ಕನ್ನಡ ವಾರ್ತೆಗಳು

ಗ್ರಾಪಂ ಚುನಾವಣಾ ಫಲಿತಾಂಶ : ದ.ಕ. ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳದೇ ಪ್ರಾಬಲ್ಯ

Pinterest LinkedIn Tumblr

First_Counting_End_15

ಮಂಗಳೂರು, ಜೂ. 6: ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಪಂ ಚುನಾವಣೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳೇ ಮುನ್ನಡೆ ಸಾಧಿಸಿದ್ದಾರೆ. ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಪ್ರತಿ ನಿಧಿಸುವ ಮೂಡುಬಿದಿರೆ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಅಭ್ಯರ್ಥಿಗಳು ಅಧಿಕ ಸ್ಥಾನಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಮುಲ್ಕಿ ಹೋಬಳಿಯ 10 ಗ್ರಾಪಂಗಳ ಪೈಕಿ 7ರಲ್ಲಿ ಬಿಜೆಪಿ ಬೆಂಬಲಿತರು ಬಹುಮತ ಗಳಿಸಿದ್ದು, ಕಾಂಗ್ರೆಸ್ ಬೆಂಬಲಿತರು 3ರಲ್ಲಿ ಮಾತ್ರ ಗೆಲುವು ಕಂಡಿದ್ದಾರೆ. ಮೂಡುಬಿದಿರೆ ಹೊರವಲಯದಲ್ಲಿ ಕಾಂಗ್ರೆಸ್ ಸುಪರ್ದಿಯಲ್ಲಿದ್ದ ಹೆಚ್ಚಿನ ಗ್ರಾಪಂಗಳು ಬಿಜೆಪಿ ಪಾಲಾಗಿರುವ ಬಗ್ಗೆ ಪಕ್ಷದ ಮೂಲಗಳು ತಿಳಿಸಿವೆ.

ಬಂಟ್ವಾಳದ 39 ಗ್ರಾಪಂಗಳಲ್ಲಿ 20 ಬಿಜೆಪಿ ಹಾಗೂ 17 ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಪಾಲಾಗಿವೆ. 2ರಲ್ಲಿ ಸಮಬಲ ಕಾಯ್ದುಕೊಳ್ಳಲಾಗಿದೆ. ಬೆಳ್ತಂಗಡಿಯ 46 ಗ್ರಾ.ಪಂ.ಗಳಲ್ಲಿ 17 ಕಾಂಗ್ರೆಸ್ ಹಾಗೂ 23 ಗ್ರಾಪಂಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆದ್ದುಕೊಂಡಿದ್ದಾರೆ. 1 ಗ್ರಾಪಂನಲ್ಲಿ ಜೆಡಿಎಸ್ ಹಾಗೂ 1ರಲ್ಲಿ ಪಕ್ಷೇತರ ಗುಂಪು ಜಯ ಗಳಿಸಿದ್ದರೆ, 4 ಗ್ರಾಪಂಗಳು ಅತಂತ್ರ ಸ್ಥಿತಿಯಲ್ಲಿವೆ. ಸುಳ್ಯದ 28 ಗ್ರಾ.ಪಂ.ಗಳಲ್ಲಿ 23 ಬಿಜೆಪಿ ಹಾಗೂ 5 ಕಾಂಗ್ರೆಸ್ ಬೆಂಬಲಿತ ಅಭ್ಯಥಿಗಳು ಪಡೆಯುವ ಮೂಲಕ ಸುಳ್ಯದಲ್ಲಿ ಬಿಜೆಪಿ ತನ್ನ ಪ್ರಾಬಲ್ಯವನ್ನು ಕಾಯ್ದುಕೊಂಡಿದೆ. ಪುತ್ತೂರಿನ 41 ಗ್ರಾಪಂಗಳಲ್ಲಿ 30 ಬಿಜೆಪಿ ಹಾಗೂ 10ರಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಸಚಿವ ಯು.ಟಿ.ಖಾದರ್ ಪ್ರತಿನಿಧಿ ಸುವ ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ತಮ್ಮ ಪ್ರಾಬಲ್ಯವನ್ನು ಮೆರೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂಬುದಾಗಿ ಲಭ್ಯ ಮಾಹಿತಿಯ ಹಿನ್ನೆಲೆಯಲ್ಲಿ ವಿಶ್ಲೇಷಿ ಸಲಾಗಿದೆ.

ಜಿಲ್ಲೆಯ 13 ಕ್ಷೇತ್ರಗಳಲ್ಲಿ ಸಮಸಮ.

