ಗಲ್ಫ್

ಯುಎಇಯಲ್ಲಿ ಕೊರೋನದಿಂದ ತತ್ತರಿಸಿದ ಕನ್ನಡಿಗರ ಪಾಲಿಗೆ ಸಂಜೀವಿನಿಯಾದ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ ! ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ…

Pinterest LinkedIn Tumblr

ಕೊರೋನ ವೈರಸ್ ಸೋಂಕಿನಿಂದ ಇಡೀ ಜಗತ್ತೇ ತತ್ತರಿಸುತ್ತಿದ್ದ ಸಂದರ್ಭದಲ್ಲಿ ಯುಎಈಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅನಿವಾಸಿ ಕನ್ನಡಿಗರಿಗೆ ತಮ್ಮ ಕೈಲಾದ ಸಹಾಯ ಮಾಡುವ ಹಂಬಲದೊಂದಿಗೆ ಹುಟ್ಟಿಕೊಂಡ ‘ಕನ್ನಡಿಗಾಸ್ ಹೆಲ್ಪ್ ಲೈನ್’ ತಂಡ ಮಾಡಿದ ಕನ್ನಡಿಗರ ಸೇವೆ ಹಾಗೂ ಸತತ ಪ್ರಯತ್ನದಿಂದ ಸಾಧಿಸಿದ ಕೆಲವು ಸಫಲತೆಯಿಂದ ಕೇಂದ್ರ ಸಚಿವರೇ ‘ನಿಮ್ಮ ಸೇವೆಯನ್ನು ಪ್ರಧಾನಿ ಮೋದಿಯವರ ಗಮನಕ್ಕೆ ತರುವೆ’ ಎಂದು ಮೆಚ್ಚುಗೆ ವ್ಯಕ್ತಪಡಿಸುವ ಮಟ್ಟಕ್ಕೆ ಬೆಳೆದು ಪ್ರಪಂಚದಾದ್ಯಂತ ಎಲ್ಲಾ ಅನಿವಾಸಿ ಸಂಘಟನೆಗಳಿಗೂ ಮಾದರಿಯಾಗಿದೆ.

ಅನಿವಾಸಿ ಉದ್ಯಮಿಗಳಾದ ನವೀದ್ ಮಾಗುಂಡಿ ಮತ್ತು ಹಿದಾಯತ್ ಅಡ್ಡೂರ್ ರವರ ಕಲ್ಪನೆಯ ಕೂಸಾದ ಕನ್ನಡಿಗಾಸ್ ಹೆಲ್ಪ್ ಲೈನ್’ಗೆ ಕನ್ನಡಿಗ ಉದ್ಯಮಿಗಳಾದ ಪ್ರವೀಣ್ ಶೆಟ್ಟಿ, ಹರೀಶ್ ಶೇರಿಗಾರ್, ರೊನಾಲ್ಡ್ ಮಾರ್ಟಿಸ್, ಸೇರಿದಂತೆ ಅಶ್ರಫ್ ಕೆ.ಎಂ, ಸುನೀಲ್ ಅಂಬಲವೆಲೀಲ್, ಚಂದ್ರಶೇಖರ್ ಲಿಂಗದಹಳ್ಳಿ, ಇಮ್ರಾನ್ ಖಾನ್, ದಯಾ ಕಿರೋಡಿಯನ್, ಯೂಸುಫ್ ಬರ್ಮಾವರ್, ಶಶಿಧರ್ ನಾಗರಾಜಪ್ಪ, ನೋಯೆಲ್ ಅಲ್ಮೇಡಾ, ಅಲ್ತಾಫ್ ಹುಸೇನ್,ಅಶ್ಫಾಕ್ ಸಾದ, ಯಶವಂತ್ ಕರ್ಕೇರ, ಅನ್ಸಾರ್ ಬಾರ್ಕೂರ್, ಸಿರಾಜ್ ಪರ್ಲಡ್ಕ, ಜಾನ್ಸನ್ ಮಾರ್ಟಿಸ್, ಸೈಯದ್ ಅಫ್ಜಲ್ ಎಂಬ 20 ಸಮಾನಮನಸ್ಕರೊಂದಿಗೆ ತಂಡವಾಗಿ ರೂಪುಗೊಂಡು ನಿರಂತರವಾಗಿ ಅನಿವಾಸಿ ಕನ್ನಡಿಗರಿಗೆ ಸಹಾಯಹಸ್ತ ಚಾಚುತ್ತಿದೆ.

