ರಾಷ್ಟ್ರೀಯ

ಇಂದಿನಿಂದ ಸಂಸತ್ತಿನ ಬಜೆಟ್‌ ಅಧಿವೇಶನ; ಸರ್ಕಾರಕ್ಕೆ ಕಠಿಣ ಸವಾಲು: ಮಧ್ಯಮ ವರ್ಗದ ಓಲೈಕೆ?

Pinterest LinkedIn Tumblr

mo

ನವದೆಹಲಿ: ಸೋಮವಾರದಿಂದ ಸಂಸತ್ತಿನ ಬಜೆಟ್‌ ಅಧಿವೇಶನ ಆರಂಭವಾಗ­ಲಿದ್ದು, ಇತ್ತೀಚಿನ ದೆಹಲಿ ಚುನಾವಣೆ­ಯಲ್ಲಿ ತೀವ್ರ ಮುಖಭಂಗ ಅನು­ಭವಿಸಿರುವ ಕೇಂದ್ರ ಸರ್ಕಾರವು ಮಧ್ಯಮ ವರ್ಗದ ವಿಶ್ವಾಸವನ್ನು ಮರಳಿ ಗಳಿಸುವ ಉದ್ದೇಶದಿಂದ ಫೆ.28ರಂದು ‘ಜನಸಾಮಾನ್ಯ ಸ್ನೇಹಿ’ ಬಜೆಟ್‌ ಮಂಡಿ­ಸುವ ನಿರೀಕ್ಷೆ ಇದೆ.

ಹಣಕಾಸು ಸಚಿವ ಜೇಟ್ಲಿ ಅವರು 2014ರಲ್ಲಿ ಮೊದಲ ಬಜೆಟ್‌ ಮಂಡಿಸುವ ಸಂದರ್ಭದಲ್ಲೇ ವೈಯಕ್ತಿಕ ತೆರಿಗೆದಾರರ ಹೊರೆ ಇಳಿಸಲು  ಬಯಸುವುದಾಗಿ ಹೇಳಿದ್ದರು. ಇದನ್ನು ಈಡೇರಿಸುವ ನಿಟ್ಟಿನಲ್ಲಿ ಕೆಲವು ಕ್ರಮಗಳನ್ನೂ ಪ್ರಕಟಿಸಿದ್ದರು. ಈ ವರ್ಷ ಕೂಡ ಅವರು ಇದನ್ನು ಮುಂದುವರಿ­ಸುವ ನಿರೀಕ್ಷೆ ಇದೆ. ಇದಕ್ಕಾಗಿ ತೆರಿಗೆ ಶ್ರೇಣಿಗಳ ಮಿತಿ­ ಹೆಚ್ಚಿ­ಸುವ ಅಥವಾ ಉಳಿತಾಯದ ಗರಿಷ್ಠ ಮಿತಿ ಹೆಚ್ಚಿಸುವ ತಂತ್ರಕ್ಕೆ ಅವರು ಮೊರೆಹೋಗಬಹುದು.

ಈ ನಡುವೆ, ಬಜೆಟ್‌ ಅಧಿವೇಶನವು ಎನ್‌ಡಿಎ ಸರ್ಕಾರದ ಪಾಲಿಗೆ ಸವಾಲಾಗಿ ಪರಿಣ­ಮಿಸುವ ಸಾಧ್ಯತೆ ಇದೆ. ಭೂಸ್ವಾಧೀನ ಸುಗ್ರೀವಾಜ್ಞೆ ವಿಚಾರ­ದಲ್ಲಿ ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಲಕ್ಷಣಗಳಿವೆ.

ಸಂಸತ್ತಿನಲ್ಲಿ ಸುಗಮ ಕಲಾಪದ ವಾತಾ­­ವರಣ ನಿರ್ಮಿಸಿಕೊಳ್ಳುವ ಯತ್ನವಾಗಿ ಮೋದಿ ಅವರು ಭಾನು­­ವಾರ ಸರ್ವ ಪಕ್ಷಗಳ ಸಭೆ ನಡೆಸಿದರು. ‘ಬಜೆಟ್‌ ಅಧಿವೇಶನವು ಅತ್ಯಂತ ಮಹತ್ವದ್ದಾಗಿದ್ದು, ಸಾಮಾನ್ಯ ಜನರು ಇದರೆಡೆಗೆ ಅಪಾರ ಆಶಾಭಾವ ಮತ್ತು ನಿರೀಕ್ಷೆಗಳನ್ನು ಹೊಂದಿದ್ದಾರೆ. ಹೀಗಾಗಿ ಎಲ್ಲ ಪಕ್ಷಗಳು ಸುಗಮ ಕಲಾಪಕ್ಕೆ ಸಹಕರಿಸಬೇಕು’ ಎಂದು  ಮನವಿ ಮಾಡಿದರು. ‘ನೀವು ಎತ್ತಿರುವ ಎಲ್ಲ ವಿಷಯ­ಗಳ ಬಗ್ಗೆ ಅವುಗಳ ಆದ್ಯತೆ, ಪ್ರಾಮುಖ್ಯಕ್ಕೆ ತಕ್ಕಂತೆ ಚರ್ಚಿಸಲು ಅವಕಾಶ ಕಲ್ಪಿಸಲಾ­ಗುವುದು’ ಎಂದರು.

