ರಾಷ್ಟ್ರೀಯ

ಪ್ರವಾಹದಿಂದ ನಿರ್ಗತಿಕರಾದವರಿಗೆ 47 ರೂ.ಚೆಕ್ ನೀಡಿದ ಜಮ್ಮು-ಕಾಶ್ಮಿರ ಸರ್ಕಾರ

Pinterest LinkedIn Tumblr

Jammu-Govt

ಶ್ರೀನಗರ, ಜೂ.3: ಕಳೆದ ವರ್ಷ ರಾಜ್ಯದಲ್ಲಿ ಉಂಟಾಗಿದ್ದ ವಿನಾಶಕಾರಿ ಪ್ರವಾಹದಲ್ಲಿ ತಮ್ಮ ಸರ್ವಸ್ವವನ್ನೂ ಕಳೆದುಕೊಂಡು ನಿರ್ಗತಿಕರಾದವರಿಗೆ ಈಗ ಗಾಯದ ಮೇಲೆ ಬರೆ ಎಳೆದಂತೆ ಮಾಡಿದೆ ಸರ್ಕಾರ. ಜಮ್ಮು ಜಿಲ್ಲೆಯ ಸಾರೋರಾ ಎಂಬ ಗ್ರಾಮ ಪ್ರವಾಹದಲ್ಲಿ ನಿರ್ನಾಮವಾಗಿತ್ತು. ಗ್ರಾಮದ ನಿವಾಸಿಗಳು ಎಲ್ಲವನ್ನೂ ಕಳೆದುಕೊಂಡು ಪರದೇಶಿಗಳಾಗಿ, ನಿರಾಶ್ರಿತರ ಕೇಂದ್ರಗಳಲ್ಲಿ ದಿನದೂಡುತ್ತ, ಸರ್ಕಾರದ ಪರಿಹಾರಕ್ಕಾಗಿ ಕಾಯುತ್ತಿದ್ದರು. ಕೊನೆಗೂ ಜಿಲ್ಲಾಡಳಿತ ಸಂತ್ರಸ್ತರ ಪರಿಹಾರವಾಗಿ ಚೆಕ್‌ಗಳನ್ನು ವಿತರಿಸಿತು.

ಚೆಕ್‌ಗಳನ್ನು ತೆರೆದು ನೋಡಿದ ನಿರಾಶ್ರಿತರಿಗೆ ಹೃದಯಾಘಾತವಾಗುವುದೊಂದೇ ಬಾಕಿ. ಏಕೆಂದರೆ ಆ ಚೆಕ್‌ಗಳಲ್ಲಿ ಕನಿಷ್ಠ 47 ರೂ. ಇದ್ದರೆ, ಗರಿಷ್ಠ 378 ರೂ. ಎಂದು ನಮೂದಿಸಲಾಗಿದೆ. ಅಷ್ಟೇ ಅಲ್ಲ, ಆ ಚೆಕ್ ನಗದೀಕರಿಸಲು ಅವರು ಮೊದಲು ಜಿಲ್ಲಾ ಕೇಂದ್ರಕ್ಕೆ ತೆರಳಿ ಬ್ಯಾಂಕ್ ಖಾತೆ ತೆರೆಯಬೇಕು. ಸರ್ಕಾರದ ಈ ಕ್ರಮದಿಂದ ಘಾತಕ್ಕೊಳಗಾಗಿರುವ ಸಾರೋರಾ ಗ್ರಾಮಸ್ಥರು ಅಳುವುದೋ ನಗುವುದೋ… ಎಂದು ಹಾಡುತ್ತಿದ್ದಾರಂತೆ.

ಪಿಡಿಪಿ ಹಾಗೂ ಬಿಜೆಪಿ ಮೈತ್ರಿಕೂಟದ ಸರ್ಕಾರದ ಈ ಅವಿವೇಕದಿಂದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರವಾಹ ಪೀಡಿತರ ಪುನರ್ವಸತಿಗಾಗಿ ಕೇಂದ್ರ ಸರ್ಕಾರ ನಿನ್ನೆಯಷ್ಟೆ 400 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದೆ. ಈಗ್ಗೆ ಎರಡು ವರ್ಷಗಳ ಹಿಂದೆ ಹರ್ಯಾಣದಲ್ಲೂ ಇದೇ ರೀತಿ ಆಗಿತ್ತು. ಅಲ್ಲಿನ ರೈತರಿಗೆ ಹರಿಯಾಣ ಸರ್ಕಾರ 50 ರೂ, 100 ರೂ. ಪರಿಹಾರ ಚೆಕ್ ನೀಡಿತ್ತು.

Write A Comment