ಗಲ್ಫ್

ಗಲ್ಫ್ ನಾಡಿನ ಕಲ್ಪವೃಕ್ಷ “ಖರ್ಜೂರ” ಒಂದು ಪಕ್ಷಿನೋಟ….

Pinterest LinkedIn Tumblr

“ಗಲ್ಫ್” ಎಂದರೆ ಮನಸ್ಸಿನಲ್ಲಿ ಮೂಡುವುದು ಮರುಭೂಮಿಯ ಚಿತ್ರಣ. ಅರೇಬಿಕ್ ಭಾಷೆಯನ್ನಡುವ ಅರಬ್ಬರು. ಗಲ್ಫ್ ನಾಡಿಗೆ ಆಗಮಿಸುವ ಪ್ರವಾಸಿಗರಿಗೆ ಆಕಾಶದೆತ್ತರದಿಂದಲೇ ವಿಹಂಗಮನ ನೋಟದಲ್ಲಿ ಕಾಣುವ ದೃಶ್ಯ ವಿಶಾಲ ಮರುಭೂಮಿ, ಸಾವಿರಾರು ಏಕರೆಗಳಲ್ಲಿ ಬೆಳೆದು ನಿಂತಿರುವ ಖರ್ಜೂರ ಮರಗಳ ವನರಾಶಿ. ಮರಳುಗಾಡನ್ನು ಹಸಿರು ಭೂಮಿಯನ್ನಾಗಿ ಪರಿವರ್ತಿಸಿದ ಜ್ಞಾನ ವಿಜ್ಞಾನದ ಕ್ರಿಯಾರೂಪದ ಅಧುನಿಕ ನಗರ. ಲೋಕವಿಖ್ಯಾತ ವಾಣಿಜ್ಯ ಕೇಂದ್ರ. ವಿಸ್ಥಾರವಾದ ನವ್ಯನವೀನ ಏಕಮುಖ ಅಷ್ಟ ಚಲನಾ ಮಾರ್ಗವಿರುವ ರಸ್ತೆಗಳು, ದೇಶದಾದ್ಯಂತ ಹರಡಿ ಕೊಂಡಿರುವ ರಾಷ್ಟ್ರೀಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಸಾಲು ಸಾಲು ಖರ್ಜೂರ ಮರಗಳು ಹಾಗೂ ಬುಡಗಳ ಸುತ್ತಲೂ ವಿವಿಧ ರೀತಿಯ ಹೂವಿನ ಗಿಡಗಳು ಅರಬ್ಬರ ಸೌಂಧರ್ಯ ಪ್ರಜ್ಞೆಗೆ ಸಾಕ್ಷಿಯಾಗಿದೆ.

ಖರ್ಜೂರ ಮರದ ಪಾವಿತ್ರ್ಯತೆ

ಅರಬ್ಬರ ನಾಡಿನಲ್ಲಿ ಖರ್ಜೂರ ಮರವನ್ನು ಪೂಜನೀಯ ಭಾವನೆಯಿಂದ ನೋಡಲಾಗುತ್ತದೆ. ಪವಿತ್ರ ಕುರಾನ್ ನಲ್ಲಿ ಖರ್ಜೂರ ಮರ ಸ್ವರ್ಗಲೋಕದಲ್ಲಿನ ಮರವೆಂದು ಉಲ್ಲೇಕವಿದೆ. ಅರಬ್ಬರ ನಾಡಿನ ಪ್ರಾಚಿನ ಕಾಲದಲ್ಲಿ ಖರ್ಜೂರ ಹಣ್ಣು ಪ್ರಮುಖ ಆಹಾರವಾಗಿತ್ತು. ಪ್ರವಾದಿಗಳು ಖರ್ಜೂರ ಮರಕ್ಕೆ ಒರಗಿಕೊಂಡು ಪ್ರವಚನ ನೀಡುತಿದ್ದರು. ಪವಿತ್ರ ರಂಜಾನ್ ಉಪವಾಸದ ಮಾಸದಲ್ಲಿ ಪ್ರತಿದಿನ ಉಪವಾಸ ಬಿಡುವಾಗ ಖರ್ಜೂರ ಹಣ್ಣು ತಿಂದು ನಂತರದ ಪ್ರಾರ್ಥನೆಯಲ್ಲಿ ತೊಡಗುತ್ತಾರೆ. ಅರಬ್ ನಾಡಿನ ಸರ್ಕಾರದ ಕಾನೂನಿನಲ್ಲಿ ಖರ್ಜೂರ ಮರ ಮತ್ತು ಇನ್ನಿತರ ಮರಗಳನ್ನು ಕಡಿಯುವುದು ನಿಷೇಧಿಸಲಾಗಿದೆ. ಕಾನೂನು ಬಾಹಿರವಾಗಿ ಮರಕಡಿಯುವರಿಗೆ ಜೈಲುಶಿಕ್ಷೆಯೊಂದಿಗೆ ಕಠಿನ ಶಿಕ್ಷೆ ವಿಧಿಸಲಾಗುತ್ತದೆ. ಅರಬ್ ನಾಗರಿಕರಿಗೆ ಹಸಿರು ಮತ್ತು ಮರಗಿಡಗಳ ಮೇಲೆ ಅಪಾರ ಪ್ರೀತಿ ಇದೆ.