ಸೋನಿಯಾ ಮನೆಗೆ ನಾಯ್ಡು: ಈ ಸಭೆಗೆ ಮುನ್ನವೇ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮನೆಗೆ ಭೇಟಿ ನೀಡಿ ಅಚ್ಚರಿ ಮೂಡಿಸಿ­ದರು. ಅಧಿವೇಶನದ ವೇಳೆ ಪಕ್ಷದ ಸಹಕಾರದ ಕುರಿತು ಅವರು ಚರ್ಚಿಸಿದರು. ಇದು ಬಿಜೆಪಿ ಅಧಿ­ವೇಶನದ ವೇಳೆ ಪ್ರತಿಪಕ್ಷಗ­ಳೊಂದಿಗೆ ಹೊಂದಾಣಿಕೆಗೆ ಅಪೇಕ್ಷಿಸುತ್ತಿ­ರುವುದರ ದ್ಯೋತಕ ಎನ್ನಲಾಗಿದೆ.

ಪ್ರತಿಪಕ್ಷಗಳ ಪಟ್ಟು: ಆದರೆ, ಪ್ರತಿಪಕ್ಷಗಳು ಸಂಸತ್ತಿನಲ್ಲಿ ಹಾಕಲು ಉದ್ದೇಶಿಸಿ­ರುವ ಪಟ್ಟುಗಳನ್ನು ಸಡಿಲಿ-­ಸುವ ಸಾಧ್ಯತೆ ಕಾಣುತ್ತಿಲ್ಲ. ಮುಖ್ಯವಾಗಿ ಭೂಸ್ವಾಧೀನ ಕಾಯ್ದೆ ಸುಗ್ರೀವಾಜ್ಞೆಯ ವಿಷಯದಲ್ಲಿ ಸರ್ಕಾರವನ್ನು ಹಣಿ­ಯಲು ಅವು ಕಾಯುತ್ತಿವೆ. ‘ಈಗ ಸರ್ಕಾರವು ಒಟ್ಟು ಆರು ಸುಗ್ರೀವಾಜ್ಞೆ­ಗಳಿಗೆ ಸಂಸತ್ತಿನ ಅನು­ಮೋದನೆ ಪಡೆಯ­ಬೇಕಿದೆ. ಈ ಪೈಕಿ ಐದು ಸುಗ್ರೀವಾಜ್ಞೆಗಳ ಬಗ್ಗೆ ಪ್ರತಿ­ಪಕ್ಷ­ಗಳಲ್ಲಿ ಒಮ್ಮತ­ವಿದೆ. ಆದರೆ ಭೂಸ್ವಾಧೀನ ಸುಗ್ರೀ­ವಾಜ್ಞೆಯನ್ನು ಕೆಲವು ಪ್ರತಿಪಕ್ಷಗಳು ವಿರೋಧಿಸುತ್ತಿವೆ’ ಎಂದು ವೆಂಕಯ್ಯನಾಯ್ಡು ಒಪ್ಪಿಕೊಂಡಿದ್ದಾರೆ.

‘ಸೋನಿಯಾ ಜತೆಗಿನ ಮಾತು­­ಕತೆ ಸೌಹಾರ್ದತೆ­ಯಿಂದ ಕೂಡಿತ್ತು. ಅವರು ಕೂಡ ಭೂಸ್ವಾಧೀನ ಸುಗ್ರೀವಾಜ್ಞೆಯ ಬಗ್ಗೆ ಕೆಲವು ಪ್ರಶ್ನೆ­ಗಳನ್ನು ಎತ್ತಿ­ದ್ದಾರೆ’ ಎಂದೂ ಅವರು ತಿಳಿಸಿದ್ದಾರೆ. ‘ಜನರಿಗೆ ಅನು­ಕೂಲ ಕಲ್ಪಿಸದ ಸುಗ್ರೀವಾಜ್ಞೆ ಮತ್ತು ಮಸೂದೆಗಳನ್ನು ಕಾಂಗ್ರೆಸ್‌ ಬೆಂಬಲಿಸುವು­ದಿಲ್ಲ’ ಎಂದು ರಾಜ್ಯಸಭೆ­ಯಲ್ಲಿನ ಪ್ರತಿಪಕ್ಷ ನಾಯಕ ಗುಲಾಂ ನಬಿ ಆಜಾದ್‌ ಸ್ಪಷ್ಟಪಡಿ­ಸಿದ್ದಾರೆ.

