ರಾಷ್ಟ್ರೀಯ

ಮಹಾತ್ಮ ಗಾಂಧಿ ಹಂತಕ ನಾಥುರಾಮ್ ಗೋಡ್ಸೆ ಓರ್ವ ದೇಶಭಕ್ತ: ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್

Pinterest LinkedIn Tumblr

Sakshi-Maharaj
ಗೋಡ್ಸೆ ವೈಭವೀಕರಣಕ್ಕೆ ಪ್ರಯತ್ನ: ಗಾಂಧೀಜಿ ಹಂತಕನನ್ನು ದೇಶಭಕ್ತನೆಂದು ಹೊಗಳಿದ ಬಿಜೆಪಿ ಸಂಸದ; ರಾಜ್ಯಸಭೆಯಲ್ಲಿ ತೀವ್ರ ಗದ್ದಲ
ಹೊಸದಿಲ್ಲಿ, ಡಿ.11: ಮಹಾರಾಷ್ಟ್ರದ ಸಮಾರಂಭವೊಂದರಲ್ಲಿ ಮಹಾತ್ಮಾ ಗಾಂಧೀಜಿಯವರ ಹಂತಕ ನಾಥುರಾಂ ಗೋಡ್ಸೆಯ ‘ವೈಭವೀಕರಣ’ ನಡೆದಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ಗುರುವಾರ ರಾಜ್ಯಸಭೆಯಲ್ಲಿ ತೀವ್ರ ಗದ್ದಲ ನಡೆಸಿದ್ದಾರೆ.

ಈ ಘಟನೆಯನ್ನು ಪ್ರಬಲವಾಗಿ ಖಂಡಿಸಿರುವ ರಾಜ್ಯಸಭೆಯ ಕಾಂಗ್ರೆಸ್ ಸದಸ್ಯ ಹುಸೇನ್ ದಲ್ವಾಯಿ, ಇದಕ್ಕೆ ಕಾರಣರಾಗಿರುವ ವ್ಯಕ್ತಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.

ಒಬ್ಬರು ಈ ಜಗತ್ತಿನಲ್ಲಿ ಅಹಿಂಸೆಯ ಉದಾಹರಣೆಯೊಂದನ್ನು ಸೃಷ್ಟಿಸಿದರು. ನಾವು ಅವರನ್ನು ರಾಷ್ಟ್ರಪಿತ ಎಂದು ಕರೆಯುತ್ತೇವೆ. ನಾಥುರಾಂ ಗೋಡ್ಸೆ ಅವರನ್ನು ಹತ್ಯೆ ಮಾಡಿದ ಎಂದು ಸಂಸತ್ತಿನ ಹೊರಗೆ ವರದಿಗಾರರೊಂದಿಗೆ ಮಾತನಾಡುತ್ತ ದಲ್ವಾಯಿ ಹೇಳಿದರು.

ಈಗ ಕೆಲವು ಜನರು ನವೆಂಬರ್ 15ರಂದು ನಾಥುರಾಂ ಗೋಡ್ಸೆ ಶೌರ್ಯ ದಿವಸ್ ಆಚರಣೆ ಮಾಡುತ್ತಿದ್ದಾರೆ. ಇದು ಖಂಡಿತವಾಗಿಯೂ ತಪ್ಪು. ಅಂತಹ ವ್ಯಕ್ತಿಗಳನ್ನು ಸರಕಾರ ಬಂಧಿಸಬೇಕು. ಈ ವಿಚಾರದಲ್ಲಿ ಈ ಸರಕಾರ ಯಾಕೆ ವೌನವಾಗಿದೆ ಎಂದು ಅವರು ಪ್ರಶ್ನಿಸಿದರು.

ಗೋಡ್ಸೆಯನ್ನು ‘ವೈಭವೀಕರಣ’ ಮಾಡುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಪತ್ರ ಬರೆಯುವೆನೆಂದು ದಲ್ವಾಯಿ ತಿಳಿಸಿದರು.

ರಾಜ್ಯಸಭೆಯಲ್ಲಿ ಗದ್ದಲ: ಇದಕ್ಕೆ ಮೊದಲು ಈ ವಿಷಯವನ್ನು ಎತ್ತಿಕೊಂಡು ಕಾಂಗ್ರೆಸ್ ಸದಸ್ಯರು ರಾಜ್ಯಸಭೆಯಲ್ಲಿ ತೀವ್ರ ಗದ್ದಲ, ಪ್ರತಿಭಟನೆ ನಡೆಸಿದರು.

ಪ್ರತಿಪಕ್ಷಗಳ ತೀವ್ರ ಪ್ರತಿಭಟನೆಗೆ ಮಣಿದ ಸರಕಾರ, ಮಹಾತ್ಮಾ ಗಾಂಧೀಜಿ ಹಂತಕನ ವೈಭವೀಕರಣವನ್ನು ತಾನು ಒಪ್ಪುವುದಿಲ್ಲ ಎಂದು ಹೇಳಿತು. ಆದರೆ ಈ ವಿಚಾರದಲ್ಲಿ ಯಾವುದೇ ಸಂಘಟನೆಯ ಮೇಲೆ ದೋಷಾರೋಪ ಮಾಡುವುದು ಸರಿಯಲ್ಲ ಎಂದಿತು. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಘೋಷಣಾ ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗಿದರು. ಇದರಿಂದಾಗಿ ಎರಡು ಕಿರು ಅವಧಿಗೆ ಸದನದ ಕಲಾಪವನ್ನು ಮುಂದೂಡಬೇಕಾಯಿತು. ಶೂನ್ಯವೇಳೆಯಲ್ಲಿ ಈ ವಿಷಯವನ್ನು ಸದನದಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಹುಸೇನ್ ದಲ್ವಾಯಿ, ಮಹಾರಾಷ್ಟ್ರದಲ್ಲಿ ಕಳೆದ ತಿಂಗಳು ನಡೆದ ಈ ಸಮಾರಂಭದಲ್ಲಿ ಕೆಲವು ಧಾರ್ಮಿಕ ನಾಯಕರು, ಮಾಜಿ ಶಾಸಕರು ಪಾಲ್ಗೊಂಡಿದ್ದರು ಎಂದು ತಿಳಿಸಿದರು.

