ಅಂತರಾಷ್ಟ್ರೀಯ

ದುಬೈನಲ್ಲಿ ಭಾರೀ ಮಳೆ: ಬುರ್ಜ್ ಖಲೀಫಾದ ತುದಿಗೆ ಹೊಡೆದ ಮಿಂಚು…!

Pinterest LinkedIn Tumblr


ದುಬೈನಲ್ಲಿ ಶುಕ್ರವಾರ ಸಂಜೆ ಭಾರೀ ಮಳೆ ಸುರಿದಿತ್ತು. ಈ ಮಳೆ ವಾರಾಂತ್ಯದವರೆಗೂ ಮುಂದುವರಿದಿತ್ತು. ಹೇಳಿ ಕೇಳಿ ದುಬೈ ಉತ್ತಮ ಶಾಪಿಂಗ್ ಮಾಲ್, ಅದ್ಭುತ ಕಟ್ಟಡಗಳಿಗೆ ಹೆಸರುವಾಸಿ. ಆದರೆ, ಮೊನ್ನೆ ಮಳೆ ಜೊತೆಗೆ ಮಿಂಚು ಕೂಡಾ ಕಾಣಿಸಿಕೊಳ್ಳಲು ಶುರುವಾಗುತ್ತಿದ್ದಂತೆಯೇ ಎಲ್ಲರೂ ತಮ್ಮ ತಮ್ಮ ಗೂಡು ಸೇರುತ್ತಿದ್ದರು. ಇದೇ ವೇಳೆ, ವಿಶ್ವದ ಅತೀ ಎತ್ತರದ ಮತ್ತು ಅಷ್ಟೇ ಸುಂದರವಾದ ಬುರ್ಜ್ ಖಲೀಫಾದ ತುದಿಗೂ ಮಿಂಚು ಹೊಡೆದಿತ್ತು. ಇದು ಈಗ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಮಿಂಚಿನ ಬಳ್ಳಿಯನ್ನು ಸುಂದರವಾಗಿ ಸೆರೆ ಹಿಡಿಯುವುದು ಸುಲಭವೇನಲ್ಲ. ಸರಿಯಾದ ಸಮಯಕ್ಕೆ ಕಾದು, ಲೆನ್ಸನ್ನು ಸೂಕ್ತ ರೀತಿಯಲ್ಲಿ ಸೆಟ್ ಮಾಡಿಕೊಂಡು ಕಾದರೂ ಒಂದೊಂದು ಸಲ ಈ ಫೋಟೋ ಮಿಸ್ ಆಗಿ ಬಿಡುತ್ತದೆ. ಆದರೆ, ಬುರ್ಜ್ ಖಲೀಫಾದಲ್ಲಿ ಇಂತಹದ್ದೊಂದು ಫೋಟೋವನ್ನು ಹಲವರು ಕ್ಲಿಕ್ಕಿಸಿದ್ದಾರೆ.

ದುಬೈನ ಯುವರಾಜ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರೂ ಈ ಫೋಟೋವನ್ನು ಸೆರೆ ಹಿಡಿದಿದ್ದಾರೆ. ಈ ಫೋಟೋವನ್ನು ಇವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸದ್ಯ ಈ ಫೋಟೋಗಳು ಈಗ ಸಖತ್ ವೈರಲ್ ಆಗುತ್ತಿವೆ. ಇವರೆಷ್ಟೇ ಅಲ್ಲದೆ, ಖ್ಯಾತ ಛಾಯಾಗ್ರಾಹಕ ಜೊಹೈಬ್ ಅಂಜುಮ್ ಅವರು ಕೂಡಾ ತಮ್ಮ ಕ್ಯಾಮೆರಾದಲ್ಲಿ ಇಂತಹದ್ದೇ ಫೋಟೋ, ವಿಡಿಯೋವನ್ನು ಸೆರೆ ಹಿಡಿದಿದ್ದಾರೆ. ಜೊತೆಗೆ, ಏಳು ವರ್ಷದಿಂದ ಈ ಕ್ಷಣಕ್ಕಾಗಿ ಕಾಯುತ್ತಿದೆ ಎಂದು ಅಂಜುಮ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಇದೇ ರೀತಿ ಹಲವರು ಉತ್ಸಾಹಿಗಳು ಬೇರೆ ಬೇರೆ ಆಂಗಲ್‌ನಲ್ಲಿ ಈ ಕ್ಷಣವನ್ನು ಸೆರೆ ಹಿಡಿದಿದ್ದಾರೆ. ಈ ಮೂಲಕ ಮಿಂಚಿನ ಭಯದ ನಡುವೆಯೂ ಖುಷಿಪಟ್ಟಿದ್ದಾರೆ.

Comments are closed.