ಕರ್ನಾಟಕ

‘ಬೈ ಬೈ’ ಹೇಳಿದ ಲೋಹದ ಬಾನಾಡಿಗಳು: ಮತ್ತೆ ಸಿಗೋಣ 2017ರಲ್ಲಿ ವೈಮಾನಿಕ ಪ್ರದರ್ಶನಕ್ಕೆ ತೆರೆ ರಕ್ಷಣಾ ಸಾಮರ್ಥ್ಯದ ವಿರಾಟ್‌ ದರ್ಶನ

Pinterest LinkedIn Tumblr

AERO INDIA

ಬೆಂಗಳೂರು: ತಿಳಿನೀಲದಲ್ಲಿ ತಾ ಲೀನ­ವಾದಂತೆ ಏಕಾಏಕಿ ಮಾಯವಾದ ‘ತೇಜಸ್‌’ ಯುದ್ಧ ವಿಮಾನ ಮರು­ಕ್ಷಣ­ದಲ್ಲೇ ಪ್ರತ್ಯಕ್ಷವಾಗಿ ರಣ­ಹದ್ದಿನ ಮೂತಿಯಂತಹ ತನ್ನ ಮುಂಭಾಗ­ವನ್ನು ರನ್‌ವೇ ಉದ್ದಕ್ಕೂ ಸೇರಿದ್ದ ಲಕ್ಷಾಂತರ ಜನರ ಮುಂದೆ ಬಾಗಿಸಿತು. ಆ ನೋಟ ‘ಏರೋ ಇಂಡಿಯಾ–2015’ ವೈಮಾ­ನಿಕ ಪ್ರದರ್ಶನಕ್ಕೆ ಬಂದವರಿಗೆಲ್ಲ ‘ಇಂತಿ ನಮಸ್ಕಾರ’ ಎನ್ನುತ್ತಿರುವಂತೆ ತೋರಿತು.

ಯಲಹಂಕ ವಾಯುನೆಲೆಯ ಪಶ್ಚಿಮ­­ದಲ್ಲಿ­ರುವ ತೆಂಗಿನ ತೋಟಗಳಲ್ಲಿ ಭಾನು­ವಾರ ಸಂಜೆ ಸೂರ್ಯ ಕೆಂಪಾಗಿ ಕರಗುವ ಹೊತ್ತಿನಲ್ಲಿ ಲೋಹದ ಬಾನಾ­ಡಿ­ಗಳು ಈ ಸಲದ ವೈಮಾನಿಕ ಪ್ರದ­­ರ್ಶನ­ವನ್ನು ಬರ್ಖಾಸ್ತು­ಗೊಳಿಸಿ­ದವು. ಐದು ದಿನಗಳ ವಿಮಾನ ಸಂತೆಗೂ ಆ ಕ್ಷಣವೇ ತೆರೆ ಎಳೆಯಲಾಯಿತು.

ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಿದ್ದರು. ‘ರಕ್ಷಣಾ ಸಲಕರಣೆಗಳನ್ನೂ ಭಾರತದಲ್ಲಿ ತಯಾ­ರಿಸಿ’ ಎಂಬ ಸಂದೇಶ­ವನ್ನು ಅವರು ರವಾನಿಸಿ­ದ್ದರು. ಪ್ರಧಾನಿ ಕಳಕಳಿಯನ್ನು ಅರ್ಥ ಮಾಡಿ­ಕೊಂಡಂತೆ ರಕ್ಷಣಾ ಸಚಿವಾಲಯ ಪ್ರದರ್ಶನ­ದಲ್ಲಿ ಸ್ವದೇಶಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆ­ಗಳಿಗೆ ಹೆಚ್ಚಿನ ಮಳಿಗೆಗಳನ್ನು ಮೀಸಲಿಟ್ಟಿತ್ತು.

