ನವದೆಹಲಿ: ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ನಲ್ಲಿ ಸೀಸದ ವಿಷ ಇರುವುದನ್ನು ಬಯಲು ಮಾಡಿರುವ ಭಾರತೀಯ ಆಹಾರ ಸುರಕ್ಷತೆ ಹಾಗೂ ಗುಣಮಟ್ಟ ಪ್ರಾಧಿಕಾರ(ಎಫ್ಎಸ್ಎಸ್ಎಐ) ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕುರ್ಕುರೆ, ಆಲೂ ಚಿಪ್ಸ್ ಸೇರಿ ಹಲವು ಪ್ರಮುಖ ಬ್ರಾಂಡ್ಗಳ ಸ್ನ್ಯಾಕ್ಸ್ಗಳನ್ನು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದೆ.
ಎಫ್ಎಸ್ಎಸ್ಎಐ ದೆಹಲಿ ಅಧಿಕಾರಿಗಳು ಈ ನಿರ್ಧಾರಕ್ಕೆ ಮುಂದಾಗಿದ್ದು, ಮುಂದಿನ ಎಂಟು ವಾರಗಳಲ್ಲಿ ಗುಣಮಟ್ಟ ಪರೀಕ್ಷೆ ನಡೆಸಲಾಗುವುದು. ಇದಕ್ಕಾಗಿ ಚಿಪ್ಸ್, ಕುರುಕುರೆ ಮತ್ತಿತರ ಪ್ರಮುಖ ಬ್ರಾಂಡ್ಗಳ 32 ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದಿದ್ದಾರೆ. ಏತನ್ಮಧ್ಯೆ, ಮ್ಯಾಗಿ ನಿಷೇಧಕ್ಕೆ ತಡೆ ನೀಡುವ ವಿಚಾರವಾಗಿ ಬಾಂಬೆ ಹೈಕೋರ್ಟ್ ಯಾವುದೇ ನಿರ್ದೇಶನ ನೀಡದಿರುವುದರಿಂದ ಈ ತಿಂಗಳ 30ರವರೆಗೂ ನಿಷೇಧ ಮುಂದುವರಿಯಲಿದೆ.
2100 ಭಾರತದ ಉತ್ಪನ್ನಗಳಿಗೆ ಅಮೆರಿಕ ನಿರ್ಬಂಧ: ಕಳೆದ ವರ್ಷ ಭಾರತದಲ್ಲಿ ತಯಾರಿಸಿದ 2,100 ಉತ್ಪನ್ನಗಳ ಆಮದಿಗೆ ಅಮೆರಿಕದ ಆಹಾರ ಮತ್ತು ಔಷಧಿ ಗುಣಮಟ್ಟ ಪ್ರಾಧಿಕಾರ ನಿರ್ಬಂಧ ಹೇರಿದೆ. ನಿಷೇಧಕ್ಕೆ ಒಳಗಾದ ಉತ್ಪನ್ನಗಳಲ್ಲಿ ಹಿಂದುಸ್ತಾನ್ ಯುನಿಲಿವರ್ ಸಂಸ್ಥೆ ತಯಾರಿಸಿದ ವಸ್ತುಗಳು, ಹಲ್ದೀರಾಮ್ಉತ್ಪನ್ನಗಳು ಹಾಗೂ ಸೌಂದರ್ಯ ವರ್ಧಕಗಳೂ ಸೇರಿವೆ. ಅಸುರಕ್ಷಿತ ಸ್ಥಳಗಳಲ್ಲಿ ಉತ್ಪನ್ನಗಳ ತಯಾರಿಕೆ, ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಪದಾರ್ಥಗಳು ಕಂಡುಬಂದ ಹಿನ್ನೆಲೆಯಲ್ಲಿ ನಿಷೇಧ ಹೇರಲಾಗಿದೆ ಎಂದು ಅಮೆರಿಕ ಆಹಾರ ಪ್ರಾಧಿಕಾರದ ವೆಬ್ಸೈಟ್ನಲ್ಲಿ ತಿಳಿಸಲಾಗಿದೆ.
ಯಾವುದೆಲ್ಲ ಪರೀಕ್ಷೆಗೆ?
* ಆಲೂ ಚಿಪ್ಸ್
* ಕುರ್ಕುರೆ
* ಶಿಶು ಆಹಾರ
* ಹಾಲು
* ಎನರ್ಜಿ ಡ್ರಿಂಕ್ಸ್
* ಪ್ರೋಟೀನ್ ಪಾನೀಯಗಳು
* ಆಮದು ಮಾಡಿದ ಆಹಾರ
* ಇನ್ಸ್ಸ್ಟಂಟ್ ಪಾಸ್ತಾ ಮತ್ತು ನೂಡಲ್ಸ್
