ಕರಾವಳಿ

ಚಿದು ಬರೆಯುವ ಪ.ಗೋ ಸರಣಿ -16 : ಬಸ್ ಪ್ರಯಾಣ ಬೇಕೇ ?, ಧೂಮಪಾನ ಸಾಕೇ ?

Pinterest LinkedIn Tumblr

Pa Gopalakrishna Photo

ಪದ್ಯಾಣ ಗೋಪಾಲಕೃಷ್ಣ ಯಾರನ್ನೂ ಅಷ್ಟು ಸುಲಭವಾಗಿ ನಂಬುತ್ತಿರಲಿಲ್ಲ. ವಾಚಾಳಿಗಳನ್ನಂತೂ ಕಂಡರೆ ಹುರಿದು ಬೀಳುತ್ತಿದ್ದರು ಬಹಿರಂಗವಾಗಿ ಅಲ್ಲ ಮನಸ್ಸಿನೊಳಗೇ, ಆದರೆ ಅದನ್ನು ಅವರ ಮುಖಭಾವದಿಂದಲೇ ಗುರುತಿಸಬಹುದಾಗಿತ್ತು. ಒಂಥರಾ ಪ.ಗೋ ವ್ಯಕ್ತಿತ್ವವೇ ಹಾಗೆ, ಅವರನ್ನು ಅರ್ಥಮಾಡಿಕೊಂಡವರಿಗೆ ಪ.ಗೋ ಆಪತ್ಭಾಂಧವ. ಯಾವ ಸಮಸ್ಯೆಯಿದ್ದರೂ ನೇರವಾಗಿ ಹೇಳಿಕೊಂಡರೆ ಪರಿಹಾರ ಹುಡುಕಿಕೊಡುತ್ತಿದ್ದರು. ಆದ ಕಾರಣವೇ ನನ್ನಂಥ ಕಿರಿಯರಿಗೆ ಅವರಲ್ಲಿ ರಿಯಾಯಿತಿ ಕೂಡಾ ಇತ್ತು.

ಪ.ಗೋ ಅವರನ್ನು ಹತ್ತಿರದಿಂದ ನೋಡಿರುವುದಕ್ಕೋ ಏನೋ ಅವರ ಬಗ್ಗೆ ಏನನ್ನಾದರೂ ಹೇಳಬೇಕೆನಿಸಿದರೂ ತುಂಬಾ ಎಚ್ಚರಿಕೆಯಿಂದಲೇ ಅಳೆದು ತೂಗಿ ಹೇಳಬೇಕೆನಿಸುತ್ತದೆ. ಇದೂ ಕೂಡಾ ಅವರಿಂದಲೇ ಕಲಿತ ಪಾಠ. ಹರಕು ಬಾಯಿ ಮತ್ತು ತೂತುಬಿದ್ದ ಮಡಕೆ ಎರಡೂ ಒಂದೇ ಎನ್ನುತ್ತಿದ್ದರು ಪ.ಗೋ ಅತಿಯಾಗಿ ಅಥವಾ ವಾಚಾಳಿಯಾಗಿ ಹೇಳಿದರೆ. ಸಾಮಾನ್ಯವಾಗಿ ಪತ್ರಿಕಾಗೋಷ್ಠಿಗಳಲ್ಲಿ ಮೊದಲು ಹೇಳಲು ಶುರುಮಾಡಿದರೆ ಎಲ್ಲರೂ ಮೌನವಾಗಿ ಕೇಳುತ್ತಾರೆ ಎನ್ನುವ ಕಾರಣಕ್ಕೋ ಏನೋ ಮಾತಿನ ಭರದಲಿ ಹೇಳಬಾರದ್ದನ್ನೂ ಹೇಳಿಬಿಡುತ್ತಿದ್ದರು. ಅಂಥ ಸಂದರ್ಭದಲ್ಲಿ ಪ.ಗೋ ಎಚ್ಚರಿಸುತ್ತಿದ್ದರು. ನೀವು ಹೇಳುವುದನ್ನು ಹೇಳಿ ಆದರೆ ನಾಳೆ ನಾನು ಹಾಗೆ ಹೇಳಿಯೇ ಇಲ್ಲ ಎಂದು ಮಾತ್ರ ಹೇಳುವಂಥ ಸ್ಥಿತಿ ತಂದುಕೊಳ್ಳಬೇಡಿ ಎನ್ನುತ್ತಿದ್ದರು ನಗುತ್ತಲೇ. ನಂತರ ಪ.ಗೋ ನನ್ನನ್ನು ತೋರಿಸಿ ನಾನು ಸುಮ್ಮನಿದ್ದರೂ ಅವನ ಪೆನ್ನು ಸುಮ್ಮನಿರುವುದಿಲ್ಲವೆನ್ನುತ್ತಿದ್ದರು.

