ಕ್ರೀಡೆ

ಐಸಿಸಿ ಅವಾರ್ಡ್: ಮಿಚೆಲ್ ಜಾನ್ಸನ್‌ಗೆ ಅವಳಿ ಪ್ರಶಸ್ತಿ

Pinterest LinkedIn Tumblr

johnson

ದುಬೈ, ನ.14: ಆಸ್ಟ್ರೇಲಿಯದ ವೇಗದ ಬೌಲರ್ ಮಿಚೆಲ್ ಜಾನ್ಸನ್ ಐಸಿಸಿಯ 2013-14ರ ಸಾಲಿನಲ್ಲಿ ಎರಡು ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಜಾನ್ಸನ್ ಐಸಿಸಿಯ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಎರಡನೆ ಬಾರಿ ಜಯಿಸುವ ಮೂಲಕ ತಮ್ಮದೇ ದೇಶದ ಮಾಜಿ ನಾಯಕ ರಿಕಿ ಪಾಂಟಿಂಗ್ ಸಾಧನೆಯನ್ನು ಸರಿಗಟ್ಟಿದ್ದಾರೆ. 33ರ ಹರೆಯದ ಜಾನ್ಸನ್ ವರ್ಷದ ಕ್ರಿಕೆಟಿಗನಿಗೆ ನೀಡುವ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಎರಡನೆ ಬಾರಿ ಪಡೆದುಕೊಂಡಿದ್ದಾರೆ. ಐಸಿಸಿ ವರ್ಷದ ಟೆಸ್ಟ್ ಕ್ರಿಕೆಟಿಗ ಪ್ರಶಸ್ತಿಗೂ ಭಾಜನರಾಗಿದ್ದಾರೆ. 2009ರಲ್ಲಿ ಜಾನ್ಸನ್ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಆಸ್ಟ್ರೇಲಿಯದ ಮಾಜಿ ನಾಯಕ ಪಾಂಟಿಂಗ್ 2006 ಹಾಗೂ 2007ರಲ್ಲಿ ಎರಡು ಬಾರಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಐಸಿಸಿ ಪ್ರಶಸ್ತಿಗೆ ಆ.26, 2013 ರಿಂದ ಸೆ.17, 2014ರ ವರೆಗೆ ಆಟಗಾರನ ಪ್ರದರ್ಶನವನ್ನು ಪರಿಗಣಿಸಲಾಗುತ್ತದೆ. ಈ ಅವಧಿಯಲ್ಲಿ ಜಾನ್ಸನ್ 15.32ರ ಸರಾಸರಿಯಲ್ಲಿ 59 ವಿಕೆಟ್‌ಗಳನ್ನು ಕಬಳಿಸಿದ್ದು, ಇಂಗ್ಲೆಂಡ್‌ನ ವಿರುದ್ಧ ಡಿಸೆಂಬರ್‌ನಲ್ಲಿ 40 ರನ್‌ಗೆ 7 ವಿಕೆಟ್‌ಗಳನ್ನು ಉಡಾಯಿಸಿದ್ದರು. ಜಾನ್ಸನ್ ಭರ್ಜರಿ ಪ್ರದರ್ಶನದ ನೆರವಿನಿಂದ ಆಸ್ಟ್ರೇಲಿಯ ತಂಡ ಇಂಗ್ಲೆಂಡ್ ವಿರುದ್ಧದ ಆ್ಯಶಸ್ ಟೆಸ್ಟ್ ಸರಣಿಯನ್ನು 5-0 ಅಂತರದಿಂದ ಕ್ಲೀನ್‌ಸ್ವೀಪ್ ಗೈದಿತ್ತು. ದಕ್ಷಿಣ ಆಫ್ರಿಕ ವಿರುದ್ಧ ಸರಣಿಯನ್ನು 2-1 ರಿಂದ ಜಯಿಸಿತ್ತು. ಜಾನ್ಸನ್ ಅವರು ದಕ್ಷಿಣ ಆಫ್ರಿಕದ ಎಬಿ ಡಿ ವಿಲಿಯರ್ಸ್ ಹಾಗೂ ಶ್ರೀಲಂಕಾದ ಕುಮಾರ ಸಂಗಕ್ಕರ ಹಾಗೂ ಆ್ಯಂಜೆಲೊ ಮ್ಯಾಥ್ಯೂಸ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಸರ್ ಗ್ಯಾರಿಫೀಲ್ಡ್ ಟ್ರೋಫಿಯನ್ನು ಜಯಿಸಿದ್ದಾರೆ.