ಖರ್ಜೂರ ಮರಗಳ ಇತಿಹಾಸದ ಬಗ್ಗೆ…

ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ಖರ್ಜೂರ ಮರಗಳಲ್ಲಿ ಕೊಯಿಲಿಗೆ ಸಿದ್ಧವಾಗಿ ತೂಗಾಡುತ್ತಿರುವ ಹಣ್ಣಿನ ಗೊಂಚಿಲುಗಳನ್ನು ಕಂಡಾಗ ನೋಡುಗರ ಬಾಯಿಯಲ್ಲಿ ನಿರೂರಿಸುತ್ತದೆ. ಖರ್ಜೂರ ಮರಗಳು ಸಾವಿರಾರು ವರ್ಷಗಳಿಂದ ಮರುಭೂಮಿ ಹಾಗು ಉಷ್ಣ ಹವೆ ಇರುವ ಈಜಿಪ್ಟ್, ಇರಾನ್, ಸೌಧಿ ಅರೇಬಿಯಾ, ಅರಬ್ ಸಂಯುಕ್ತ ಸಂಸ್ಥಾನ, ಅಲ್ಜಿರಿಯಾ, ಸುಡಾನ್, ಓಮಾನ್, ಲಿಬಿಯಾ, ಟುನೇಶಿಯಾ, ಇರಾಕ್ ಮತ್ತು ಭಾರತ, ಪಾಕಿಸ್ಥಾನದಲ್ಲಿ ಬೆಳೆಯುತ್ತದೆ.

ಖರ್ಜೂರ ಮರ ಹೆಚ್ಚಾಗಿ ಮಳೆ ಬಿಳುವ ಪ್ರದೇಶಗಳಲ್ಲಿ ಬೆಳೆಯುದಿಲ್ಲ. ಖರ್ಜೂರ ಮರಕ್ಕೆ ಬಿಸಿಲಿನ ಬೇಗೆ ಹೆಚ್ಚು ಬೇಕಾಗಿರುವುದರಿಂದ ಮರಳುಗಾಡಿನಲ್ಲಿ ಸೊಂಪಾಗಿ ಬೆಳೆಯುತ್ತದೆ. ಕನಿಷ್ಟ ನೀರಿನ ತೇವಾಂಶ್ವನ್ನು ಪಡೆದು ಮರಗಳು ಹಲವಾರು ವರ್ಷಗಳು ಬೆಳೆದು ನಿಂತು ಫಲ ಕೊಡುತ್ತಿರುತ್ತದೆ.

ಖರ್ಜೂರ ಮರ ಸುಮಾರು ಹದಿನೈದು ಮೀಟರಿನಿಂದ ಇಪ್ಪತೈದು ಮೀಟರಿನವರೆಗೆ ಬೆಳೆಯುತ್ತದೆ. ಖರ್ಜೂರ ಮರದ ಗರಿ ಮೂರರಿಂದ ಐದು ಮೀಟರಿನವರೆಗೆ ಉದ್ದವಿರುತ್ತದೆ. ಒಂದು ಗರಿಯಲ್ಲಿ ನೂರ ಐವತ್ತು ಎಲೆಗಳಿದ್ದು ಮೂವತ್ತು ಸೆ.ಮಿ. ಉದ್ದ ಎರಡು ಸೆ.ಮಿ. ಅಗಲವಿರುತ್ತದೆ.

ಯು.ಎನ್.ಒ. ಪ್ರಥಮ ಬಾರಿಗೆ 1959ರಲ್ಲಿ ಖರ್ಜೂರ ಸಮ್ಮೇಳನ ಆಯೋಜಿಸಿ, ಖರ್ಜೂರ ಬೆಳೆ ಬೆಳೆಯಲು ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕರೆ ನೀಡಲಾಯಿತು.

ಖರ್ಜೂರ ಶಶಿಗಳನ್ನು ನರ್ಸರಿಗಳಲ್ಲಿಗಳಲ್ಲಿ ಬಿತ್ತನೆ ಮೂಲಕ ವೈಜ್ಞಾನಿಕವಾಗಿ ಅಭಿವೃದ್ಧಿ ಗೊಳಿಸಲಾಗುತ್ತದೆ. ವಿವಿಧ ಹಂತಗಳಲ್ಲಿ ಆರೈಕೆ ಮಾಡಿ ನಂತರ ತೋಪುಗಳಲ್ಲಿ ನೆಡಲಾಗುತ್ತದೆ.