ಫ್ರಾನ್ಸ್‌ನ ರಾಫೇಲ್‌ ಡಸಾಲ್ಟ್‌ ಯುದ್ಧ ವಿಮಾನ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಈ ಪ್ರದರ್ಶನದಲ್ಲೂ ಅಧಿಕೃತ ಘೋಷಣೆ ಹೊರಬೀಳಲಿಲ್ಲ. ‘ಅಂತಿಮಗೊಳಿಸಿದ ಪಟ್ಟಿಯಲ್ಲಿ ರಾಫೇಲ್‌ ಹೆಸರಿದೆ. ಮಾತುಕತೆ ಇನ್ನೂ ಚಾಲ್ತಿಯಲ್ಲಿದೆ’ ಎನ್ನುವ ಹೇಳಿಕೆಯಷ್ಟೇ ವಾಯುಪಡೆ ಮುಖ್ಯಸ್ಥರಿಂದ ಹೊರ­ಬಿತ್ತು. ಇಸ್ರೇಲ್‌ನ ರಫೇಲ್‌ ಸಂಸ್ಥೆ ಜತೆ ಕಲ್ಯಾಣಿ ಸಮೂಹ ಸಂಸ್ಥೆ ರಕ್ಷಣಾ ಸಲ­ಕರಣೆ­ಗಳ ತಯಾರಿಕೆ ಸಂಸ್ಥೆಯನ್ನು ಹುಟ್ಟು­ಹಾಕಲು ಮಹತ್ವದ ಒಪ್ಪಂದ ಮಾಡಿಕೊಂಡಿತು.

ಅಮೆರಿಕದ ಹಾಜರಿ ಹಿಂದೆಂದಿಗಿಂತ ಈ ಸಲ ಹೆಚ್ಚಿತ್ತು. ಅಮೆರಿಕ ವಾಯು­ಪಡೆಗೆ ಸೇರಿದ ಏಳು ವಿಮಾನಗಳು ಗಮನ­ಸೆಳೆದವು. ಇಂಧನ ತುಂಬುವ, ಗಸ್ತು ಹೊಡೆಯುವ, ಸರಕು ಸಾಗಿಸುವ, ಕ್ಷಿಪಣಿ ಉಡಾಯಿಸುವ ವಿಮಾನ­ಗಳು ಎಲ್ಲ­ರಲ್ಲೂ ಬೆರಗು ಮೂಡಿಸಿದ್ದವು.
ಕಳೆದ ಪ್ರದರ್ಶನಕ್ಕೆ ಹೋಲಿಸಿದರೆ ಈ ಬಾರಿ ರಷ್ಯಾದ ಉಪಸ್ಥಿತಿ ಕಡಿಮೆ ಇತ್ತು. ಅಂತೆಯೇ ಆ ದೇಶದ ಚಿತ್ತಾಪಹಾರಿ ‘ರಷ್ಯನ್‌ ನೈಟ್ಸ್‌’ ತಂಡದ ಅನು­ಪ­ಸ್ಥಿತಿ ಎದ್ದುಕಂಡಿತು. ಈ ಕೊರತೆ­ಯನ್ನು ಇಂಗ್ಲೆಂಡ್‌, ಸ್ವೀಡನ್‌, ಜೆಕ್‌ ಗಣ­ರಾಜ್ಯದ ತಂಡಗಳು ನೀಗಿಸಿದವು. ಅಮೆ­ರಿಕದ ವಿಶೇಷ ಕಾರ್ಯಪಡೆ ಯೋಧರ ‘ಗಗನ ಜಿಗಿತ’ ಪ್ರೇಕ್ಷಕರಿಗೆ ಖುಷಿ ಕೊಟ್ಟಿತು.