‘ಈಗಿನ ಭೂಸ್ವಾಧೀನ ಸುಗ್ರೀವಾ­ಜ್ಞೆಯು ಬ್ರಿಟಿಷ್‌ ಆಳ್ವಿಕೆ ಅವಧಿಯಲ್ಲಿದ್ದ ಭೂಕಾನೂನಿಗಿಂತ ಕಠೋರ­ವಾ­ಗಿದೆ’ ಎಂದು ಜೆಡಿಯು ಅಧ್ಯಕ್ಷ ಶರದ್‌ ಯಾದವ್‌ ಹೇಳಿದ್ದಾರೆ. ಭೂ ಕಾನೂನಿನಲ್ಲಿ ಏನೇನು ಬದಲಾ­ವಣೆ ಮಾಡಲಾಗಿದೆ ಎಂಬುದನ್ನು ಪರಾ­ಮರ್ಶಿ­ಸುವ ಸಲುವಾಗಿ ಮಸೂದೆ ಕರಡನ್ನು ಸಂಸ­ತ್ತಿನ ಸ್ಥಾಯಿಸಮಿತಿಗೆ ಸಲ್ಲಿಸಬೇಕು ಎಂದು ಐಎನ್‌­ಎಲ್‌ಡಿ ನಾಯಕ ದುಷ್ಯಂತ್‌ ಚೌತಾಲಾ ಹೇಳಿದ್ದಾರೆ.

***
ಮೊದಲ ಹಂತದಲ್ಲಿ ಅಧಿವೇಶನವು ಮಾರ್ಚ್‌ 20ರವರೆಗೆ ನಡೆಯಲಿದೆ. ನಂತರ, ಒಂದು ತಿಂಗಳ ಬಿಡುವಿನ ನಂತರ ಏಪ್ರಿಲ್‌ 20ರಿಂದ ಎರಡನೇ ಹಂತದ ಅಧಿವೇಶನ ಆರಂಭವಾಗಿ ಮೇ 8ರವರೆಗೆ ನಡೆಯಲಿದೆ. ಸರ್ಕಾರವು ಆರು ಸುಗ್ರೀವಾಜ್ಞೆಗಳಿಗೆ ಮೊದಲ ಹಂತ­ದಲ್ಲೇ ಸಂಸತ್ತಿನ ಅನುಮೋದನೆ ಪಡೆಯಬೇಕಿದೆ.

ಬಜೆಟ್‌ನಲ್ಲಿ ಏನಿರಬಹುದು?
*ವೈಯಕ್ತಿಕ ಆದಾಯ ತೆರಿಗೆ ಮಿತಿ ಹೆಚ್ಚಿಸಬಹುದು ಅಥವಾ ಗರಿಷ್ಠ ಉಳಿತಾಯದ ಮಿತಿ ಹೆಚ್ಚಿಸಬಹುದು

*ಆರೋಗ್ಯ ವಿಮೆ ಗರಿಷ್ಠ ಮೊತ್ತ­ವನ್ನು ಹೆಚ್ಚಿಸಿ ಇನ್ನಷ್ಟು ತೆರಿಗೆ ವಿನಾಯಿತಿಗೆ ಅವಕಾಶ ಮಾಡಿಕೊಡ­ಬಹುದು
*ಪಿಂಚಣಿ ನಿಧಿಗಳಲ್ಲಿ ಹೂಡಿಕೆಗೆ ಉತ್ತೇಜನ
*ಎಲ್‌ಟಿಎ (ಪ್ರವಾಸ ಭತ್ಯೆ) ಮೂಲಕ ಹೆಚ್ಚಿನ ತೆರಿಗೆ ವಿನಾಯಿತಿಗೆ ಅವಕಾಶ ಕಲ್ಪಿಸಬಹುದು
*ಕಾರ್ಪೊರೇಟ್‌ ಕಂಪೆನಿಗಳಿಂದ ಬಂಡವಾಳ ಸೆಳೆಯಲು ಕ್ರಮ
*‘ಭಾರತದಲ್ಲೇ ತಯಾರಿಸಿ’ ಕರೆಯ ಭಾಗವಾಗಿ ಉತ್ಪಾದನಾ ವಲಯ ಉತ್ತೇಜಿಸಲು ಕ್ರಮ

Write A Comment