ರಾಷ್ಟ್ರೀಯ

ಯೋಗ ವಿರೋಧಿಸುವವರಿಗೆ ಈ ದೇಶದಲ್ಲಿ ಇರುವ ಹಕ್ಕು ಇಲ್ಲ…ಅವರು ಪಾಕಿಸ್ತಾನಕ್ಕೆ ಹೋಗಲಿ: ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ

Pinterest LinkedIn Tumblr

sadhvi-prachi

ನವದೆಹಲಿ : ‘ಯೋಗವನ್ನು ವಿರೋಧಿಸುವವರಿಗೆ ಈ ದೇಶದಲ್ಲಿ ಇರುವ ಹಕ್ಕು ಇಲ್ಲ. ಅವರು ಪಾಕಿಸ್ತಾನಕ್ಕೆ ಹೋಗಬೇಕು’ ಎಂಬ ಹೇಳಿಕೆ ನೀಡಿ ವಿಎಚ್‌ಪಿ ನಾಯಕಿ ಸಾಧ್ವಿ ಪ್ರಾಚಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ.

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು (ಎಐಎಂಪಿಎಲ್‌ಬಿ) ಯೋಗ ಮಾಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಕ್ಕೆ ಸಾಧ್ವಿ ಪ್ರಾಚಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

ಅಂತರರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಉಪರಾಷ್ಟ್ರಪತಿ ಹಮೀದ್‌ ಅನ್ಸಾರಿ ಗೈರುಹಾಜರಿಯನ್ನು ಸಹ ಅವರು ಟೀಕಿಸಿದ್ದಾರೆ. ಈ ಕಾರ್ಯಕ್ರಮಕ್ಕೆ ತಮಗೆ ಆಹ್ವಾನ ಇಲ್ಲದ ಕಾರಣ ಬರಲಿಲ್ಲ ಎಂದು ಅನ್ಸಾರಿ ಹೇಳಿದ್ದರು.

ಆಹ್ವಾನ ನೀಡುವುದಕ್ಕೆ ಇದೇನು ರಾಜಕಾರಣಿಯೊಬ್ಬರ ಮಗಳ ಮದುವೆಯೇ ಎಂದು ಸಾಧ್ವಿ ವ್ಯಂಗ್ಯವಾಡಿದ್ದಾರೆ.

ಯೋಗಕ್ಕೆ ಎಐಎಂಪಿಎಲ್‌ಬಿ ವಿರೋಧ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತದ ಸಂಪ್ರದಾಯ, ಸಂಸ್ಕೃತಿಯೊಂದಿಗೆ ಅವರು ಬೆರೆತುಕೊಳ್ಳಬೇಕು. ಯೋಗವನ್ನು ವಿರೋಧಿಸುವವರಿಗೆ ಭಾರತದಲ್ಲಿ ಜಾಗ ಇಲ್ಲ’ ಎಂದರು.

‘ಅವರು ಭಾರತದ ಅನ್ನ ತಿಂದುಕೊಂಡು ಪಾಕಿಸ್ತಾನವನ್ನು ಹಾಡಿ ಹೊಗಳುತ್ತಾರೆ. ಯೋಗವು ಯಾವುದೇ ಒಂದು ಧಾರ್ಮಿಕ ನಂಬಿಕೆಗೆ ಸೀಮಿತವಾಗಿಲ್ಲ. ಅದು ಸಂಬಂಧ ಸೇತುವೆಯಾಗಿ ಕೆಲಸ ಮಾಡುತ್ತದೆ. ಭಾರತದ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ವಿರೋಧಿಸಿ ಎಂದು ಪ್ರಜಾತಂತ್ರವು ನಿಮಗೆ ಹೇಳುತ್ತಿಲ್ಲ’ ಎಂದೂ ಸಾಧ್ವಿ ಹೇಳಿದರು.

ಸಾಧ್ವಿ ಹೇಳಿಕೆಗೆ ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ‘ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರಿಗೆ ಯೋಗಾಭ್ಯಾಸ ಮಾಡುವ ಅಥವಾ ಮಾಡದಿರುವ ಸಂಪೂರ್ಣ ಹಕ್ಕು ಇದೆ’ ಎಂದು ಕಾಂಗ್ರೆಸ್‌ ವಕ್ತಾರ ಸಂಜಯ್‌ ಝಾ ಹೇಳಿದ್ದಾರೆ. ಬಿಜೆಪಿಯು ಬಲವಂತವಾಗಿ ಜನರ ಮೇಲೆ ಯೋಗವನ್ನು ಹೇರುತ್ತಿದೆ ಎಂದೂ ಅವರು ಟೀಕಿಸಿದ್ದಾರೆ.

ಅಂತರ ಕಾಯ್ದುಕೊಂಡ ಬಿಜೆಪಿ: ಸಾಧ್ವಿ ಹೇಳಿಕೆಯಿಂದ ಬಿಜೆಪಿ ಅಂತರ ಕಾಯ್ದುಕೊಂಡಿದೆ. ‘ಯೋಗಕ್ಕೂ ಧರ್ಮಕ್ಕೂ ಸಂಬಂಧವಿಲ್ಲ. ಅದೇ ರೀತಿ, ವಿಎಚ್‌ಪಿಯನ್ನು ನೀವು ರಾಜಕೀಯ ಪಕ್ಷ ಎಂದು ಕರೆಯಲು ಸಾಧ್ಯವಿಲ್ಲ. ಅದು ಸಾಮಾಜಿಕವಾಗಿ ತನ್ನದೇ ಆದ ಕಾರ್ಯಸೂಚಿ ಇಟ್ಟುಕೊಂಡಿದೆ’ ಎಂದು ಬಿಜೆಪಿ ವಕ್ತಾರ ನಳಿನ್‌ ಕೋಹ್ಲಿ ಹೇಳಿದ್ದಾರೆ.

ಜಾತ್ಯತೀತ ತತ್ವಕ್ಕೆ ವಿರುದ್ಧ: ಯೋಗ ಮತ್ತು ಸೂರ್ಯ ನಮಸ್ಕಾರವನ್ನು ಕಡ್ಡಾಯಗೊಳಿಸುವ ಮೂಲಕ ಆರ್ಎಸ್ಎಸ್ ಕಾರ್ಯಸೂಚಿಯನ್ನು ಜಾರಿ ಮಾಡಿ ಕೇಂದ್ರ ಸರ್ಕಾರವು ಸಂವಿಧಾನದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ಟೀಕಿಸಿದೆ. ಇಸ್ಲಾಂ ನಂಬಿಕೆಗಳ ಮೇಲೆ ದಾಳಿ ಮಾಡುವ ಈ ಹುನ್ನಾರದ ಬಗ್ಗೆ ಮುಸ್ಲಿಂ ಸಮುದಾಯದವರು ಎಚ್ಚರದಿಂದ ಇರಬೇಕು ಎಂದು ತಿಳಿಸಲಾಗಿದೆ.

Write A Comment