ಕರಾವಳಿ

ಕೊರೋನಾ ಭೀತಿಯಿದ್ದರೂ ಜನರಿಗೆ ಕಲುಷಿತ ನೀರು ಪೂರೈಸಿದ ಸಿದ್ದಾಪುರ ಗ್ರಾ.ಪಂ ವಿರುದ್ಧ ಆಕ್ರೋಷ!

Pinterest LinkedIn Tumblr

ಕುಂದಾಪುರ: ಪಂಚಾಯತ್ ಸದಸ್ಯರೊಬ್ಬರು ಸಾರ್ವಜನಿಕರಿಗೆ ಕಲುಷಿತ ನೀರು ವಿತರಿಸಿ ಸರ್ಕಾರಿ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಸೋಮವಾರ ವಂಡ್ಸೆ ಯೂತ್ ಕಾಂಗ್ರೆಸ್ ಸಿದ್ದಾಪುರ ಗ್ರಾಮಪಂಚಾಯತ್‌ಗೆ ಮುತ್ತಿಗೆ ಹಾಕಿ ಪಂಚಾಯತ್ ಅಭಿವೃದ್ದಿ ಅಧಿಕಾರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ.

ಕಾರೆಬೈಲ್ ಪ್ರದೇಶದಲ್ಲಿನ ವಾರಾಹಿ ಕಾಲುವೆಯಿಂದ ನೀರನ್ನು ಲಿಫ್ಟ್ ಮಾಡಿ ಅಲ್ಲಿಂದ ನೇರವಾಗಿ ಟ್ಯಾಂಕರ್ ಮೂಲಕ ಗ್ರಾಮಪಂಚಾಯತ್ ವಿವಿಧ ಭಾಗಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಸರ್ಕಾರಿ ಅನುದಾನವನ್ನು ಸದುಪಯೋಗಪಡಿಸಿಕೊಂಡು ಜನರಿಗೆ ಶುದ್ದ ಕುಡಿಯುವ ನೀರನ್ನು ಪೂರೈಸಬೇಕಿದ್ದ ಸ್ಥಳಿಯಾಡಳಿತ ಶುದ್ದೀಕರಿಸದ ನೀರನ್ನು ಜನರಿಗೆ ಕೊಟ್ಟು ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಇದುವರೆಗೂ ಪ್ರಯೋಜನವಾಗಿಲ್ಲ. ಕುಡಿಯುವ ನೀರಿನ ಸರಬರಾಝಿನಲ್ಲಿ ಭಾರೀ ಅವ್ಯವಹಾರ ನಡೆದಿದ್ದು, ಪಂಚಾಯತ್ ಸದಸ್ಯರೊಬ್ಬರು ಈ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಕೂಡಲೇ ಈ ಬಗ್ಗೆ ತನಿಖೆ ನಡೆಸಿ ಯಾರು ಟೆಂಡರ್ ವಹಿಸಿಕೊಂಡಿದ್ದಾರೋ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಯೂತ್ ಕಾಂಗ್ರೆಸ್ ನಿಯೋಗ ಆಗ್ರಹಿಸಿದೆ. ಐದು ದಿನಗಳ ಕಾಲ ಕಾಲಾವಕಾಶ ನೀಡುತ್ತೇವೆ. ಕಲುಷಿತ ನೀರು ಪೂರೈಸಿರುವ ವಿಡಿಯೋ ದೃಶ್ಯವಾಳಿ ನಮ್ಮ ಬಳಿ ಇದೆ, ಈ ಬಗ್ಗೆ ತನಿಖೆ ನಡೆಸಿ ಯಾರು ಕಲುಷಿತ ನೀರು ಸರಬರಾಜು ಮಾಡಿದ್ದಾರೊ ಅವರ ವಿರುದ್ದ ಕಾನೂನುಕ್ರಮ ಜರುಗಿಸಬೇಕು. ಇಲ್ಲವಾದಲ್ಲಿ ಬೈಂದೂರು ಯೂತ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸುತ್ತೇವೆ ಎಂದು ವಂಡ್ಸೆ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಪೂಜಾರಿ ಕರ್ಕಿ ಹಾಗೂ ಸ್ಥಳೀಯ ಮುಖಂಡ ಸುದರ್ಶನ್ ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ನೀರು ಪೂರೈಸಿದ ಟೆಂಪೋ ಚಾಲಕನನ್ನು ಪಂಚಾಯತ್‌ಗೆ ಕರೆಸಿದ ಯೂತ್ ಕಾಂಗ್ರೆಸ್ ಪದಾಧಿಕಾರಿಗಳು ಪಿಡಿ‌ಓ ಸಮ್ಮುಖದಲ್ಲೇ ಅವ್ಯವಹಾರಗಳನ್ನು ಬಯಲಿಗೆಳೆದಿದ್ದಾರೆ. ಈ ವೇಳೆಯಲ್ಲಿ ಮಾಹಿತಿ ನೀಡಿದ ಟೆಂಪೋ ಚಾಲಕ ಪುಂಡಲೀಕ, ಒಂದು ದಿನ ಮಾತ್ರ ಬೋರ್‌ವೆಲ್ ನೀರನ್ನು ಪೂರೈಸಿದ್ದು, ಬಿಟ್ಟರೆ ಉಳೆದೆಲ್ಲಾ ದಿನವೂ ವಾರಾಹಿ ಕಾಲುವೆಯ ನೀರನ್ನೇ ಜನರಿಗೆ ಸರಬರಾಜು ಮಾಡಲಾಗಿದೆ. ಜನರಿಂದ ದೂರುಗಳು ಬಂದ ಕೂಡಲೇ ಎರಡು ದಿನ್ ಬಾವಿಯ ನೀರನ್ನು ಪೂರೈಸಲಾಗಿದೆ. ಕಾಲುವೆ ನೀರನ್ನು ನೇರವಾಗಿ ಸರಬರಾಜು ಮಾಡಿರುವ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ನನ್ನ ವಿರುದ್ದವೇ ಆರೋಪಗಳನ್ನು ನಡೆದ್ದಾರೆ. ನಾನೇ ವಿಡಿಯೋ ಮಾಡಿರುವುದಾಗಿ ಬಿಂಬಿಸಿ ನನಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ಟೆಂಪೋದಲ್ಲಿ ನೀರು ಸರಬರಾಜು ಮಾಡಿರುವ ಚಾಲಕ ಪುಂಡಲೀಕ ಪಂಚಾಯತ್ ಸದಸ್ಯ ಶೇಖರ್ ಕುಲಾಲ್ ಅವರ ಮೇಲೆ ಆರೋಪ ಹೊರಿಸಿದ್ದಾರೆ.

