ಪಾಟ್ನಾ: ಪ್ರಧಾನಮಂತ್ರಿಯಾಗದಿದ್ದಕ್ಕೆ ನನಗೆ ಯಾವುದೇ ರೀತಿಯ ವಿಷಾಧವಿಲ್ಲ. ಸಂಸತ್ನಲ್ಲಿ ಮತ್ತು ಹೊರಗೆ ರಾಜಕೀಯ ಪಕ್ಷಗಳಿಂದ ನನಗೆ ದೊರೆತ ಗೌರವ ಪ್ರಧಾನಿ ಪಟ್ಟಕ್ಕಿಂತಲೂ ಮಿಗಿಲಾದುದು ಎಂದು ಬಿಜೆಪಿ ಹಿರಿಯ ಮುಖಂಡ ಎಲ್ಕೆ ಅಡ್ವಾಣಿ ಹೇಳಿದ್ದಾರೆ.
ಬಿಹಾರದ ಮಾಜಿ ಐಪಿಎಸ್ ಅಧಿಕಾರಿ ಜೆಕೆ ಸಿನ್ಹಾ ಅವರು ನಡೆಸುತ್ತಿರುವ ಖಾಸಗಿ ಶಾಲೆಗೆ ಭೇಟಿ ನೀಡಿದ್ದ ಎಲ್ ಕೆ ಅಡ್ವಾಣಿ ಅವರು, ನಾನು ದೇಶದ ಪ್ರಧಾನಮಂತ್ರಿಯಾಗದಿದ್ದಕ್ಕೆ ಯಾವುದೇ ವಿಷಾಧವಿಲ್ಲ. ಆದರೆ ಸಂಸತ್ನಲ್ಲಿ ಮತ್ತು ಸಂಸತ್ ಹೊರಗೆ ರಾಜಕೀಯ ಪಕ್ಷಗಳಿಂದ ನನಗೆ ದೊರೆತ ಅತೀವ ಗೌರವ ಪ್ರಧಾನಿ ಪಟ್ಟಕ್ಕಿಂತಲೂ ಹೆಚ್ಚು. ಅದನ್ನು ನಾನೆಂದೂ ಮರೆಯುವುದಿಲ್ಲ. ಇದು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ ಎಂದು ಅಡ್ವಾಣಿ ಹೇಳಿದ್ದಾರೆ.
ಇದೇ ವೇಳೆ ಪ್ರಧಾನಿ ಮೋದಿ ಸರ್ಕಾರಕ್ಕೆ ಫುಲ್ ಮಾರ್ಕ್ಸ್ ನೀಡಿರುವ ಅಡ್ವಾಣಿ ಅವರು, ನರೇಂದ್ರ ಮೋದಿ ನೇತೃತ್ವ ಎನ್ ಡಿಎ ಸರ್ಕಾರ ಸರಿಯಾದ ಹಾದಿಯಲ್ಲೇ ಸಾಗುತ್ತಿದೆ. ನರೇಂದ್ರ ಮೋದಿ ಅವರು ಬುದ್ಧಿವಂತರಾಗಿದ್ದು, ಅಭಿವೃದ್ಧಿಯ ಬಗೆಗಿನ ಅವರ ದೂರದೃಷ್ಟಿ ನಿಖರವಾಗಿದೆ. ಹೀಗಾಗಿ ಅವರ ಯಾವುದೇ ಕಾರ್ಯಕ್ಕೆ ನನ್ನ ಆಕ್ಷೇಪಣೆ ಇಲ್ಲ ಎಂದು ಹೇಳಿದರು.
