ರಾಷ್ಟ್ರೀಯ

ಪಾಪಿ ಪಾಕ್ ನ ಅಣ್ವಸ್ತ್ರ ಬೆದರಿಕೆಗೆ ಭಾರತ ತಿರುಗೇಟು

Pinterest LinkedIn Tumblr

Indian-Army-Power

ನವದೆಹಲಿ,ಜೂ.12- ಭಾರತೀಯ  ಯೋಧರು ಮ್ಯಾನ್ಮಾರ್‌ನಲ್ಲಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಅನೇಕ ಮಂದಿ ಉಗ್ರರನ್ನು ಕೆಲವೇ ನಿಮಿಷಗಳಲ್ಲಿ ಹೊಡೆದುರುಳಿಸಿರುವುದು ಮತ್ತು ನಮ್ಮ ತಂಟೆಗೆ ಬಂದವರಿಗೆ ಇದೇ ಶಾಸ್ತಿ ಎಂಬ ದಾಟಿಯಲ್ಲಿ ಕೇಂದ್ರ ಸರ್ಕಾರ ಗುಡುಗಿರುವುದು ಈಗ ನೆರೆಯ ಪಾಕಿಸ್ತಾನದಲ್ಲಿ ತಳಮಳವುಂಟು ಮಾಡಿದೆ.

ಮ್ಯಾನ್ಮಾರ್ ಘಟನೆಯ ಬಗ್ಗೆ ಭಾರತದ ಪ್ರತಿಕ್ರಿಯೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪಾಕಿಸ್ತಾನ ಸರ್ಕಾರ ನಿನ್ನೆ ಅದನ್ನು ಖಂಡಿಸುವ ನಿರ್ಣಯ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೇಂದ್ರ ರಕ್ಷಣಾ ಇಲಾಖೆ ಉಗ್ರರ ದಮನಕ್ಕೆ ಯಾವುದೇ ಕ್ರಮ ಕೈಗೊಳ್ಳಲೂ ನಾವು ಸಿದ್ಧ ಎಂದು ಅಪರೋಕ್ಷವಾಗಿ ಪಾಕಿಸ್ತಾನಕ್ಕೆ ಸಂದೇಶ ಕಳುಹಿಸಿದೆ.

ಮ್ಯಾನ್ಮಾರ್ ಘಟನೆಯ ನಂತರ ಭಾರತದ ಉಗ್ರರ ಬಗೆಗಿನ ನಿಲುವಿನಲ್ಲಿ ಬದಲಾವಣೆಯಾಗಿದ್ದು, ಅನಗತ್ಯವಾಗಿ ಗಡಿಯಲ್ಲಿ ಕಾಲುಕೆರೆದು ನಮ್ಮ ತಂಟೆಗೆ ಬಂದರೆ ಸುಮ್ಮನೆ ಬಿಡುವುದಿಲ್ಲ ಎಂದು ಸರ್ಕಾರ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದೆ.  ಇದರಿಂದ ಗಲಿಬಿಲಿಗೊಂಡಿರುವ ಪಾಕಿಸ್ತಾನ ತಾನು ಭೀತಿಗೊಂಡಿದ್ದರೂ ಅದನ್ನು ವ್ಯಕ್ತಪಡಿಸದೆ ಭಾರತ ಮೇಲೆ ಆರೋಪ ಹೊರಿಸಲು ಪ್ರಯತ್ನಿಸುತ್ತಿದೆ. ಆದರೆ ಪಾಕಿಸ್ತಾನದ ಈ ಒಣಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂಬ ಗಟ್ಟಿ  ಸಂದೇಶ ಈಗಾಗಲೇ ಪಾಕಿಸ್ತಾನ ಆಡಳಿತಕ್ಕೆ ತಲುಪಿದೆ.  ತನ್ನ ಹೆದರಿಕೆಯನ್ನು ಮರೆಮಾಚುವ ನಿಟ್ಟಿನಲ್ಲಿ ಪಾಕಿಸ್ತಾನದ ಸೈನಿಕರು ಇಂದು ಮತ್ತೆ ಜಮ್ಮುವಿನ ಪರಗ್ವಾಲ್ ಪ್ರದೇಶದಲ್ಲಿ ಕದನ ವಿರಾಮ ಉಲ್ಲಂಘಿಸಿ ಗಡಿಭದ್ರತಾ ಪಡೆ ನೆಲೆಗಳ ಮೇಲೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ.

ಪದೇ ಪದೇ ಗಡಿಯಲ್ಲಿ ಪುಂಡಾಟ ನಡೆಸುತ್ತಿರುವ ಪಾಕಿಸ್ತಾನ ಸೈನಿಕರ ಈ ಕಿಡಿಗೇಡಿತನವನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ರಕ್ಷಣಾ ಇಲಾಖೆ, ಈಗಾಗಲೇ ಪಾಕಿಸ್ತಾನಕ್ಕೆ ಪಾಠ  ಕಲಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ.  ಪಾಕಿಸ್ತಾನ ಅಣ್ವಸ್ತ್ರ  ಬಳಕೆಯ ಮಾತನಾಡುವುದರಿಂದ ಕೆರಳಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್‌ರವರು ಸಂದರ್ಭ ಒದಗಿದರೆ ನಾವೂ ಕೂಡ ಅದಕ್ಕೆ ಪ್ರತ್ಯುತ್ತರ ನೀಡಲು ನಮಗೂ ಗೊತ್ತಿದೆ ಎಂದು ಗುಡುಗಿದ್ದಾರೆ.  ಯಾವ ಸಂದರ್ಭದಲ್ಲಿ ನಾವು ತಿರುಗಿ ಬೀಳಬೇಕೆಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಈ ಹಿಂದೆ ಅನೇಕ ಬಾರಿ ಕಾಲು ಕೆರೆದುಕೊಂಡು ಬಂದಿರುವ ಪಾಕಿಸ್ತಾನ  ಬುದ್ದಿ ಕಲಿತಿಲ್ಲ. ಮುಂದೊಂದು ದಿನ ಅವರ ಆಟಾಟೋಪಕ್ಕೆ ಸಂಪೂರ್ಣ ವಿರಾಮ ಹಾಕುವ ಕಾಲ ದೂರವಿಲ್ಲ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ಹೇಳಿದ್ದಾರೆ.  ನಮ್ಮದು ಶಾಂತಿಪ್ರಿಯ ರಾಷ್ಟ್ರವಾದರೂ ಸಾರ್ವಭೌಮತ್ವ ಹಾಗೂ ಭದ್ರತೆ ವಿಷಯದಲ್ಲಿ ಯಾರಾದರೂ ಸರಿ  ಯಾವುದೇ ಮುಲಾಜಿಲ್ಲದೆ ಅವರನ್ನು ಬಗ್ಗು ಬಡಿಯುತ್ತೇವೆ ಎಂದು ಎಚ್ಚರಿಸಿದ್ದಾರೆ.  ಪ್ರಧಾನಿ ನರೇಂದ್ರ ಮೋದಿಯವರು ಕೂಡ ಈಗಾಗಲೇ ಭಾರತೀಯ ಸೇನೆಗೆ ಯಾವುದೇ ಸಂದರ್ಭ ಎದುರಿಸಲು ಸಜ್ಜಾಗಿರುವಂತೆ ಸೂಚನೆ ನೀಡಿರುವುದು ಮುಂದಿನ ಬೆಳವಣಿಗೆಗಳ ಬಗ್ಗೆ ಮತ್ತಷ್ಟು ಗಂಭೀರತೆ ಮೂಡಿಸಿದೆ.

Write A Comment