ರಾಷ್ಟ್ರೀಯ

ಕಳಂಕಿತ ಇಂಜಿನಿಯರ್ ಮನೆಯಲ್ಲಿ 100 ಕೋಟಿ ಮೌಲ್ಯದ ವಜ್ರ, 10ಕೋಟಿ ನಗದು, ಚಿನ್ನ ವಶ

Pinterest LinkedIn Tumblr

Vajaraaa

ಲಕ್ನೋ, ನ.29: ನೊಯ್ಡಾದ ಕಳಂಕಿತ ಇಂಜಿನಿಯರ್ ಯಾದವ್‌ಸಿಂಗ್ ನಿವಾಸದಲ್ಲಿ ಬರೋಬ್ಬರಿ 100 ಕೋಟಿ ರೂ. ಮೌಲ್ಯದ ವಜ್ರಗಳು, 2 ಕೆಜಿ ಚಿನ್ನ ಹಾಗೂ 10 ಕೋಟಿ ರೂ.ಗಳ ನಗದು ಸಿಕ್ಕಿದ್ದು, ಮುಖ್ಯಮಂತ್ರಿ ಅಖಿಲೇಶ್‌ಯಾದವ್ ಸರ್ಕಾರಕ್ಕೆ ತೀವ್ರ ಮುಜುಗರ ಸೃಷ್ಟಿಸಿದೆ.

ಕಳೆದ 2-3 ದಿನಗಳಿಂದ ಇಂಜಿನಿಯರ್ ಯಾದವ್ ನಿವಾಸವನ್ನು ಸಮಗ್ರವಾಗಿ ಜಾಲಾಡಿದ ಆದಾಯ ತೆರಿಗೆ ಅಧಿಕಾರಿಗಳು, 100 ಕೋಟಿ ರೂ. ಬೆಲೆಯ ವಜ್ರ, ಚಿನ್ನ ಪತ್ತೆ ಮಾಡಿ ವಶಪಡಿಸಿಕೊಂಡರು. 10 ಕೋಟಿ ರೂ. ನಗದು ಕೂಡ ದೊರೆಯಿತು. ವಿವಿಧ ಕಂಪೆನಿಗಳಿಂದ ಬೇರೆ ಬೇರೆ ಸುಳ್ಳು ಹೆಸರಿನ ಮೂಲಕ ಇಂಜಿನಿಯರ್‌ಗೆ ಸಂಪತ್ತು ಹರಿದು ಬಂದಿದೆ. ಯಾದವ್‌ನಿಗೆ ಸಂಬಂಧಿಸಿದ ಬೇರೆ ಬೇರೆ ಹೆಸರಿನಲ್ಲಿದ್ದ 12 ನಿವಾಸಗಳನ್ನು ಅಧಿಕಾರಿಗಳು ಜಾಲಾಡಿದರು. ಅನೇಕ ಬ್ಯಾಂಕ್‌ಗಳ ಲಾಕರ್‌ಗಳಲ್ಲಿ ಸಂಪತ್ತು ಅಡಗಿಸಿರುವ ದಾಖಲೆಗಳೂ ಪತ್ತೆಯಾಗಿವೆ.

ನಿನ್ನೆ ಬೆಳಗ್ಗೆ ಸಿಂಗ್ ನಿವಾಸಕ್ಕೆ ದಾಳಿ ಮಾಡಿದ ಕೃಷ್ಣಸೈನಿ ನೇತೃತ್ವದ ಅಧಿಕಾರಿಗಳ ತಂಡ, ಒಂದು ಕಾರಿನಲ್ಲಿ ಚೀಲಗಳಲ್ಲಿ ತುಂಬಿಟ್ಟಿದ್ದ 10 ಕೋಟಿ ನಗದು, ಇನ್ನೊಂದು ಕಾರಿನಲ್ಲಿದ್ದ ಭಾರೀ ಹಣ ವಶಪಡಿಸಿಕೊಂಡರು. ಈ ಔದಿಕಾರಿನ ಬೆಲೆಯೇ 90 ಲಕ್ಷ.
ಇಂಜಿನಿಯರ್‌ನ ಬೆಡ್‌ರೂಂ ಶೋಧಿಸಿದಾಗ 100 ಕೋಟಿ ರೂ. ಮೌಲ್ಯದ ವಜ್ರಗಳು ಸಿಕ್ಕಿದವು ಎಂದು ಆದಾಯ ತೆರಿಗೆ ಡಿಜಿ ಕೃಷ್ಣಸೈನಿ ತಿಳಿಸಿದ್ದಾರೆ. 40 ನಕಲಿ ಕಂಪೆನಿಗಳ ಹೆಸರಿನಲ್ಲಿ ವ್ಯವಹಾರ ನಡೆದಿದೆ. ಬ್ಯಾಂಕ್ ಲಾಕರ್‌ಗಳ ತಪಾಸಣೆ ನಡೆದಿದ್ದು, ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ಈ ಮಾಹಿತಿ ಬಂದರೆ ಅವುಗಳಲ್ಲಿ ಎಷ್ಟೆಷ್ಟು, ಚಿನ್ನ, ವಜ್ರ, ನಗದು ಇರಿಸಲಾಗಿದೆ ಎಂಬುದು ತಿಳಿಯಲಿದೆ ಎಂದು ಅವರು ಹೇಳಿದರು.

