ಮನೋರಂಜನೆ

ಯುವತಿಯರನ್ನು ವಂಚಿಸುತ್ತಿದ್ದ ನಕಲಿ ನಿರ್ದೇಶಕನನ್ನು ಬಂಧಿಸಿದ್ದೇಗೆ ಗೊತ್ತಾ..?

Pinterest LinkedIn Tumblr

44804-3

ಟಿ.ವಿ. ಹಾಗೂ ಚಲನಚಿತ್ರ ನಿರ್ಮಾಣ ಕಾರ್ಯದಲ್ಲಿ ಕೆಲಸ ಮಾಡುತ್ತಿದ್ದವನೊಬ್ಬ ತಾನು ನಿರ್ದೇಶಕನೆಂದು ಹೇಳಿಕೊಂಡು ಅವಕಾಶ ಕೊಡಿಸುವುದಾಗಿ ಹಲವು ಯುವತಿಯರ ಅರೆ ನಗ್ನ ಫೋಟೋಗಳನ್ನು ತೆಗೆದು ನಂತರ ಅವರುಗಳನ್ನು ಬ್ಲಾಕ್ ಮೇಲ್ ಮಾಡುತ್ತಿದ್ದು, ಆತನನ್ನು ಈಗ ಪೊಲೀಸರು ಬಂಧಿಸಿದ್ದಾರೆ.

ಈತನನ್ನು ಬಂಧಿಸಲು ಪೊಲೀಸರು ‘ಹನಿ ಟ್ರ್ಯಾಪ್’ ತಂತ್ರ ಉಪಯೋಗಿಸಿದ್ದು ಮಾಡೆಲ್ ಒಬ್ಬರನ್ನು ಈ ಕಾರ್ಯಕ್ಕೆ ಬಳಸಿಕೊಂಡಿದ್ದಾರೆ. ಕಿಶೋರ್ ಮೋಹಾಂತಿ ಎಂಬಾತ ಬಾಲಿವುಡ್ ಚಿತ್ರರಂಗದಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿಕೊಂಡಿದ್ದನೆಂದು ಹೇಳಲಾಗಿದೆ. ಚಿತ್ರದಲ್ಲಿ ಅವಕಾಶ ಕೇಳಿಕೊಂಡು ಬರುತ್ತಿದ್ದ ಯುವತಿಯರ ಮೊಬೈಲ್ ನಂಬರ್ ಸಂಪಾದಿಸುತ್ತಿದ್ದ ಈತ ಬಳಿಕ ತಾನು ರಿಶಬ್ ಮೆಹ್ತಾ ಎಂದು ಹೇಳಿ ಯುವತಿಯರಿಗೆ ಕರೆ ಮಾಡಿ ಪರಿಚಯಿಸಿಕೊಳ್ಳುತ್ತಿದ್ದ. ತನ್ನ ನಿರ್ದೇಶನದ ಮುಂದಿನ ಚಿತ್ರದಲ್ಲಿ ಅವಕಾಶ ನೀಡುವುದಾಗಿ ಹೇಳುತ್ತಿದ್ದ ಈ ನಕಲಿ ನಿರ್ದೇಶಕ ಫೋಟೋ ಶೂಟ್ ನೆಪದಲ್ಲಿ ಯುವತಿಯರ ಅರೆನಗ್ನ ಚಿತ್ರಗಳನ್ನು ತೆಗೆದು ನಂತರ ಹಣ ಹಾಗೂ ಅನೈತಿಕ ಸಂಬಂಧಕ್ಕಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದನೆನ್ನಲಾಗಿದೆ.

ಅಹ್ಮದಾಬಾದ್ ಮೂಲದ ವಿವಾಹಿತ ಮಾಡೆಲ್ ಒಬ್ಬರು ಬಾಲಿವುಡ್ ಚಿತ್ರದಲ್ಲಿ ನಟಿಸುವ ಸಲುವಾಗಿ ಈ ವಂಚಕನ ಸಂಪರ್ಕಕ್ಕೆ ಬಂದಿದ್ದು, ಅವರ ಅರೆನಗ್ನ ಚಿತ್ರಗಳನ್ನು ತೆಗೆದಿದ್ದ ಈತ ಇವುಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡುವುದಾಗಿ ಬೆದರಿಸಿ 10 ಲಕ್ಷ ರೂ. ನೀಡುವಂತೆ ಬೆದರಿಕೆ ಒಡ್ಡಿದ್ದ. ಮಾಡೆಲ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಅಹ್ಮದಾಬಾದ್ ಪೊಲೀಸರು ಈತನನ್ನು ಖೆಡ್ಡಾಕ್ಕೆ ಕೆಡವಲು ಮತ್ತೊಬ್ಬ ಮಾಡೆಲ್ ನ್ನು ಬಳಸಿಕೊಂಡಿದ್ದು, ಆಕೆಯ ಮೂಲಕ ಈತನನ್ನು ಸಂಪರ್ಕಿಸಲಾಗಿತ್ತು. ಮಾಡೆಲ್ ಫೋಟೋ ಶೂಟ್ ಗಾಗಿ ಈ ನಕಲಿ ನಿರ್ದೇಶಕ ಬಂದ ವೇಳೆ ಆತನನ್ನು ತಮ್ಮ ವಶಕ್ಕೆ ಪಡೆದಿರುವ ಪೊಲೀಸರು ಈಗ ಕೇಸು ದಾಖಲಿಸಿ ಜೈಲಿಗಟ್ಟಿದ್ದಾರೆ.

Write A Comment