ಗಲ್ಫ್

ಪ್ರತಿಷ್ಠಿತ “ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್‍”ನ ಅಧ್ಯಕ್ಷರಾಗಿ ಲೀಲಾಧರ್ ಬೈಕಂಪಾಡಿ ನೇಮಕ

Pinterest LinkedIn Tumblr

ಬೆಂಗಳೂರು: ಕರ್ನಾಟಕ ಸರಕಾರದ ಅಧೀನ ಸ್ವಾಯತ್ತ ಸಂಸ್ಥೆಯಾದ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ’ಯ ನಿರ್ದೇಶನ ಮತ್ತು ಸಹಕಾರದೊಂದಿಗೆ ಬಹ್ರೈನ್ ನೆಲದಲ್ಲಿ ಅನಿವಾಸಿ ಕನ್ನಡಿಗರ ಹಿತರಕ್ಷಣೆ ಮತ್ತು ಕಲ್ಯಾಣಕ್ಕಾಗಿ ನಿರ್ದಿಷ್ಟವಾದ ಕಾನೂನುಬದ್ಧ ಕಾರ್ಯವ್ಯಾಪ್ತಿ ಮತ್ತು ಅಧಿಕಾರಗಳೊಂದಿಗೆ ಸೇವೆಯೆಸಗಲಿರುವ ಶಾಖಾ ದರ್ಜೆಯ ನೂತನ ಅಧಿಕೃತ ಸೇವಾ ಸಂಸ್ಥೆ ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ಇದರ ಅಧ್ಯಕ್ಷರಾಗಿ ಅನಿವಾಸಿ ಭಾರತೀಯ, ಪ್ರಶಸ್ತಿ ವಿಜೇತ ಸಾಮಾಜಿಕ ಕಾರ್ಯಕರ್ತ, ತುಳು – ಕನ್ನಡ ಸಮುದಾಯದ ಮುಂದಾಳು ಲೀಲಾಧರ್ ಬೈಕಂಪಾಡಿಯವರು ಇತ್ತೀಚೆಗೆ ನೇಮಕಗೊಂಡಿದ್ದಾರೆ.

ನಾಡು – ನುಡಿ ಹಾಗೂ ಕಲೆ, ಸಂಸ್ಕೃತಿ, ಸಾಹಿತ್ಯ, ಸಮಾಜ ಸೇವೆ ಮತ್ತಿತರ ಸೇವಾ ತಥಾ ಸಾಂಘಿಕ ಕ್ಷೇತ್ರಗಳಿಗೆ ದೇಶ – ವಿದೇಶದಲ್ಲಿ ಗತ 3 ದಶಕಗಳಿಂದ ಪ್ರಶಂಸನೀಯ ಕೊಡುಗೆಗಳನ್ನು ನೀಡುತ್ತಾ ಬಂದಿರುವ ಬಹ್ರೈನ್ ವಾಸ್ತವ್ಯದ ಯುವ ಸಂಘಟಕ, ಸಾಂಸ್ಕೃತಿಕ ರಾಯಭಾರಿ ಲೀಲಾಧರ್ ಬೈಕಂಪಾಡಿಯವರಿಗೆ ಪ್ರಾಪ್ತಿಯಾಗಿರುವ ಈ ಪ್ರತಿಷ್ಠಿತ ಜನಸೇವಾ ಹುದ್ದೆಯು ಅವರ ಜನಪರ ಕಾಳಜಿ, ಸಮಾಜಮುಖಿ ಕಾಯಕ ಮತ್ತು ನಿರಂತರವಾದ ಸೇವೆ – ಸಿದ್ಧಿ – ಸಾಧನೆಗಳಿಗೆ ಅರ್ಹ ನೆಲೆಯಲ್ಲಿ ಸಂದ ಶ್ರೇಷ್ಠ ಗೌರವವಾಗಿದೆ.

