ಕರ್ನಾಟಕ

ದಕ್ಷಿಣ ಕರ್ನಾಟಕದಲ್ಲಿ ಅಕಾಲಿಕ ಮಳೆ: ಭತ್ತ, ರಾಗಿ, ಕಾಫಿ ಬೆಳೆಗೆ ತೀವ್ರ ಹಾನಿ

Pinterest LinkedIn Tumblr

pvec12pg9pnd2ಬೆಂಗಳೂರು: ಕೊಡಗು, ಹಾಸನ, ಮಂಡ್ಯ ಹಾಗೂ ತುಮಕೂರು ಜಿಲ್ಲೆಯ ಕೆಲ ಪ್ರದೇಶಗಳಲ್ಲಿ ಬುಧವಾರ  ಅಕಾಲಿಕ ಮಳೆಯಾಗಿದೆ. cಬುಧವಾರ ರಾತ್ರಿ ಸುರಿದ ಮಳೆಯಿಂ­ದಾಗಿ ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿ ವ್ಯಾಪ್ತಿಯಲ್ಲಿ ಭತ್ತ, ಹಾಸನ ಜಿಲ್ಲೆಯ ಹಿರೀಸಾವೆ ಸುತ್ತಮುತ್ತ ಸಾವಿ­ರಾರು ಎಕರೆ ರಾಗಿ ಫಸಲು ಹಾಗೂ ಸಕಲೇಶಪುರ ತಾಲ್ಲೂಕಿನಲ್ಲಿ ಕಾಫಿ ಹಾಗೂ ಭತ್ತದ ಬೆಳೆಗೆ ಅಪಾರ ಹಾನಿ­ಯಾಗಿದೆ.

ಕೊಡಗು ಜಿಲ್ಲೆಯಲ್ಲಿ ಹುತ್ತರಿ ಕಳೆದ ಬಳಿಕ ಭತ್ತದ ಕೊಯ್ಲು ಮಾಡು­ವುದು ವಾಡಿಕೆ. ಬುಧವಾರ ರಾತ್ರಿ ಮಳೆ ಸುರಿದು ಕೊಯ್ಲು ಮಾಡಿಟ್ಟಿದ್ದ ಬೆಳೆಯನ್ನು ಸಂಪೂರ್ಣ ನೆನೆಸಿದೆ.
ಹಾಸನ ಜಿಲ್ಲೆಯ ಹಿರೀಸಾವೆ ಪಟ್ಟಣ ಹಾಗೂ ಹೋಬಳಿಯ ಸುತ್ತಮುತ್ತ ಮಳೆ­ಯಿಂದ ಸಾವಿರಾರು ಎಕರೆ ರಾಗಿ ಫಸಲು ಹಾಳಾಗಿದೆ. ಈ ಭಾಗದಲ್ಲಿ ಡಿಸೆಂಬರ್ ತಿಂಗಳ ಆರಂಭದಲ್ಲಿ ರಾಗಿ ಪೈರು ಕಟಾ­ವಿಗೆ ಬರುತ್ತದೆ. ಕಳೆದ 15 ದಿನಗಳಿಂದ ಹೋಬಳಿಯ ಬಹುತೇಕ ಗ್ರಾಮಗಳಲ್ಲಿ ರೈತರು ರಾಗಿ ಪೈರನ್ನು ಕಟಾವು ಮಾಡಿ­ದ್ದರು. ಕೆಲವು ರೈತರು ಕಂತೆಗಳನ್ನು ಕಟ್ಟಿ ಗದ್ದೆಯಲ್ಲೇ ಒಣಗಲು ಬಿಟ್ಟಿದ್ದರು.

ಬುಧವಾರದ ಮಳೆಯಿಂದಾಗಿ ತಿಪಟೂರು ತಾಲ್ಲೂಕಿನ ವಿವಿಧೆಡೆ ಕೊಯ್ಲಾ­ಗಿದ್ದ ರಾಗಿ ಫಸಲಿಗೆ ಹಾನಿಯಾ­ಯಿತು. ಹೊಲದಲ್ಲಿ ಕೊಯ್ದ ಫಸಲು ನೆನೆದಿರುವುದನ್ನು ರೈತರು ಅಸಹಾಯ­ಕರಾಗಿ ನೋಡುವಂತಾಗಿದೆ. ಕೆಲವೆಡೆ ಕಟ್ಟಿದ್ದ ಕಂತೆಗಳು ಕೂಡ ನೆನೆದಿವೆ. ಮತ್ತೆ ಬಿಚ್ಚಿ ಒಣಗಿ ಹಾಕಬೇಕಾದ ಪರಿಸ್ಥಿತಿ ಬಂದಿದೆ.

‘ಮಳೆ ಇಷ್ಟಕ್ಕೆ ನಿಂತರೆ ಸರಿ. ಇಲ್ಲದಿದ್ದರೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗುತ್ತದೆ. ಹುಲ್ಲು ಮುಗ್ಗಲು ವಾಸನೆ ಬಂದರೆ ದನಗಳಿಗೆ ಮೇವು ಹೊಂಚುವುದೂ ಕಷ್ಟ’ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.