ಖರ್ಜೂರ ಮರಗಳಲ್ಲಿ ಗಂಡು ಮರ ಹೆಣ್ಣು ಮರಗಳಿರುತ್ತದೆ. ಗಂಡು ಮರಗಳಲ್ಲಿ ಪರಾಗ ಪುಡಿ ಕೊಂಬಿನ ರೂಪದಲ್ಲಿ ಉತ್ಪತಿಯಾಗುತ್ತದೆ. ಅದನ್ನು ಕತ್ತರಿಸಿ ಸುರಕ್ಷಿತವಾದ ಸ್ಥಳದಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಅದರಲ್ಲಿರುವ ನಯವಾದ ಪರಾಗ ಪುಡಿಯನ್ನು ಗಾಳಿಯಾಡದ ಪ್ಲಾಸ್ಟಿಕ್ ಡಬ್ಬಗಳಲ್ಲಿ ಶೇಕರಿಸಿ ಇಡಲಾಗುತ್ತದೆ. ನಂತರ ಕೆಚಪ್ ಬಾಟಲಿಗಳಲ್ಲಿ ತುಂಬಿಸಿ ಹೆಣ್ಣು ಮರದಲ್ಲಿ ಅರಳುವ ಪುಷ್ಪಗಳ ಮೇಲೆ ಸಿಂಪಡಿಸಲಾಗುತ್ತದೆ.

ಪ್ರತಿವರ್ಷ ಫೆಬ್ರವರಿ ತಿಂಗಳಿನಲ್ಲಿ ಉತ್ಪತಿಯಾಗುವ ಪರಾಗ ಪುಡಿಯನ್ನು ಸಂಗ್ರಹಿಸಿ ಮಾರ್ಚ್ ತಿಂಗಳಿನಲ್ಲಿ ಹೆಣ್ಣು ಮರದ ಪುಷ್ಪಗಳ ಮೇಲೆ ಪರಾಗ ಪುಡಿಯನ್ನು ಉದುರಿಸಿ ಪರಾಗ ಸ್ಪರ್ಶ ಕ್ರಿಯೇಯನ್ನು ಅನುಭವಿ ಕೃಷಿಕರು ನಡೆಸುತ್ತಾರೆ.

ಏಪ್ರಿಲ್ ತಿಂಗಳಿನಲ್ಲಿ ಪುಷ್ಪದಲ್ಲಿ ಹೆಣ್ಣು ಮರಗಳ ಪುಷ್ಪಗಳಲ್ಲಿ ಖರ್ಜೂರ ಕಾಯಿಗಳು ಉತ್ಪತಿಯಾಗುತ್ತದೆ. ಕಾಯಿಗಳು ಬೆಳೆದು ವೃದ್ಧಿಯಾಗುವ ಸಮಯದಲ್ಲಿ ಶೇಕಡಾ ಅರುವತ್ತರಷ್ಟು ಕಾಯಿಗಳನ್ನು ಗೊಂಚಲಿನಿಂದ ಕಿತ್ತು ಹಾಕಲಾಗುತ್ತದೆ. ಇದರಿಂದ ಉಳಿದ ಕಾಯಿಗಳಿಗೆ ಸಮರ್ಪಕವಾದ ಗಾಳಿ ಬೆಳಕು ದೊರೆತು ಸಮೃದ್ಧಿಯಾಗಿ ಬೆಳೆಯುತ್ತದೆ. ಮೇ ತಿಂಗಳಿನಿಂದ ಕಾಯಿಗಳು ಬಲಿತು ಅಗಸ್ಟ್ ತಿಂಗಳಿನಲ್ಲಿ ಹಣ್ಣಾಗುತ್ತದೆ.

ಖರ್ಜೂರ ಮರಗಳ ಬೆಳವಣಿಗೆಯ ಹಂತಗಳು…

ಖರ್ಜೂರ ಮರಗಳು ಸಣ್ಣದಿರುವಾಗಲೆ ಮರದ ಸುತ್ತಲು ಬದಿಗಳನ್ನು ತೋಡುತ್ತಾರೆ. ಅವುಗಳಲ್ಲಿ ನೀರನ್ನು ಹಾಯಿಸಿದಾಗ ನೀರು ಇಂಗಿ ಬುಡದ ಅಡಿಯಲ್ಲಿರುವ ಬೇರಿಗೆ ತಲುಪುತ್ತದೆ. ಇತ್ತಿಚಿನ ವರ್ಷಗಳಲ್ಲಿ ನೂತನ ತಂತ್ರಜ್ಞಾನ ಬಳಸಿ ಹನಿ ನಿರಾವರಿ ಪದ್ದತಿಯನ್ನು ಪ್ರತಿಮರದ ಬುಡದಲ್ಲಿ ಸೆನ್ಸಾರ್ ಉಪಕರಣವನ್ನು ಅಳವಡಿಸುತ್ತಾರೆ. ಪ್ರತಿ ಮರದ ಬುಡದಲ್ಲಿ ನೀರು ಹರಿಯುವಾಗ ಮರಕ್ಕೆ ಎಷ್ಟು ನೀರು ಬೇಕಾಗ ಬಹುದೆಂದು ನಿರ್ಧರಿಸಿ ಅಟೋಮ್ಯಾಟಿಕ್