ಶುದ್ದ ಕುಡಿಯುವ ನೀರಿನ ಅವ್ಯವಹಾರದ ಕುರಿತು ಪ್ರತಿಕ್ರಿಯೆ ನೀಡಿರುವ ಸಿದ್ದಾಪುರ ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಇದುವರೆಗೂ ಕಲುಷಿತ ನೀರು ಪೂರೈಸಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದಿಲ್ಲ. ಇದು ಶೇಖರ್ ಕುಲಾಲ್ ಅವರ ಟೆಂಪೋ ಚಾಲಕ ಮತ್ತು ಅವರ ನಡುವೆ ನಡೆದಿರುವ ಗಲಾಟೆ ಈ ಎಲ್ಲಾ ಆರೋಪಗಳಿಗೆ ಕಾರಣವಾಗಿದೆ. ಒಂದು ವೇಳೆ ಕಲುಷಿತ ನೀರನ್ನು ಪೂರೈಸಿದ್ದೇ ಆದಲ್ಲಿ ಆ ಬಿಲ್ ಅನ್ನು ತಡೆಹಿಡಿಯುತ್ತೇವೆ. ಈ ಬಗ್ಗೆ ಕ್ರಮ ಜರುಗಿಸಲು ತಾ.ಪಂ ಇ‌ಒ ಹಾಗೂ ಜಿ.ಪಂ ಸಿ‌ಎಸ್ ಅವರ ಜೊತೆ ಮಾತನಾಡುತ್ತೇನೆ. ಯಾವುದೇ ಪಕ್ಷದವರಾಗಿರಲಿ. ಕುಡಿಯಲು ಕಲುಷಿತ ನೀರು ಪೂರೈಸುವುದು ಅಕ್ಷಮ್ಯ. ಆರೋಪ ತನಿಖೆಯಲ್ಲಿ ಸಾಬೀತಾದರೆ ಅವರ ವಿರುದ್ದ ಕ್ರಮ ಜರುಗಿಸುತ್ತೇವೆ ಎಂದಿದ್ದಾರೆ.

ಮೇ೧ ರಿಂದ ಜೂನ್ ೩ರ ತನಕ ಶುದ್ದ ಕುಡಿಯುವ ನೀರನ್ನು ಪೂರೈಸುವ ನಿಟ್ಟಿನಲ್ಲಿ ತ್ಯಾಗರಾಜ್ ಶೆಟ್ಟಿ ಎಂಬವರು ಟೆಂಡರ್ ವಹಿಸಿಕೊಂಡಿದ್ದು, ಸಿದ್ದಾಪುರ ಪಂಚಾಯತ್ ಸದಸ್ಯ ಶೇಖರ್ ಕುಲಾಲ್‌ಗೆ ಸಬ್ ಕಾಂಟ್ರಾಕ್ಟ್ ನೀಡಿದ್ದಾರೆ. ಕಲುಷಿತ ನೀರು ಪೂರೈಸಿರುವ ಆರೋಪ ಹೊತ್ತಿರುವ ಬಿಜೆಪಿ ಪಂಚಾಯತ್ ಸದಸ್ಯ ಶೇಖರ್ ಕುಲಾಲ್ ವಿರುದ್ದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.

Comments are closed.