ರಾಷ್ಟ್ರೀಯ

ಮ್ಯಾಗಿಯಲ್ಲಿ ಯಾವುದೇ ಆಕ್ಷೇಪಾರ್ಹ ಅಂಶ ಪತ್ತೆಯಾಗಿಲ್ಲ: ಮಮತಾ

Pinterest LinkedIn Tumblr

magi5

ಕೊಲ್ಕತಾ: ದೇಶಾದ್ಯಂತ ನಿಷೇಧಕ್ಕೆ ಒಳಗಾಗಿರುವ ಮ್ಯಾಗಿ ನೂಡಲ್ಸ್‌ನಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಹೇಳಿದ್ದಾರೆ.

ತೀವ್ರ ವಿವಾದಕ್ಕೆ ಕಾರಣವಾಗಿದ್ದ ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್‌ನ ಶ್ಯಾಂಪಲ್ ಅನ್ನು ಪಶ್ಚಿಮ ಬಂಗಾಳ ಸರ್ಕಾರ ಸಹ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆ ವೇಳೆ ಯಾವುದೇ ಆಕ್ಷೇಪಾರ್ಹ ವಸ್ತುಗಳು ಪತ್ತೆಯಾಗಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ತಿಳಿಸಿದ್ದಾರೆ.

ರಾಜ್ಯ ಹಾಗೂ ಕೇಂದ್ರದ ಪ್ರಯೋಗಾಲದಲ್ಲಿ ಮ್ಯಾಗಿ ಉತ್ಪನ್ನಕ್ಕೆ ಸಂಬಂಧಿಸಿದ ಐದು ಪರೀಕ್ಷೆಗಳನ್ನು ನಡೆಸಲಾಗಿದೆ. ಅಲ್ಲದೆ ಕೊಲ್ಕತಾ ಮಹಾನಗರ ಪಾಲಿಕೆ ಸಹ ಪ್ರತ್ಯೇಕವಾಗಿ ಮೂರು ಪರೀಕ್ಷೆಗಳನ್ನು ನಡೆಸಿದೆ. ಆದರೂ ಇದುವರೆಗೆ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ. ಹೀಗಾಗಿ ಮ್ಯಾಗಿ ವಿರುದ್ಧ ರಾಜ್ಯ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಮಮತಾ ಬ್ಯಾನರ್ಜಿ ಅವರು ಹೇಳಿದ್ದಾರೆ.

ಮ್ಯಾಗಿ ನೂಡಲ್ಸ್‌ಗೆ ಸಂಬಂಧಿಸಿದ ತನಿಖೆ ಮುಂದುವರೆಯಲಿದ್ದು, ಒಂದು ವೇಳೆ ಅಪಾಯಕಾರಿ ಅಂಶ ಪತ್ತೆಯಾದರೆ ಮುಂದಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ದೇಶಾದ್ಯಂತ ಮ್ಯಾಗಿ ಸೇರಿದಂತೆ ನೆಸ್ಲೆ ಕಂಪನಿಯ 9 ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಆಹಾರ ಸುರಕ್ಷತಾ ಆಯೋಗ ನೆಸ್ಲೆ ಕಂಪನಿಗೆ ಸೂಚಿಸಿದೆ. ಅಲ್ಲದೆ ಉತ್ಪನ್ನಗಳನ್ನು ವಾಪಸ್ ಪಡೆದಿರುವ ಬಗ್ಗೆ ಮೂರು ದಿನದಲ್ಲಿ ಮಾಹಿತಿ ನೀಡುವಂತೆ ಆದೇಶಿಸಿದೆ.

Write A Comment