ಅಂತರಾಷ್ಟ್ರೀಯ

ನಾಯಿಕೊಡೆ ತಿಂದು ಸಾವಿನಂಚಿಗೆ ತಲುಪಿದ ಮಹಿಳೆ !

Pinterest LinkedIn Tumblr

mas

ಮೆಲ್ಬರ್ನ್: ಭಾರತದಲ್ಲಿ ಮ್ಯಾಗಿ ಕರ್ಮಕಾಂಡ ಬಯಲಾದ ನಂತರ ಎಲ್ಲ ಸಿದ್ಧ ಆಹಾರಗಳ ಮೇಲೆ ಗುಮಾನಿ ಮೂಡುತ್ತಿದೆ. ಆಸ್ಟ್ರೇಲಿಯಾದಲ್ಲಿ ಇಂಥದ್ದೇ ಒಂದು ಘಟನೆ ನಡಿದಿದ್ದು, ಭಾರತೀಯ ಮಹಿಳೆಯೊಬ್ಬರು ವೂಲ್ಸ್‌ವರ್ತ್ ಸೂಪರ್ ಮಾರ್ಕೆಟ್ ವಿರುದ್ಧ ಕಾನೂನು ಸಮರಕ್ಕಿಳಿದಿದ್ದಾರೆ.

ನ್ಯೂ ಕ್ಯಾಸ್ಟಲ್ ನಿವಾಸಿಯಾದ ರಾಜೀವ್ ಕೌರ್ ಎಂಬ ಯುವತಿ ವೂಲ್ಸ್‌ವರ್ತ್ ಸೂಪರ್ ಮಾರ್ಕೆಟ್‌ನಿಂದ ತಂದ ಅಣಬೆ ಸೇವಿಸಿದ ಬಳಿಕ ನಿತ್ರಾಣಗೊಂಡಿದ್ದು ವಾರಗಳ ನಂತರ ಕೋಮಾದಿಂದ ಹೊರಬಂದಿದ್ದಾರೆ. ಅದಕ್ಕೂ ಮುನ್ನ ಅವರು ಪಿತ್ತ ಜನಕಾಂಗದ ಕಸಿ, ಕರುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಇದೂ ಸಾಲದೆ ಅವರ ದೇಹದ ಪ್ರಮುಖ ಭಾಗಗಳು ವಿಫಲವಾಗುವ ಹಂತ ತಲುಪಿದ್ದವು ಎಂದು ತಿಳಿದುಬಂದಿದೆ.

”ನಾನು ಬದುಕಿರುವುದು ಒಂದು ಅದೃಷ್ಟವೇ ಸರಿ. ನನ್ನದು ಗಟ್ಟಿಜೀವ ಎಂದು ಡಾಕ್ಟರ್ ಹೇಳುತ್ತಿದ್ದರು. ಕಾರಣ ಲಿವರ್ ಇಲ್ಲದೆ ಎಷ್ಟೋ ಗಂಟೆಗಳ ಕಾಲ ಬದುಕಿದ್ದೆ,” ಎಂದು ಸಾವು ಗೆದ್ದು ಬಂದಿರುವ ಕೌರ್ ತಿಳಿಸಿದ್ದಾರೆ.

ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದು, ಸಾಕ್ಷಿಗಳ ಕೊರತೆ ಇದೆ ಎಂದು ಹೇಳುತ್ತಿದ್ದಾರೆ. ”ಅದು ನಾಯಿ ಕೊಡೆ ಎಂದು ಸಾಬೀತುಪಡಿಸಲು ಸಾಕ್ಷಿಗಳಿಲ್ಲ. ಅದೂ ಅಲ್ಲದೆ ಅವರು ಸೇವಿಸಿರುವ ಅಣಬೆ ವೂಲ್ಸ್‌ವರ್ತ್ ಸೂಪರ್ ಮಾರ್ಕೆಟ್‌ನದ್ದು ಎಂಬುದಕ್ಕೂ ಸಾಕ್ಷಿ ಇಲ್ಲ,” ಎಂದು ಪೊಲೀಸರು ತಿಳಿಸಿದ್ದಾರೆ.

