
ಟಿಕ್‌ಟಾಕ್ ಗೀಳಿಗೆ ಒಳಗಾಗಿರುವ ಇಂದಿನ ಯುವ ಪೀಳಿಗೆ ಅದೇ ಗೀಳಿಗೆ ಬಲಿಯಾಗಿರುವ ಅನೇಕ ಸುದ್ದಿಗಳನ್ನು ನಾವು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ, ತುಮಕೂರು ಜಿಲ್ಲೆಯಲ್ಲಿ ಓರ್ವ ಯುವಕ ಸಾವಿನ ಅನುಭವ ಹೇಗಿರುತ್ತೆ? ಎಂದು ಪರೀಕ್ಷಿಸಲು ಹೋಗಿ ಕೊನೆಗೆ ಅದೇ ಸಾವಿನ ಮನೆ ಸೇರಿದ್ದಾನೆ.
ತುಮಕೂರು ಜಿಲ್ಲೆ, ಕೊರಟಗೆರೆ ತಾಲೂಕಿನ ಗೌರಗಾನಹಳ್ಳಿ ಗ್ರಾಮದ ಧನಂಜಯ್ (26) ಮೃತ ದುರ್ದೈವಿ. ಈತ ಭಾನುವಾರ ಸಾವಿನ ಅನುಭವ ಹೇಗಿರುತ್ತದೆ ಎಂದು ತಿಳಿದುಕೊಳ್ಳುವ ಸಲುವಾಗಿ ವಿಷ ಸೇವಿಸಿ ಅದನ್ನು ಟಿಕ್‌ಟಾಕ್‌ನಲ್ಲಿ ಲೈವ್ ವಿಡಿಯೋ ಮಾಡಿದ್ದಾನೆ.
ಅಲ್ಲದೆ, ವಿಡಿಯೋ ಮಾಡುವ ಮುನ್ನ, “ಜೀವನದಲ್ಲಿ ಒಂದು ಸಲ ಸಾಯಬೇಕು. ಅದು ಹೇಗಿರುತ್ತದೆ ಎಂಬ ಅನುಭವ ಪಡೆಯಬೇಕು. ನಾನು ಸಾಯುವುದಕ್ಕೆ ಪ್ರಯತ್ನ ಪಡುತ್ತಿದ್ದೇನೆ. ಅದನ್ನು ನೀವೆಲ್ಲರೂ ನೋಡಿ” ಎಂದು ಹೇಳಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈತ ಸಾವಿನ ಅನುಭವ ಪಡೆಯುವ ಸಲುವಾಗಿ ಕ್ರಿಮಿನಾಶಕ ಸೇವಿಸಿದ್ದಾನೆ. ಪರಿಣಾಮ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಿದ್ದಾನೆ. ಆದರೆ, ಈತ ಕೇವಲ ಸಾವಿನ ಅನುಭವ ಪಡೆಯುವುದಕ್ಕಾಗಿ ಮಾತ್ರ ವಿಷ ಸೇವಿಸಿದನೇ? ಅಥವಾ ನಿಜಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವ ಸಲುವಾಗಿ ಈ ಕೆಲಸಕ್ಕೆ ಮುಂದಾದನೇ? ಎಂಬುದು ಈವರೆಗೆ ತಿಳಿದುಬಂದಿಲ್ಲ.
ಮೃತ ವ್ಯಕ್ತಿ ಕೇವಲ 4 ತಿಂಗಳ ಹಿಂದಷ್ಟೆ ಮದುವೆಯಾಗಿದ್ದ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Comments are closed.