ಉಪಕರಣಗಳಲ್ಲಿ ನಿಗಧಿ ಪಡಿಸುತ್ತಾರೆ. ನೀರು ತುಂಬಿದ ನಂತರ ಅಟೊಮ್ಯಾಟಿಕ್ ಉಪಕರಣ ನೀರು ಹರಿಯುದನ್ನು ನಿಲ್ಲಿಸಿದಾಗ ಸೆನ್ಸಾರ್ ನೀರು ಹರಿಯುವಿಕೆಯನ್ನು ನಿಯಂತ್ರಿಸುತ್ತದೆ. ಬುಡದಲ್ಲಿ ನೀರಿನ ತೇವಾಂಶ ಕಡಿಮೆಯಾಗುವಾಗ ಸೆನ್ಸಾರ್ ನೀರು ಹರಿಸಲು ಸೂಚನೆ ನೀಡುತ್ತದೆ.

ಈ ನವ್ಯ ತಂತ್ರಜ್ಞಾನದಿಂದ ಮಾನವ ಕೆಲಸದ ಅಗತ್ಯವಿಲ್ಲ. ಜೊತೆಗೆ ನೀರಿನ ತೇವಾಂಶ ನಿರಂತರವಾಗಿರುವುದರಿಂದ ಕ್ರಿಮಿ ಕೀಟಗಳ ಉಪಟಳವಿರುವುದಿಲ್ಲ.

ಕೀಟಗಳ ಬಾಧೆಯಿಂದ ಖರ್ಜೂರ ಕೃಷಿ ರಕ್ಷಣೆ

ಎಲ್ಲಾ ಹಣ್ಣಿನ ಮರಗಳಿಗೆ ಬಾಧೆ ನೀಡುವಂತೆ ಕೀಟಗಳು ಖರ್ಜೂರ ಕೃಷಿಗೂ ಹೆಚ್ಚು ತೊಂದರೆ ಕೊಡುತ್ತದೆ. ಖರ್ಜೂರ ಹೂ ಬಿಡುವ ಹಂತದಲ್ಲಿ ಕೀಟಗಳು ಹೆಚ್ಚಾಗಿ ದಾಳಿಮಾಡುತ್ತದೆ. ಕೀಟಗಳು ಹೂವಿನ ಬಳಿ ಸಾಗುವುದನ್ನು ತಪ್ಪಿಸಲು ಖರ್ಜೂರ ಮರಗಳ ಬುಡದಲ್ಲಿ ಸರಳ ವಿನ್ಯಾಸದ ಪ್ಲಾಸ್ಟಿಕ್ ದಬ್ಬಗಳನ್ನು ಇರಿಸಲಾಗುತ್ತದೆ.

ಡಬ್ಬದ ಒಳಭಾಗದಲ್ಲಿ ಕೀಟಗಳನ್ನು ಅಕರ್ಷಿಸುವ, ಗಂಡು ಹೆಣ್ಣು ಕೀಟಗಳು ಸಮಾಗವಾಗುವ ವಿಶೇಷ ದ್ರವ್ಯವನ್ನು ಡಬ್ಬದ ಒಳಗೆ ಕೆಳಭಾಗದಲ್ಲಿ ಸಿಂಪಡಿಸಲಾಗುತ್ತದೆ. ರಾತ್ರಿ ವೇಳೆಯಲ್ಲಿ ಕೀಟಗಳನ್ನು ಆಕರ್ಷವಾಗುವಂತೆ ದೀಪದ ವ್ಯವಸ್ಥೆ ಮಾಡಲಾಗಿರುತ್ತದೆ. ಹಗಲಿನಲ್ಲಿ ದ್ರವ್ಯ ಸುವಾಸನೆಯು ಕೀಟಗಳು ತನ್ನೆಡೆ ಬರುವಂತೆ ಮಾಡಿದರೆ, ರಾತ್ರಿಯಲ್ಲಿ ದೀಪದ ಬೆಳಕಿಗೆ ಅಕರ್ಷಣೆಯಾಗಿ ಕೀಟಗಳು ಕೊಳವೆಯ ಮೂಲಕ ಡಬ್ಬದ ತಳಭಾಗ ಸೇರುತ್ತದೆ. ಅಲ್ಲಿರುವ ದ್ರವ್ಯದ ಸುವಾಸನೆಗೆ ಉನ್ಮಾದಗೊಂಡು ಕೆಲವೇ ಸಮಯದಲ್ಲಿ ಹಾರಾಡಲಾಗದೆ ಪ್ರಜ್ಞೆ ಕಳೆದು ಅವಸಾನಗೊಳ್ಳುತ್ತದೆ. ಪ್ರತಿದಿನ ಬೆಳಿಗ್ಗೆ ತೋಟಗಾರ ಬಂದು ಡಬ್ಬದಲ್ಲಿರುವ ಕೀಟಗಳನ್ನು ಸಂಗ್ರಹಿಸಿ ತನ್ನ ಬ್ಯಾಗಿನಲ್ಲಿ ಹಾಕಿಕೊಂಡು ಹೋಗಿ ನಾಶ ಪಡಿಸುತ್ತಾನೆ.

