ಕ್ರೀಡೆ

ಪ್ರಥಮ ಏಕದಿನ: ಆಸ್ಟ್ರೇಲಿಯಕ್ಕೆ ಜಯ

Pinterest LinkedIn Tumblr

balily

ಪರ್ತ್, ನ.14: ಸರ್ವಾಂಗೀಣ ಪ್ರದರ್ಶನ ನೀಡಿದ ಆಸ್ಟ್ರೇಲಿಯ ಇಂದು ಇಲ್ಲಿ ನಡೆದ ದಕ್ಷಿಣ ಆಫ್ರಿಕ ವಿರುದ್ಧದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ 32 ರನ್‌ಗಳ ಜಯ ಗಳಿಸಿದೆ.
ಇಲ್ಲಿನ ವಾಕಾ ಸ್ಟೇಡಿಯಂನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಜಾರ್ಜ್ ಬೈಲಿ(70) ಅರ್ಧಶತಕ ಹಾಗೂ ಉಳಿದ ಆಟಗಾರರ ಉಪಯುಕ್ತ ಕಾಣಿಕೆಯ ನೆರವಿನಿಂದ ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತ್ತು. ಗೆಲ್ಲಲು ಕಠಿಣ ಸವಾಲು ಪಡೆದ ದಕ್ಷಿಣ ಆಫ್ರಿಕ ತಂಡ ಇಂದು ಐಸಿಸಿ ವರ್ಷದ ಏಕದಿನ ಆಟಗಾರ ಪ್ರಶಸ್ತಿಗೆ ಭಾಜನರಾದ ನಾಯಕ ಎಬಿ ಡಿ ವಿಲಿಯರ್ಸ್(80) ಹಾಗೂ ಡೇವಿಡ್ ಮಿಲ್ಲರ್(65) ಅರ್ಧಶತಕದ ಹೊರತಾಗಿಯೂ 48.1 ಓವರ್‌ಗಳಲ್ಲಿ 268 ರನ್‌ಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯದ ಪರವಾಗಿ ಕೌಲ್ಟರ್ ನೈಲ್(4-48) ಹಾಗೂ ಮಿಚೆಲ್ ಜಾನ್ಸನ್(2-38) ಹರಿಣ ಪಡೆಗೆ ಕಡಿವಾಣ ಹಾಕಿದರು. ಈ ಗೆಲುವಿನೊಂದಿಗೆ ಆತಿಥೇಯ ಆಸ್ಟ್ರೇಲಿಯ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯ ತಂಡ ಡೇವಿಡ್ ವಾರ್ನರ್(46) ಹಾಗೂ ಫಿಂಚ್(35) ಮೊದಲ ವಿಕೆಟ್‌ಗೆ ದಾಖಲಿಸಿದ 94 ರನ್ ನೆರವಿನಿಂದ ಉತ್ತಮ ಆರಂಭವನ್ನು ಪಡೆದಿತ್ತು. ಈ ಇಬ್ಬರು ಔಟಾದ ನಂತರ ಬೈಲಿ(70ರನ್, 75 ಎ, 3 ಬೌಂ, 3 ಸಿ.) ಹಾಗೂ ವಿಕೆಟ್‌ಕೀಪರ್ ವ್ಯಾಡ್(35) 6ನೆ ವಿಕೆಟ್‌ಗೆ 92 ರನ್ ಸೇರಿಸಿ ತಂಡವನ್ನು ಆಧರಿಸಿದರು. ಆಫ್ರಿಕದ ಪರವಾಗಿ ಫಿಲ್ಯಾಂಡರ್(4-45), ಸ್ಟೇಯ್ನಾ(2-62) ಆರು ವಿಕೆಟ್‌ಗಳನ್ನು ಹಂಚಿಕೊಂಡರು. ಗೆಲ್ಲಲು 301 ರನ್ ಸವಾಲು ಪಡೆದ ಆಫ್ರಿಕ ತಂಡ 76 ರನ್ ಗಳಿಸುವಷ್ಟರಲ್ಲಿ 4 ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆದಿತ್ತು. 5ನೆ ವಿಕೆಟ್‌ಗೆ 126 ರನ್ ಜೊತೆಯಾಟವನ್ನು ನಡೆಸಿದ ನಾಯಕ ವಿಲಿಯರ್ಸ್(80, 76 ಎ, 4 ಬೌಂ, 1 ಸಿ.) ಹಾಗೂ ಮಿಲ್ಲರ್(65 ರನ್, 65 ಎ, 5 ಬೌಂ, 1 ಸಿ.) ಆಫ್ರಿಕದ ಇನಿಂಗ್ಸ್ ರಿಪೇರಿ ಮಾಡಿದರು. ಕೌಲ್ಟರ್ ನೈಲ್ ಅವರು ಮಿಲ್ಲರ್ ವಿಕೆಟ್ ಕಬಳಿಸಿ ಆಫ್ರಿಕಕ್ಕೆ ಆಘಾತ ನೀಡಿದರು. ಮಿಲ್ಲರ್ ಔಟಾದ ನಂತರ ದಿಢೀರ್ ಕುಸಿತ ಕಂಡ ಆಫ್ರಿಕ 20 ರನ್ ಅಂತರದಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಈ ನಡುವೆ ವಿಲಿಯರ್ಸ್ ರನೌಟ್ ಆಗಿದ್ದು ಪಂದ್ಯ ಆಸೀಸ್ ಪರ ವಾಲಲು ಕಾರಣವಾಯಿತು. ಕೊನೆಯ ವಿಕೆಟ್‌ಗೆ 46 ರನ್ ಸೇರಿಸಿದ ಮೊರ್ಕೆಲ್(ಅಜೇಯ 22) ಹಾಗೂ ಇಮ್ರಾನ್ ತಾಹಿರ್(22) ಆಸೀಸ್‌ನಿಂದ ಗೆಲುವು ಕಸಿಯುವ ಭೀತಿ ಹುಟ್ಟಿಸಿದ್ದರು. ಆದರೆ, ತಾಹಿರ್ ವಿಕೆಟ್ ಪಡೆದ ಮ್ಯಾಕ್ಸ್‌ವೆಲ್ ಆಫ್ರಿಕ ಇನಿಂಗ್ಸ್‌ಗೆ ತೆರೆ ಎಳೆದರು. ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 50 ಓವರ್‌ಗಳಲ್ಲಿ 300/8
(ಜಾರ್ಜ್ ಬೈಲಿ 70, ವಾರ್ನರ್ 46, ಫಿಂಚ್ 35, ವ್ಯಾಡ್ 35, ಫಿಲ್ಯಾಂಡರ್ 4-45, ಸ್ಟೇಯ್ನಾ 2-62).
ದಕ್ಷಿಣ ಆಫ್ರಿಕ: 48.1 ಓವರ್‌ಗಳಲ್ಲಿ 268/10
(ವಿಲಿಯರ್ಸ್ 80, ಮಿಲ್ಲರ್ 65, ಪ್ಲೆಸಿಸ್ 31,ಮೊರ್ಕೆಲ್ ಅಜೇಯ 22, ಕೌಲ್ಟರ್ ನೈಲ್ 4-50, ಜಾನ್ಸನ್ 2-38).

http://kannadigaworld.com

Write A Comment