ನವದೆಹಲಿ (ಪಿಟಿಐ): ಒಲಿಂಪಿಕ್ ಪದಕ ವಿಜೇತೆ ಭಾರತದ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ದುಬೈನಲ್ಲಿ ಭಾರತೀಯ ರಾಯಭಾರಿ ಕಚೇರಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.
ದುಬೈನ ಅಲ್ ವಸ್ಲ್ ಫುಟ್‌ಬಾಲ್ ಕ್ಲಬ್‌ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. 15 ಸಾವಿರಕ್ಕೂ ಅಧಿಕ ಯುಎಇ ಪ್ರಜೆಗಳು ಹಾಗೂ 100ಕ್ಕೂ ಹೆಚ್ಚು ಭಾರತೀಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
72 ಶಾಲೆಗಳು, 88 ಸಾಂಸ್ಕೃತಿಕ ಸಂಘಟನೆಗಳು, 50 ದೊಡ್ಡ ಕಾರ್ಪೊರೇಟ್ ಕಂಪೆನಿಗಳು ಹಾಗೂ ವಿವಿಧ ರಾಯಭಾರಿ/ರಾಜತಾಂತ್ರಿಕ ಕಚೇರಿಗಳು ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿವೆ.
ಐದು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಕೋಮ್, ಕಾರ್ಯಕ್ರಮ ನಿಮಿತ್ತ ಜೂನ್ 20ರಂದು ದುಬೈಗೆ ತೆರಳಲಿದ್ದಾರೆ. ‘ಅಂತರರಾಷ್ಟ್ರೀಯ ಯೋಗದಿನದ ಅಂಗವಾಗಿ ದುಬೈನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾನು ತುಂಬಾ ಉತ್ಸುಕವಾಗಿರುವೆ. ಈ ಅವಕಾಶವನ್ನು ಒದಗಿಸುತ್ತಿರುವ ದುಬೈನಲ್ಲಿರುವ ಭಾರತೀಯ ರಾಯಭಾರಿ ಕಚೇರಿಗೆ ಧನ್ಯವಾದಗಳು’ ಎಂದು ಕೋಮ್ ಅವರು ಪ್ರತಿಕ್ರಿಯಿಸಿದ್ದಾರೆ.
ಅಲ್ಲದೇ,‘ಕಳೆದ ಕೆಲವು ವರ್ಷಗಳಿಂದ ನಾನು ಯೋಗಾಭ್ಯಾಸ ಮಾಡುತ್ತಿರುವೆ. ಇದು ತುಂಬಾ ನೈಸರ್ಗಿಕವಾಗಿದ್ದು, ನನ್ನ ಫಿಟ್‌ನೆಸ್‌ಗೆ ತುಂಬಾ ಸಹಾಯವಾಗಿದೆ’ ಎಂದೂ ಅವರು ತಿಳಿಸಿದ್ದಾರೆ. ಯೋಗ ಗುರು ಎ.ಜಿ. ಮೋಹನ್ ಅವರು ದುಬೈನಲ್ಲಿ ಯೋಗ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
