ರಾಷ್ಟ್ರೀಯ

ದೇಶಾದ್ಯಂತ ಮೋದಿ ಬೆಂಬಲಿಸಿ ಬಿಜೆಪಿಗೆ 30 ಲಕ್ಷ ಮುಸ್ಲಿಮರ ಸದಸ್ಯತ್ವ

Pinterest LinkedIn Tumblr

bjp

ಲಕ್ನೋ, ಜೂ.4: ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಭಾರತೀಯ ಜನತಾ ಪಕ್ಷದ ಸದಸ್ಯತ್ವ ಪಡೆದ ಮುಸ್ಲಿಮರ ಸಂಖ್ಯೆ ಮುವ್ವತ್ತು ಲಕ್ಷ ದಾಟಿದೆ. ನನ್ನ ಆಡಳಿತ ವೈಖರಿ ತಮಗಿಷ್ಟವಾಗಿದ್ದರೆ ಪಕ್ಷದ ಸದಸ್ಯತ್ವ ನೋಂದಣಿಯಲ್ಲಿ ಭಾಗವಹಿಸಿ ಎಂದು ಮೋದಿ ಅವರು ಮುಸ್ಲಿಮರಿಗೆ ಕರೆ ನೀಡಿದ ನಂತರ ಈ ಐತಿಹಾಸಿಕ ಬೆಳವಣಿಗೆ ಕಂಡು ಬಂದಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಸದಸ್ಯತ್ವ ಅಭಿಯಾನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಮಧ್ಯಪ್ರದೇಶವೊಂದರಲ್ಲಿಯೇ ನಾಲ್ಕು ಲಕ್ಷ ಮಂದಿ ಬಿಜೆಪಿ ಸದಸ್ಯತ್ವ ಸ್ವೀಕರಿಸಿದ್ದಾರೆ. ಗುಜರಾತ್‌ನಲ್ಲಿ 2.6 ಲಕ್ಷ ಮಂದಿ, ದೆಹಲಿಯಲ್ಲಿ 2.5 ಲಕ್ಷ ಮಂದಿ, ರಾಜಸ್ಥಾನ ಮತ್ತು ಅಸ್ಸಾಂನಲ್ಲಿ ಸುಮಾರು 2 ಲಕ್ಷ ಮಂದಿ, ಪಶ್ಚಿಮ ಬಂಗಾಲದಲ್ಲಿ 2.3 ಲಕ್ಷ ಮಂದಿ ಮತ್ತು ಉತ್ತರ ಪ್ರದೇಶದಲ್ಲಿ 1.75 ಲಕ್ಷ ಮುಸ್ಲಿಮರು ಸದಸ್ಯತ್ವ ಸ್ವೀಕರಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಅಲ್ಪಸಂಖ್ಯಾತರ ವಿಭಾಗದ ಮುಖ್ಯಸ್ಥ ಅಬ್ದುಲ್ ರಷೀದ್ ಅನ್ಸಾರ್ ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಪಕ್ಷದಲ್ಲಿ ಮುಸ್ಲಿಂ ಸದಸ್ಯತ್ವದ ನಿಖರ ಅಂಕಿ-ಸಂಖ್ಯೆ ಇದುವರೆಗೂ ಲಭ್ಯವಾಗಿರಲಿಲ್ಲವಾದರೂ ಇದೀಗ ಆ ಸಂಖ್ಯೆ ಹೆಚ್ಚಾಗುತ್ತಿದ್ದು, ಇತ್ತೀಚೆಗೆ ಮುಕ್ತಾಯಗೊಂಡ ಸದಸ್ಯತ್ವ ಅಭಿಯಾನವೊಂದರಲ್ಲಿಯೇ ಮುವ್ವತ್ತು ಲಕ್ಷ ಮಂದಿ ಪಕ್ಷದ ಸದಸ್ಯತ್ವ ಪಡೆದಿರುವುದು ಒಂದು ದಾಖಲೆ ಎಂದು ಹೇಳಿದ್ದಾರೆ.

ಇದೀಗ ಈ ಮುವತ್ತು ಲಕ್ಷ ಮಂದಿಯ ಪೈಕಿ ಬಹುತೇಕರು ಪಕ್ಷದ ನಿಷ್ಟಾವಂತ ಕಾರ್ಯಕರ್ತರಾಗಿ ಪರಿವರ್ತನೆಗೊಂಡಿದ್ದಾರೆ ಎಂದು ಹೇಳಿರುವ ಅವರು ಈ ಕಾರ್ಯಕರ್ತರು ಬಹುಸಂಖ್ಯೆಯಲ್ಲಿ ಮುಸ್ಲಿಮರನ್ನು ಪಕ್ಷದತ್ತ ಕರೆತರಲು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಬಿಜೆಪಿ ಮತ್ತು ಮುಸ್ಲಿಮರ ನಡುವಿನ ಅಂತರ ಕಡಿಮೆ ಮಾಡಲು ಈ ಅಭಿಯಾನ ಸಾಕಷ್ಟು ಸಹಕಾರಿಯಾಗಿದ್ದು, ಮುಂದಿನ ದಿನಗಳಲ್ಲಿ ಇದನ್ನು ಸವಾಲಾಗಿ ಸ್ವೀಕರಿಸಿ ಪಕ್ಷದಲ್ಲಿ ಅಲ್ಪಸಂಖ್ಯಾತರ ಸಂಖ್ಯಾಬಲ ಹೆಚ್ಚಿಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ‘ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್’ ಕನಸನ್ನು ನನಸು ಮಾಡುವುದು ನಮ್ಮ ಮುಂದಿರುವ ಪ್ರಮುಖ ಎಂದಿರುವ ಅವರು ಮುಂದಿನ ಉತ್ತರ ಪ್ರದೇಶ ಚುನಾವಣೆ ವೇಳೆಗೆ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲಪಡಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.

Write A Comment