ದ.ಕ. ಜಿಲ್ಲೆಯ ಗ್ರಾಪಂ ಚುನಾ ವಣೆಯ ಫಲಿತಾಂಶದಲ್ಲಿ 13 ಕ್ಷೇತ್ರಗಳಲ್ಲಿ ಟೈ ಆಗಿವೆ. ಮಂಗಳೂರಿನ ಬೆಳುವಾಯಿ ಮತ್ತು ಅಡ್ಡೂರು, ಬೆಳ್ತಂಗಡಿಯ ಪಟ್ರಮೆ, ಪುತ್ತೂರಿನ ಒಳಮೊಗರು, ಸುಳ್ಯದ ಸಂಪಾಜೆ, ಜಾಲ್ಸೂರು, ಕಲ್ಮಡ್ಕ, ಅಮರಪಡ್ನೂರು, ಮಂಡೆಕೋಲು, ಬಂಟ್ವಾಳದ ಕೆದಿಲ, ಕರಿಯಂಗಳ, ಚೇಳೂರು, ಸಜಿಪ ಮೂಡ ಕ್ಷೇತ್ರಗಳಲ್ಲಿ ಫಲಿತಾಂಶ ಟೈ ಆಗಿದ್ದು, ಬಳಿಕ ನಾಣ್ಯ ಚಿಮ್ಮುವಿಕೆಯ ಮೂಲಕ ವಿಜಯಿ ಅಭ್ಯರ್ಥಿಗಳನ್ನು ಘೋಷಿಸಲಾಯಿತು.

227 ಗ್ರಾ.ಪಂ. ಗಳ 3,288 ಸ್ಥಾನಗಳು

ಮಂಗಳೂರಿನ 55 ಗ್ರಾ.ಪಂ.ನ 951 ಸ್ಥಾನಗಳು, ಬಂಟ್ವಾಳದ 57 ಗ್ರಾ.ಪಂ.ನ 803 ಸ್ಥಾನಗಳು, ಬೆಳ್ತಂಗಡಿಯ 46 ಗ್ರಾ.ಪಂ.ನ 623 ಸ್ಥಾನಗಳು, ಪುತ್ತೂರು 41 ಗ್ರಾ.ಪಂ.ಗಳ 597 ಸ್ಥಾನಗಳು, ಸುಳ್ಯದ 28 ಗ್ರಾ.ಪಂ.ನ 314 ಸ್ಥಾನಗಳ ಒಟ್ಟು 227 ಗ್ರಾ.ಪಂ.ಗಳ 3,288 ಸ್ಥಾನಗಳಿಗೆ ಇಂದು ಅಭ್ಯರ್ಥಿಗಳ ಆಯ್ಕೆಯಾಗಿದೆ.

ಮತ ಎಣಿಕೆ ಪೂರ್ಣ: 

ದ.ಕ. ಜಿಲ್ಲೆಯ 227 ಗ್ರಾ.ಪ.ಗಳ 3,288 ಸ್ಥಾನಕ್ಕೆ ನಡೆದ ಮತದಾನದ ಎಣಿಕೆ ಕಾರ್ಯವು ಶುಕ್ರವಾರ ಜಿಲ್ಲೆಯ 5 ಕೇಂದ್ರಗಳಲ್ಲಿ ಸುಸೂತ್ರವಾಗಿ ನಡೆದಿದ್ದು, ರಾತ್ರಿ ಸುಮಾರು 10:30ರ ವೇಳೆಗೆ ಪೂರ್ಣಗೊಂಡಿದೆ. ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.

ಎಣಿಕೆ ಕಾರ್ಯ ರಾತ್ರಿ 7ರೊಳಗೆ ಪೂರ್ಣಗೊಳಿಸುವ ನಿರೀಕ್ಷೆ ಹೊಂದಲಾ ಗಿತ್ತು. ಆದರೆ ಮತ ಪತ್ರಗಳನ್ನು ಸಿಬ್ಬಂದಿ ಎಣಿಕೆ ಮಾಡುವ ಮೂಲಕ ನಡೆಸ ಬೇಕಾಗಿದ್ದುದರಿಂದ (ವಿಧಾನಸಭೆ ಮತ್ತು ಲೋಕಸಭಾ ಚುನಾವಣಾ ಮತ ಎಣಿಕೆ ಮತಯಂತ್ರಗಳ ಮೂಲಕ ನಡೆಸಲಾಗಿತ್ತು) ತಡವಾಗಿದೆ. ಪ್ರಥಮ ಸುತ್ತಿನ ಮತ ಎಣಿಕೆಗೆ 4 ಗಂಟೆಗಳ ಅವಧಿ ತಗುಲಿದರೆ, ಉಳಿದ ಸುತ್ತುಗಳು ಕ್ಷಿಪ್ರಗತಿಯಲ್ಲಿ ನಡೆದಿವೆೆ. ಪುತ್ತೂರು ಮತ್ತು ಸುಳ್ಯಗಳಲ್ಲಿ ಸಂಜೆಯ ವೇಳೆಗೆ ಮತ ಎಣಿಕೆ ಕಾರ್ಯ ಸಂಪೂರ್ಣವಾಗಿತ್ತು ಎಂದವರು ತಿಳಿಸಿದ್ದಾರೆ.

Write A Comment