಾಡುತ್ತಿದ್ದ ಜನರು ನಿಂತುಕೊಂಡು ಈ ಎಲ್ಲ ದೃಶ್ಯಾವಳಿಗಳನ್ನು ವೀಕ್ಷಿಸಿದರೆ ವಿನಃ, ಯಾರು ಕೂಡ ಪೊಲೀಸರ ಸಹಾಯಕ್ಕೆ ಮುಂದಾಗಿಲ್ಲ.
ರಾಜಧಾನಿಯಲ್ಲಿ ಹೆಚ್ಚುತ್ತಿರುವ ಅಪರಾಧಗಳಿಗೆ ಪೊಲೀಸರನ್ನೂ ದೂಷಿಸುವ ಜನರು ಪೊಲೀಸರ ಮೇಲೆ ಇಷ್ಟೊಂದು ಶೋಷಣೆ ನಡೆಯುತ್ತಿದ್ದುದನ್ನು ನಿಂತು ನೋಡಿದ್ದು, ಅವರನ್ನು ರಕ್ಷಿಸಲು ಪ್ರಯತ್ನಿಸದಿದ್ದುದು ವಿಪರ್ಯಾಸವೇ ಸರಿ. ಗಂಭೀರವಾಗಿ ಗಾಯಗೊಂಡಿರುವ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.