ಇದಕ್ಕೆ ಕಾರಣವೂ ಇತ್ತು.. ಪತ್ರಿಕಾಗೋಷ್ಠಿಗಳಲ್ಲಿ ಕೆಣಕುವ ಪ್ರಶ್ನೆಗಳಿಗೆ ಸಿಗುತ್ತಿದ್ದ ಉತ್ತರಗಳು ಮರುದಿನ ಭರ್ಜರಿ ಸುದ್ದಿಯಾಗಿ ಬಿಡುತ್ತಿತ್ತು. ಇದನ್ನೂ ಕೂಡಾ ಕಲಿಸಿದವರು ಪ.ಗೋ ಎನ್ನುವುದನ್ನು ಹೇಳಲೇ ಬೇಕು. ಪತ್ರಿಕಾಗೋಷ್ಠಿಗಳಲ್ಲಿ ನೆಗೆಟಿವ್ ಪ್ರಶ್ನೆ ಕೇಳಿದರೆ ಉದ್ವೇಗಕ್ಕೆ ಒಳಗಾಗಿ ಆಪ್ಗ್ ದಿ ರೆಕಾರ್ಡ್ ವಿಷಯಗಳನ್ನೂ ಹೇಳಿ ಬಿಡುತ್ತಿದ್ದರು. ಆದರೆ ಅವರು ಆಫ್ ದಿ ರೆಕಾರ್ಡ್ ಆಗಿ ಹೇಳುವ ಬದಲು ಮುಕ್ತವಾಗಿ ಮನಸ್ಸಿನೊಳಗಿದ್ದುದನ್ನು ಹೇಳಿಕೊಂಡು ಹಗುರಾಗಿ ಬಿಡುತ್ತಿದ್ದರು. ಇಂಥ ಘಟನೆಗಳು ನಡೆಯುತಿದ್ದುದು ಜನತಾದಳ ಸರ್ಕಾರದ ಕಾಲದಲ್ಲಿ.

ದ.ಕ.ಜಿಲ್ಲೆಯಲ್ಲಿ ಜನತಾದಳ ಎರಡು ಹೋಳಾಗಿತ್ತು ಮಾತ್ರವಲ ಪಕ್ಷದ ಕಚೇರಿಯಲ್ಲಿದ್ದ ನಾಯಕರ ಫೋಟೋಗಳನ್ನು ಹೊರಹಾಕಿದ್ದರು. ಭಿನ್ನಾಭಿಪ್ರಾಯ ಪರಾಕಾಷ್ಠೆಯಲ್ಲಿದ್ದ ಕಾಲ. ಜನತಾದಳ ರಾಜ್ಯನಾಯಕರ ಕಚೇರಿ, ಜಿಲ್ಲಾನಾಯಕರ ಕಚೇರಿಯಾಗಿ ಇಬ್ಭಾಗವಾಗಿದ್ದವು. ಒಬ್ಬರನ್ನೊಬ್ಬರು ಹಾವು ಮುಂಗುಸಿಯಮ್ತೆ ಕಾಣುತಿದ್ದರು. ರಾಜ್ಯದಲ್ಲಿ ರಾಮಕೃಷ್ಣ ಹೆಗಡೆ ಮತ್ತು ದೇವೇಗೌಡರು ಪ್ರತ್ಯೇಕಗೊಂಡಿದ್ದ ಕಾಲ. ಈಗಿನಷ್ಟು ಮಾಧ್ಯಮಗಳು ಆಗ ಇರದಿದ್ದರೂ ಇದ್ದವುಗಳ ಪೈಕಿ ಇಂಥ ಕೋಳಿ ಜಗಳವನ್ನು ಜನರಿಗೆ ನೀಡುವುದರಲ್ಲಿ ಮುಂಗಾರು ಮುಂಚೂಣಿಯಲ್ಲಿತ್ತು. ಅಂಥ ಸುದ್ದಿಗಳನ್ನೇ ನಾನು ಹೆಚ್ಚು ಹೆಚ್ಚು ಬರೆಯುತಿದ್ದ ಕಾರಣಕ್ಕೆ ಪ.ಗೋ ಬಾಯಿ ಬಡುಕರಿಗೆ ಎಚ್ಚರಿಕೆ ಕೊಡುತ್ತಿದ್ದರು. ಆದರೆ ನಾನು ಬರೆದಾಗ ಓದಿ ಮೆಚ್ಚುತ್ತಿದ್ದರು. ನೀನು ಸುದ್ದಿ ಕ್ರಿಯೇಟ್ ಮಾಡಬೇಡ ಅಷ್ಟೇ ಅವರಾಗಿ ಬಹಿರಂಗವಾಗಿ ಹೇಳಿದರೆ ಮುಚ್ಚಿಹಾಕಬೇಡ ಎನ್ನುವುದು ಪ.ಗೋ ನೀತಿಪಾಠ ನನಗೆ.

ಪ.ಗೋ ಅವರಿಗೆ ಸುದ್ದಿ ಜಾಡು ಹಿಡಿಯುವ ಕಲೆ ಕರಗತವಾಗಿತ್ತು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ಮೂಲೆಯಲ್ಲಿ ರಾಜಕೀಯ ನಾಯಕರು ಕಚ್ಚಾಡಿಕೊಂಡಿದ್ದರೂ ಆ ವಾಸನೆ ಪ.ಗೋ ಅವರಿಗೆ ಬಡಿಯುತ್ತಿತ್ತು, ಅಂಥ ಸುದ್ದಿ ಸಂಗ್ರಹದ ನೆಟ್ ವರ್ಕ್ ಅವರಲ್ಲಿತ್ತು. ಆದರೆ ಆ ನೆಟ್ ವರ್ಕ್ ಸುಳಿವನ್ನು ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ನೋಡು ಅಲ್ಲಿ ಹೀಗಾಗಿದೆ. ಇವರು ಹಾಗೆ ಹೇಳಿದ್ದಾರೆ, ಅವರು ಹೀಗೆ ಹೇಳ್ತಾರೆ. ಇದು ಇಂಥ ಕಾರಣಕ್ಕೆ. ಗೊತ್ತಿದ್ದುದನ್ನು ನಿನ್ನ ಮುಂದೆ ಕಕ್ಕಿಕ್ಕೇದ್ದೇನೆ, ಈಗ ಏನು ಮಾಡಿಕೊಳ್ತಿಯೋ ಅದು ನಿನಗೆ ಬಿಟ್ತದ್ದು ಎಂದು ಬೀಡಿಗೆ ಬೆಂಕಿ ಹಚ್ಚಿ ಪುಸು ಪುಸನೆ ಹೊಗೆ ಬಿಟ್ಟು ನಗುತ್ತಿದರು.

