ಬೆಂಗಳೂರು, ಜೂ.3: ಗ್ರಾಮೀಣ ಭಾಗದಲ್ಲಿ ಕಡ್ಡಾಯವಾಗಿ ವೈದ್ಯರು ಸೇವೆ ಸಲ್ಲಿಸುವ ವಿಧೇಯಕಕ್ಕೆ ರಾಷ್ಟ್ರಪತಿಗಳು ಸಹಿ ಹಾಕಿದ್ದು, ತಕ್ಷಣದಿಂದಲೇ ವಿಧೇಯಕ ಜಾರಿಗೆ ಬರುವುದರಿಂದ ಕಡ್ಡಾಯವಾಗಿ ಕರ್ನಾಟಕದಲ್ಲಿ ಓದಿದ ವೈದ್ಯರು ಒಂದು ವರ್ಷ ಸೇವೆ ಸಲ್ಲಿಸಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ತಿಳಿಸಿದರು.
ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ವಿಧೇಯಕ 2012ಕ್ಕೆ ರಾಷ್ಟ್ರಪತಿಗಳ ಅಂಕಿತ ಸಿಕ್ಕಿದೆ ಎಂದು ಸುದ್ದಿಗಾರರಿಗೆ ಅವರು ತಿಳಿಸಿದರು. ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಕಡ್ಡಾಯವಾಗಿ ಕೆಲಸ ಮಾಡಲೇಬೇಕು. ದಂಡ ಕಟ್ಟಿ ಇದರಿಂದ ವಿನಾಯ್ತಿ ಪಡೆಯಲು ಸಾಧ್ಯವಿಲ್ಲ. ಅನಿವಾಸಿ ಭಾರತೀಯರು ಕಾಮೆಡ್ ಕೆ, ಸರ್ಕಾರಿ ಕೋಟಾ ಸೇರಿದಂತೆ ಕರ್ನಾಟಕದ ಕಾಲೇಜುಗಳಲ್ಲಿ ಎಂಬಿಬಿಎಸ್, ವೈದ್ಯಕೀಯ ಸ್ನಾತಕೋತ್ತರ ಪದವಿ ಪಡೆಯುವವರು ಗ್ರಾಮೀಣ ಭಾಗದಲ್ಲಿ ಒಂದು ವರ್ಷ ಕಡ್ಡಾಯವಾಗಿ ಸೇವೆ ಸಲ್ಲಿಸಬೇಕು ಎಂದು ಹೇಳಿದರು.
ಎಂಬಿಬಿಎಸ್ ಮುಗಿಸಿದವರು ತಕ್ಷಣ ಸ್ನಾತಕೋತ್ತರ ಪದವಿಗೆ ಹೋಗುವುದಾದರೆ ಅಂತಹವರು ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವಂತಿಲ್ಲ. ಆದರೆ, ಸ್ನಾತಕೋತ್ತರ ಪದವಿ ಮುಗಿದ ನಂತರ ಸೇವೆ ಸಲ್ಲಿಸಲೇಬೇಕಿದೆ ಎಂದರು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವವರಿಗೆ ವೇತನ ಇರುತ್ತದೆ. ಯಾವ ರೀತಿ ಸೇವೆ ಪಡೆಯಬೇಕು? ಎಲ್ಲೆಲ್ಲಿಗೆ ವೈದ್ಯರನ್ನು ನಿಯೋಜಿಸಬೇಕು ಎಂಬುದನ್ನು ಇನ್ನೊಂದು ವಾರದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ. ಗ್ರಾಮೀಣ ಭಾಗದಲ್ಲಿ ಒಂದು ವರ್ಷ ವೈದ್ಯರ ಸೇವೆ ಕಡ್ಡಾಯ ಇರುವುದರಿಂದ ಈ ಭಾಗಗಳಲ್ಲಿ ವೈದ್ಯರ ಕೊರತೆ ನೀಗಲಿದೆ ಎಂದು ತಿಳಿಸಿದರು. ಸರ್ಕಾರ ನಾಲ್ಕು ವೈದ್ಯಕೀಯ ಕಾಲೇಜಿಗೆ ಅನುಮತಿ ಕೊಡಲಾಗಿತ್ತು. ಆದರೆ, ಭಾರತೀಯ ವೈದ್ಯಕೀಯ ಶಿಕ್ಷಣ ಪರಿಷತ್ತಿನಿಂದ ಅನುಮತಿ ಸಿಕ್ಕಿಲ್ಲ ಎಂದು ಹೇಳಿದ ಸಚಿವರು, ಇತ್ತೀಚೆಗೆ ಬಿಡಿಎಸ್ ಕೋರ್ಸ್‌ಗಳಿಗೆ ಬೇಡಿಕೆ ಕಡಿಮೆಯಾಗಿದೆ. ಇದಕ್ಕೆ ಕಾಲೇಜುಗಳು ಹೆಚ್ಚಾಗಿರುವುದೇ ಕಾರಣ ಎಂದರು.
ಸರ್ಕಾರ ನಿಗದಿ ಪಡಿಸಿರುವ ಶುಲ್ಕಕ್ಕಿಂತ ಹೆಚ್ಚಿಗೆ ಶುಲ್ಕ ಪಡೆಯುವ ವೈದ್ಯಕೀಯ ಕಾಲೇಜುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹೆಚ್ಚು ಶುಲ್ಕ ಪಡೆಯುವುದನ್ನು ಪತ್ತೆ ಹಚ್ಚಲು ರಹಸ್ಯ ಕಾರ್ಯಾಚರಣೆ ಮಾಡಲಾಗುವುದು ಎಂದು ಹೇಳಿದರು. ಸಿಇಟಿ ಮುಖಾಂತರವಾದರೆ 55 ಸಾವಿರ ರೂ., ಕಾಮೆಡ್ ಕೆ ಮೂಲಕವಾದರೆ 4.25 ಲಕ್ಷ ರೂ. ಶುಲ್ಕ ನಿಗದಿಪಡಿಸಲಾಗಿದೆ. ಇದಕ್ಕಿಂತ ಹೆಚ್ಚಿಗೆ ಶುಲ್ಕ ಪಡೆದರೆ ಅಂತಹ ಕಾಲೇಜುಗಳ ವಿರುದ್ಧ ಕ್ರಮ ಜರುಗಿಸುತ್ತೇವೆ ಎಂದು ಹೇಳಿದರು. ಕೊಪ್ಪಳ, ಗದಗ, ಗುಲ್ಬರ್ಗಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಅನುಮತಿ ಸಿಕ್ಕಿದೆ. ಚಾಮರಾಜನಗರ, ಕೊಡಗು, ಕಾರವಾರಗಳಲ್ಲಿ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ ಎಲ್ಲಾ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು. 2,900 ಸೀಟುಗಳು ಸರ್ಕಾರಿ ಕೋಟಾದಡಿ ಲಭ್ಯವಾಗಲಿದೆ. ಇದರಲ್ಲಿ 1,386 ಸರ್ಕಾರಿ ಕಾಲೇಜಿನಲ್ಲೇ ಸೀಟುಗಳಿವೆ ಎಂದು ತಿಳಿಸಿದರು.