ಕೆಲವೊಮ್ಮೆ ಮದುವೆ ನಡೆಯುವ ಸಮಯದಲ್ಲಿ ವರ ಸರಿಯಿಲ್ಲ ಎಂಬ ಕಾರಣಕ್ಕೋ ಅಥವಾ ವಧುವಿನ ಕಡೆಯವರ ‘ಉಪಚಾರ’ ಸರಿಯಿಲ್ಲ ಎಂಬ ಕಾರಣಕ್ಕೆ ಮದುವೆ ನಿಂತಿರುವ ಘಟನೆ ಸಾಕಷ್ಟು ನಡೆದಿದೆ. ಆದರೆ ತನ್ನ ಸಂಬಂಧಿ ಯುವತಿಗೆ ವರನ ತಂದೆ ‘ಮುತ್ತು’ ನೀಡಿದ ಎಂಬ ಕಾರಣಕ್ಕೆ ಮದುವೆಯೊಂದು ಮುರಿದುಬಿದ್ದ ಕುತೂಹಲಕಾರಿ ಘಟನೆ ನಡೆದಿದೆ.
ಹೌದು. ಕಾನ್ಪುರದ ಫಾರೂಖಾಬಾದ್ ಜಿಲ್ಲೆಯ ನಾಗ್ಲಾ ಕಾಯರ್ ಬಂದ್ ಎಂಬ ಹಳ್ಳಿಯ ಪರಮೇಶ್ವರಿ ದಯಾಳ್ ಪುತ್ರಿ ರುಚಿಗೆ ಇಟಾ ನಗರದ ಜೈತಾರ ಗ್ರಾಮದ ಬಾಬೂರಾಂ ಮಗ ರಾಜೇಶ್ ಜೊತೆ ವಿವಾಹ ನಿಶ್ಚಯವಾಗಿತ್ತು. ಅದರಂತೆ ಇಲ್ಲಿನ ಸಂಪ್ರದಾಯವಾದ ಜೈಮಲ್ ಎಂಬ ಸಮಾರಂಭದ ವರೆಗೂ ಎಲ್ಲವೂ ಸರಿಯಾಗಿಯೇ ಇತ್ತು.
ಆದರೆ ಜೈಮಲ್ ಆಚರಣೆ ವೇಳೆ ವಧುವಿನ ಸಂಬಂಧಿ ಅನಿತಾ ತನ್ನ ಅಕ್ಕನ ಜೊತೆ ನಿಲ್ಲಲು ವೇದಿಕೆಗೆ ಬಂದಿದ್ದು ಈ ಸಮಯದಲ್ಲಿ ವರನ ತಂದೆ ಮದುವೆ ಖುಷಿಯಲ್ಲಿ ಆಕೆಗೆ ಕಿಸ್ ಮಾಡಿದ್ದಾನೆ.
ಇದರಿಂದ ಆಕ್ರೋಶಗೊಂಡ ವಧು ಇಂತಹ ಸಂಸ್ಕಾರವಿಲ್ಲದ ಮನೆತನದವರ ಜತೆಗೆ ಸಂಬಂಧ ಬೇಡ ಎಂದು ಖಡಾಖಂಡಿತವಾಗಿ ಹೇಳಿದ್ದು ವರನ ತಂದೆ ಅನಿತಾ ಹಾಗೂ ಆಕೆಯ ಪೋಷಕರಲ್ಲಿ ಸಾರ್ವಜನಿಕವಾಗಿ ಕ್ಷಮೆ ಕೇಳಿದರೂ ಮನಸ್ಸು ಬದಲಾಯಿಸದ ರುಚಿ ಮದುವೆಯಾಗಲು ನಿರಾಕರಿಸಿದ್ದಾಳೆ.
ಈ ಸಮಯದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು ರಾಜಿ ಸಂಧಾನ ಪ್ರಯತ್ನ ನಡೆಸಿದರೂ ಪ್ರಯೋಜನವಾಗದ್ದಾಗ ಮದುವೆಗೆ ವಧುವಿನ ಪೋಷಕರು ಖರ್ಚು ಮಾಡಿದ್ದ 27.900 ರೂಪಾಯಿ ಹಣವನ್ನು ವರನ ತಂದೆ ವಾಪಸ್ ನೀಡಿ ಮಗನೊಂದಿಗೆ ಮನೆಗೆ ತೆರಳಿದ್ದಾರೆ ಎನ್ನಲಾಗಿದೆ.