ಏನಾಗಿತ್ತು: ”ಅಣಬೆ ಸಾರೆಂದರೆ ನನಗೆ ಎಲ್ಲಿಲ್ಲದ ಪ್ರೀತಿ. ಕಳೆದವರ್ಷ ಏಪ್ರಿಲ್‌ನಲ್ಲಿ ವೂಲ್ಸ್ ವರ್ತ್ ಮಾರ್ಕೆಟ್‌ನಿಂದ ಅಣಬೆ ಪೊಟ್ಟಣವನ್ನು ಮನೆಗೆ ತಂದಿದ್ದೆ. ಅಣಬೆಯನ್ನು ಚೆನ್ನಾಗಿ ಹುರಿದು ಅಮ್ಮ, ಸಾರು ಮಾಡಿದ್ದರು. ಅದನ್ನು ಸೇವಿಸಿದ ಕೆಲವೇ ಗಂಟೆಗಳಲ್ಲಿ ನಾನು, ಅಮ್ಮ ಮತ್ತು ನಮ್ಮ ಮನೆ ಕೆಲಸದಾಕೆ ಆರೋಗ್ಯದಲ್ಲಿ ವ್ಯತ್ಯಾಸವಾಯಿತು. ಮೂರೂ ಜನರು ನಿತ್ರಾಣ ಸ್ಥಿತಿ ತಲುಪಿದೆವು. ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದರು. ಅಮ್ಮ ಮತ್ತು ಮನೆ ಕೆಲಸದಾಕೆಗೆ ಏನೂ ಆಗಲಿಲ್ಲ. ಆದರೆ, ನಾನು ಬದುಕುತ್ತೇನೆಂಬ ನಂಬಿಕೆಯೇ ಇರಲಿಲ್ಲ,” ಎಂದು ಕೌರ್ ಹೇಳಿದ್ದಾರೆ.

ಕೈ ಎತ್ತಿದ ವೂಲ್ಸ್‌ವರ್ತ್: ”ಮಾರುಕಟ್ಟೆಗೆ ತರುವ ಮುನ್ನ ಎಲ್ಲ ಆಹಾರ ಪದಾರ್ಥಗಳನ್ನು ಪರೀಕ್ಷೆಗೆ ಒಳಪಡಿಸುತ್ತೇವೆ. ಅವು ಆರೋಗ್ಯಕರವಾಗಿವೆ ಎಂದು ದೃಢಪಟ್ಟ ನಂತರವಷ್ಟೇ ಅವನ್ನು ಮಾರಾಟಕ್ಕೆ ಇಡುತ್ತೇವೆ. ಬಹುಶಃ ಕೌರ್ ಅವರು ಬೇರೆಲ್ಲಿಂದಲೋ ಅಣಬೆ ತಂದು ತಿಂದಿರಬಹುದು,” ಎಂದು ವೂಲ್ಸ್‌ವರ್ತ್ ವಕ್ತಾರರು ತಿಳಿಸಿದ್ದಾರೆ.

ಆದರೆ, ವೂಲ್ಸ್‌ವರ್ತ್‌ನ ಆರೋಪವನ್ನು ಕೌರ್ ತಿರಸ್ಕರಿಸಿದ್ದಾರೆ. ”ಅಣಬೆಯನ್ನು ಸೂಪರ್ ಮಾರ್ಕೆಟ್‌ನಲ್ಲಿ ತರದೇ ಇನ್ನೇನು ಕಾಡಿಗೆ ಹೋಗಿ ಆಯ್ದುಕೊಂಡು ಬರುತ್ತಾರಾ? ಪ್ಯಾಕೆಟ್‌ನಲ್ಲಿದ್ದ ಅರ್ಧ ಅಕಂಪನಿಯು ಸುಳ್ಳು ಹೇಳುತ್ತಿದೆ. ಅಣಬೆಯನ್ನು ಮಾತ್ರ ಬಳಸಿದ್ದೇವೆ. ಉಳಿದದ್ದು ಮನೆಯಲ್ಲಿನ ಫ್ರಿಡ್ಜ್‌ನಲ್ಲಿದೆ ಎಂದು ಕೌರ್ ವಾದಿಸುತ್ತಿದ್ದಾರೆ.

ಕೌರ್ ಅವರು ತಾತ್ಕಾಲಿಕ ವೀಸಾ ಆಧಾರದ ಮೇಲೆ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದು, ಅದರ ಅವಧಿ ಮುಗಿದ ಕೂಡಲೇ ಭಾರತಕ್ಕೆ ವಾಪಸ್ ಬರಬೇಕಿದೆ. ಕಾನೂನು ಹೋರಾಟ ಮುಂದುವರಿಸಲಾದರೂ ಅವರು ಆಸೀಸ್‌ನಲ್ಲಿ ಉಳಿದುಕೊಳ್ಳುವ ಬಯಕೆ ವ್ಯಕ್ತಪಡಿಸಿದ್ದಾರೆ. ಕೌರ್ ಅವರು ಆಸ್ಟ್ರೇಲಿಯಾದ ಶಾಶ್ವತ ನಾಗರಿಕರಾಗಲು ಬಯಸಿ ವಲಸೆ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

Write A Comment