‘ಆಕಾಶ ಕನ್ನಿಕೆ’ಯರಾದ ವಿಂಗ್‌ ವಾಕರ್ಸ್‌ ಹಾಗೂ ಸ್ಕೈ ಕ್ಯಾಟ್‌ಗಳು ತಮ್ಮ ಸೌಂದರ್ಯ­ದಿಂದ ಮಾತ್ರವಲ್ಲದೆ ಹಾರುವ ವಿಮಾನದ ಮೇಲೆ ನೃತ್ಯ ಮಾಡುವ ಎದೆಗಾರಿಕೆ ಮೂಲ­ಕವೂ ನೋಡುಗರ ಹೃದಯಕ್ಕೆ ಲಗ್ಗೆ ಇಟ್ಟರು. ಎಂದಿನಂತೆ ಭಾರತದ ‘ಸಾರಂಗ’ ಹೆಲಿಕಾಪ್ಟರ್‌ ತಂಡ ತನ್ನ ವಿಶಿಷ್ಟ ಕಸರತ್ತಿನ ಮೂಲಕ ಕಚಗುಳಿ ಇಟ್ಟಿತು.

ಜೆಕ್‌ ಗಣರಾಜ್ಯದ ‘ರೆಡ್‌ ಬುಲ್ಸ್‌’ ತಂಡ ವೈಮಾನಿಕ ಅವಘಡ ಮಾಡಿ­ಕೊಂ­ಡಿ­­ದ್ದರಿಂದ ‘ಭಾನುವಾರದ ಜನ­ಸಾಗರ’ಕ್ಕೆ ಅದರ ಆಟ ನೋಡುವ ಅವ­ಕಾಶ ಸಿಗ­ಲಿಲ್ಲ. ‘ರೆಡ್‌ ಬುಲ್ಸ್‌’ ತಂಡದ ಎರಡು ವಿಮಾನಗಳು ಕಸರತ್ತು ಪ್ರದ­ರ್ಶಿ­ಸಲು ಗಗನ­ದಲ್ಲಿ ಹತ್ತಿರ ಬಂದಾಗ ಅವು­­ಗಳ ರೆಕ್ಕೆ­ಗಳು ಉಜ್ಜಿದ್ದವು. ಈ ವಿಮಾನ­­ಗ­ಳನ್ನು ಸುರಕ್ಷಿತವಾಗಿ ಕೆಳಗಿಳಿಸಿ­ದ್ದ­ರಿಂದ ಜೀವ­­­­ಹಾನಿಯ ‘ಕಳಂಕ’ ಪ್ರದರ್ಶನಕ್ಕೆ ತಟ್ಟಲಿಲ್ಲ.

ವಿದೇಶಗಳ 328 ಸಂಸ್ಥೆಗಳು ಸೇರಿ­ದಂತೆ 600ಕ್ಕೂ ಅಧಿಕ ಕಂಪೆನಿಗಳು ಪಾಲ್ಗೊಂ­ಡಿದ್ದವು. ವಿವಿಧ ದೇಶಗಳ ಉನ್ನತ ಮಟ್ಟದ 54 ನಿಯೋಗಗಳ ಮುಖ್ಯ­ಸ್ಥರು ಉದ್ಯಮಿಗಳ ಜತೆ ದುಂಡು ಮೇಜಿನ ಸಭೆ ನಡೆಸಿದರು. ಅಮೆರಿಕದ ವಾಯು­ಪಡೆ ‘ಕ್ಯಾಪ್ಟನ್‌’ಗಳಿಗೆ ಪ್ರದ­ರ್ಶನ ಖುಷಿ ನೀಡಿತಾದರೂ ಪ್ರದರ್ಶನ­ದಲ್ಲಿದ್ದ ಯುದ್ಧ ವಿಮಾನಗಳಿಗಿಂತ ಭಾರ­ತದ ಮಸಾಲೆಭರಿತ ಊಟ ಅವರಿಗೆ ಹೆಚ್ಚು ಹಿಡಿಸಿತು.

ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿ­ಟೆಡ್ (ಎಚ್‌ಎಎಲ್), ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಹಾಗೂ ವೈಮಾನಿಕ ಉತ್ಪಾ­ದನಾ ಸಂಸ್ಥೆ (ಎಡಿಎ)ಗಳು ಮಳಿಗೆ­ಗಳಲ್ಲಿ ಹೆಚ್ಚು ಜಾಗವನ್ನು ಆಕ್ರಮಿ­ಸಿ­ದ್ದವು. ಸಾಗರೋತ್ತರದ ಹೊಸ ವ್ಯಾಪಾ­ರಕ್ಕೆ ಬೇಕಾದ ಪೀಠಿಕೆಯನ್ನೂ ಅವುಗಳು ಹಾಕಿದವು.

ಸ್ಥಳೀಯವಾಗಿ ಎಲ್ಲಕ್ಕಿಂತ ಹೆಚ್ಚು ಗಮನ ಸೆಳೆದಿದ್ದೆಂದರೆ ಕೈಗಾರಿಕೆ­ಗಳನ್ನು ಆಕರ್ಷಿಸಲು ಕರ್ನಾಟಕ– ಆಂಧ್ರ ಪ್ರದೇಶ ರಾಜ್ಯಗಳ ನಡುವಿನ ಪೈಪೋಟಿ. ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪ್ರದರ್ಶನಕ್ಕೆ ಬಂದು, ‘ಬೆಂಗ­ಳೂ­­ರಿನಲ್ಲಿ ಇಳಿಯಿರಿ, ಆಂಧ್ರದಲ್ಲಿ ತಯಾ­­­ರಿಸಿ’ ಎಂದು ಮನವಿ ಮಾಡಿದರೆ, ಕರ್ನಾ­­ಟಕದ  ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ, ‘ನಮ್ಮ ರಾಜ್ಯಕ್ಕಿಂತ ಉತ್ತಮ ಸೌಲಭ್ಯವನ್ನು ಬೇರೆ ರಾಜ್ಯ ಕೊಟ್ಟರೆ ನಾವೇ ಉದ್ಯಮಿಗಳನ್ನು ಕಳು­ಹಿ­ಸಿ­­ಕೊಡುತ್ತೇವೆ’ ಎಂದು ತಿರುಗೇಟು ಕೊಟ್ಟರು.

ಎಚ್ಎಎಲ್‌ನ ವಜ್ರ ಮಹೋತ್ಸವ ಹಾಗೂ ‘ಕಿರಣ್‌’ ತರಬೇತಿ ಹೆಲಿ­ಕಾಪ್ಟರ್‌ನ ಸುವರ್ಣ ಮಹೋ­ತ್ಸವಕ್ಕೂ ಈ ಪ್ರದರ್ಶನ ಸಾಕ್ಷಿಯಾಯಿತು. ಹತ್ತು ಸಾವಿರ ಪೈಲಟ್‌ಗಳಿಗೆ ತರಬೇತಿ ನೀಡಿದ, 12 ಲಕ್ಷ ಗಂಟೆಗಳನ್ನು ಗಗನದಲ್ಲಿ ಕಳೆದ 50ರ ಹರೆಯದ ‘ಕಿರಣ್‌’ ಇನ್ನೂ ಮೂರು ವರ್ಷ ಭಾರತೀಯ ವಾಯು­ಪಡೆಗೆ ಸೇವೆ ಸಲ್ಲಿಸಲಿದೆ ಎಂದು ಘೋಷಿಸಲಾಯಿತು.

