ನವದೆಹಲಿ, ಜೂ.2: ಗುರುತರ ಆರೋಪದಲ್ಲಿ ಸಿಕ್ಕಿಹಾಕಿಕೊಂಡು ಬಿಜೆಪಿಯ ಘನತೆಗೆ ಕುಂದುಂಟು ಮಾಡಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಈಗ ಸೆಲ್ಫಿ ವಿತ್ ಡಾಟರ್ ಮತ್ತು ರಾಖಿ ಮೊರೆ ಹೋಗಿದ್ದಾರೆ ಎಂದು ಮಹಿಳಾ ಹೋರಾಟಗಾರ್ತಿ ಕವಿತಾಕೃಷ್ಣನ್ ಹೇಳಿದ್ದಾರೆ.
ಪ್ರಧಾನಿ ಮೋದಿ ಅವರು ನಿನ್ನೆ ತಮ್ಮ ಮನ್ ಕೀ ಬಾತ್ ರೇಡಿಯೊ ಭಾಷಣದಲ್ಲಿ ಐಪಿಎಲ್ ಕಳ್ಳಾಟದ ಲಲಿತ್ ಮೋದಿ ಹಗರಣದ ಬಗ್ಗೆ ಚಕಾರ ಎತ್ತದೆ ಹೆಣ್ಣು ಮಕ್ಕಳ ರಕ್ಷಣೆ ನಾಟಕ ಆಡಿದ್ದಾರೆ. ಬೇಟಿ ಬಚಾವೋ ಬೇಟಿ ಪಢಾವೋ ಘೋಷಣೆ ಮುಂದೆ ಮಾಡಿಕೊಂಡು ಸೆಲ್ಫಿ ವಿತ್ ಡಾಟರ್ ಮೂಲಕ ಜನರನ್ನು ಮರುಳು ಮಾಡಲು ಹೊರಟಿದ್ದು, ಯಾರೂ ಇದರಲ್ಲಿ ಪಾಲ್ಗೊಳ್ಳಬಾರದು. ಏಕೆಂದರೆ ಈಗ ಮೋದಿ ಹೆಣ್ಣು ಮಕ್ಕಳ ಹಿಂದೆ ಬಿದ್ದಿದ್ದಾರೆ ಎಂದು ಟ್ವಿಟರ್ನಲ್ಲಿ ಹೇಳಿದ್ದಾರೆ.
ಆದರೆ ಕವಿತಾಕೃಷ್ಣನ್ ಅವರ ಈ ಹೇಳಿಕೆ ಮೋದಿ ಅನುಯಾಯಿಗಳು ಹಾಗೂ ಬೆಂಬಲಿತರನ್ನು ಇದು ಕೆರಳಿಸಿದೆ.ನರೇಂದ್ರ ಮೋದಿ ಅವರು ಕಪ್ಪು ಹಣ ವಾಪಸ್ ಪ್ರಕರಣ ಮರೆಮಾಚಲು ಯೋಗದ ಮೊರೆ ಹೋಗಿದ್ದರು. ಅದೇ ರೀತಿ ಈಗ ಸುಷ್ಮಾರಾಜೇ ರಕ್ಷಣೆಗೆ ಸೆಲ್ಫಿ ವಿತ್ ಡಾಟರ್ ಷುರು ಮಾಡಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