ಕೀಟವನ್ನು ನಿಯಂತ್ರಿಸದಿದ್ದರೆ, ಕೀಟವು ನೇರವಾಗಿ ಮರದ ತುಡಿಯಲ್ಲಿರುವ ಎಳೆಯ ಪುಷ್ಪವನ್ನು ತಿಂದುಹಾಕಿ ಅಲ್ಲಿಂದಲೇ ನೇರವಾಗಿ ಕೊರೆದು ಮರದ ಮದ್ಯಭಾಗದಲ್ಲಿರುವ ಮೃದುವಾದಪುಷ್ಪ ವೃದ್ಧಿಯಾಗುವ ಅಂಶಗಳನ್ನು ತಿಂದುಹಾಕಿಕೊಂಡು ಅಲ್ಲೇ ನೆಲೆಸಿ ಕ್ರಮೇಣ ಮರ ನಾಶವಾಗಿ ಬಿಡುವಂತೆ ಮಾಡುತ್ತದೆ.

ಮರದ ಬುಡದಲ್ಲಿ ಸುತ್ತಲು ಸಸಿಯು ಮೂಲ ಮರದ ಜೊತೆಯಾಗಿ ಹುಟ್ಟಿಕೊಳ್ಳುತ್ತದೆ. ಆರರಿಂದ ಎಂಟು ವರ್ಷಗಳಲ್ಲಿ ಗಿಡಗಳನ್ನು ಬೇರ್ಪಡಿಸಿ ಬೇರೆ ಜಾಗದಲ್ಲಿ ನೆಡಲಾಗುತ್ತದೆ. ಗಿಡ ನೆಟ್ಟು ಆರು ಏಳು ವರ್ಷಗಳ ನಂತರ ಫಸಲು ಪಡೆಯಬಹುದಾಗಿದೆ. ನುರಿತ ತೋಟಗಾರ ವಿಶೇಷ ರೀತಿಯಲ್ಲಿ ತಯಾರಿಸಲಾಗಿರುವ ಸಲಕರಣೆಯಿಂದ ಚಾಕಚಕ್ಯತೆಯಿಂದ ಮೂಲ ಮರಕ್ಕೆ ದಕ್ಕೆ ಬಾರದ ರೀತಿಯಲ್ಲಿ ಸಸಿಗಳನ್ನು ಬೇರ್ಪಡಿಸಲಾಗುತ್ತದೆ.

ಎತ್ತರಕ್ಕೆ ಬೆಳೆದಿರುವ ಮರಗಳನ್ನು ಸಹ ಬುಡಸಮೇತ ಜಾಗರುಕತೆಯಿಂದ ಕಿತ್ತು ಮೆಲ್ಭಾಗದ ಗರಿಗಳನ್ನು ಅರ್ದದಷ್ಟು ಕತ್ತರಿಸಿ ಕಾರ್ಡ್ ಬೋರ್ಡ್ ನಿಂದ ಸುತ್ತಲು ಬಿಗಿಯಾಗಿ ಕಟ್ಟಿ ನೆಡಲಾಗುತ್ತದೆ. ಹನಿ ನಿರಾವರಿ ಮೂಲಕ ಮರಗಳನ್ನು ಬೆಳೆಸಲಾಗುತ್ತದೆ.

ಖರ್ಜೂರ ಮರಗಳು ಇತಿಹಾಸದ ಪುಟಗಳಲ್ಲಿ…

ಖರ್ಜೂರ ಮರಗಳ ಬಗ್ಗೆ ಇತಿಹಾಸದ ಪುಟ್ಗಳನ್ನು ತಿರುವಿ ಹಾಕಿದಾಗ ಐದು ಸಾವಿರ ವರ್ಷಗಳ ಹಿಂದೆಯೆ ಖರ್ಜೂರದ ಬಗ್ಗೆ ಪೂರ್ಣ ಮಾಹಿತಿ ದೊರೆಯುತ್ತದೆ. ಮಧ್ಯಪ್ರಾಚ್ಯ, ಸಿಂಧೂ ಕಣಿವೆ, ಸೌದಿ ಅರೇಬಿಯಾ, ಸುಡಾನ್, ಮೆಸಪೋಟೆಮಿಯಾ, ಈಜಿಪ್ಟ್, ಒಮಾನ್, ಟುನೆಶಿಯಾ, ಏಶ್ಯಾ, ಉತ್ತರ ಅಮೇರಿಕಾ, ಸ್ಪೆಯಿನ್, ಮೆಕ್ಸಿಕೊ, ಕ್ಯಾಲಿಫೋರ್ನಿಯಾದಲ್ಲಿ ಬೆಳೆಯಲಾಗುತ್ತಿದ್ದ ಬಗ್ಗೆ ಮಾಹಿತಿ ದೊರೆಯುತ್ತದೆ.