ನೀವು ಕೇವಲ ಎರಡು ಗೀಟು ಸುದ್ದಿ ಹೇಳಿ ನನ್ನನ್ನು ಕುಟ್ಟಿಮೇಲೆ ಕೂರಿಸಿದ್ದು ಸರಿಯಲ್ಲ ಪ್ಲೀಸ್ ಇನ್ನೂ ಸ್ವಲ್ಪ ಡೀಟೇಲ್ ಕೊಡಿ ಎಂದರೆ ಮರಿ ನಾನು ಗೀಟಿನ ಸುದ್ದಿಯವನಲ್ಲ ಅದು ಮಯ್ಯರ ಪೇಟೆಂಟ್. ನಿನಗೇನು ಸುದ್ದಿ ಸುಳಿವು ಕೊಟ್ಟಿದ್ದೇನೆ, ಅದರ ಜಾಡು ಹಿಡಿದು ಶೋಧ ಮಾಡು. ಆಗದಿದ್ದರೆ ಸುಮ್ಮನೆ ಕುಳಿತುಕೋ ನಾನಿನ್ನು ಬರ್ತೀನಿ ಎಂದು ಹೇಳಿ ಸ್ಕೂಟರ್ ಸ್ಟಾರ್ಟ್ ಮಾಡಿ ಹೊರಟರೆ ಅಲ್ಲಿಗೆ ಮುಗಿಯಿತು ಅವರಿಂದ ಅಷ್ಟೇ ಮಾಹಿತಿ ಉಳಿದದ್ದು ನಿನ್ನ ಹಣೆಬರಹ ಎಂದೇ ಅರ್ಥ.

ಈಗ ನಾನು ಪ.ಗೋ ಕೊಟ್ಟ ಸುದ್ದಿ ಎಳೆಯನ್ನು ಹಿಡಿದುಕೊಂಡು ನನ್ನ ನೆಟ್ ವರ್ಕ್ ಮೂಲಕ ಪತ್ತೆ ಹಚ್ಚಿ ಮರುದಿನ ಸುದ್ದಿ ಮಾಡಿದ್ದರೆ ಪ.ಗೋ ಮುಂಜಾನೆಯೇ ಪ್ರತ್ಯಕ್ಷರಾಗಿ ತೆಗೀ ನನ್ನ ಕಾಣಿಕೆ ಎನ್ನುತ್ತಿದ್ದರು. ಯಾವುದಕ್ಕೆ ಕಾಣಿಕೆ ಕೇಳಿದರೆ ಮರೀ ನೀನು ಹುಟ್ಟುವ ಮೊದಲೇ ನಾನು ಪೆನ್ನು ಹಿಡಿದು ಸುದ್ದಿ ಬರೆದಿದ್ದೇನೆ ಅದೆಲ್ಲಾ ಬೇಡಾ ನಾನು ನಿನ್ನೆ ಕೊಟ್ಟಿದ್ದ ಸುದ್ದಿ ಆಧರಿಸಿಯೇ ನೀನು ಬರೆದಿದ್ದಿ ಅದರ ಚಾರ್ಜ್ ಕೊಡು. ಇಬ್ಬರೂ ಕಾಫಿ ಕುಡಿದು ಅವರಿಗೆ ಸಿಗರೇಟ್ ಕೂಡಾ ಕೊಡಿಸಿ ಅವರ ಸುದ್ದಿ ಎಳೆಗಾಗಿ ದಂಡ ಪಾವತಿಸಿ ನೀವೂ ನನ್ನ ಕೈಗೆ ಸಿಗುತ್ತೀರಿ ಎನ್ನುವ ಎಚ್ಚರಿಕೆ ಕೊಡುತ್ತಿದ್ದೆ. ಆ ಕಾಲ ನಾನು ಬದುಕಿರುವಷ್ಟು ವರ್ಷ ಬರುವುದಿಲ್ಲ ತಿಳ್ಕೋ ಎನ್ನುತ್ತಿದ್ದರು.