ಯುಎಈಯಲ್ಲಿರುವ ಕನ್ನಡಿಗರ ಸ್ಥಿತಿಗತಿಗಳ ಕುರಿತು ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ ದುಬೈ ಕಾನ್ಸುಲೇಟ್ ಜನರಲ್ ವಿಪುಲ್ ಷಾ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿ, ನಮ್ಮ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದಾಗ, ಈ ಸಂಕಷ್ಟದ ಸಮಯದಲ್ಲಿ ಇಂತಹ ಸಮುದಾಯ ಸೇವೆ ಪ್ರಶಂಸನೀಯ ಎಂದು ಹುರಿದುಂಬಿಸಿದರು.

www.uaekannadahelpline.com ಎಂಬ ವೆಬ್ಸೈಟ್ ಮೂಲಕ ಕನ್ನಡಿಗರಿಗೆ ನೇರವಾಗಿ ತಲುಪಿದ ಕನ್ನಡಿಗಾಸ್ ಹೆಲ್ಪ್ ಲೈನ್, ಅದರಲ್ಲಿ ರಿಜಿಸ್ಟರ್ ಮಾಡಿದ ಸುಮಾರು 5000ಕ್ಕೂ ಹೆಚ್ಚಿನ ಕನ್ನಡಿಗರಿಗೆ ಆಹಾರದ ಅವಶ್ಯಕತೆ ಪೂರೈಕೆ ಹಿದಾಯತ್ ಅಡ್ಡೂರ್ ನೇತೃತ್ವದಲ್ಲಿ, ವೈದ್ಯಕೀಯ ಸೌಲಭ್ಯ ಕುರಿತು ಮಾಹಿತಿ ದಯಾ ಕಿರೋಡಿಯನ್ ಹಾಗೂ ಅಡ್ವೋಕೇಟ್ ಸುನೀಲ್ ಅಂಬಲವೆಲೀಲ್ ನೇತೃತ್ವದಲ್ಲಿ ಕಾನೂನಾತ್ಮಕ ಸಮಸ್ಯೆಗೆ ಸಲಹೆ ಹಾಗೂ ಪರಿಹಾರ ಹೀಗೆ ವಿವಿಧ ರೀತಿಯಲ್ಲಿ ಕಾರ್ಯಪ್ರವೃತ್ತರಾಯಿತು.

