ಕರ್ನಾಟಕ

ಹಣ ದೋಚಿದ್ದ ಪೋಲಿಸ್ ಅಧಿಕಾರಿಗಳ ರಕ್ಷಣೆ ಪ್ರಕರಣ : ಐಜಿಪಿ ಅಮಾನತಿಗೆ ಸರ್ಕಾರಕ್ಕೆ ಶಿಫಾರಸು

Pinterest LinkedIn Tumblr

Ramachandra-roa

ಬೆಂಗಳೂರು, ಜೂ.3: ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಳ ಹಂತದ ಅಧಿಕಾರಿಗಳನ್ನು ರಕ್ಷಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ದಕ್ಷಿಣ ವಲಯದ ಐಜಿಪಿ ಕೆ.ರಾಮಚಂದ್ರರಾವ್ ಅವರು ಸೇವೆಯಿಂದ ಅಮಾನತುಗೊಳ್ಳುವುದು ಬಹುತೇಕ ಖಚಿತವಾಗಿದೆ.

ಒಂದು ವೇಳೆ ರಾಮಚಂದ್ರರಾವ್ ಅಮಾನತು ಗೊಂಡರೆ ರಾಜ್ಯದ ಇತಿಹಾಸದಲ್ಲೇ ಒಂದು ತಿಂಗಳ ಅವಧಿಯಲ್ಲಿ ಇಬ್ಬರು ಐಜಿಪಿ ದರ್ಜೆಯ ಅಧಿಕಾರಿಗಳು ಅಮಾನತುಗೊಂಡ ಪ್ರಕರಣ ಮೊಟ್ಟ ಮೊದಲು ನಡೆದಂತೆ ಆಗುತ್ತದೆ. ಈ ಹಿಂದೆ ಅಕ್ರಮ ಲಾಟರಿ ಪ್ರಕರಣದಲ್ಲಿ ಭಾಗಿಯಾಗಿದ್ದ ಬೆಂಗಳೂರು ನಗರ ಪೂರ್ವ ವಲಯದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‌ಕುಮಾರ್ ಅವರನ್ನು ರಾಜ್ಯ ಸರ್ಕಾರ ಕೆಲ ದಿನಗಳ ಹಿಂದೆಯಷ್ಟೆ ಸೇವೆಯಿಂದ ಅಮಾನತುಗೊಳಿಸಿತ್ತು. ಇದೀಗ ದಕ್ಷಿಣ ವಲಯದ ಐಜಿಪಿಯಾಗಿರುವ ರಾಮಚಂದ್ರರಾವ್, ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್ ಮತ್ತು ಕೆಲ ಪೊಲೀಸ್ ಪೇದೆಗಳು ಕೂಡ ಅಮಾನತಾಗುವುದು ನಿಚ್ಚಳವಾಗಿದೆ.

2014 ಜನವರಿ ತಿಂಗಳ ಮೊದಲ ವಾರದಲ್ಲಿ ಮೈಸೂರಿನಿಂದ ಕೇರಳಕ್ಕೆ ಇಬ್ಬರು ವಜ್ರಾಭರಣ ವ್ಯಾಪಾರಿಗಳು ಬಸ್‌ನಲ್ಲಿ ಹೊರಟಿದ್ದರು. 2 ಕೋಟಿ 26 ಲಕ್ಷ ನಗದು ಹಣವನ್ನು ಎರಡು ಬಾಕ್ಸ್‌ಗಳಲ್ಲಿ ಈ ವ್ಯಾಪಾರಿಗಳು ಇಟ್ಟುಕೊಂಡು ಹೊರಟಿದ್ದ ವೇಳೆ ಮೈಸೂರು ರಸ್ತೆಯ ಹುಣಸೂರು ಸಮೀಪವಿರುವ ಇಲವಾಲ ಎಂಬಲ್ಲಿ ಈ ಹಣವನ್ನು ದೋಚಲಾಗಿತ್ತು. ವ್ಯಾಪಾರಿಗಳನ್ನು ಬೆದರಿಸಿ ಹಣ ದೋಚಿದ್ದು ಬೇರೆ ಯಾರೂ ಅಲ್ಲ, ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಗಳೇ ಈ ನೀಚ ಕಾರ್ಯ ಮಾಡಿದ್ದರು. ಡಿವೈಎಸ್‌ಪಿ, ಇನ್ಸ್‌ಪೆಕ್ಟರ್, ಸಬ್‌ಇನ್ಸ್‌ಪೆಕ್ಟರ್, ಪೊಲೀಸ್ ಪೇದೆಗಳು ವ್ಯವಸ್ಥಿತವಾಗಿ ದರೋಡೆ ನಡೆಸಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಕೋಲಾಹಲವನ್ನೇ ಸೃಷ್ಟಿಸಿತ್ತು. ಪೊಲೀಸರೇ ದರೋಡೆ ಮಾಡಿದ್ದಾರೆ ಎಂಬ ಮಾಹಿತಿ ಹೊರಬೀಳುತ್ತಿದ್ದಂತೆ ಕೇವಲ 26 ಲಕ್ಷ ಹಣವು ಮಾತ್ರ ವ್ಯಾಪಾರಿಗಳ ಬಳಿ ಇತ್ತು. 2 ಕೋಟಿ ಇರಲಿಲ್ಲ ಎಂದು ಸುಳ್ಳು ಲೆಕ್ಕ ನೀಡಿದ್ದರು. ಅನುಮಾನಗೊಂಡ ರಾಜ್ಯಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶ ನೀಡಿತ್ತು.

