ಈಸ್ಟ್ಬೋರ್ನ್: ಭಾರತದಲ್ಲಿ 30 ವರ್ಷ ಮೀರಿತೆಂದರೆ, ಅಯ್ಯೋ ವಯಸ್ಸಾಗೋಯ್ತ, ಇನ್ನೂ ಮದುವೇನೇ ಆಗಲಿಲ್ಲವೆಂದು ಅವಿವಾಹಿತರ ಪಾಲಕರು ಕೊರಗುವುದು ಸಹಜ. ಆದರೆ ಸಪ್ತಸಾಗರದಾಚೆ ಬ್ರಿಟನ್ನಲ್ಲಿ 103 ವರ್ಷ ವಯಸ್ಸಿನ ಅತಿ ಹಿರಿಯ ಯುವಕರೊಬ್ಬರು 91 ವರ್ಷ ವಯಸ್ಸಿನ ಅತಿ ಹಿರಿಯ ಯುವತಿಯನ್ನು ವರಿಸಿ ದಾಖಲೆ ಬರೆದಿದ್ದಾರೆ.
ಕಳೆದ 27 ವರ್ಷಗಳಿಂದಲೂ ಒಟ್ಟಾಗಿಯೇ ವಾಸವಾಗಿದ್ದ 103 ವರ್ಷದ ಜಾರ್ಜ್ ರ್ಕಿಬಿ ಮತ್ತು 91 ವರ್ಷದ ಡೋರೆನ್ ಲಕ್ಕೀ ಶನಿವಾರ ಈಸ್ಟ್ಬೋರ್ನ್ನ ಚರ್ಚ್ ಐ ಡೂ ಎಂದು ಹೇಳಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಬಿಳಿ ಬಣ್ಣದ ಹಿನ್ನೆಲೆಯಲ್ಲಿ ನೀಲಿ ಹೂವುಗಳಿದ್ದ ದಿರಿಸಿನಲ್ಲಿ ಮದುವಣಗಿತ್ತಿ ಮಿಂಚುತ್ತಿದ್ದರೆ, ಇತ್ತೀಚೆಗಷ್ಟೇ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರಿಂದ ವೀಲ್ಚೇರ್ನಲ್ಲಿ ಕುಳಿತಿದ್ದ ಮದುಮಗ ಸೂಟು, ಬೂಟು, ಟೈ ತೊಟ್ಟು ಕಂಗೊಳಿಸುತ್ತಿದ್ದರು.
27 ವರ್ಷಗಳಿಂದ ಒಟ್ಟಾಗಿ ಜೀವಿಸುತ್ತಿದ್ದರೂ ರ್ಕಿಬಿ ದಂಪತಿಗೆ ಎಂದೂ ಮದುವೆಯಾಗಬೇಕೆಂದು ಅನಿಸಿರಲಿಲ್ಲವಂತೆ. ಈ ಬಗ್ಗೆ ಸ್ವಲ್ಪವೂ ಬೇಸರವಿಲ್ಲವಂತೆ. ಆದರೆ ಅದ್ಯಾಕೋ ಇತ್ತೀಚೆಗೆ ವಿವಾಹ ಬಂಧನಕ್ಕೆ ಒಳಗಾಗಿದ್ದರೆ ಒಳ್ಳೆಯದಿತ್ತೆಂಬ ಭಾವನೆ ಮೊಳೆತಿದ್ದರಿಂದ, ಇವರಿಬ್ಬರೂ ಐ ಡೂ ಎಂದು ಹೇಳಲು ನಿರ್ಧರಿಸಿದರಂತೆ.
ಈ ಅತಿ ಹಿರಿಯ ರ್ಕಿಬಿ ದಂಪತಿಯ ಒಟ್ಟು ವಯಸ್ಸು 194 ವರ್ಷಗಳಾಗುತ್ತವೆ. ಇದೊಂದು ವಿಶ್ವದಾಖಲೆ ಎಂದು ಹೇಳಲಾಗುತ್ತಿದೆ. ಈ ಜೋಡಿಗೂ ಮುನ್ನ ಒಟ್ಟು 191 ವರ್ಷ ವಯಸ್ಸು ಹೊಂದಿದ್ದ ಫ್ರಾನ್ಸ್ನ ಫ್ರಾನ್ಕೋಯಿಸ್ ಫರ್ನಾಂಡಿಸ್ ಮತ್ತು ಮ್ಯಾಡೆಲೀನ್ ಫ್ರಾನ್ಸಿಯೋ ಎಂಬ ಅತಿ ಹಿರಿಯ ದಂಪತಿ ಈ ದಾಖಲೆ ಹೊಂದಿದ್ದರು.