ಪೈಲಟ್‌ ಆಗಿರುವ ಕೇಂದ್ರ ಸಚಿವ ರಾಜೀವ್‌ ಪ್ರತಾಪ್‌ ರೂಡಿ ಅವರು ಸುಖೋಯ್‌–30 ಎಂಕೆಐ ಯುದ್ಧ ವಿಮಾನ­ದಲ್ಲಿ ಒಂದು ಸುತ್ತು ಹೋಗಿ ಬಂದರು. ರಕ್ಷಣಾ ಸಚಿವ ಮನೋಹರ್‌ ಪರಿಕ್ಕರ್‌ ಮುಂದಿನ ಪ್ರದರ್ಶನವನ್ನು ತಮ್ಮ ತವರು ಗೋವಾಕ್ಕೆ ಒಯ್ಯುವ ಭೀತಿ ಇತ್ತು. ‘ಮುಂದಿನ ಪ್ರದರ್ಶನವೂ ಬೆಂಗ­ಳೂರಿನಲ್ಲೇ ನಡೆಯಲಿದೆ’ ಎಂದು ಸ್ವತಃ ಪರಿಕ್ಕರ್‌ ಸ್ಪಷ್ಟನೆ ನೀಡಿದ್ದರಿಂದ ರಾಜ್ಯದ ವಿಮಾನಪ್ರಿಯರು 2017ರ ದಿನಗಣನೆ ಆರಂಭಿಸಿ ಬಿಟ್ಟಿದ್ದಾರೆ.

ದಾಖಲೆ: 5 ದಿನಗಳ ಕಾಲ ನಡೆದ ಪ್ರದ­ರ್ಶನ­ದಲ್ಲಿ ೫  ಲಕ್ಷ ಜನರು ವಿಮಾನ­­ಗಳ ಕಸರತ್ತು ಕಣ್ತುಂಬಿ­ಕೊಂಡರು. ೨೦೧೩ರ ಪ್ರದರ್ಶನಕ್ಕೆ ಹೋಲಿಸಿದರೆ ಇದು ದಾಖಲೆ.

ಅಯ್ಯೋ ಅವ್ಯವಸ್ಥೆ!
ಭಾನುವಾರ ‘ಲೋಹದ ಬಾನಾಡಿ’ಗಳ ಆಟ ನೋಡಲು ಬಂದ ಸಾರ್ವಜನಿಕರಿಗೆ ಕಹಿ ಅನುಭವ ನೀಡುವಂತಹ ಸ್ವಾಗತ ಸಿಕ್ಕಿತು. ಮೊದಲೇ ಸಂಚಾರ ದಟ್ಟಣೆಯಿಂದ ಬಸವಳಿದು ಬಂದವರಿಗೆ ಸಂಘಟಕರು ಪ್ರವೇಶ ದ್ವಾರಗಳಲ್ಲಿ ಎರಡು ಗಂಟೆಗಳಿಗೂ ಅಧಿಕ ಹೊತ್ತು ಕಾಯುವಂತೆ ಮಾಡಿದರು.

ಶಟಲ್‌ ಬಸ್‌ಗಳ ವ್ಯವಸ್ಥೆ ಸಹ ಸಮರ್ಪಕವಾಗಿ ಇರಲಿಲ್ಲ. ದೂಳಿನ ಮಜ್ಜನದಲ್ಲಿ ಮಿಂದೆದ್ದ ಜನ, ಪ್ರವೇಶ ದ್ವಾರದ ಬಳಿ ಬಂದರೆ ಒಳಗೆ ಬಿಡಲು ಕೇವಲ ಮೂರು ಕೌಂಟರ್‌ ತೆರೆಯಲಾಗಿತ್ತು. ಹತ್ತಾರು ಸಾವಿರ ಜನ ಸರದಿಯಲ್ಲಿ ಕಾಯುತ್ತಿದ್ದರು. ನೂಕು ನುಗ್ಗಲು ಹೆಚ್ಚಾಗಿ ಜನಸಮೂಹವನ್ನು ನಿಯಂತ್ರಿಸಲು ಸೇನಾ ಸಿಬ್ಬಂದಿಗೂ ಸಾಧ್ಯವಾಗಲಿಲ್ಲ.