ಪ.ಗೋ ಎರಡುಗೀಟು ಮಯ್ಯರ ಪೇಟೆಂಟ್ ಎಂದದ್ದರ ಹಿಂದೆಯೂ ಸ್ವಾರಸ್ಯಕರ ಕತೆಯಿದೆ. ಎ.ವಿ.ಮಯ್ಯರು ಹಿರಿಯ ಪತ್ರಕರ್ತ ಮಾತ್ರವಲ್ಲ ಸ್ನೇಹಜೀವಿ. ವಯಸ್ಸಿನ ಕಾರಣಕ್ಕೆ ಹೆಚ್ಚಾಗಿ ತಿರುಗಾಡಲು ಆಗುತ್ತಿರಲಿಲ್ಲ. ಸಣ್ಣಪುಟ್ಟ ಕಾರ್ಯಕ್ರಮಗಳಿಗೆ ಬರದೆ ಯಾರಿಂದಲಾದರೂ ಕೇಳಿ ಪಡೆಯುತ್ತಿದ್ದರು. ಮಯ್ಯರಿಗೆ ಇಂಗ್ಲೀಷ್ ಮತ್ತು ಹಿಂದಿ ಭಾಷೆಯಲ್ಲಿ ಭಾಷಣ ಮಾಡುವ ಅಥವಾ ಪತ್ರಿಕಾಗೋಷ್ಠಿ ಮಾಡುವ ರಾಜಕಾರಣಿಗಳ ಮೇಲೆ ಅಸಾಧ್ಯವಾದ ಸಿಟ್ಟು ಬರುತ್ತಿತ್ತು. ಯಾಕೆಂದರೆ ಮಯ್ಯರಿಗೆ ಇಂಗ್ಲೀಷ್ ಮತ್ತು ಹಿಂದಿಯನ್ನು ಪೂರ್ಣಪ್ರಮಾಣದಲ್ಲಿ ಗ್ರಹಿಸುವುದಕ್ಕೆ ಆಗುತ್ತಿರಲಿಲ್ಲ. ಅಂಥ ಸಂದರ್ಭಗಳಲ್ಲಿ ನನ್ನನ್ನು ಅವರು ಏನು ಹೇಳಿದರು ಗೊತ್ತಾಗಲಿಲ, ಮೈಕ್ ಕೂಡಾ ಸರಿಯಾಗಿ ಕೇಳಿಸುತ್ತಿರಲಿಲ್ಲ, ಚಿದು ಎರಡು ಗೀಟು ಹೇಳು ಮಾರಾಯ ಎನ್ನುತ್ತಿದ್ದರು. ಮಯ್ಯರು ಯಾವೊತ್ತೂ ನನಗೆ ಸುದ್ದಿ ಕೊಡು ಎನ್ನುತ್ತಿರಲಿಲ್ಲ, ಎರಡು ಗೀಟು ಕೊಡು ಮಾರಾಯ ಎನ್ನುವುದು ಅವರ ಅಭ್ಯಾಸ. ಇದನ್ನು ಕೇಳಿಸ್ಕೊಂಡಿದ್ದ ಪ.ಗೋ ಅವರಿಗೆ ಗೀಟು ಸುದ್ದಿ ಕೇಳುವವರು ಎಂದೇ ನಾಮಕರಣ ಮಾಡಿದ್ದರು. ಆದ ಕಾರಣವೇ ಅದು ಕೊನೆತನಕವೂ ಉಳಿದು ಬಿಟ್ಟಿತ್ತು.

ಆದರೆ ನನಗೆ ಇಂಥ ಸಂದರ್ಭ ಬಂದರೆ ಖುಷಿಯೋ ಖುಷಿ. ಯಾಕೆಂದರೆ ಮಯ್ಯರು ನಾನು ಕೊಡುವ ಸುದ್ದಿಗೆ ದಂಡ ಕೊಡಬೇಕಿತ್ತು. ನಾನು ಕೇಳುವ ಕೋಲ್ಡ್, ಬಾಳೆಹಣ್ಣು, ಚಾಕಲೇಟ್ ಏನು ಕೇಳಿದರೂ ಮಯ್ಯರು ಕೊಡಿಸುತ್ತಿದ್ದರು. ಅವರಿಗೆ ಸುದ್ದಿ ಕೊಡಬೇಕಾದರೆ ನನಗೆ ಮೊದಲು ತೆಗೆಸಿಕೊಡಬೇಕಿತ್ತು. ತಿಂದಾದ ಮೇಲೆ ಅವರಿಗೆ ಸುದ್ದಿಕೊಡುವುದು. ಯಾವಾಗ ಇಂಗ್ಲೀಷ್, ಹಿಂದಿ ಭಾಷಣ, ಪತ್ರಿಕಾಗೋಷ್ಠಿ ಇರುವುದೋ ಆಗೆಲ್ಲ ಮಯ್ಯರಿಂದ ನನಗೆ ಟ್ರೀಟ್ ಸಿಗುತ್ತಿತ್ತು, ಅದರಲ್ಲೂ ಒಂಥರಾ ಮಜಾ ಇತ್ತು ಬಿಡಿ.