ಸಮಸ್ತ ಬಹ್ರೈನ್ ಕನ್ನಡಿಗರ ಮೂಲ ಸೇವಾ ಕೇಂದ್ರವಾಗಲಿರುವ ಸದ್ರಿ ಸಂಸ್ಥೆಯು ಕರ್ನಾಟಕ ಸರಕಾರವು ಹೊರತಂದಿರುವ ಅನಿವಾಸಿ ಭಾರತೀಯ ನೀತಿ ಸಂಹಿತೆಯನ್ವಯ ಕ್ರಿಯಾಶೀಲವಾಗಲಿದೆ. ಬಹ್ರೈನ್‍ನಾದ್ಯಂತ ಸುಮಾರು 18 ವಿವಿಧ ಸಂಘಟನೆಗಳಲ್ಲಿ ಮತ್ತು ಇತರೆಡೆಗಳಲ್ಲಿ ಚದುರಿ ಹೋಗಿರುವ ಎಲ್ಲಾ ಅನಿವಾಸಿ ಕನ್ನಡಿಗರನ್ನು ಸಂಘಟಿಸಿ, ಅವರು ಮತ್ತು ಕರ್ನಾಟಕ ರಾಜ್ಯದ ನಡುವೆ ಸುಸ್ಥಿರವಾದ ಸಂಪರ್ಕವನ್ನೇರ್ಪಡಿಸಿ ಬಲಪಡಿಸುವ ಮೂಲೋದ್ದೇಶವನ್ನು ಇದು ಈಡೇರಿಸಲಿದೆ.

ಅಂತೆಯೇ ಬೆಂಗಳೂರಿನ ಮಾತೃ ಸಮಿತಿಯ ಸಲಹೆ, ಸೂಚನೆ ಮತ್ತು ಮಾರ್ಗದರ್ಶನದ ಮೇರೆಗೆ ಇತಿ-ಮಿತಿಯ ಆಧಾರದಲ್ಲಿ ಬಹ್ರೈನ್‍ನ ಅನಿವಾಸಿ ಕನ್ನಡಿಗರ ಸ್ಥಳೀಯ ಹಾಗೂ ತಾಯ್ನಾಡಿನ ಸಮಸ್ಯೆ, ಆಕಾಂಕ್ಷೆ, ನಿರೀಕ್ಷೆ, ಅಗತ್ಯ, ಆಶೋತ್ತರಗಳಿಗೆಲ್ಲಾ ಸಾಧ್ಯವಾದ ರೀತಿಯಲ್ಲಿ ಸ್ಪಂದಿಸುತ್ತಾ, ನಮ್ಮ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಅನಿವಾಸಿ ಕನ್ನಡಿಗರೂ ಕೂಡಾ ವಿವಿಧ ನೆಲೆಯಲ್ಲಿ ಕೊಡುಗೆಗಳನ್ನೀಯುವಂತೆ ಪ್ರೇರೇಪಿಸುವ ಕ್ರಿಯಾವರ್ಧಕ ಪಾತ್ರವನ್ನೂ ಈ ಸಮಿತಿಯು ನಿಭಾಯಿಸಲಿದೆ.

ವಿಮಾ ಸೌಲಭ್ಯ, ಕಲೆ, ಸಂಸ್ಕೃತಿ, ಉತ್ಸವಗಳಿಗೆ ಉತ್ತೇಜನ, ಸಾಂಸ್ಕೃತಿಕ ಪರಂಪರೆಯ ಉದ್ದೀಪನ, ದೇಶ – ವಿದೇಶದಲ್ಲಿನ ಉದ್ಯೋಗಾವಕಾಶಗಳ ಮಾಹಿತಿ ಹಂಚಿಕೆ, ವೃತ್ತಿ ಸಂಬಂಧಿತ ತರಬೇತಿ, ಬಂಡವಾಳ ಹೂಡಿಕೆ ಮತ್ತು ಉದ್ಯಮಕ್ಕೆ ಪ್ರೋತ್ಸಾಹ ನೀಡುವಂತಹ ವಿಶೇಷ ಯೋಜನೆಗಳನ್ನೂ ಕೂಡಾ ರಾಜ್ಯ ಸರಕಾರದ ಆಶ್ರಯದ ಮೂಲ ಸಮಿತಿಯು ಹೊಂದಿದ್ದು, ಶಾಖಾ ಸಮಿತಿಯ ಸಹಯೋಗ – ಸಮನ್ವಯದೊಂದಿಗೆ ಇಂತಹ ಚಟುವಟಿಕೆಗಳು ಕಾರ್ಯರೂಪಕ್ಕೆ ಬರಲಿವೆ. ಈ ಸಂಬಂಧ, ಅರ್ಹತೆಯ ಆಧಾರದ ಮೇಲೆ ಲಭ್ಯವಿರುವ ಸೌಲಭ್ಯಗಳ ಫಲಾನುಭವಿಗಳಾಗುವ ನಿಟ್ಟಿನಲ್ಲಿ ಎಲ್ಲಾ ಅನಿವಾಸಿ ಕನ್ನಡಿಗರು ಮೊದಲಾಗಿ ಅಧಿಕೃತ ಗುರುತಿನ ಚೀಟಿಯನ್ನು [ಎನ್.ಆರ್.ಕೆ. ಕಾರ್ಡ್] ಪಡೆಯಲು ಅಗತ್ಯ ಮಾಹಿತಿಗಳೊಂದಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕಾಗಿದೆ.