ನಿನ್ನೆ ಸಂಜೆವರೆಗೂ ಯಾದವ್‌ಸಿಂಗ್‌ನನ್ನು ತನಿಖೆಗೆ ಗುರಿಪಡಿಸಲಾಗಿದೆ. ಆದರೆ, ಉತ್ತರಪ್ರದೇಶ ಸರ್ಕಾರ ಈ ಕಳಂಕಿತ ಇಂಜಿನಿಯರ್‌ನನ್ನು ಅಮಾನತು ಮಾಡಿದ ಬಗ್ಗೆ ಯಾವುದೇ ಮಾಹಿತಿಯೂ ಬಂದಿಲ್ಲ. ದಾಳಿ ಪರಿಶೀಲನೆ ಮುಂದುವರೆದಿದೆ. ನಕಲಿ ಕಂಪೆನಿಗಳು ಯಾದವ್‌ನ ಪತ್ನಿ ಪುಷ್ಪಲತಾಳ ಹೆಸರಿನಲ್ಲಿವೆ. ಕೋಲ್ಕತಾದಲ್ಲೂ ಯಾದವ್‌ನ ನಕಲಿ ಕಂಪೆನಿ ಇದೆ. ಈ ಕಂಪೆನಿಗಳ ಷೇರ್‌ಗಳನ್ನೂ ಅಕ್ರಮವಾಗಿ ಖರೀದಿ-ಮಾರಾಟ ಮಾಡಲಾಗಿದೆ. ಗ್ರೇಟರ್ ನೊಯ್ಡಾದಲ್ಲಿ ಹಲವು ನಿವೇಶನಗಳನ್ನೂ ಖರೀದಿಸಿದ್ದಾನೆ.

ಯಾದವ್ ಹಿನ್ನೆಲೆ:
ಇದೇ ಯಾದವ್‌ಸಿಂಗ್‌ನನ್ನು 954 ಕೋಟಿ ರೂ. ಭಾರೀ ಹಗರಣದಲ್ಲಿ ಈ ಹಿಂದಿನ ಮಾಯಾವತಿ ಸರ್ಕಾರ ಅಮಾನತು ಮಾಡಿತ್ತು. ಆದರೆ, ಸಮಾಜವಾದಿ ಪಕ್ಷ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ 2013ರಲ್ಲಿ ಯಾದವ್‌ಸಿಂಗ್‌ನನ್ನು ತೆಗೆದುಕೊಳ್ಳಲಾಗಿದೆ. ಅದಕ್ಕೂ ಮುನ್ನ ಮಾಯಾವತಿ ಅಧಿಕಾರಾವಧಿಯಲ್ಲಿ ಯಾದವ್ ತಲೆ ತಪ್ಪಿಸಿಕೊಂಡಿದ್ದ. ಅಚ್ಚರಿಯೆಂದರೆ ಅದುವರೆಗೂ ನಾಪತ್ತೆಯಾಗಿದ್ದ ಯಾದವ್‌ಸಿಂಗ್ ಅಖಿಲೇಶ್‌ಯಾದವ್ ಮುಖ್ಯಮಂತ್ರಿಯಾಗುತ್ತಿದ್ದಂತೆಯೇ ಮತ್ತೆ ಇಂಜಿನಿಯರ್ ಆಗಿದ್ದ. ವಿಶೇಷವೆಂದರೆ ಈ ಯಾದವ್‌ಸಿಂಗ್ ನಿಜಕ್ಕೂ ಯಾದವನೇ ಅಥವಾ ಸಿಂಗನೇ(ಠಾಕೂರ್) ಎಂಬುದು ಖಾತ್ರಿಯಾಗಿಲ್ಲವಾದರೂ ಒಟ್ಟಾರೆ ಪರಿಶಿಷ್ಟ ಎಂಬುದು ನಿಜ. ಇದೇ ರೀತಿ ಇನ್ನೂ ಕೆಲವು ಆದಾಯ ತೆರಿಗೆ ದಾಳಿಗಳು ಉತ್ತರ ಪ್ರದೇಶದಲ್ಲಿ ನಡೆದರೆ ಅಖಿಲೇಶ್ ಸರ್ಕಾರಕ್ಕೆ ಭಾರಿ ಮುಖಭಂಗವಾಗಲಿದೆ.

Write A Comment