ರಾಷ್ಟ್ರೀಯ

8ನೇ ವಯಸ್ಸಿಗೆ ಮಾರಾಟ, 16ನೇ ವಯಸ್ಸಿಗೆ 4 ಮಕ್ಕಳ ತಾಯಿ

Pinterest LinkedIn Tumblr


ಬರೇಲಿ: ಆಕೆಯದೇ ಆಡುವ ವಯಸ್ಸು, ಮತ್ತಾಕೆಯ ಮಡಲಲ್ಲಿವೆ 4 ಕಂದಮ್ಮಗಳು. ತನ್ನ ಪೋಷಕರಿಂದಲೇ ಅನ್ಯಾಯಕ್ಕೊಳಗಾದ ಉತ್ತರ ಪ್ರದೇಶದ 16ರ ಬಾಲೆಯ ದುರಂತ ಕಥೆ ಇದು. ಉತ್ತರ ಪ್ರದೇಶದ ಬರೇಲಿಯಲ್ಲಿ ಬೆಳಕಿಗೆ ಬಂದಿರುವ ಈ ಸಂಗತಿ ಹೆಣ್ಣು ಮಕ್ಕಳ ಶೋಚನೀಯ ಸ್ಥಿತಿಯನ್ನು ಪ್ರತಿಬಿಂಬಿಸುವ ಕೈಗನ್ನಡಿಯಂತಿದೆ.

ಸಂಭಾಲ ನಿವಾಸಿಯಾದ 8 ವರ್ಷದ ಪುಟ್ಟ ಬಾಲಕಿಯನ್ನು ಆಕೆಯ ತಂದೆ, ಮಲ ತಾಯಿ ಮತ್ತು ಅತ್ತೆ ಸೇರಿಕೊಂಡು ರಾಜಸ್ಥಾನದ ವ್ಯಕ್ತಿಯೋರ್ವನಿಗೆ ಮಾರಾಟ ಮಾಡಿದ್ದರು. ಇದು ನಡೆದಿದ್ದು 2010ರಲ್ಲಿ. ಭರತಪುರದಲ್ಲಿ ಗೃಹ ಬಂಧನಕ್ಕೊಳಗಾದ ಆಕೆಯ ಮೇಲೆ ನಿರಂತರವಾಗಿ ಅತ್ಯಾಚಾರ ನಡೆಸಲಾಗುತ್ತಿದ್ದು, ಪರಿಣಾಮ ನಾಲ್ಕು ಬಾರಿ ಆಕೆ ತಾಯಿಯಾಗಿದ್ದಾಳೆ. ಇತ್ತೀಚಿಗೆ ದುರುಳರ ಕಪಿಮುಷ್ಟಿಯಿಂದ ತಪ್ಪಿಸಿಕೊಂಡ ಆಕೆ ಸಂಭಾಲದಲ್ಲಿನ ತನ್ನ ಸಂಬಂಧಿಕರ ಮನೆಗೆ ತಲುಪಿದ್ದಾಳೆ.

ಬಳಿಕ ತನ್ನ ಸಂಬಂಧಿಯ ನೆರವಿಂದ ಬಾಲಕಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. 2010ರಲ್ಲಿ ತಾಯಿಯನ್ನು ಕಳೆದುಕೊಂಡ ಬಳಿಕ ತಂದೆ ಮರು ಮದುವೆಯಾದರು. ಮನೆಗೆ ಬಂದ ಕೂಡಲೇ ಹಿಂಸೆ ನೀಡಲು ಪ್ರಾರಂಭಿಸಿದ ಮಲತಾಯಿಯ ವರ್ತನೆಗೆ ತಂದೆಯ ಮೌನ ಮತ್ತಷ್ಟು ಬಲ ನೀಡಿತು. ನನಗೆ ಒಬ್ಬ ಸಹೋದರ ಮತ್ತು ನಾಲ್ಕು ಜನ ಸಹೋದರರಿದ್ದು, ನನ್ನಂತೆ ಮತ್ತಿಬ್ಬರು ಸಹೋದರಿಯರನ್ನು ಸಹ 2010ರಲ್ಲಿ ಮಾರಾಟ ಮಾಡಲಾಗಿತ್ತು. ಆಗ ನನ್ನ ವಯಸ್ಸು 8 , ಅವರಿಬ್ಬರ ವಯಸ್ಸು 6 ಮತ್ತು 4 ಆಗಿತ್ತು. 3 ಲಕ್ಷ ರೂಪಾಯಿ ಪಡೆದುಕೊಂಡು 50 ವರ್ಷದ ವ್ಯಕ್ತಿಗೆ ನನ್ನನ್ನು ಮದುವೆ ಮಾಡಿ ಕೊಡಲಾಯಿತು. ಆತನ ನಿರಂತರ ಅತ್ಯಾಚಾರದಿಂದ ನನಗೆ ನಾಲ್ಕು ಗಂಡು ಮಕ್ಕಳು ಹುಟ್ಟಿದವು. ನನ್ನ ಮೇಲಿನ ಅತ್ಯಾಚಾರ ನಿಲ್ಲದಾದಾಗ ಅಲ್ಲಿಂದ ಪರಾರಿಯಾಗಿ ಬಂದೆ, ಎಂದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಬಾಲಕಿ ಹೇಳಿದ್ದಾಳೆ.

ನೊಂದ ಬಾಲಕಿಯ ದೂರಿದ ಆಧಾರದ ಮೇಲೆ ಆಕೆಯ ತಂದೆ, ಮಲತಾಯಿ ಮತ್ತು ಅತ್ತೆಯ ವಿರುದ್ಧ ಪ್ರಕರಣ ದಾಖಲಾಗಿದೆ.

Comments are closed.