ಶಿರಸಿಯಲ್ಲಿ ಭಾರಿ ಮಳೆ (ಹುಬ್ಬಳ್ಳಿ ವರದಿ): ಉತ್ತರ ಕರ್ನಾಟಕದ ಹಾವೇರಿ, ಗದಗ,
ಉತ್ತರ ಕನ್ನಡ ಜಿಲ್ಲೆಯಲ್ಲಿ ಗುರುವಾರ ಮಳೆಯಾಗಿದೆ. cಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸುಮಾರು ಒಂದು ತಾಸು ಗುಡುಗು ಸಹಿತ ಭಾರಿ ಮಳೆಯಾಗಿದೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ದಾಂಡೇಲಿ ಸೇರಿದಂತೆ ಉಳಿದ ಜಿಲ್ಲೆ­ಗಳಲ್ಲಿ ಚದುರಿದಂತೆ ಮಳೆಯಾಗಿದೆ. ಅನೇಕ ಕಡೆಗಳಲ್ಲಿ ಕೊಯ್ಲು ಮಾಡಿ, ಒಣಗಿಸಿದ ಭತ್ತಕ್ಕೆ ಅಕಾಲಿಕ ಮಳೆ­ಯಿಂದಾಗಿ ಹಾನಿ ಯಾಗಿದೆ.

ವಿಶ್ವೇಶ್ವರಯ್ಯ ವಿತರಣಾ ನಾಲೆ ಏರಿ ಕುಸಿತ
ಪಾಂಡವಪುರ (ಮಂಡ್ಯ ಜಿಲ್ಲೆ): ತಾಲ್ಲೂಕಿನಾದ್ಯಂತ ಬುಧವಾರ ರಾತ್ರಿ ಭಾರಿ ಮಳೆಯಾಗಿದ್ದು, ಚಿಕ್ಕಬ್ಯಾಡರ­­ಹಳ್ಳಿ ಗ್ರಾಮದ ಬಳಿಯ ವಿಶ್ವೇಶ್ವರಯ್ಯ ನಾಲೆಯ ವಿತರಣಾ ನಾಲೆ ಒಡೆದಿದೆ. ಇದರಿಂದ ಜಮೀನಿಗೆ ನೀರು ನುಗ್ಗಿ ಸುಮಾರು 50 ಎಕರೆಗೂ ಹೆಚ್ಚು ಕಬ್ಬು ಮತ್ತು ಭತ್ತದ ಬೆಳೆ ಹಾನಿಯಾಗಿದೆ.

ಸುಮಾರು 24 ಮೈಲಿ ಉದ್ದದ ವಿತರಣಾ ನಾಲೆಯು ಕೃಷ್ಣರಾಜಸಾ­ಗರದ ವಿಶ್ವೇಶ್ವರಯ್ಯ ನಾಲೆ ನಿರ್ಮಾಣ­ವಾಗಿದ್ದ ಸಂದರ್ಭದಲ್ಲಿ ನಿರ್ಮಾಣ­ಗೊಂಡಿತ್ತು. ಅಧಿಕಾರಿಗಳಿಗೆ ತರಾಟೆ:  ವಿಶ್ವೇಶ್ವರಯ್ಯ ವಿತರಣಾ ನಾಲೆ ಒಡೆದಿರುವುದನ್ನು ವೀಕ್ಷಿಸಲು ಬಂದ ಕಾವೇರಿ ನೀರಾವರಿ ನಿಗಮದ ಎಇಇ ಗುರುಮೂರ್ತಿ ಮತ್ತು ಸಿಬ್ಬಂದಿಗೆ ಸ್ಥಳೀಯ ರೈತರು ತರಾಟೆ ತೆಗೆದುಕೊಂಡರು. ನಾಲೆ ನಿರ್ಮಾಣ ಮಾಡಿದ ಬಳಿಕ ಈ ನಾಲೆಯನ್ನು ಆಧುನೀಕರಣಗೊಳಿಸಿಲ್ಲ.

4 ತಿಂಗಳ ಹಿಂದೆ ನಾಲೆಯನ್ನು ಆಧುನೀಕರಣ­ಗೊಳಿಸುವುದಾಗಿ ಹೇಳಿ, ಕೇವಲ ನಾಲೆಯ ಏರಿಯ ಮೇಲಿನ ಮಣ್ಣನ್ನು ಸಮತಟ್ಟಾಗಿಸಿ ಕೈತೊಳೆದುಕೊಂಡರೆ ಹೊರತು, ನಾಲೆ ಎಲ್ಲಿ ಶಿಥಿಲಗೊಂಡಿದೆ, ಎಲ್ಲಿ ತೂತು ಬಿದ್ದು ನೀರು ಹರಿದು­ಹೋಗುತ್ತಿದೆ ಎಂದು ಪರಿಶೀಲನೆ ನಡೆಸಿಲ್ಲ ಎಂದು ಹರಿಹಾಯ್ದರು.

ನೀರಾವರಿ ಇಲಾಖೆಯ ಅಧಿಕಾರಿ­ಗಳಿಂದ ಸಮರ್ಪಕ ಉತ್ತರ ದೊರೆಯದ ಕಾರಣ ರೊಚ್ಚಿಗೆದ್ದ ರೈತರು ಕೆಲ ಕಾಲ ಮಂಡ್ಯ– ಪಾಂಡವಪುರ ಮುಖ್ಯರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿ ನೀರಾವರಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

Write A Comment