ಖರ್ಜೂರ ಮರ ಸುಮಾರು ಎಪ್ಪತೈದು ಅಡಿಗಳಷ್ಟು ಎತ್ತರ ಬೆಳೆಯುತ್ತದೆ. ಮೊಳಕೆಯಿಂದ ವೃದ್ದಿಯಾದ ಸಸಿ ಬೆಳೆತು ಮರವಾಗಿ ಏಳರಿಂದ ಹತ್ತು ವರ್ಷಗಳಲ್ಲಿ ಪಸಲು ನೀಡಲು ಪ್ರಾರಂಭಿಸುತ್ತದೆ.

ಖರ್ಜೂರ ಹಣ್ಣಿನ ಗೊಂಚಲುಗಳ ಕೊಯಿಲಿಗೆ ಮೊದಲು ರಕ್ಷಣೆ

ಖರ್ಜೂರ ಹಣ್ಣಿನ ಗೊಂಚಲು ಕಾಯಿಯಾಗಿರುವಾಗಲೇ ಪ್ರತಿಗೊಂಚಲಿಗೆ ಮಸ್ಲಿನ್ ಬಟ್ಟೆಯಿಂದ ತಯಾರಿಸಲಾದ ಬ್ಯಾಗ್ ನಿಂದ ಕಟ್ಟಲಾಗುತ್ತದೆ. ಕೀಟಗಳಿಂದ ರಕ್ಷಣೆ ಮಾಡುವುದರ ಜೊತೆಗೆ ಗೊಂಚಲು ಬಾರವಾಗಿರುವುದರೈಂದ ಮೇಲಿರುವ ಕೊಂಬೆಗಳಿಗೆ ಕಟ್ಟಿ ಗೊಂಚಲು ಮುರಿಯುದನ್ನು ತಪ್ಪಿಸಲಾಗುತ್ತದೆ.

ಖರ್ಜೂರ ಹಣ್ಣು ಕೊಯಿಲಿಗೆ ಬಂದ ನಂತರ ಪ್ರತಿ ಗೊಂಚಲಿನ ಕೆಳಗೆ ಬಾಸ್ಕೆಟ್ ಇರಿಸಿ ಅಲುಗಾಡಿಸಲಾಗುತ್ತದೆ. ಉದುರುವಂತ ಹಣ್ಣುಗಳು ಉದುರಿದ ನಂತರ, ಗೊನೆಯನ್ನು ಕತ್ತರಿಸಲಾಗುತ್ತದೆ. ಹೆಚ್ಚು ಹೆಚ್ಚು ಮರಗಳನ್ನು ಬೆಳೆಸಿರುವ ತೋಪಿನಲ್ಲಿ ಪೋರ್ಕ್ ಲಿಫ್ಟ್ ವಾಹನವನ್ನು ಬಳಸಿಕೊಂಡು ವೇಗವಾಗಿ ಹಣ್ಣುಗಳನ್ನು ಸಂಗ್ರಹಿಸಿತರಲಾಗುತ್ತದೆ.

ಸಾಮನ್ಯವಾಗಿ ಹಣ್ಣುಗಳನ್ನು ಕೀಳುವಾಗ ಕಡು ಹಳದಿ ಬಣ್ಣ ಅಥವಾ ಕಡು ಕೆಂಪು ಬಣ್ಣದಲ್ಲಿರುತ್ತದೆ.. ನಂತರ ಕೆಲವು ದಿನಗಳಲ್ಲಿ ಅದರ ಬಣ್ಣ ಬದಲಾಗುತ್ತದೆ. ಪ್ರತಿಯೊಂದು ಹಂತಗಳಲ್ಲಿ ಸಂಸ್ಕರಿಸಲಾಗುತ್ತದೆ. ಪ್ರತಿಯೊಂದು ಹಂತಗಳಲ್ಲಿ ಪ್ರತಿಯೊಂದು ಹಣ್ಣುಗಳನ್ನು ಪರಿಕ್ಷಿಸಿದ ನಂತರವೇ ಮುಂದಿನ ಹಂತಕ್ಕೆ ಹೋಗುತ್ತದೆ. ದೊಡ್ಡ ದೊಡ್ಡ ಖರ್ಜೂರ ಸಂಸ್ಕರಣ ಕಾರ್ಖಾನೆಯಲ್ಲಿ ಅತ್ಯಾಧುನಿಕ ಯಂತ್ರೊಪಕರಣದ ಮೂಲಕವೇ ಸಂಸ್ಕರಿಸಲಾಗುತ್ತದೆ.

