ಕರ್ನಾಟಕ

ಮುಖ್ಯಮಂತ್ರಿ ಬದಲಾವಣೆ ಇಲ್ಲ: ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ದಿಗ್ವಿಜಯ್‌ ಸಿಂಗ್‌ ಸ್ಪಷ್ಟನೆ

Pinterest LinkedIn Tumblr

di

ಬೆಂಗಳೂರು: ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆ ಕುರಿತು ಆಶ್ಚರ್ಯ ವ್ಯಕ್ತಪಡಿಸಿದ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌, ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ನಾಲ್ಕು ದಿನಗಳ ಭೇಟಿಗಾಗಿ ರಾಜ್ಯಕ್ಕೆ ಬಂದಿದ್ದ ಅವರು, ಭಾನುವಾರ ಸಂಜೆ ದೆಹಲಿಗೆ ತೆರಳುವ ಮುನ್ನ ದೇವನಹಳ್ಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಸಮೀಪದ ಖಾಸಗಿ ರೆಸಾರ್ಟ್‌ ಒಂದರಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡಬೇಕೆಂಬ ಬೇಡಿಕೆ ಇಡುತ್ತಿರುವವರ ಕುರಿತು ಅಸಮಾಧಾನ ವ್ಯಕ್ತಪಡಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಯಾವುದೇ ರೀತಿಯ ಭ್ರಷ್ಟಾಚಾರದ ಆರೋಪಗಳಿಲ್ಲ. ಈಗ ಕೆಲವರು ದಲಿತರಿಗೆ ಮುಖ್ಯ­ಮಂತ್ರಿ ಹುದ್ದೆ ನೀಡಬೇಕೆಂದು ಕೇಳುತ್ತಿ­ರು­ವುದು ನನಗೆ ಆಶ್ಚರ್ಯ ಉಂಟು­ಮಾ­ಡಿದೆ. ಈಗ ಮುಖ್ಯಮಂತ್ರಿ ಬದಲಾ­ವಣೆಯ ಆಲೋಚನೆಯೇ ಪಕ್ಷದ ಮುಂದಿಲ್ಲ’ ಎಂದು ಹೇಳಿದರು.

‘ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ­ನ­ನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ಎಲ್ಲ ಶಾಸಕರೂ ಅವರ ನಾಯಕತ್ವವನ್ನು ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಯೋಜನೆಗಳಿಂದ ರಾಜ್ಯ­ದಲ್ಲಿ ದುರ್ಬಲ ವರ್ಗಗಳಲ್ಲಿ ಆತ್ಮ­ವಿಶ್ವಾಸ ಹೆಚ್ಚಿದೆ. ಆದ್ದರಿಂದ ನಾಯಕತ್ವ ಬದಲಾವಣೆಯ ಪ್ರಶ್ನೆ ಇಲ್ಲ’ ಎಂದು ತಿಳಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್‌ ಶ್ರಮಿಸಿದ್ದಾರೆ. ಈಗ ಇಬ್ಬರೂ ಅನ್ಯೋನ್ಯವಾಗಿದ್ದಾರೆ. ಕೆಲವು ದಲಿತ ಸಂಘಟನೆಗಳ ಮುಖಂಡರು ಮತ್ತು ಈ ಹಿಂದೆ ಜೆಡಿಎಸ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಿ ಸೋತವರು ದಲಿತರಿಗೆ ಮುಖ್ಯಮಂತ್ರಿ ಹುದ್ದೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಈ ರೀತಿ ಮಾತನಾಡುವವರ ಬಾಯಿ ಮುಚ್ಚಿಸಲು ಕಾಂಗ್ರೆಸ್‌ ಹೈಕಮಾಂಡ್‌ ಪ್ರಯತ್ನಿಸುವುದಿಲ್ಲ ಎಂದರು.

ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ದಲಿತರಿಗೆ ನೀಡಲಾಗಿದೆ. ಮಲ್ಲಿ­ಕಾರ್ಜುನ ಖರ್ಗೆ ಅವರು ರಾಜ್ಯದ ಹಿರಿಯ ದಲಿತ ನಾಯಕರು. ಅವರಿಗೆ ಲೋಕಸಭೆಯಲ್ಲಿ ಕಾಂಗ್ರೆಸ್‌ ನಾಯಕನ ಸ್ಥಾನ ನೀಡಲಾಗಿದೆ. ಸಚಿವ ಸಂಪುಟ­ದಲ್ಲೂ ದಲಿತರಿಗೆ ಹೆಚ್ಚಿನ ಪ್ರಾತಿನಿಧ್ಯ ನೀಡಲಾಗಿದೆ. ರಾಜ್ಯ ಸರ್ಕಾರ ಕೂಡ ದಲಿತರು ಮತ್ತು ಶೋಷಿತರ ಅಭಿವೃದ್ಧಿ­ಗಾಗಿ ಹಲವು ಯೋಜನೆ­ಗಳನ್ನು ಜಾರಿಗೊಳಿಸಿದೆ. ದಲಿತ ಸಮುದಾಯಕ್ಕೆ ಅನ್ಯಾಯ ಆಗಿದೆ ಎಂಬ ಭಾವನೆ ಬೇಡ ಎಂದು ಪ್ರತಿಕ್ರಿಯೆ ನೀಡಿದರು. ತಾವು ಕೂಡ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿ ಎಂಬ ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿ­ಯಿಸಿದ ಅವರು, ‘ಪ್ರತಿಯೊಬ್ಬರಿಗೂ ಹಾಗೆ ಹೇಳುವ ಹಕ್ಕಿದೆ. ಅದನ್ನು ಅಲ್ಲಗಳೆಯಲಾಗದು’ ಎಂದರು.

ಒಂದೇ ನಾಣ್ಯದ ಎರಡು ಮುಖ
ಶಿವಮೊಗ್ಗದಲ್ಲಿ ನಡೆದಿರುವ ಹಿಂಸಾಚಾರ ಖಂಡನೀಯ ಎಂದ ದಿಗ್ವಿಜಯ್‌ ಸಿಂಗ್‌, ತಪ್ಪಿತಸ್ಥರ ವಿರುದ್ಧ ರಾಜ್ಯ ಸರ್ಕಾರ ಕಠಿಣ ಕ್ರಮ ಜರುಗಿಸಲಿದೆ ಎಂದು ತಿಳಿಸಿದರು. ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಮತ್ತು ಭಜರಂಗ ದಳ ಎರಡೂ ಒಂದೇ ನಾಣ್ಯದ ಎರಡು ಮುಖಗಳು. ಸಂಘ ಪರಿವಾರದ ಮೋಹನ್‌ ಭಾಗವತ್‌, ಸಾಕ್ಷಿ ಮಹಾರಾಜ್‌, ಪ್ರವೀಣ್‌ ತೊಗಾಡಿಯಾ ಮತ್ತಿತರರು ರಾಜಕಾರಣದ ಜೊತೆ ಕೋಮುವಾದವನ್ನು ಬೆಸೆಯಲು ಯತ್ನಿಸುತ್ತಿದ್ದಾರೆ. ಅದನ್ನು ತಡೆಯುವ ದೊಡ್ಡ ಸವಾಲು ಕಾಂಗ್ರೆಸ್‌ ಪಕ್ಷದ ಮುಂದಿದೆ ಎಂದು ಪ್ರತಿಕ್ರಿಯಿಸಿದರು.

Write A Comment