ನೂರಾರು ಸಂಖ್ಯೆಯಲ್ಲಿ ಬರುವ ಎಲ್ಲಾ ಏಮರ್ಜೆನ್ಸಿ ಸಮಸ್ಯೆಗಳ ಕುರಿತಾದ ಫೋನ್ ಕರೆಗಳಿಗೆ ಪ್ರವೀಣ್ ಶೆಟ್ಟಿ, ನವೀದ್ ಮಾಗುಂಡಿ, ಹರೀಶ್ ಶೇರಿಗಾರ್, ಯೂಸುಫ್ ಬರ್ಮಾವೆರ್ ಸ್ಪಂದಿಸಿ ಸೂಕ್ತ ಸಲಹೆ ನೀಡುತ್ತಿದ್ದರು, ದೈನಂದಿನವಾಗಿ ರಿಜಿಸ್ಟರ್ ಮಾಡುತ್ತಿದ್ದವರ ಪಟ್ಟಿಯಲ್ಲಿದ್ದ ಪ್ರತಿಯೊಬ್ಬ ಕನ್ನಡಿಗರಿಗೂ ನವೀದ್, ಹಿದಾಯತ್, ಇಮ್ರಾನ್ ಕರೆ ಮಾಡಿ ಅವರ ಕುಶಲೋಪರಿ ವಿಚಾರಿಸಿ, ಧೈರ್ಯ ತುಂಬಿ, ವಿಳಾಸ ಪಡೆದು ನಂತರ ಯುಎಈಯ ಎಲ್ಲಾ 7 ರಾಜ್ಯಗಳಿಗೂ ತಂಡದ ಸ್ವಯಂಸೇವಕರ ಮೂಲಕ ‘ಫುಡ್ ಕಿಟ್’ ತಲುಪಿಸಲಾಗುತ್ತಿತ್ತು. ಅಫ್ಜಲ್ ಭಟ್ಕಳ್, ನೋಯೆಲ್ ಅಲ್ಮೇಡಾ, ಅಶ್ರಫ್ ಕೆ ಎಂ ನೇತೃತ್ವದಲ್ಲಿ ದುಬೈನಲ್ಲಿ ಫುಡ್ ಕಿಟ್ ಪೂರೈಕೆ ನಡೆದರೆ, ಶಶಿಧರ ನಾಗರಾಜಪ್ಪ, ಇಮ್ರಾನ್ ನೇತೃತ್ವದಲ್ಲಿ ಶಾರ್ಜಾದಲ್ಲಿ, ಯಶವಂತ್ ಕರ್ಕೇರಾ ಅಜ್ಮಾನ್ ನಲ್ಲಿ, ಸಿರಾಜ್ ಪರ್ಲಡ್ಕ ಅಬುಧಾಬಿಯಲ್ಲಿ, ಜಾನ್ಸನ್ ಫುಜೇರಾದಲ್ಲಿ, ಅಲ್ತಾಫ್ ಹುಸೇನ್ ರಾಸ್ ಅಲ್ ಖೈಮಾದಲ್ಲಿ ಫುಡ್ ಕಿಟ್ ಪೂರೈಕೆ ಬಹಳಷ್ಟು ವ್ಯವಸ್ಥಿತವಾಗಿ ಈಗಲೂ ನಿರಂತರವಾಗಿ ನಡೆಯುತ್ತಿದ್ದು, ಸಾವಿರಾರು ಕನ್ನಡಿಗರ ಹಸಿವನ್ನು ನೀಗಿಸಿದೆ.

ಕನ್ನಡಿಗರ ಸಮಸ್ಯೆಗಳ ಕುರಿತು ಕರ್ನಾಟಕ ಸರ್ಕಾರಕ್ಕೂ ಮನದಟ್ಟು ಮಾಡಬೇಕಾಗಿತ್ತು ಹಾಗಾಗಿ ಚಂದ್ರಶೇಖರ್ ಲಿಂಗದಹಳ್ಳಿ ಮೂಲಕ ಡಿಸಿಂ ಡಾ| ಸಿ.ಎನ್ ಅಶ್ವಥನಾರಾಯಣ್ ರೊಂದಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ, ಶೀಘ್ರವೇ ಯುಎಈಯಿಂದ ರಾಜ್ಯಕ್ಕೆ ವಿಮಾನ ಪ್ರಯಾಣ, ಅಶಕ್ತರಿಗೆ ಉಚಿತ ಕ್ವಾರಂಟೈನ್ ವ್ಯವಸ್ಥೆ, ಕೆಲಸ ಕಳೆದುಕೊಂಡ ಅನಿವಾಸಿಗಳ ಮಕ್ಕಳಿಗೆ ಉಚಿತ ವಿಧ್ಯಾಭ್ಯಾಸ, ಉದ್ಯೋಗ ಸೌಲಭ್ಯ ಮುಂತಾದ ಬೇಡಿಕೆ ಇಟ್ಟರು. ಈ ಎಲ್ಲಾ ಬೇಡಿಕೆಗೆ ಡಿಸಿಂ ಸಕಾರಾತ್ಮಕವಾಗಿ ಸ್ಪಂದಿಸಿ ಕಾರ್ಯರೂಪಕ್ಕೆ ತಂದಿದ್ದಾರೆ .