ಖರ್ಜೂರಗಳ ಪ್ರಭೇದಗಳಲ್ಲಿ “ಅಜ್ವಾ” ಖರ್ಜೂರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಹಾಗೂ ಶೇಷ್ಠತೆಯನ್ನು ನೀಡಲಾಗಿದೆ. ಈ ಖರ್ಜೂರವನ್ನು ಹೆಚ್ಚಾಗಿ ಸೌದಿ ಅರೇಬಿಯಾದಲ್ಲಿ ಬೇಳೆಯಲಾಗುತ್ತದೆ. ಪವಿತ್ರ ಕುರಾನ್ ಗ್ರಂಥದಲ್ಲಿ :ಅಜ್ವಾ” ಪ್ರವಾದಿಗಳ ನೆಚ್ಚಿನ ಆಹಾರ ಮತ್ತು ಸ್ವರ್ಗದ ಆಹಾರವೆಂದು ಉಲ್ಲೇಕವಿದೆ. ಪವಿತ್ರ ರಂಜಾನ್ ಮಾಸದಲ್ಲಿ ಉಪವಾಸ ಬಿಡುವಾಗ ಖರ್ಜೂರ ಸೇವಿಸುವ ಪದ್ದತಿ ಅನಾದಿ ಕಾಲದಿಂದಲೂ ಆಚರಣೆಯಲ್ಲಿದೆ. ಖರ್ಜೂರ ಪ್ರಮುಖ ಆಹಾರವಾಗಿಯೂ ಬಳಕೆಯಾಗಿತ್ತು.

ಖರ್ಜೂರ ಮರಗಳನ್ನು ಯಾವುದೇ ಕಾರಣಕ್ಕೂ ಕೊಡಲಿ ಅಥವಾ ಯಂತ್ರದ ಮೂಲಕ ಕತ್ತರಿಸುವುದಿಲ್ಲ. ಬೃಹತ್ ಯಂತ್ರ ಬಳಸಿ ಬುಡ ಸಮೇತ ಬೇರೆಡೆಗೆ ಸ್ಥಳಾಂತರಗೊಳಿಸುತ್ತಾರೆ. ತಾನಾಗಿ ಬಿದ್ದ ಮರಗಳನ್ನು ಮಾತ್ರ ಇನ್ನಿತರ ಸಾಮಾಗ್ರಿಗಳಾಗಿ ಬಳಸುತ್ತಾರೆ.

ಖರ್ಜೂರ ಮರಗಳಿಗೆ ದೊರೆತಿರುವ ಸ್ಥಾನ

ಕೆಲವು ಗಲ್ಫ್ ರಾಷ್ಟ್ರಗಳ ಧ್ವಜಗಳಲ್ಲಿ ಖರ್ಜೂರ ಮರದ ಚಿತ್ರ ಸ್ಥಾನ ಪಡೆದಿದೆ, ಲಾಂಛನಗಳಲ್ಲಿ ಖರ್ಜೂರ ಮರಗಳಿಗೆ ವಿಶೇಷ ಸ್ಥಾನ. ಖರ್ಜೂರ ಮರದ ಆಕೃತಿಯನ್ನು ರಚಿಸಿ ದೂರಸಂಪರ್ಕದ ಮೊಬೈಲ್ ಟವರ್ ಆಗಿ ಗಲ್ಫ್ ವಾಸ್ತುಶಿಲ್ಪದ ಸ್ಥಾನವನ್ನು ಪಡೆದಿದೆ.

ಮಾರುಕಟ್ಟೆಯಲ್ಲಿರುವ ಖರ್ಜೂರ ಅಹಾರೋತ್ಪನ್ನಗಳು

ಖರ್ಜೂರ ದಿಂದ ತಯಾರಿಸಲಾದ ವೈವಿಧ್ಯಮಯ ಅಹಾರೋತ್ಪನ್ನಗಳು ಗಲ್ಫ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ವಿವಿಧ ಸಂದರ್ಭದಲ್ಲಿ ಉಡುಗೊರೆಯನ್ನು ನೀಡಲು ವಿವಿಧ ರೀತಿಯ ಶ್ರೇಷ್ಠ ಖರ್ಜೂರಗಳ ಆಕರ್ಷಕ ಉಡುಗೊರೆ ಬಾಕ್ಸ್ ಗಳು ದೊರೆಯುತ್ತದೆ.

ಅತ್ಯಂತ ರುಚಿ ರುಚಿಯಾದ ಖರ್ಜೂರ ಕೇಕ್, ಖರ್ಜೂರ ಜ್ಯಾಮ್, ಖರ್ಜೂರ ಮಿಲ್ಕ್ ಶೇಕ್, ಖರ್ಜೂರ ಜೂಸ್, ಖರ್ಜೂರ ಲಾಡು, ಖರ್ಜೂರ ಹಲ್ವ, ಖರ್ಜೂರ ಬರ್ಫಿ, ಖರ್ಜೂರ ಚಾಕೋಲೇಟ್ ಇತ್ಯಾದಿ ಅಹಾರೋತ್ಪನ್ನಗಳು ದೊರೆಯುತ್ತದೆ.

