ರಾಷ್ಟ್ರೀಯ

ಮ್ಯಾಗಿ ರಕ್ಷಣೆಗೆ ಧಾವಿಸಿದ ಶಿವಾನಿ! ಇವರೇನು ಮಾಡುತ್ತಾರೆಂಬುದನ್ನು ಕಾದು ನೋಡೋಣ…

Pinterest LinkedIn Tumblr

Shivani-Hegde-Nestle

ನವದೆಹಲಿ: ಮ್ಯಾಗಿ ವಿವಾದದಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ನೆಸ್ಲೆ ಕಂಪನಿಯು ಈಗ ಡ್ಯಾಮೇಜ್ ಕಂಟ್ರೋಲ್‍ನತ್ತ ಮುಖಮಾಡಿದೆ. ಹೇಗಾದರೂ ಮಾಡಿ ಕಂಪನಿಗಾದ ಮುಜುಗರವನ್ನು ಸರಿಪಡಿಸಬೇಕೆಂದು ನೆಸ್ಲೆ ಹರಸಾಹಸ ಮಾಡುತ್ತಿದೆ.

ಇದಕ್ಕಾಗಿ ಅಮೆರಿಕ ಮೂಲದ ಸಾರ್ವಜನಿಕ ಸಂಪರ್ಕ ಸಂಸ್ಥೆ ಎಪಿಸಿಒ(ಆ್ಯಪ್ಕೋ)ಯ ನೆರವು ಪಡೆಯಲು ಮುಂದಾಗಿದೆ. ಅಷ್ಟೇ ಅಲ್ಲ, ಸುಮಾರು 30 ವರ್ಷಗಳಿಂದ ನೆಸ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ಶಿವಾನಿ ಹೆಗ್ಡೆ ಅವರನ್ನು ಶ್ರೀಲಂಕಾದಿಂದ ಮತ್ತೆ ಭಾರತಕ್ಕೆ ಕರೆಸಿಕೊಂಡಿದೆ.

ಯಾರಿವರು ಶಿವಾನಿ ಹೆಗ್ಡೆ?:

ಮಾರ್ಕೆಟಿಂಗ್ ಕಾರ್ಯತಂತ್ರದಲ್ಲಿ ಶಿವಾನಿ ಅವರದ್ದು ಎತ್ತಿದ ಕೈ. ನೆಸ್ಲೆ ಬ್ರ್ಯಾಂಡ್‍ನ ವಿಸ್ತರಣೆ ಹಾಗೂ ಅದನ್ನು ಜನಪ್ರಿಯಗೊಳಿಸುವಲ್ಲಿ ಅವರು ಪ್ರಮುಖ ಪಾತ್ರವಹಿಸಿದ್ದಾರೆ. ಮ್ಯಾಗಿಯನ್ನು ಜನಪ್ರಿಯತೆಯ ತುತ್ತತುದಿಗೇರಿಸಿದ್ದೇ ಶಿವಾನಿ ಹೆಗ್ಡೆ. ಇವರು 4 ತಿಂಗಳ ಹಿಂದಷ್ಟೇ ಶ್ರೀಲಂಕಾದಲ್ಲಿ ಕಂಪನಿಯ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದ್ದರು. ಮ್ಯಾಗಿಯ `ಟೇಸ್ಟ್ ಭಿ, ಹೆಲ್ತ್ ಭಿ’, `ಮೀ ಔರ್ ಮೇರಿ ಮ್ಯಾಗಿ’ ಮತ್ತಿತರ ಪ್ರಮುಖ ಜಾಹೀರಾತುಗಳನ್ನು ಪರಿಚಯಿಸಲು ಕಾರಣರಾದವರೇ ಶಿವಾನಿ. ಜತೆಗೆ, ಗ್ರಾಹಕರನ್ನು ತಲುಪಲು ಡಿಜಿಟಲ್ ಹಾದಿಯನ್ನು ಹಿಡಿಯುವ ಬಗ್ಗೆ ಹೇಳಿಕೊಟ್ಟವರೂ ಅವರೇ. ಹೀಗಾಗಿ ನೆಸ್ಲೆ ಕಂಪನಿಯು ಈಗ ಶಿವಾನಿ ಅವರನ್ನೇ ನೆಚ್ಚಿಕೊಂಡಿದ್ದು, ಅವರು ಮತ್ತೆ ಮ್ಯಾಗಿಯನ್ನು ಬಿಕ್ಕಟ್ಟಿನಿಂದ ಪಾರು ಮಾಡಬಹುದು ಎಂಬ ನಿರೀಕ್ಷೆ ಹೊಂದಿದೆ. ಇದಕ್ಕಾಗಿಯೇ ಅವರನ್ನು ಲಂಕಾದಿಂದ ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ.

ಆ್ಯಪ್ಕೋ ಮೊರೆಹೋಗಿದ್ದೇಕೆ?:

ನಕಾರಾತ್ಮಕ ಪ್ರಚಾರದಿಂದ ಮ್ಯಾಗಿಯನ್ನು ಹೊರತರಬೇಕೆಂಬ ಉದ್ದೇಶದಿಂದ ನೆಸ್ಲೆ ಈಗ ಪಿಆರ್ ಕಂಪನಿ ಆ್ಯಪ್ಕೋ ವಲ್ಡ್ ವೈಡ್‍ನ ಮೊರೆಹೋಗಿದೆ. 2002ರ ಗುಜರಾತ್

ಕೋಮುಗಲಭೆಯ ಬಳಿಕ ಗುಜರಾತ್ ನ ಇಮೇಜ್ ಅನ್ನು ಬದಲಾಯಿಸಿ, ಹೂಡಿಕೆದಾರರ ಸ್ವರ್ಗವಾಗುವಂತೆ ಮಾಡಿದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೆರವಾದ ಹೆಗ್ಗಳಿಕೆಯೂ ಇದೇ ಸಂಸ್ಥೆಗೆ ಸಲ್ಲುತ್ತದೆ. ಈಗ ಇದೇ ಆ್ಯಪ್ಕೊವನ್ನು ಬಳಸಿಕೊಂಡು ಮ್ಯಾಗಿಯತ್ತ ಗ್ರಾಹಕರನ್ನು ಆಕರ್ಷಿಸುವಂತೆ ಮಾಡುವುದು ನೆಸ್ಲೆಯ ಉದ್ದೇಶ ಎಂದು ಎಕನಾಮಿಕ್ ಟೈಮ್ಸ್ ನ ವರದಿ ಮಾಡಿದೆ. ಅಲ್ಲದೆ, ಶುಕ್ರವಾರ ನೆಸ್ಲೆ ಸಿಇಒ ಸುದ್ದಿಗೋಷ್ಠಿಯನ್ನು ಆಯೋಜಿಸಿದ್ದೇ ಈ ಸಂಸ್ಥೆ ಎಂದೂ ಹೇಳಲಾಗಿದೆ.

Write A Comment