ಪ.ಗೋ ಅವರ ಸುದ್ದಿಯ ಗ್ರಹಿಕೆ ಅದೆಷ್ಟು ಸೂಕ್ಷ್ಮವಾಗಿತ್ತು ಎನ್ನುವುದಕ್ಕೆ ಒಂದು ಉದಾಹರಣೆ ಈ ಘಟನೆ. ಆಕಾಶವಾಣಿಯ ಪ್ರದೇಶ ಸಮಾಚಾರ ವಿಭಾಗದವರು ಜಿಲ್ಲಾ ವಾರ್ತಾಪತ್ರ ಎನ್ನುವ ಶೀರ್ಷಿಕೆಯಲ್ಲಿ ಐದು ನಿಮಿಷದ ಆಯ್ದ ಜಿಲ್ಲೆಯ ಒಂದೇ ಸುದ್ದಿಯನ್ನು ಕರ್ನಾಟಕದ ಎಲ್ಲಾ ಆಕಾಶವಾಣಿಗಳಲ್ಲೂ ಏಕಕಾಲದಲ್ಲಿ ಪ್ರಸಾರ ಮಾಡುತ್ತಾರೆ. ಸಾಮಾನ್ಯವಾಗಿ ಈ ಸುದ್ದಿ ಲೇಖನಗಳನ್ನು ಪತ್ರಕರ್ತರು ಅಥವಾ ಜಿಲ್ಲಾ ವಾರ್ತಾ ಮತ್ತು ಪ್ರಚಾರ ಇಲಾಖೆ ಅಧಿಕಾರಿಗಳಿಂದ ಬರೆಸುತ್ತಾರೆ. ಅದೇ ರೀತಿ ಬೆಂಗಳೂರು ಆಕಾಶವಾಣಿಯಿಂದ ನನಗೆ ದೂರವಾಣಿ ಕರೆ ಮಾಡಿ ನಿಮ್ಮಿಂದ ಈ ಸಲ ದಕ್ಷಿಣ ಕನ್ನಡ ಜಿಲ್ಲೆಯ ಕುರಿತಾದ ವಾರ್ತಾ ಪತ್ರ ಸುದ್ದಿ ಲೇಖನ ಬೇಕೆಂದು ಕೇಳಿದರು. ರಾಜ್ಯವ್ಯಾಪಿ ಪ್ರಸಾರದ ಕಾರ್ಯಕ್ರಮವಾಗಿದ್ದು ಸಂಭಾವನೆಯನ್ನೂ ಕೊಡುತ್ತಾರೆ. ಜಿಲ್ಲಾ ವಾರ್ತಾ ಪತ್ರ ಬರೆದುಕೊಡಲು ಒಪ್ಪಿದೆ. ನಮಗೆ ಯಾವುದು ಸೂಕ್ತವೆನಿಸುತ್ತದೋ ಅಂಥದ್ದನ್ನು ಬರೆದು ಕೊಡುವ ಮುಕ್ತ ಸ್ವಾತಂತ್ರ್ಯ ಇದೆ. ಒಂದು ವಾರದ ಕಾಲಾವಕಾಶವಿತ್ತು. ಆದರೆ ಆಗ ಈಗಿನಂತೆ ಇಮೇಲ್ ವ್ಯವಸ್ಥೆ ಇರದ ಕಾರಣ ಅಂಚೆ ಮೂಲಕವೇ ಬೆಂಗಳೂರಿಗೆ ಕಳುಹಿಸಿಕೊಡಬೇಕಿತ್ತು.

ನಿತ್ಯದ ಕೆಲಸದ ಒತ್ತಡಗಳಿಂದಾಗಿ ಜಿಲ್ಲಾವಾರ್ತಾಪತ್ರ ಬರೆಯಲು ಸಾಧ್ಯವಾಗಿರಲಿಲ್ಲ. ಅದಾಗಲೇ ಮೂರು ದಿನ ಕಳೆದಿದ್ದವು.ಇನ್ನೊಂದು ದಿನದಲ್ಲಿ ಬರೆದು ಪೋಸ್ಟ್ ಮಾಡಲೇ ಬೇಕಾದ ಒತ್ತಡವಿತ್ತು. ಬರೆಯಲು ಸಮಸ್ಯೆಯಲ್ಲ, ಆದರೆ ಯಾವ ವಿಷಯವನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದೇ ಸಮಸ್ಯೆ. ರಾಜ್ಯವ್ಯಾಪಿ ಪ್ರಸಾರವಾದ ಕಾರಣ ಸಹಜವಾಗಿಯೇ ವಿಶೇಷವಾಗಿರಬೇಕು ಎನ್ನುವುದು ಅಲಿಖಿತ ನಿಯಮ. ವಿಷಯ ಹೊಳೆಯದ ಕಾರಣ ಆಫೀಸಲ್ಲಿ ಯೋಚಿಸುತ್ತಾ ಕುಳಿತಿದ್ದೆ. ಅಷ್ಟುಹೊತ್ತಿಗೆ ಪ.ಗೋ ಕಚೇರಿ ಪ್ರವೇಶವಾಯಿತು. ನನ್ನ ಮೂಡ್ ನೋಡಿಯೇ ಪ.ಗೋ ನಕ್ಕು ಆಕಾಶವೇ ಕಳಚಿಬಿದ್ದಿರುವಂತಿದೆ ಏನಂತೆ ಸಮಾಚಾರ ಕೇಳಿದರು. ನಿಮಗೆ ಆಟ ನನಗೆ ಪ್ರಾಣ ಸಂಕಟ ಎಂದೆ. ಇಲಿಗೆ ಆಟ ಬೆಕ್ಕಿಗೆ ಪ್ರಾಣ ಸಂಕಟ ನಾನು ಇಲಿಯೂ ಅಲ್ಲ ನೀನು ಬೆಕ್ಕೂ ಅಲ್ಲ ಎಂದು ಹೇಳುತ್ತಾ ಬೀಡಿ ಬಾಯಿಗಿಟ್ಟು ಕಡ್ಡಿಗೀರಿ ಹೊಗೆ ಬಿಟ್ಟು ಏನ್ ಮಾರಾಯ ಬಾಯಿ ಬಿಟ್ಟು ಹೇಳು ಯಾವುದಾದರೂ ಹಡಗು ಮುಳಿಗಿದ್ದರೆ ಹೇಳು ಅದರಲ್ಲಿ ನಿನ್ನದೇನಿತ್ತು ? ಎಂದು ಕೀಟಲೆ ಮಾಡಿದರು.