ಆಕರ್ಷಕ ಖರ್ಜೂರ ಮರದ ಪೀಠೋಪಕರಣಗಳು

ಖರ್ಜೂರ ಮರಗಳ ಕಾಂಡ ಮತ್ತು ಗರಿಗಳಿಂದ ವಿವಿಧ ಪೀಠೋಪಕಣಗಳನ್ನು ತಯಾರಿಸಲಾಗುತ್ತದೆ. ದೊಡ್ಡ ದೊಡ್ಡ ಬಂಗಲೆ ಮತ್ತು ಸೌಧಗಳಲ್ಲಿ ಈ ಅಲಂಕಾರಿಕ ಪೀಠೋಪಕರಣಗಳು ಸೌಂಧರ್ಯವನ್ನು ಹೆಚ್ಚಿಸುತ್ತದೆ. ಸೋಫಾಸೆಟ್, ಟಿಪಾಯಿ, ವಾಲ್ ಸ್ಕ್ರೀನ್, ಗರಿಗಳಿಂದ ವ್ಯಾನಿಟಿ ಬ್ಯಾಗ್, ಬುಟ್ಟಿಗಳು, ಹ್ಯಾಟ್ ಗಳು ಅರಬ್ ದೇಶದ ಕರಕುಶಲ ಕರ್ಮಿಗಳ ಹಸ್ತಕೌಶಲ್ಯಕ್ಕೆ ಸಾಕ್ಷಿಯಾಗಿದೆ.

ಖರ್ಜೂರ ಅಂತರಾಷ್ಟ್ರೀಯ ಫಲ ಪ್ರದರ್ಶನ…

ಖರ್ಜೂರ ಬೆಳೆಗಾರರಿಗೆ ಪ್ರೋತ್ಸಾಹ ನೀಡುವ ದೃಷ್ಠಿಯಲ್ಲಿ ಪ್ರತಿವರ್ಷ ಜುಲೈ ತಿಂಗಳಿನಲ್ಲಿ ನಡೆಯುತ್ತದೆ. ಈ ಬಾರಿ 2019 ಜುಲೈ 17ನೇ ತಾರೀಕಿನಿಂದ 27ನೇ ತಾರೀಕಿನವರೆಗೆ ಅಬುಧಾಬಿ ವಿಭಾಗದ ಲಿವಾ ಅಲ್ ದಾಫ್ರಾ ದಲ್ಲಿ ನಡೆಯಲಿದ್ದು ವಿವಿಧ ಖರ್ಜೂರ ತಳಿಗಳ ಪ್ರದರ್ಶನ, ಉತ್ಪನ್ನಗಳ ಪ್ರದರ್ಶನ ನಡೆಯಲಿದೆ.

ಪ್ರವಾಸಿಗರನ್ನು ಆಕರ್ಷಿಸುವ ಫಲಭರಿತ ಖರ್ಜೂರ ವೃಕ್ಷರಾಶಿ…

ವಿಶೇಷವಾಗಿ ಗಲ್ಫ್ ನಾಡಿನಲ್ಲಿ ಮೇ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೆ ತಲೆ ಎತ್ತಿ ನಿಂತಿರುವ ಖರ್ಜೂರ ವೃಕ್ಷ ರಾಶಿಯಲ್ಲಿ ಹೂ ಗೊಂಚಲು, ಕಾಯಿಗಳು ಹಳದಿ, ಕಡು ಕೆಂಪು ಬಣ್ಣದ ಖರ್ಜೂರ ಗೊಂಚಲುಗಳು ನೋಡುಗರ ಗಮನ ಸೆಳೆದು ಬಾಯಲ್ಲಿ ನೀರೂರಿಸತ್ತದೆ.

ಅರಬ್ ಪ್ರಜೆಗಳ ಸೌಂಧರ್ಯ ಪ್ರಜ್ಞೆಯೊಂದಿಗೆ ಪರಿಸರ ಕಾಳಜಿ ಮರಗಿಡಗಳ ಮೇಲಿರುವ ಅಪಾರ ಪ್ರೀತಿಗೆ ಸಾಕ್ಷಿಯಾಗಿ ಮರಳುನಾಡು ಹಸಿರುನಾಡಾಗಿ ಕಂಗೊಳಿಸುತ್ತಿದ್ದು ಅರಬ್ಬರು ಸಾರ್ವಕಾಲಿಕ ಮಾನ್ಯರಾಗಿದ್ದಾರೆ.

ಬಿ. ಕೆ. ಗಣೇಶ್ ರೈ
ಅರಬ್ ಸಂಯುಕ್ತ ಸಂಸ್ಥಾನ

Comments are closed.