ರಾಷ್ಟ್ರೀಯ

ಆಹಾರ ಸುರಕ್ಷತೆಯಲ್ಲಿ ರಾಜಿ ಇಲ್ಲ, ಮ್ಯಾಗಿ ನಿಯಮ ಉಲ್ಲಂಘಿಸಿದೆ: ನಡ್ಡಾ

Pinterest LinkedIn Tumblr

jp

ನವದೆಹಲಿ: ದೇಶಾದ್ಯಂತ ಮ್ಯಾಗಿ ಸೇರಿದಂತೆ 9 ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಕೇಂದ್ರ ಆಹಾರ ಸುರಕ್ಷತಾ ಆಯೋಗ ನೆಸ್ಲೆ ಕಂಪನಿಗೆ ಸೂಚಿಸಿದ ಬೆನ್ನಲ್ಲೆ, ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ನೆಸ್ಲೆ ಕಂಪನಿ ವಿಫಲವಾಗಿದ್ದು, ಆಹಾರ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಅವರು ಶುಕ್ರವಾರ ಹೇಳಿದ್ದಾರೆ.

ಮ್ಯಾಗಿ ನೂಡಲ್ಸ್‌ಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಆರೋಗ್ಯ ಸಚಿವಾಲಯಕ್ಕೆ ಎಲ್ಲಾ ರಾಜ್ಯಗಳಿಂದ ವರದಿಗಳು ಬಂದಿದ್ದು, ಆ ವರದಿಯನ್ನು ಪರಿಶೀಲಿಸಿದ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಡ್ಡಾ ತಿಳಿಸಿದ್ದಾರೆ.

‘ಆಹಾರ ಸುರಕ್ಷತಾ ನಿಯಮಗಳನ್ನು ಪಾಲಿಸುವಲ್ಲಿ ಮತ್ತು ಗುಣಮಟ್ಟ ಕಾಯ್ದುಕೊಳ್ಳುವಲ್ಲಿ ನೆಸ್ಲೆ ಸಂಸ್ಥೆ ವಿಫಲವಾದ ಹಿನ್ನೆಲೆಯಲ್ಲಿ ಮ್ಯಾಗಿ ಸೇರಿದಂತೆ ನೆಸ್ಲೆ ಸಂಸ್ಥೆಯ 9 ಉತ್ಪನ್ನಗಳನ್ನು ಮಾರುಕಟ್ಟೆಯಿಂದ ವಾಪಸ್ ಪಡೆಯುವಂತೆ ಸೂಚಿಸಲಾಗಿದೆ’ ಎಂದು ಸಚಿವರು ಹೇಳಿದ್ದಾರೆ.

ಇನ್ನು ಮ್ಯಾಗಿ ತಿನ್ನಲು ಯೋಗ್ಯವಾಗಿದೆ ಎಂಬ ನೆಸ್ಲೆ ಕಂಪನಿಯ ಸಿಇಒ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ನಡ್ಡಾ, ತಮ್ಮ ಸಚಿವಾಲಯ ಎಲ್ಲಾ ರಾಜ್ಯಗಳು ಕಳುಹಿಸಿದ ವರದಿಯನ್ನು ಆಧರಿಸಿ ಅಂತಿಮ ನಿರ್ಧಾರ ತೆಗೆದುಕೊಂಡಿದೆ ಎಂದರು.

Write A Comment