ಬೆಂಗಳೂರು ಆಕಾಶವಾಣಿಗೆ ಜಿಲ್ಲಾ ವಾರ್ತಾಪತ್ರ ಬರೆದು ಕಳುಹಿಸಬೇಕು, ಇವೊತ್ತೇ ಪೊಸ್ಟ್ ಆಗಬೇಕು ಆದರೆ ಯಾವುದನ್ನು ಬರೆಯುವುದು ಎನ್ನುವುದೇ ಗೊಂದಲ, ಟೈಮ್ ಕೂಡ ಇಲ್ಲ ಎಂದೆ. ಜಿಲ್ಲಾ ವಾರ್ತಾಪತ್ರ ಬರೆಯಲು ವಾರ್ತಾಧಿಕಾರಿಗೆ ಪುರುಸೋತ್ತಿಲ್ಲವೇನೋ ? ಎಂದರು. ಅವರ ಪುರುಸೋತ್ತು ಕಟ್ಟಿಕೊಂಡು ನನಗೇನಾಗಬೇಕು ?, ಮೊದಲು ಯಾವುದಾದರೂ ಟಾಪಿಕ್ ಇದ್ರೆ ಹೇಳಿ ನೋಡುವಾ ನಿಮ್ಮ ತಲೆಯೊಳಗಿರುವುದು ರಾಜ್ಯದ ಜನರಿಗೂ ಗೊತ್ತಾಗಲಿ ಎಂದೆ. ಇಂಥ ನಾಟಕ ಎಲ್ಲ ಬೇಡಾ ಮರೀ. ನೀನು ಬರೆದರೆ ನಿನ್ನ ಹೆಸರು ಬರುತ್ತೆ ನನಗೇನು ಲಾಭ ಕೇಳಿದರು. ಅದೂ ನಿಜವೇ. ಜಿಲ್ಲಾ ವಾರ್ತಾಪತ್ರ ಬರೆದವರು ಎಂದು ನನ್ನ ಹೆಸರು ಹೇಳುತ್ತಾರೆ, ನನಗೆ ಸಂಭ್ಹಾವನೆ ಹಣ ಬರುತ್ತೆ. ವಿಷಯ ಹೇಳಿ ಮಾಮೂಲಿ ದಂಡ ಕಟ್ಟುತ್ತೇನೆ ಎಂದೆ. ಹಾಗೆ ಬಾ ದಾರಿಗೆ ಎಂದು ತಲೆಯನ್ನು ಹಾಗೇ ಕೆರೆದುಕೊಂಡು ಒಂದೆರಡು ನಿಮಿಷ ಯೋಚಿಸಿದರು. ಅವರಿಗೂ ಹೊಳೆಯಲಿಲ್ಲ. ಮತ್ತೊಂದು ಬೀಡಿಗೆ ಬೆಂಕಿ ಹಚ್ಚಿ ಹೊಗೆ ಬಿಡತೊಡಗಿದರು. ಆ ಬೀಡಿಯೂ ಮುಗಿಯಿತು, ವಿಷಯ ಮಾತ್ರ ಹೊಳೆಯಲಿಲ್ಲ. ನೀನು ನಿನ್ನೆಯಾದರೂ ಹೇಳಿದ್ದರೆ ಆಲೋಚನೆ ಮಾಡುತ್ತಿದ್ದೆ ಎಂದರು.

ಬಾಯಲ್ಲಿ ಪಟಾಕಿ ಬಿಡ್ತೀರಿ ಮರೀ ನಿನಗಿಂತ ಮೊದಲೇ ಸುದ್ದಿ ಬರೆದಿದ್ದೇನಂತಾ ಒಂದು ಸಣ್ಣ ವಿಷಯ ಅದೂ ಕೇವಲ ಐದು ನಿಮಿಷಕ್ಕೆ ಆಗುವಷ್ಟು ಅದೂ ಹೊಳೆಯುವುದಿಲ್ಲವೆಂದರೆ ಪರಮಾಶ್ಚರ್ಯ ಎಂದು ಛೇಡಿಸಿದೆ. ಮೂರನೇ ಬೀಡಿಗೆ ಬೆಂಕಿ ಹಚ್ಚಿ ಹೊಗೆ ಬಿಡುತ್ತಾ ನೀನು ಹೇಗೆ ಬರೆಯುತ್ತೀ ಅಂತ ನನಗೆ ಗೊತ್ತಿಲ್ಲ, ಇದು ಆದೀತು ಅನ್ನಿಸುತ್ತದೆ ಎಂದರು. ಒಂದು ಗೀಟು ಕೊಟ್ಟು ಪ್ರಬಂಧ ಬರಿ ಎನ್ನುವುದು ಬೇಡ ಹೇಳುವುದನ್ನು ವಿವರವಾಗಿ ಹೇಳಿ ಎಂದೆ. ಗಾಂಚಲಿ ಮಾಡಬೇಡ ಸುಮ್ಮನೇ ಕೇಳಿಸ್ಕೋ ಎಂದವರೇ ಮಾಮೂಲಿಯಾಗಿ ಮೂರು ಪಾಯಿಂಟ್ ಕೊಟ್ಟೂ ಇದನ್ನು ಹೇಗೆ ಬರೆಯುತ್ತೀ ಬರಿ ಸಾಧ್ಯವಾದರೇ ನಾನು ರೇಡಿಯೋದಲ್ಲಿ ಕೇಳಿಸ್ಕೊಳ್ತೀನಿ ಎಂದವರೇ ಬಾ ಕಕ್ಕು ದುಡ್ಡು ಚಹಾಕ್ಕೆ ಸಿಗರೇಟಿಗೆ ಎಂದರು. ಆಕಾಶವಾಣಿಯಲ್ಲಿ ಪ್ರಸಾರವಾದ ಮೇಲೆ ಏನು ಕೊಡುವುದಿದದ್ರೂ ಎಂದೆ,

