ನವದೆಹಲಿ, ಮೇ 18: ಭಾನುವಾರ ರಾತ್ರಿ ದಕ್ಷಿಣ ದೆಹಲಿಯ ಡಿಫೆನ್ಸ್ ಕಾಲೋನಿಯಲ್ಲಿ ಮಹಿಳೆಯೊಬ್ಬಳ ಮೇಲೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಪ್ರಕರಣದ ಐವರು ಆರೋಪಿಗಳಲ್ಲಿ ನಾಲ್ವರನ್ನು ಇಂದು ಬೆಳಗ್ಗೆ ಪೊಲೀಸರು ಬಂಧಿಸಿದ್ದಾರೆ. ಇನ್ನೊಬ್ಬನು ತಲೆಮರೆಸಿಕೊಂಡಿದ್ದು ಅವನಿಗಾಗಿ ಶೋಧಕಾರ್ಯ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ದುಷ್ಕರ್ಮಿಗಳಾದ ಆಕಾಶ್ (23), ದೀಪಕ್(20), ಅಮನ್(20) ಮತ್ತು ಇತರ ಇಬ್ಬರು 25 ವರ್ಷದ ಮಹಿಳೆಯನ್ನು ಅಪಹರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಘಟನೆ ನಡೆದದ್ದು ಅಮನ್ ಮನೆಯಲ್ಲಿ. ಅತ್ಯಾಚಾರದ ನಂತರ ಮಹಿಳೆಯನ್ನು ಖಾನ್‌ಪುರ ಪ್ರದೇಶದಲ್ಲಿ ಬಿಟ್ಟು ಹೋಗಿದ್ದರು. ಈ ಮೊದಲು ಯುವತಿಯನ್ನು ಆಸ್ಪತ್ರೆಯೊಂದರ ಬಳಿ ಡ್ರಾಪ್ ಮಾಡಿದ ಆಟೋ ರಿಕ್ಷಾ ಚಾಲಕನೊಬ್ಬ ನೀಡಿದ ಸುಳಿವಿನ ಮೇಲೆ ಪೊಲೀಸರು ಸಂತ್ರಸ್ತ ಯುವತಿಯನ್ನು ರಕ್ಷಿಸಿ ಕರೆತಂದರು.
ಯುವತಿಯನ್ನು ಅಮನ್, ಆಕಾಶ್, ದೀಪಕ್ ಅಪಹರಿಸಿ ಅಮನ್ ನಿವಾಸಕ್ಕೆ ಕರೆದೊಯ್ದಿದ್ದರು. ನಂತರ ಅವರೊಂದಿಗೆ ಇನ್ನಿಬ್ಬರು ಸೇರಿಕೊಂಡರು. ಐವರೂ ಸರತಿಯಂತೆ ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ. ದುಷ್ಕರ್ಮಿಗಳು ಅಪಹರಿಸಿದ್ದನ್ನು ಕಂಡ ಆಟೋ ಚಾಲಕ ಪೊಲೀಸರಿಗೆ ವಿಷಯ ತಿಳಿಸಿ ಅಮನ್‌ನ ಕಾರು ನಂಬರ್ ನೀಡಿದ್ದು, ಆಟೋ ಚಾಲಕನ ದೂರು ಆಧರಿಸಿ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು.