ಕರ್ನಾಟಕ

“ಅಧಿಕಾರಕ್ಕಾಗಿ ಅಂಟಿಕೊಳ್ಳುವವನಲ್ಲ, ರಾಜೀನಾಮೆಗೆ ಸಿದ್ಧ’: ಯಡಿಯೂರಪ್ಪ

Pinterest LinkedIn Tumblr


ದಾವಣಗೆರೆ: “ರಾಜ್ಯ ಸರ್ಕಾರ ಇನ್ನೂ ಮೂರು ವರ್ಷ ಯಾವ ರೀತಿ ನಡೆಯಬೇಕು ಎಂದು ಸ್ವಾಮೀಜಿಗಳು ಸಲಹೆ ನೀಡಿದರೆ ತಲೆಬಾಗುತ್ತೇನೆ. ಬೇಡ ಎಂದರೆ ನಾಳೆಯೇ ರಾಜೀನಾಮೆ ಕೊಟ್ಟು ಮನೆಗೆ ಹೋಗಲು ಸಿದ್ಧ. ನಾನೇನು ಕುರ್ಚಿಗೆ ಅಂಟಿಕೊಂಡು ಕುಳಿತುಕೊಳ್ಳುವವನಲ್ಲ’ ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಗುಡುಗಿದರು.

ಮಂಗಳವಾರ ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಹರ ಜಾತ್ರಾ ಮಹೋತ್ಸವದ ಬೆಳ್ಳಿ ಬೆಡಗು ಉದ್ಘಾಟನಾ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ ಮಾತನಾಡುವುದಕ್ಕೂ ಮುನ್ನ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನದಲ್ಲಿ, ಸಮಾಜದ ಮೂವರಿಗೆ ಸಚಿವ ಸ್ಥಾನ ಕೊಡಲೇಬೇಕು. ಪ್ರಥಮಾದ್ಯತೆಯಾಗಿ ಮುರುಗೇಶ ನಿರಾಣಿಯವರಿಗೆ ನೀಡಲೇಬೇಕು. ನೀವೇನಾದರೂ ಕೈ ಕೊಟ್ಟಲ್ಲಿ ಇಡೀ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ನಿಮಗೆ ಕೈ ಕೊಡುತ್ತದೆ ಎಂದಾಗ, ಯಡಿಯೂರಪ್ಪ ಸಭೆಯಿಂದ ಹೊರ ನಡೆಯುವುದಾಗಿಯೂ ಹೇಳಿದ್ದರು.

ನಂತರ ಮಾತನಾಡಿದ ಯಡಿಯೂರಪ್ಪ, ಸ್ವಾಮೀಜಿಯವರು ಬಹಳ ಒಳ್ಳೆಯ ಮಾತನ್ನಾಡಿದ್ದಾರೆ. ನನ್ನ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಳ್ಳಬೇಕು. 17 ಜನ ಶಾಸಕರು, ಮಂತ್ರಿಗಳಾಗಿದ್ದವರು ರಾಜೀನಾಮೆ ಕೊಟ್ಟು 4 ತಿಂಗಳು ವನವಾಸ ಅನುಭವಿಸದೇ ಹೋಗಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವುದಕ್ಕೆ ಆಗುತ್ತಿರಲಿಲ್ಲ ಎಂದರು.

ಅವರ ತ್ಯಾಗ ಮತ್ತು ಪಂಚಮಸಾಲಿ ಸಮಾಜದ ಆಶೀರ್ವಾದದಿಂದ ಮುಖ್ಯಮಂತ್ರಿ ಆಗಿದ್ದೇನೆಂಬ ಅರಿವು ನನಗಿದೆ. 17 ಜನರು ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ಮುಖ್ಯಮಂತ್ರಿ ಆಗಿರುವ ಋಣ ತೀರಿಸುವ ಕಳಕಳಿಯೂ ಇದೆ. ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಬೇಕಾದರೆ ಎಲ್ಲಾ ಸ್ವಾಮೀಜಿಗಳನ್ನು ಸೇರಿಸಿ ಸಭೆ ನಡೆಸಿ, ನನ್ನ ಪರಿಸ್ಥಿತಿಯನ್ನು ತಿಳಿಸುತ್ತೇನೆ. ನೀವು ಏನು ಸಲಹೆ ನೀಡುತೀ¤ರೋ ಅದಕ್ಕೆ ತಲೆ ಬಾಗಲು ಸಿದ್ಧ ಎಂದರು.

Comments are closed.