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಕೂಡದು ಎನ್ನುವುದು ಸರ್ಕಾರದ ಈಗಿನ ಕಾಯಿದೆ ಕಾನೂನು. ಆದರೆ ಜನರು ಕಾನೂನು ಪಾಲಿಸುತ್ತಾ ಬೇಕಾದಲ್ಲಿ ಮುರಿಯುತ್ತಾ ಇದ್ದಾರೆ ಅದು ಬೇರೆ ವಿಚಾರ. ಆದರೆ ಆ ಕಾಲದಲ್ಲಿ ಕರ್ನಾಟಕದ ಪೈಕಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಬಸ್ ಗಳಲ್ಲಿ ಧೂಮಪಾನ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಿ ಬಸ್ಸಿನ ಚಾಲಕರು ಮತ್ತು ನಿರ್ವಾಹಕರೇ ಅದನ್ನು ಕಟ್ಟುನಿಟ್ಟಾಗಿ ನೋಡಿಕೊಳ್ಳುತ್ತಿದ್ದರು. ಆಗ ಜನ ಬಸ್ಸಿನೊಳಗೇ ಕುಳಿತು ಬೀಡಿ, ಸಿಗರೇಟು ಸೇದುತ್ತಿದ್ದರು. ಕೆಲವರು ಸಹಪ್ರಯಾಣಿಕರಿಗೆ ಮುಜುಗರವಾಗಬಾರದು ಎಂದು ಚಟವನ್ನು ಹದ್ದುಬಸ್ತಿನಲ್ಲಿಟ್ಟುಕೊಂಡು ಬಸ್ ಇಳಿದ ಮೇಲೆ ಸೇದಿ ಚಟತೀರಿಸಿಕೊಳ್ಳುತ್ತಿದ್ದರು. ಕೆಲವರಂತೂ ಬೀಡಿ, ಸಿಗರೇಟು ಸೇದದಿದ್ದರೆ ಬದುಕುವುದೇ ಇಲ್ಲವೇನೋ ಎನ್ನುವಂತೆ ಬಸ್ ಪ್ರಯಾಣಿಸುತ್ತಿದ್ದಾಗಲೂ ಸೇದುತ್ತಿದ್ದರು. ಇದಕ್ಕೆ ಕಡಿವಾಣ ಹಾಕಿ ಉಡುಪಿಯ ಬಸ್ ಚಾಲಕರು ಮತ್ತು ನಿರ್ವಾಹಕರು ಗಮನ ಸೆಳೆದಿದ್ದರು. ಆಗ ಮಾಧ್ಯಮಗಳು ಅಷ್ಟೇನು ಪ್ರಬಲವಾಗಿರದ ಕಾರಣಕ್ಕೋ ಅಥವಾ ಅದೇನು ಅಂಥಾ ಮಹತ್ವದ ಸುದ್ದಿಯಲ್ಲ ಎನ್ನುವ ಕಾರಣಕ್ಕೋ ಅಷ್ಟೇನೂ ಪ್ರಚಾರ ಸಿಕ್ಕಿರಲಿಲ್ಲ ಈ ಅಭಿಯಾನಕ್ಕೆ. ಪ.ಗೋ ಕೊಟ್ಟ ಈ ಸುಳಿವನ್ನು ಆಧರಿಸಿ ಐದು ನಿಮಿಷಗಳ ಅವಧಿಯ ಜಿಲ್ಲಾ ವಾರ್ತಾಪತ್ರ ಬರೆದಿದ್ದೆ. ಬಸ್ಸಿನ ಚಾಲಕರು ಮತ್ತು ನಿರ್ವಾಹಕರು ಅದೆಷ್ಟೂ ಕಟ್ಟುನಿಟ್ಟಾಗಿ ಜಾರಿಗೆ ತಂದಿದ್ದರೆಂದರೆ ಬಸ್ಸು ಹತ್ತುವ ಮೊದಲೇ ಬೀಡಿ, ಸಿಗರೇಟು ಸೇದುವವರು ದೂರ ಹೋಗಿ ಸೇದಿಕೊಂಡು ಬರಬೇಕು. ಬಸ್ ಪ್ರಯಾಣಿಸುವಾಗ ಕುಳಿತಲ್ಲೇ ಬೀಡಿ, ಸಿಗರೇಟು ಸೇದಿದರೆ ಅಲ್ಲೇ ಬಸ್ಸಿನಿಂದ ಇಳಿಸಲಾಗುವುದು. ಹೀಗೆ ನಿರ್ವಾಹಕರು ಪ್ರಯಾಣಿಕರು ಬಸ್ ಹತ್ತುವಾಗಲೇ ಟಿಕೆಟ್ ಕೊಡುವ ಮೊದಲೇ ಪ್ರತಿಯೊಬ್ಬರನ್ನೂ ಕೇಳುತ್ತಿದ್ದರು. ಬೀಡಿ, ಸಿಗರೇಟ್ ಸೇದುವುದಿಲ್ಲ ಎಂದರೆ ಮಾತ್ರ ಬಸ್ ಹತ್ತಲು ಅವಕಾಶ.

