ರಾಷ್ಟ್ರೀಯ

ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಗೆ ನುಗ್ಗಿ ನವಜಾತ ಶಿಶುವನ್ನು ಕಚ್ಚಿಕೊಂದ ಬೀದಿನಾಯಿ!

Pinterest LinkedIn Tumblr


ಲಕ್ನೋ: ಖಾಸಗಿ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಒಳಗೆ ನುಗ್ಗಿದ ಬೀದಿ ನಾಯಿ ನವಜಾತ ಶಿಶುವನ್ನು ಕಚ್ಚಿ ಕೊಂದು ಹಾಕಿರುವ ಹೃದಯವಿದ್ರಾವಕ ಘಟನೆ ಉತ್ತರಪ್ರದೇಶದ ಫಾರೂಖಾಬಾದ್ ನಲ್ಲಿ ನಡೆದಿದೆ.

ಆಘಾತಕಾರಿ ಘಟನೆ:

ರವಿ ಕುಮಾರ್ ಎಂಬವರು ಗರ್ಭಿಣಿ ಪತ್ನಿ ಕಾಂಚನಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ಸಿ ಸೆಕ್ಷನ್ ಆಪರೇಷನ್ ಥಿಯೇಟರ್ ನೊಳಗೆ ಕರೆದೊಯ್ದಿದ್ದರು. ಕಾಂಚನ ಗಂಡು ಮಗುವಿಗೆ ಜನ್ಮ ನೀಡಿದ್ದು, ಬಳಿಕ ಬಾಣಂತಿಯನ್ನು ಬೇರೆ ವಾರ್ಡ್ ಗೆ ಸ್ಥಳಾಂತರಿಸಿದ್ದರು. ಆದರೆ ಮಗುವನ್ನು ಆಪರೇಷನ್ ಥಿಯೇಟರ್ ನೊಳಗೆ ಇರಿಸಿದ್ದರು.

ಆದರೆ ಒಂದು ಗಂಟೆ ನಂತರ ಮಗು ಸಾವನ್ನಪ್ಪಿರುವುದಾಗಿ ಕುಟುಂಬದ ಸದಸ್ಯರಿಗೆ ನರ್ಸ್ ತಿಳಿಸಿರುವುದಾಗಿ ಮಗುವಿನ ತಂದೆ ರವಿ ಆರೋಪಿಸಿದ್ದಾರೆ.

ಏತನ್ಮಧ್ಯೆ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಬಳಿ ಹೋದಾಗ ನರ್ಸ್ ಹಾಗೂ ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ಹೊರಗೋಡಿಸಲು ಹರಸಾಹಸ ಪಡುತ್ತಿದ್ದರು. ಸಿಬ್ಬಂದಿಯನ್ನು ತಳ್ಳಿ ತಂದೆ ಮತ್ತು ಕುಟುಂಬದ ಸದಸ್ಯರು ಆಪರೇಷನ್ ಥಿಯೇಟರ್ ಒಳಗೆ ಹೋದಾಗ ಮಗು ನೆಲದ ಮೇಲೆ ಬಿದ್ದಿದ್ದು, ಕುತ್ತಿಗೆಯ ಮಾಂಸವನ್ನು ನಾಯಿ ಕಚ್ಚಿ ತಿಂದಿರುವುದಾಗಿ ತಿಳಿಸಿದ್ದಾರೆ.

ನವಜಾತ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಡಾ.ಮೋಹಿತ್ ಗುಪ್ತಾ ಹಾಗೂ ಕೆಲವು ಸಿಬ್ಬಂದಿಗಳ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಆಸ್ಪತ್ರೆಯ ವೈದ್ಯರ ಮೇಲೆ ಎಫ್ ಐಆರ್ ದಾಖಲಿಸಿ, ಆಸ್ಪತ್ರೆಗೆ ಬೀಗ ಹಾಕುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮಾನವೇಂದ್ರ ಸಿಂಗ್ ಆದೇಶ ನೀಡಿರುವುದಾಗಿ ವರದಿ ವಿವರಿಸಿದೆ.

Comments are closed.