ಕಳೆದ 20 ವರ್ಷಗಳಿಂದ ಉದ್ಯೋಗ ನಿಮಿತ್ತ ಕೊಲ್ಲಿಯ ಬಹ್ರೈನ್ ದೇಶದಲ್ಲಿ ವಾಸ್ತವ್ಯವಿರುವ ಲೀಲಾಧರ್ ಬೈಕಂಪಾಡಿಯವರು, ಖಾಸಗಿ ಕಂಪನಿ ಸಮೂಹವೊಂದರ ವಿತ್ತ ಪ್ರಬಂಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಬಹ್ರೈನ್ ಮಾತ್ರವಲ್ಲದೆ ಅವಿಭಜಿತ ದ.ಕ. ಜಿಲ್ಲೆ, ಬೆಂಗಳೂರು ಮತ್ತು ಮುಂಬೈಯಲ್ಲೂ ವಿವಿಧ ಸಮೂಹ ಮತ್ತು ಸಂಘಟನೆಗಳ ಮೂಲಕ ತುಳುವರು, ಕನ್ನಡಿಗರು ಹಾಗೂ ಭಾರತೀಯರಿಗೆ ಸಂಬಂಧಿಸಿದಂತೆ ಬಹುಮುಖ ಸೇವೆ ಮತ್ತು ಕಾರ್ಯಚಟುವಟಿಕೆಗಳಲ್ಲಿ ಸದಾ ನಿರತರಾಗಿದ್ದಾರೆ. ಇವರೋರ್ವ ಚತುರ ಸಂಘಟಕ, ಸಮಾಜ ಸೇವಾ ಕಾರ್ಯಕರ್ತ, ಪ್ರಶಸ್ತಿ ವಿಜೇತ ರಂಗ ಕಲಾವಿದ, ಯುವ ಸಾಹಿತಿ, ಸಮಾಜಮುಖಿ ಚಿಂತನೆಯ ತಥಾ ಪ್ರಗತಿಪರ ವಿಚಾರಧಾರೆಯ ಯುವ ಸಾಮಾಜಿಕ ಮುಂದಾಳುವಾಗಿ ನಾಡಿನ ಮತ್ತು ಹೊರನಾಡಿನ ತುಳುವರು, ಕನ್ನಡಿಗರು ಹಾಗೂ ಭಾರತೀಯರ ಮಧ್ಯೆ ಬಹಳವಾಗಿ ಗುರುತಿಸಿಕೊಂಡಿದ್ದಾರೆ.

ಬಹ್ರೈನ್‍ನಲ್ಲಿ ಇಂಡಿಯನ್ ಕ್ಲಬ್, ಕರ್ನಾಟಕ ಸೋಶಿಯಲ್ ಕ್ಲಬ್, ಮಹಾರಾಷ್ಟ್ರ ಕಲ್ಚರಲ್ ಸೊಸೈಟಿ, ಮೊಗವೀರ್ಸ್ ಬಹ್ರೈನ್ ಮುಂತಾದ ಸಂಸ್ಥೆಗಳಲ್ಲಿ ಸಕ್ರಿಯರಾಗಿರುವ ಇವರು ನಾಡು ಮತ್ತು ಹೊರನಾಡಿನಲ್ಲಿ ಕೆಲವು ಸಾಮಾಜಿಕ ಸಂಘಟನೆಗಳ ಸ್ಥಾಪನೆಯ ರೂವಾರಿಯೂ ಆಗಿದ್ದಾರೆ. ಆಲ್ಲದೆ ಇವರು ತನ್ನದೇ ಸಂಯೋಜಕತ್ವದ ಕಾಂಚನ್ ಪ್ರತಿಷ್ಠಾನದ ಮೂಲಕವೂ ಆಗಾಗ ವೈವಿಧ್ಯಮಯ ಜನಪರ ಸೇವೆ ಮತ್ತು ಚಟುವಟಿಕೆಗಳನ್ನು ಗೈಯುತ್ತಿದ್ದಾರೆ.