ಬಸ್ ಪ್ರಯಾಣ ಬೇಕೇ-ಧೂಮಪಾನ ಸಾಕೇ ? ಆಯ್ಕೆ ನಿಮ್ಮದು ಶೀರ್ಷಿಕೆಯಲ್ಲಿ ಜಿಲ್ಲಾ ವಾರ್ತಾಪತ್ರ ಬರೆದು ಕಳುಹಿಸಿದೆ. ಅದು ಸಂಜೆ ಹೊತ್ತಿಗೆ ಪ್ರಸಾರವಾಯಿತು. ಇಂಥ ಅಭಿಯಾನ ಉಡುಪಿಯಲಿದೆ ಎನ್ನುವುದನ್ನು ಜಿಲ್ಲಾವಾರ್ತಾಪತ್ರದಲ್ಲಿ ಇಂಥವರು ಬರೆದು ಕಳುಹಿಸಿದ್ದಾರೆಂದು ಆ ದಿನ ಸಂಜೆಯ ಪ್ರದೇಶ ಸಮಾಚಾರ ಮರುದಿನ ಬೆಳಗಿನ ಪ್ರದೇಶ ಸಮಾಚಾರದಲ್ಲೂ ಪ್ರಸಾರವಾಯಿತು. ನನಗೆ ಪ್ರಚಾರವೋ ಪ್ರಚಾರ, ಸಿಕಿದವರೆಲ್ಲ ರೇಡಿಯೋದಲ್ಲಿ ಜಿಲ್ಲಾ ವಾರ್ತಾಪತ್ರ ಚೆನ್ನಾಗಿತ್ತು ಎನ್ನುವ ಪ್ರಶಂಸೆಯ ಸುರಿಮಳೆ. ನಂತರ ನಾಡಿನ ಪತ್ರಿಕೆಗಳಲ್ಲೂ ಈ ಕುರಿತಾದ ಲೇಖನಗಳು ಬೆಳಕು ಕಂಡವು.

ಪ.ಗೋ ಕೂಡಾ ರೇಡಿಯೋ ಕೇಳಿಸಿಕೊಂಡಿದ್ದರು. ಮರು ದಿನ ಕಚೇರಿಗೆ ಬಂದು ನೀನು ದಂಡ ಕೊಡುವುದು ಬೇಡಾ ನನಗೆ ಖುಷಿಯಾಗಿದೆ ನಾನೇ ನಿನಗೆ ಕೊಡಿಸುತ್ತೇನೆಂದು ಹೇಳಿ ತಾಜ್ ಮಹಲ್ ಹೊಟೇಲ್ ನಲ್ಲಿ ತುಪ್ಪ ದೋಸೆ, ಚಹಾ ಕುಡಿಸಿ ಬಿಲ್ ಕೊಟ್ಟು ನಿನಗೂ ತಲೆಯಿದೆ ಆದರೆ ನೀನು ಉಪಯೋಗಿಸುವುದಿಲ್ಲ ಉದಾಸೀನ ಎಂದರು. ಒಂದು ಸುದ್ದಿಯ ಎಳೆಯನ್ನು ಹೇಗೆ ಡೇವಲಪ್ ಮಾಡಬೇಕು ಎನ್ನುವುದನ್ನು ಚೆನ್ನಾಗಿ ಮಾಡಿದ್ದೆ ಎಂದು ಮುಕ್ತವಾಗಿ ಪ.ಗೋ ಹೇಳಿದರು.

ಕೇವಲ ಸಣ್ಣ ಸುದ್ದಿಯನ್ನು ಗ್ರಹಿಸಿ ಅದು ಬೆಳೆಯಬಹುದಾದ ಸಾಧ್ಯತೆಯನ್ನು ಗುರುತಿಸುವಂಥ ಚಾಕಚಕ್ಯತೆ ಪ.ಗೋ ಅವರಿಗಿದ್ದ ವಿಶೇಷ ಗುಣ. ನಿಜಕ್ಕೂ ಅವರ ಆ ಸುದ್ದಿಯ ಎಳೆ ನನ್ನ ವೃತ್ತಿ ಬದುಕಿನಲ್ಲಿ ಮತ್ತಷ್ಟು ಬರೆಯಲು ಪ್ರೇರಣೆಯಾಯಿತು.

Chidambara-Baikampady

-ಚಿದಂಬರ ಬೈಕಂಪಾಡಿ

Write A Comment