ರಾಷ್ಟ್ರೀಯ

ವಿವಾದಾದ್ಮಕ ಹೇಳಿಕೆ: ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ ಮೋದಿ; ‘ಲಕ್ಷ್ಮಣ ರೇಖೆ’ ದಾಟದಿರಲು ಎಚ್ಚರಿಕೆ

Pinterest LinkedIn Tumblr

Narendra-Modi

ನವದೆಹಲಿ: ವಿವಾದಾದ್ಮಕ ಹೇಳಿಕೆ ನೀಡುತ್ತಿರುವ ಬಿಜೆಪಿ ಸಂಸದರನ್ನು ತರಾಟೆಗೆ ತೆಗೆದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಸಂಸದರು ಸಾರ್ವಜನಿಕವಾಗಿ ಮಾತನಾಡುವಾಗ ತಮ್ಮ ಮಾತಿನ ಮೇಲೆ ಹಿಡಿತವಿಟ್ಟುಕೊಂಡಿರಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಇಂದು ನವದೆಹಲಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, ಇತ್ತೀಚೆಗೆ ಪಕ್ಷದ ಸಂಸದರು ವಿವಾದಾತ್ಮಕ ಹೇಳಿಕೆ ನೀಡಿ ಪಕ್ಷ ಮುಜುಗರಕ್ಕೆ ಒಳಗಾಗುವಂತೆ ಮಾಡಿರುವುದನ್ನು ಹಾಗೂ ಸಭೆಯಲ್ಲಿ ಸಂಸದರು ತಡವಾಗಿ ಬಂದಿರುವುದನ್ನು ಕಂಡು ಕೋಪಗೊಂಡರು. ಈ ಹಿನ್ನೆಲೆಯಲ್ಲಿ ಮಾತನಾಡಿದ ನರೇಂದ್ರ ಮೋದಿಯವರು ಪ್ರತಿಯೊಂದಕ್ಕೂ ಮಿತಿ ಎಂಬುದಿರುತ್ತದೆ. ಅದನ್ನು ಸಂಸದರು ಮೀರಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಅಲ್ಲದೆ, ‘ಪಕ್ಷದ ಸಂಸದರು ಸಭೆಯಲ್ಲಿ ಮಾತನಾಡುವಾಗ ಯೋಚಿಸಿ ಮಾತನಾಡಬೇಕು, ಎಲ್ಲದಕ್ಕೂ ಒಂದು ಮಿತಿ ಎಂಬ ರೇಖೆ ಇರುತ್ತದೆ ಅದನ್ನು ದಾಟಬೇಡಿ. ಹೇಳಿಕೆಗಳನ್ನು ನೀಡುವುದರಲ್ಲಿ ಆಸಕ್ತಿ ತೋರಿಸುವ ಬದಲು ಅಭಿವೃದ್ಧಿ ಕಡೆಗೆ ಗಮನಕೊಡಿ’ ಎಂದು ಪಕ್ಷದ ಸಂಸದರಿಗೆ ಸಲಹೆ ನೀಡಿದ್ದಾರೆ.

ಈ ಹಿಂದೆ ದೆಹಲಿಯ ಶ್ಯಾಮ್ ನಗರದಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ್ದ ಕೇಂದ್ರ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಅವರು, ‘ನಿಮಗೆ ದೆಹಲಿಯಲ್ಲಿ ರಾಮನಿಗೆ ಹುಟ್ಟಿದ ಮಕ್ಕಳ ಸರ್ಕಾರ ಬೇಕೆ ಇಲ್ಲವೇ ಅನೈತಿಕವಾಗಿ ಹುಟ್ಟಿದವರ ಸರ್ಕಾರ ಬೇಕೆ’ಎಂಬ ವಿವಾದಾದ್ಮಕ ಹೇಳಿಕೆ ನೀಡಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದರು.

ಇದು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳ ಟೀಕೆಗೆ ಕಾರಣವಾಗಿತ್ತಲ್ಲದೇ ದೇಶಾದ್ಯಂತ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು. ಈ ಘಟನೆ ಮರೆಯಾಗುವ ಮುನ್ನವೇ ಮತ್ತೊಬ್ಬ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ‘ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರನ್ನು ಹತ್ಯೆಗೈದ ನಾಥುರಾಮ್ ಗೋಡ್ಸೆ ಕೂಡ ಒಬ್ಬ ಮಹಾನ್ ದೇಶ ಭಕ್ತ’ ಎಂಬ ವಿವಾದಾದ್ಮಕ ಹೇಳಿಕೆ ನೀಡಿ ಬಿಜೆಪಿಯನ್ನು ಮುಜುಗರಕ್ಕೊಳಗಾಗುವಂತೆ ಮಾಡಿದ್ದರು.

Write A Comment