ಬೆಳಿಗ್ಗೆ 8.30ರ ಸುಮಾರಿಗೆ ಪ್ರವೇಶ ದ್ವಾರದ ಬಳಿ ಬಂದವರು ಪ್ರದರ್ಶನ ಸ್ಥಳಕ್ಕೆ ಹೋಗುವಷ್ಟರಲ್ಲಿ 11 ಗಂಟೆ ಆಗಿತ್ತು. ಕೊನೆಗೆ ಭದ್ರತಾ ಸಿಬ್ಬಂದಿ ಎಲ್ಲರನ್ನೂ ತಪಾಸಣೆ ಮಾಡಲು ಸಾಧ್ಯವಾಗದೆ ಕೈಚೆಲ್ಲಿದರು. ಪಾಸ್‌ ಇಲ್ಲದವರೂ ಆಗ ಒಳಗೆ ತೂರಿದರು. ಹೆಚ್ಚಿನ ಸಂಖ್ಯೆಯಲ್ಲಿದ್ದ ವೃದ್ಧರು, ಮಹಿಳೆಯರು, ಮಕ್ಕಳು ಬಿಸಿಲಿನ ತಾಪ ಹಾಗೂ ನೂಕಾಟದಲ್ಲಿ ಬಸವಳಿದರು.
ಮೇಲ್ಸೇತುವೆಯನ್ನೂ ಒಳಗೊಂಡ ಅಷ್ಟಪಥ ಸಂಚಾರ ದಟ್ಟಣೆ ತಾಳಲಾರದೆ ‘ಕುಯ್ಯೊ ಮರ್ರೊ’ ಎಂದಿತು.

ಪ್ರದರ್ಶನದಲ್ಲಿ ಭಾನುವಾರ ಕಂಡ ತುಣುಕು ನೋಟಗಳು
*ವೈಮಾನಿಕ ಪ್ರದರ್ಶನದಲ್ಲಿ ಕಾನ್ಪುರದ ಆರ್ಡ್‌ನನ್ಸ್‌ ಪ್ಯಾರಾಚೂಟ್‌ ಫ್ಯಾಕ್ಟರಿ (ಒಪಿಎಫ್‌) ಮಳಿಗೆಯೂ ಇತ್ತು. ಅಣು ವಿಕಿರಣ ಅವಘಡದ ಸಂದರ್ಭದಲ್ಲೂ ರಕ್ಷಣೆ ಒದಗಿಸಬಲ್ಲ ಜಾಕೆಟ್‌ ಅನ್ನು ಆ ಸಂಸ್ಥೆ ಅಭಿವೃದ್ಧಿಪಡಿಸಿದ್ದು ವಿದೇಶಿ ರಕ್ಷಣಾ ಸಾಮಗ್ರಿ ತಯಾರಕರ ಗಮನವನ್ನೂ ಸೆಳೆಯಿತು. ಒಂದೊಂದು ಜಾಕೆಟ್‌ ಬೆಲೆ ₨ 1.5 ಲಕ್ಷ! ‘ಲ್ಯಾಂಡ್‌’ ಆಗುವ ಸಂದರ್ಭದಲ್ಲಿ ಯುದ್ಧ ವಿಮಾನಗಳ ವೇಗ ತಗ್ಗಿಸುವ ಪ್ಯಾರಾಚೂಟ್‌ಗಳನ್ನೂ ಒಪಿಎಫ್‌ ತಂದಿತ್ತು.