ಕೇಂದ್ರ ಸರ್ಕಾರದ ಅನಿವಾಸಿ ಭಾರತೀಯರನ್ನು ವಾಪಾಸು ಕರೆತರಲು ಉದ್ದೇಶಿಸಿ ವಿಮಾನ ಪ್ರಯಾಣದ ಮೊದಲ ಪಟ್ಟಿ ಬಿಡುಗಡೆ ಮಾಡಿದಾಗ ಕರ್ನಾಟಕಕ್ಕೆ ಒಂದೂ ವಿಮಾನವಿಲ್ಲದ್ದನ್ನು ಕಂಡು, ಕೇಂದ್ರ ಸರ್ಕಾರದಿಂದ ಕನ್ನಡಿಗರ ನಿರ್ಲಕ್ಷ್ಯತೆಯನ್ನು ಬಗ್ಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಜೊತೆ ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ಮೊದಲ ಪಟ್ಟಿಯಲ್ಲಿ ಕರ್ನಾಟಕಕ್ಕೆ ಒಂದು ವಿಮಾನವನ್ನು ಸೇರಿಸಲು ವಿದೇಶಾಂಗ ಇಲಾಖೆಗೆ ಒತ್ತಾಯಿಸಬೇಕೆಂದು ಬೇಡಿಕೆಯಿಟ್ಟಾಗ, ಸಚಿವ ಸುರೇಶ್ ಅಂಗಡಿ ಸಂಬಂಧಪಟ್ಟ ಎಲ್ಲಾ ಮಂತ್ರಿಗಳಿಗೂ, ಅಧಿಕಾರಿಗಳಿಗೂ ಕೂಡಲೇ ಪತ್ರ ಬರೆದು ಬೇಡಿಕೆ ಈಡೇರಿಸಲು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು. ಅಲ್ಲದೇ ಕೊಟ್ಟ ಮಾತಿನಂತೆ ಅಂದೇ ರಾತ್ರಿ ವಿದೇಶಾಂಗ ಸಚಿವರಿಗೆ ಪತ್ರ ಬರೆದು ಮನವಿ ಸಲ್ಲಿಸಿದರು.

ಅಷ್ಟಕ್ಕೇ ಸುಮ್ಮನಿರದೇ ಪ್ರಯತ್ನ ಮುಂದುವರೆಸಿದ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡ, ಪ್ರವೀಣ್ ಶೆಟ್ಟಿ ಮೂಲಕ ಕರ್ನಾಟಕವನ್ನು ಪ್ರತಿನಿಧಿಸುವ ಮತ್ತೊಬ್ಬ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡರನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಮಾತುಕತೆ ನಡೆಸಿ, ಗರ್ಭಿಣಿಯರು ಹಾಗೂ ವೈದ್ಯಕೀಯ ಚಿಕಿತ್ಸೆಗೆ ತೆರಳುವವರ ಬಗ್ಗೆ ವಿವರಿಸಿ, ಪರಿಸ್ಥಿತಿಯ ತೀವ್ರತೆಯನ್ನು ಅರ್ಥಮಾಡಿಸಿ ಕರ್ನಾಟಕಕ್ಕೆ ಒಂದು ವಿಮಾನ ಆಗಲೇಬೇಕು ಎಂದು ಪಟ್ಟು ಹಿಡಿದಾಗ ಅಷ್ಟೇ ಆಸಕ್ತಿಯಿಂದ ಸ್ಪಂದಿಸಿದ ಸದಾನಂದ ಗೌಡರು ಕರ್ನಾಟಕಕ್ಕೆ ಒಂದು ವಿಮಾನ ವ್ಯವಸ್ಥೆ ಮಾಡಿಯೇ ತೀರುವೆ ಎಂಬ ಗಟ್ಟಿ ಭರವಸೆ ನೀಡಿ, ಸತತವಾಗಿ ಪ್ರಯತ್ನಿಸಿ 12ನೇ ತಾರೀಕಿನಂದು ದುಬೈ ಮಂಗಳೂರು ವಿಮಾನ ಖಚಿತಪಡಿಸುವವರೆಗೂ ಜೊತೆ ನೀಡಿದರು.