‘ಮಹಾರಾಷ್ಟ್ರದಲ್ಲಿ ಶೌರ್ಯ ದಿವಸ್ ಆಚರಣೆಯ ಮೂಲಕ ಮಹಾತ್ಮ ಗಾಂಧೀಜಿ ಹಂತಕನನ್ನು ವೈಭವೀಕರಿಸಲಾಗುತ್ತಿದೆ. ಈ ಜನರು ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಾರೆ. ಜೊತೆಗೆ ಸಮಾಜದಲ್ಲಿ ಒಡಕು ಮೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಅವರು ಆರೋಪಿಸಿದರು.

ಸದನದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರನ್ನು ಸಮಾಧಾನಗೊಳಿಸಲು ಉಪಸಭಾಪತಿ ಪಿ.ಜೆ.ಕುರಿಯನ್ ಪ್ರಯತ್ನಿಸುತ್ತಿರುವುದು ಕಂಡುಬಂತು. ‘ಶೂನ್ಯವೇಳೆ ಯನ್ನು ಈ ಬಗೆಯ ಪ್ರತಿಭಟನೆ, ಪ್ರದರ್ಶನಕ್ಕೆ ಬಳಸಿಕೊಳ್ಳಬೇಡಿ. ಇದು ಸದನದ ಶಿಸ್ತು ಉಲ್ಲಂಘನೆ ಎನಿಸಿಕೊಳ್ಳುತ್ತದೆ. ತಪ್ಪಿತಸ್ಥರನ್ನು ನಿರ್ಧರಿಸಲು ನ್ಯಾಯಾಲಯವಿದೆ. ನಾನು ಮತ್ತು ನೀವಲ್ಲ’ ಎಂದು ಅವರು ಹೇಳಿದರು.

‘ಇದನ್ನು ಒಪ್ಪತಕ್ಕದ್ದಲ್ಲ. ಮಹಾತ್ಮ ಗಾಂಧೀಜಿಯ ಹಂತಕ ಯಾರೇ ಆಗಿರಲಿ, ನಾವು ಇದನ್ನು ವಿರೋಧಿಸುತ್ತೇವೆ. ಮಹಾತ್ಮನ ಹಂತಕರಿಗೆ ಯಾವುದೇ ಬಗೆಯ ಗೌರವವನ್ನು ನಾವು ಒಪ್ಪಿಕೊಳ್ಳುವುದಿಲ್ಲ’ ಎಂದು ಸಂಸದೀಯ ಖಾತೆ ಸಹಾಯಕ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಸದನದಲ್ಲಿ ಹೇಳಿದರು.

ಕಾಂಗ್ರೆಸ್ ಸದಸ್ಯರ ಪ್ರತಿಭಟನೆಯ ನಡುವೆ ಆಡಳಿತ-ವಿಪಕ್ಷ ಸದಸ್ಯರು ಪರಸ್ಪರರನ್ನು ದೂಷಿಸುವುದು ಸದನದಲ್ಲಿ ಕಂಡುಬಂತು. ಈ ಹಿನ್ನೆಲೆಯಲ್ಲಿ ಉಪಸಭಾಪತಿಗಳು ಮೊದಲಿಗೆ ಹತ್ತು ನಿಮಿಷ ಮತ್ತು ಎರಡನೆ ಬಾರಿ 15 ನಿಮಿಷಗಳ ಕಾಲ ಸದನದ ಕಲಾಪವನ್ನು ಮುಂದೂಡಿದರು.

ಮತ್ತೆ ಸದನ ಸೇರಿದಾಗ ಸಂಸದೀಯ ವ್ಯವಹಾರಗಳ ಸಚಿವ ಎಂ.ವೆಂಕಯ್ಯ ನಾಯ್ಡು ಈ ವಿಚಾರದಲ್ಲಿ ಸರಕಾರದ ನಿಲುವನ್ನು ತಿಳಿಸಿದರು. ‘ಅಂತಹ ವ್ಯಕ್ತಿಗಳನ್ನು ವೈಭವೀಕರಿಸುವ ಪ್ರಶ್ನೆಯೇ ಇಲ್ಲ. ಈ ವಿಷಯವನ್ನು ಅಲ್ಲಿಗೆ ಬಿಟ್ಟುಬಿಡಿ. ಆದರೆ ಅದೇ ಹೊತ್ತಿಗೆ ಒಂದು ಸಂಘಟನೆಯ ಮೇಲೆ ದೋಷಾರೋಪ ಸಲ್ಲದು’ ಎಂದು ಹೇಳಿದರು.

ಸಚಿವರ ಹೇಳಿಕೆಯಿಂದ ಕಾಂಗ್ರೆಸ್ ಸದಸ್ಯರು ಸಮಾಧಾನಗೊಂಡರು. ನಂತರ ಎಂದಿನಂತೆ ಕಲಾಪ ಮುಂದುವರಿಯಿತು.

Write A Comment