ರಾಮಚಂದ್ರರಾವ್ ಆರೋಪಿ: ದಕ್ಷಿಣ ವಲಯದ ಐಜಿಪಿಯಾಗಿದ್ದ ಕೆ.ರಾಮಚಂದ್ರರಾವ್ ತಮ್ಮ ಅಧಿಕಾರಿಗಳನ್ನು ರಕ್ಷಣೆ ಮಾಡಲು ಮತ್ತು ದರೋಡೆ ಮಾಡಿದ್ದ ಹಣದಲ್ಲಿ ಪಾಲು ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ವ್ಯಾಪಾರಿಗಳಿಂದ ದೋಚಿದ್ದ ಹಣದಲ್ಲಿ ಐಜಿಪಿಗೆ ಇಂತಿಷ್ಟು ಎಂದು ನೀಡಿದ್ದರು. ಈ ಕಾರಣದಿಂದಲೇ ರಾಮಚಂದ್ರರಾವ್ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳು ಭಾಗಿಯಾಗಿಲ್ಲ. ಅಲ್ಲದೆ, 2 ಕೋಟಿ ಹಣ ವ್ಯಾಪಾರಿಗಳ ಬಳಿ ಇರಲಿಲ್ಲ ಎಂದು ದರೋಡೆ ಮಾಡಿದ್ದ ಪೊಲೀಸ್ ಅಧಿಕಾರಿಗಳಿಗೆ ಕ್ಲೀನ್‌ಚಿಟ್ ನೀಡಿದ್ದರು.
ಕೊನೆಗೆ ಸಿಐಡಿ ತನಿಖೆಯಲ್ಲಿ ರಾಮಚಂದ್ರರಾವ್ ಕಪ್ಪ ಪಡೆದಿದ್ದು ಮತ್ತು ಭ್ರಷ್ಟ ಅಧಿಕಾರಿಗಳನ್ನು ರಕ್ಷಣೆ ಮಾಡಲು ಮುಂದಾಗಿದ್ದು ಸಾಬೀತಾಗಿತ್ತು.

ಇದೀಗ ಸಿಐಡಿ ವರದಿ ರಾಜ್ಯಸರ್ಕಾರದ ಕೈ ಸೇರಿದೆ. ದರೋಡೆ ಪ್ರಕರಣದಲ್ಲಿ ರಾಮಚಂದ್ರರಾವ್ ಆರೋಪಿ ಎಂಬುದು ಸಾಬೀತಾಗಿರುವುದರಿಂದ ಅವರನ್ನು ಅಮಾನತುಪಡಿಸಬೇಕೆಂದು ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. ಐಜಿಪಿ ದರ್ಜೆಯ ಅಧಿಕಾರಿಯನ್ನು ಅಮಾನತುಪಡಿಸಲು ಡಿಜಿಗೆ ಅವಕಾಶವಿರುವುದಿಲ್ಲ. ಇದೇನಿದ್ದರೂ ಸರ್ಕಾರವೇ ಮಾಡಬೇಕು. ಹೀಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸದ್ಯದಲ್ಲೇ ರಾಮಚಂದ್ರರಾವ್‌ಗೆ ಗೇಟ್‌ಪಾಸ್ ನೀಡುವುದು ಬಹುತೇಕ ಖಚಿತವಾಗಿದೆ.

Write A Comment