*ಗಸ್ತು ತಿರುಗುತ್ತಿದ್ದ ಸಶಸ್ತ್ರ ಪಡೆಯ ಯೋಧರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿ ಬೀಳುತ್ತಿದ್ದ ಜನ, ಪ್ರದರ್ಶನಕ್ಕೆ ಇಟ್ಟಿದ್ದ ವಿಮಾನಗಳ ಪ್ರತಿಕೃತಿಗಳ ಮೇಲೆ ಮಕ್ಕಳನ್ನು ನಿಲ್ಲಿಸಿ ಫೋಟೊ ತೆಗೆಯುತ್ತಿದ್ದರು.
*ಗಗನದಲ್ಲಿ ಕಸರತ್ತು ತೋರಿದ ವಿಂಗ್‌ ವಾಕರ್ಸ್‌ ಹಾಗೂ ಸ್ಕೈ ಕ್ಯಾಟ್‌ಗಳು ಧರೆಗಿಳಿದು ಬಂದಾಗ ಅವರಿಗೆ ಹಸ್ತಲಾಘವ ಸಲ್ಲಿಸಲು ಜನ ಪೈಪೋಟಿಗಿಳಿದರು. ಜನರ ಪ್ರೀತಿ ಕಂಡು ನಿಬ್ಬೆರಗಾದ ಆ ಯುವತಿಯರು ಎತ್ತರದ  ಸ್ಥಳದಲ್ಲಿ ನಿಂತು ಎಲ್ಲರಿಗೂ ಹಸ್ತಲಾಘವ ನೀಡಿದರು.
*ಕಸರತ್ತು ನೋಡುವ ವಿಮಾನಗಳಿಗೆ ಆಕಾಶವೇ ಆಟದ ಮೈದಾನವಾದರೆ, ಟಿಕೆಟ್‌ ಇಲ್ಲದೆ ಬಂದಿದ್ದ ಜನರಿಗೆ ಹೆದ್ದಾರಿಯೇ ವೀಕ್ಷಣಾ ಗ್ಯಾಲರಿಯಾಯಿತು.
*ಭಾನುವಾರ ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಹೋಗುವ ಹಾಗೂ ಸಂಜೆ ವಿಮಾನ ನಿಲ್ದಾಣದ ಕಡೆಯಿಂದ ಬರುವ ಹಾದಿ ಸಂಚಾರ ದಟ್ಟಣೆಯಿಂದ ಕೂಡಿದ್ದರಿಂದ ಸುಮಾರು ಐದು ಆಂಬುಲೆನ್ಸ್‌ಗಳು ಅದರಲ್ಲಿ ಸಿಕ್ಕಿ ಹಾಕಿಕೊಂಡವು.
*ಮಳಿಗೆಗಳ ಹಾಲ್‌ಗಳಲ್ಲಿ ಜನ ಪ್ರವಾಹದ ರೂಪದಲ್ಲಿ ನುಗ್ಗಿದ್ದರಿಂದ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿತ್ತು. ನಿಯಂತ್ರಣ ಮಾಡುವವರಿಲ್ಲದೆ ನೂಕುನುಗ್ಗಲು ಉಂಟಾಗಿತ್ತು.

ವೈಮಾನಿಕ ಪ್ರದರ್ಶನದಿಂದ ವೈನರಿ ಕೇಂದ್ರಕ್ಕೆ
ಬೆಂಗಳೂರು: ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವಿದೇಶಿ ನಿಯೋಗದ ಸದಸ್ಯರು ಚನ್ನಪಟ್ಟಣ ಹಾಗೂ ದೊಡ್ಡಬಳ್ಳಾಪುರದ ವೈನರಿ ಕೇಂದ್ರಕ್ಕೆ ಭೇಟಿ ನೀಡಿ ದ್ರಾಕ್ಷಿರಸದ ರುಚಿ ಸವಿದರು.

ರಷ್ಯಾ, ಜರ್ಮನಿ, ಇಟಲಿ ಹಾಗೂ ಅಮೆರಿಕದ ಸುಮಾರು 1500 ಮಂದಿ ಈ ಕೇಂದ್ರಗಳಿಗೆ ಭೇಟಿ ನೀಡಿದ್ದರು. ದ್ರಾಕ್ಷಿರಸ ತಯಾರಿಕಾ ಪ್ರಕ್ರಿಯೆ ಬಗ್ಗೆ ಅವರು ಮಾಹಿತಿ ಪಡೆದರು. ಕೆಲವರು ಖರೀದಿಯಲ್ಲಿ ತೊಡಗಿದ್ದರು.

Write A Comment