ಗತ ಸುಮಾರು 3 ದಶಕಗಳಿಂದ ಸಂಘಟನೆ, ಸಮಾಜ ಸೇವೆ ಮತ್ತು ವಿವಿಧ ಕ್ಷೇತ್ರಗಳಿಗೆ ನಿರಂತರವಾಗಿ ನೀಡುತ್ತಾ ಬಂದಿರುವ ಮೌಲಿಕ ಕೊಡುಗೆಗಳಿಗಾಗಿ ಅನೇಕ ಗೌರವ, ಪುರಸ್ಕಾರಗಳನ್ನು ಪಡೆಯುತ್ತಾ ಬಂದಿರುವ ಇವರು ರಾಷ್ಟ್ರೀಯ ಭೂಷಣ ಪ್ರಶಸ್ತಿ, ಸಮಾಜ ರತ್ನ ಪ್ರಶಸ್ತಿ, ರಾಷ್ಟ್ರೀಯ ಏಕತಾ ಪ್ರಶಸ್ತಿ, ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ, ಕರ್ನಾಟಕ ಸೌರಭ ಪ್ರಶಸ್ತಿ, ಸೃಷ್ಟಿ ಕಲಾಶ್ರೀ ಪ್ರಶಸ್ತಿ, ಮುಂಬೈ ವಿ.ವಿ.ಯ ಸ್ವರ್ಣ ಪದಕ ಗೌರವ ಪುರಸ್ಕಾರ, ಪ್ರೈಡ್ ಆಫ್ ಏಷ್ಯಾ ಅಂತಾರಾಷ್ಟ್ರೀಯ ಪುರಸ್ಕಾರದಂತಹ ಪ್ರಶಸ್ತಿಗಳನ್ನು ಸ್ವೀಕರಿಸಿದವರಾಗಿದ್ದಾರೆ.

ಸಮಾಜ ಸೇವೆಯ ಅದಮ್ಯ ತುಡಿತವಿರುವ ಇವರು ‘ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ – ಬಹ್ರೈನ್’ ಇದರ ಅಧ್ಯಕ್ಷರಾಗಿ ಬಹ್ರೈನ್ ಕನ್ನಡಿಗರ ಸೇವೆ ಗೈಯಲು ಒದಗಿದ ಸುವರ್ಣ ಅವಕಾಶಕ್ಕಾಗಿ ಸಂತಸವನ್ನು ಹೊಂದಿದ್ದು, ಈ ಸಂಬಂಧ ಬೆಂಗಳೂರಿನ ಮೂಲ ಸಮಿತಿಯ ಅಧ್ಯಕ್ಷರೂ ಆಗಿರುವ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಾಧ್ಯಕ್ಷೆ ಡಾ. ಆರತಿ ಕೃಷ್ಣ ಮತ್ತು ಸದಸ್ಯ ಕಾರ್ಯದರ್ಶಿ ಡಾ. ಕೆ. ಮುರಳೀಧರ ಇವರೆಲ್ಲರಿಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ, ಬಹ್ರೈನ್‍ನ ಸಮಸ್ತ ಅನಿವಾಸಿ ಕನ್ನಡಿಗರು ರಾಜ್ಯ ಸರಕಾರದ ಮೂಲ ಸಮಿತಿಯ ಮೂಲಕ ಲಭ್ಯವಾಗುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳನ್ನು ಪಡೆಯುವುದಕ್ಕಾಗಿ ಕೂಡಲೇ ಮುಂದಾಗುವಂತೆ ವಿನಂತಿಸಿದ್ದಾರೆ.

Comments are closed.