ಬಿಜೆಪಿಗೆ ಗೆಲುವಿಗೆ ಕಾಂಗ್ರೆಸ್ ಕೂಡ ಕಾರಣ
ಇದೇ ವೇಳೆ ಬಿಜೆಪಿ ಸರ್ಕಾರವನ್ನು ಟೀಕಿಸುತ್ತಿರುವ ಕಾಂಗ್ರೆಸ್ ಪಕ್ಷಕ್ಕೆ ಪರೋಕ್ಷ ಟಾಂಗ್ ನೀಡಿರುವ ಅಡ್ವಾಣಿ ಅವರು, ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂರ್ತ ಪೂರ್ವ ಗೆಲುವು ಸಾಧಿಸಲು ಒಂದುರೀತಿಯಲ್ಲಿ ಕಾಂಗ್ರೆಸ್ ಪಕ್ಷ ಕೂಡ ಕಾರಣ. ತನ್ನ ಆಡಳಿತಾವಧಿಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಯಟವಟ್ಟುಗಳು, ಭ್ರಷ್ಟಾಚಾರದ ಹಗರಣಗಳು ಮತ್ತು ಜನವಿರೋಧಿ ಕಾನೂನುಗಳು ಬಿಜೆಪಿ ಪಕ್ಷಕ್ಕೆ ಅನುಕೂಲವಾಯಿತು. ಕಾಂಗ್ರೆಸ್ನ ಭ್ರಷ್ಟ ಆಡಳಿತವನ್ನು ಕಂಡ ದೇಶದ ಜನತೆ ಬಿಜೆಪಿ ಮೇಲೆ ಭರವಸೆ ಇಟ್ಟು ಮತ ನೀಡಿದ್ದಾರೆ ಎಂದು ಹೇಳಿದರು. ಅಲ್ಲದೆ ಚುನಾವಣೆಯಲ್ಲಿ ಬಿಜೆಪಿಗಾಗಿ ಅತಿ ಹೆಚ್ಚು ಕೆಲಸ ಮಾಡಿದ ಪಕ್ಷವೆಂದರೆ ಅದು ಕಾಂಗ್ರೆಸ್ ಮಾತ್ರ ಎಂದು ಅಡ್ವಾಣಿ ಅವರು ಕಾಂಗ್ರೆಸ್ ಪಕ್ಷಕ್ಕೆ ಟಾಂಗ್ ನೀಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ತೆರೆಮರೆಗೆ ಸರಿದಾಗಿನಿಂದಲೂ ಎನ್ ಡಿಎ ಮೈತ್ರಿಕೂಟದಲ್ಲಿ ಎಲ್ ಕೆ ಅಡ್ವಾಣಿ ಅವರು ಪ್ರಧಾನಿ ಹುದ್ದೆಯ ಪ್ರಮುಖ ಆಕಾಂಕ್ಷಿಯಾಗಿದ್ದರು. ಆದರೆ ಬದಲಾದ ರಾಜಕೀಯ ಬೆಳವಣಿಗೆಗಳಿಂದಾಗಿ 2009ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಎನ್ಡಿಎ ಮೈತ್ರಿಕೂಟ ಅಧಿಕಾರವಂಚಿತವಾಯಿತು. 2009 ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಎಲ್ ಕೆ ಅಡ್ವಾಣಿ ಅವರನ್ನೇ ತಮ್ಮ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಚುನಾವಣೆ ಎದುರಿಸಿತ್ತು. ಆದರೆ ಆಡಳಿತಾ ರೂಢ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟ ಜಯ ಸಾಧಿಸಿ ಮತ್ತೆ ಅಧಿಕಾರದ ಗದ್ದುಗೆ ಏರಿತ್ತು.
ತದ ನಂತರ ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡರು. ಗೋವಾದಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಅಂದಿನ ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರು ನರೇಂದ್ರ ಮೋದಿ ಅವರನ್ನೇ ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದರು. ಗುಜರಾತ್ ನಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಮತ್ತು ಯುಪಿಎ ಸರ್ಕಾರದ ಭ್ರಷ್ಟಾಚಾರ ಪ್ರಕರಣಗಳನ್ನು ಉದಾಹರಿಸಿ ಭರ್ಜರಿ ಪ್ರಚಾರ ಮಾಡಿದ ಬಿಜೆಪಿ 2014ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸಿತು. ಚುನಾವಣೆಯಲ್ಲಿ ಹಿನಾಯವಾಗಿ ಸೋಲು ಕಂಡ ಕಾಂಗ್ರೆಸ್ ಪಕ್ಷಕ್ಕೆ ಕನಿಷ್ಠ ವಿರೋಧ ಪಕ್ಷದ ಸ್ಥಾನವೂ ಕೂಡ ಸಿಗಲಿಲ್ಲ.