ರಾಷ್ಟ್ರೀಯ

ಪ್ರಪಾತಕ್ಕೆ ಬಿದ್ದ ಖಾಸಗಿ 60ಕ್ಕೂ ಹೆಚ್ಚು ಜನರಿದ್ದ ಬಸ್ : 10 ಜನರ ಸಾವು

Pinterest LinkedIn Tumblr

acciddenty

ಇಂದೋರ್, ಫೆ.17: ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಖಾಸಗಿ ಬಸ್ ಪ್ರಪಾತಕ್ಕೆ ಬಿದ್ದು 10ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಇತರೆ 40 ಮಂದಿ ಗಾಯಗೊಂಡಿರುವ ಘಟನೆ ಮಧ್ಯ ಪ್ರದೇಶದ ಇಂದೋರ್ ಸಮೀಪ ಇಂದು ಬೆಳಿಗ್ಗೆ ಸಂಭವಿಸಿದೆ.

ಧಾರ್ ಜಿಲ್ಲೆಯ ಮಚಲಿಯಾ ಘಾಟ್ (ಘಟ್ಟಗಳಲ್ಲಿ)ನಲ್ಲಿ ಬಸ್ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದ್ದು, ಮಹಿಳೆಯರು, ಮಕ್ಕಳು ಕೂಡ ಮೃತರಲ್ಲಿ ಸೇರಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಬಹುದೆಂಬ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

ಇಂದೋರ್‌ನಿಂದ ರಾಜಸ್ಥಾನದ ಗಲಿಯಾಕೋಟ್‌ಗೆ ತೆರಳುತ್ತಿದ್ದ ಬಸ್, ಘಾಟ್‌ನಲ್ಲಿ ಮೇಲೆ ಬರುತ್ತಿದ್ದಾಗ 150 ಅಡಿ ಆಳದ ಕಣಿವೆಗೆ ಪಲ್ಟಿ ಹೊಡೆದಿದೆ. ಇಂದು ಬೆಳಿಗ್ಗೆ 9.15ರ ಸುಮಾರಿನಲ್ಲಿ ಈ ದುರ್ಘಟನೆ ನಡೆದಿದೆ.

ಬಹುತೇಕ ಇಂದೋರ್ ಹಾಗೂ ಧಾರ್ ಜಿಲ್ಲೆಗಳಿಗೆ ಸೇರಿದ ಪ್ರಯಾಣಿಕರು ಈ ಖಾಸಗಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಮಕ್ಕಳು, ಮಹಿಳೆಯರು ಸೇರಿದಂತೆ 60ಕ್ಕೂ ಹೆಚ್ಚು ಮುಸ್ಲಿಂ ಯಾತ್ರಿಗಳು ಇಂದೋರ್ ಮತ್ತು ಧಾರ್ ಜಿಲ್ಲೆಗಳಿಂದ ರಾಜಸ್ಥಾನದ ಡುಂಗರ್‌ಪುರದಲ್ಲಿರುವ ಪವಿತ್ರ ದರ್ಗಾಕ್ಕೆ ತೆರಳುತ್ತಿದ್ದರು ಎಂದು ಪೊಲೀಸ್ ಮಹಾನಿರ್ದೇಶಕ ವಿಪಿನ್ ಮಹೇಶ್ವರಿ ಹೇಳಿದ್ದಾರೆ. ಗಾಯಾಳುಗಳನ್ನೆಲ್ಲ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Write A Comment