ಕರ್ನಾಟಕಕ್ಕೆ ಒಂದು ವಿಮಾನ ಖಚಿತವಾದ ನಂತರ, ಎರಡನೇ ಪಟ್ಟಿಯ ಬಗ್ಗೆ ಎರಡು ವಿಮಾನ ಕರ್ನಾಟಕಕ್ಕೆ ಸೇರಿಸಬೇಕು, ಕ್ವಾರಂಟೈನ್ ವ್ಯವಸ್ಥೆ ಉಚಿತ ಮಾಡಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಕನ್ನಡಿಗಾಸ್ ಹೆಲ್ಪ್ ಲೈನ್ ಬೇಡಿಕೆ ಇಟ್ಟಿತು, ಬೇಡಿಕೆ ಆಲಿಸಿ ತಂಡಕ್ಕೆ ಭರವಸೆ ನೀಡಿ ಕೊಟ್ಟ ಮಾತಿನಂತೆ ನಡೆದಿದ್ದಾರೆ ಅದರ ಪ್ರತಿಫಲವೇ ಕರ್ನಾಟಕಕ್ಕೆ ಇಲ್ಲಿಯವರೆಗೆ 4 ವಿಮಾನ ಹಾರಾಟವಾಗಿದೆ. ಪ್ರಹ್ಲಾದ್ ಜೋಷಿ ಕನ್ನಡಿಗರಿಗಾಗಿ ನೀವು ಮಾಡುತ್ತಿರುವ ಸೇವೆ ಶ್ಲಾಘನೀಯ, ಎಲ್ಲರಿಗೂ ಮಾದರಿ, ನಿಮ್ಮ ಸೇವೆಯನ್ನು ಪ್ರಧಾನಿ ನರೇಂದ್ರ ಮೋದಿಯವರ ಗಮನಕ್ಕೂ ತರುವೆ ಎಂದು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ನಮ್ಮ ತಂಡದ ಈ ಸಾಧನೆಯಲ್ಲಿ ಪ್ರತಿಯೊಬ್ಬ ಸದಸ್ಯ ಸಮಾನವಾದ ಪಾಲುದಾರರು, ಇಲ್ಲಿಯ ವರೆಗೆ ಸುಮಾರು 6000 ಜನರಿಗೆ ಆಗುವಷ್ಟು ಆಹಾರ, ಈದ್ ಅಲ್ ಫಿತ್ರ್ ಗೆ 400 ಸ್ಪೆಷಲ್ ಆಹಾರ, 500 ಜನರಿಗೆ ಊರಿಗೆ ತೆರಳಲು ಕಾನ್ಸುಲೇಟ್ ನೊಂದಿಗೆ ಚರ್ಚಿಸಿ ಅವಕಾಶ, ಸುಮಾರು 250 ಜನರಿಗೆ ಮೆಡಿಕಲ್ ಸಹಾಯ 200 ಜನರಿಗೆ ವಿವಿದ ಕಾನೂನು ಸಲಹೆ ಮತ್ತು ಇನ್ನಿತರೆ ಹಲವಾರು ರೀತಿಯ ಸಹಾಯ ಮಾಡಿರುವ ಕೀರ್ತಿ ಕನ್ನಡಿಗಾಸ್ ಹೆಲ್ಪ್ ಲೈನ್ ತಂಡಕ್ಕಿದೆ.

ಕಾನ್ಸುಲೇಟ್ ಮತ್ತು ಸರ್ಕಾರದೊಂದಿಗೆ ಪತ್ರ ಬರೆಯುವ ಕೆಲಸವನ್ನು ಪ್ರವೀಣ್ ಶೆಟ್ಟಿ ಹಾಗೂ ನವೀದ್ ಮಾಗುಂಡಿ ಅಚ್ಚುಕಟ್ಟಾಗಿ ಮಾಡಿದ್ದಾರೆ, ಚಂದ್ರಶೇಖರ್ ಲಿಂಗದಹಳ್ಳಿಯವರು ಕೇಂದ್ರ ಮತ್ತು ರಾಜ್ಯ ಸಚಿವರನ್ನು ನಿರಂತರ ಸಂಪರ್ಕಿದಲ್ಲಿದ್ದರು. ನಾವು ಫುಡ್ ಕಿಟ್ ನೀಡುವಾಗ ಯಾವುದೇ ಫೋಟೋ ತೆಗೆಯೋದಿಲ್ಲ, ಅವರ ಮಾಹಿತಿಯನ್ನು ಸಾರ್ವಜನಿಕಗೊಳಿಸಿ ಮುಜುಗರಗೊಳಿಸಲ್ಲ, ಎಲ್ಲಿಯವರೆಗೆ ಅವಶ್ಯಕತೆ ಇದೆಯೋ ಅಲ್ಲಿಯವರೆಗೂ ನಮ್ಮ ಕನ್ನಡಿಗಾಸ್ ಹೆಲ್ಪ್ ಲೈನ್ ತಮ್ಮ ಸೇವೆಯನ್ನು ಮುಂದುವರೆಸಲಿದೆ.

Comments are closed.