ಇದೇ ವೇಳೆ ದಕ್ಷಿಣ ಆಫ್ರಿಕ ನಾಯಕ ಎಬಿ ಡಿ ವಿಲಿಯರ್ಸ್ ತಮ್ಮದೇ ದೇಶದ ಡೇಲ್ ಸ್ಟೇಯ್ನಿ ಹಾಗೂ ಕ್ವಿಂಟನ್ ಡಿ ಕಾಕ್‌ರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿಲಿಯರ್ಸ್ 16 ಇನಿಂಗ್ಸ್‌ನಲ್ಲಿ 60.18ರ ಸರಾಸರಿಯಲ್ಲಿ 963 ರನ್ ಗಳಿಸಿದ್ದರು. 2004ರಲ್ಲಿ ಐಸಿಸಿ ಪ್ರಶಸ್ತಿ ಆರಂಭವಾದ ನಂತರ ಜಾನ್ಸನ್ ಅವರು ಐಸಿಸಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಎರಡು ಬಾರಿ ಪಡೆದ ಎರಡನೆ ಆಟಗಾರನೆಂಬ ಕೀರ್ತಿಗೆ ಪಾತ್ರರಾದರು. ರಾಹುಲ್ ದ್ರಾವಿಡ್ 2004ರಲ್ಲಿ, ಜಾಕ್ ಕಾಲಿಸ್ ಹಾಗೂ ಆ್ಯಂಡ್ರೂ ಫ್ಲಿಂಟಾಫ್ 2005ರಲ್ಲಿ, ಪಾಂಟಿಂಗ್ 2006 ಹಾಗೂ 2007ರಲ್ಲಿ, ಶಿವನಾರಾಯಣ್ ಚಂದರ್‌ಪಾಲ್ 2008ರಲ್ಲಿ, ಜಾನ್ಸನ್ 2009ರಲ್ಲಿ, ಸಚಿನ್ ತೆಂಡುಲ್ಕರ್ 2010ರಲ್ಲಿ, ಜೋನಾಥನ್ ಟ್ರಾಟ್ 2011ರಲ್ಲಿ, ಕುಮಾರ ಸಂಗಕ್ಕರ 2012ರಲ್ಲಿ, ಮೈಕಲ್ ಕ್ಲಾರ್ಕ್ 2013ರಲ್ಲಿ ವರ್ಷದ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಕಳೆದ ವರ್ಷ ಸೌತಾಂಪ್ಟನ್‌ನಲ್ಲಿ ಇಂಗ್ಲೆಂಡ್‌ನ ವಿರುದ್ಧ 156 ರನ್ ಗಳಿಸಿದ್ದ ಆರೊನ್ ಫಿಂಚ್ ಐಸಿಸಿ ವರ್ಷದ ಟ್ವೆಂಟಿ-20 ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ನ ಗ್ಯಾರಿ ಬಾಲೆನ್ಸ್ ವರ್ಷದ ಉದಯೋನ್ಮುಖ ಕ್ರಿಕೆಟಿಗ, ಇಂಗ್ಲೆಂಡ್‌ನ ಸಾರಾ ಟೇಲರ್ ವರ್ಷದ ಮಹಿಳಾ ಏಕದಿನ ಕ್ರಿಕೆಟರ್, ಮೆಗ್ ಲ್ಯಾನ್ನಿಂಗ್ ಐಸಿಸಿ ವರ್ಷದ ಕ್ರಿಕೆಟರ್, ಕ್ಯಾಥೆರಿನ್ ಬ್ರುಂಟ್ ‘ಸ್ಪಿರಿಟ್ ಆಫ್ ಕ್ರಿಕೆಟ್ ಅವಾರ್ಡ್’, ಪ್ರಿಸ್ಟನ್ ಮೊಮ್ಮಸನ್ ವರ್ಷದ ಅಸೋಸಿಯೇಟ್ ಕ್ರಿಕೆಟರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

http://kannadigaworld.com

Write A Comment