ಗಲ್ಫ್

ಮಸ್ಕತ್ ನಲ್ಲಿ ಸಂಭ್ರಮದ ‘ಬಾಂಧವ್ಯ 2018’

Pinterest LinkedIn Tumblr

ಮಸ್ಕತ್ : ಟೀಮ್ ಬಾಂಧವ್ಯ – ಮಸ್ಕತ್ ಆಯೋಜಿಸಿದ ‘ಬಾಂಧವ್ಯ’ ಸಾಂಸ್ಕೃತಿಕ ಕಾರ್ಯಕ್ರಮವು ಅತ್ಯಂತ ಸಂಭ್ರಮದಿಂದ ಇಲ್ಲಿನ ಬರ್ಕಾ ಫಾರ್ಮ್ ಹೌಸ್ ನಲ್ಲಿ ಮೇ 16ರಂದು ನಡೆಯಿತು. ಸುಮಾರು 1000ದಷ್ಟು ಅನಿವಾಸಿ ಭಾರತೀಯರು ‘ಬಾಂಧವ್ಯ’ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸತತ 4 ವರ್ಷಗಳಿಂದ ಟೀಮ್ ಬಾಂಧವ್ಯ ತಂಡವು ಅನಿವಾಸಿ ಕನ್ನಡಿಗರಿಗಾಗಿ ‘ಬಾಂಧವ್ಯ’ ಹೆಸರಿನಡಿ ಗ್ರಾಮೀಣ ಸೊಗಡಿನ ಸಾರ್ವಜನಿಕ ಕಾರ್ಯಕ್ರಮವನ್ನು ಆಯೋಜಿಸಿಕೊಂಡು ಬರುತ್ತಿದೆ.

ಮಕ್ಕಳು, ಮಹಿಳೆಯರು, ಯುವಕರು, ವೃದ್ಧರು ಸೇರಿದಂತೆ ಹಲವು ಅನಿವಾಸಿ ಕುಟುಂಬಗಳ ಸಮ್ಮಿಲನ ಕಾರ್ಯಕ್ರಮವು ಇದಾಗಿದ್ದು, ಗ್ರಾಮೀಣ ಶೈಲಿಯ ಅಂಗಡಿಗಳು, ಆಹಾರ ತಿನಿಸುಗಳು, ಬಾಲ್ಯದ ಆಟೋಟಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.

ಮರಳುನಾಡಿನಲ್ಲೊಂದು ಊರ ಸಂತೆ
ಕೊಲ್ಲಿ ರಾಷ್ಟ್ರಗಳಲ್ಲಿ ನೌಕರಿಯ ಜಂಜಾಟದಲ್ಲಿರುವ ಅನಿವಾಸಿ ಭಾರತೀಯರಿಗೆ ಊರ ಸಂತೆಯ ದರ್ಶನವೆಂದರೆ ಅಚ್ಚರಿಯೇ ಸರಿ. ಊರ ಸಂತೆಯೇ ಈ ಬಾರಿಯ ‘ಬಾಂಧವ್ಯ’ ಕುಟುಂಬ ಸಮ್ಮಿಲನ ಕಾರ್ಯಕ್ರಮದ ವಿಶೇಷ ಮೆರುಗು. ಹೋಬಳಿಯ ಗೂಡಂಗಡಿಗಳು, ಬಾಲ್ಯ ಜೀವನದ ನೆನಪು ಬರಿಸುವ ಸಂತೆಯ ಸಾಮಗ್ರಿಗಳು, ಶಾಲಾ ದಿನಗಳಲ್ಲಿ ತಿಂದ ಚರ್ಮುರಿ, ಆಮ್ಲೇಟ್ ತಟ್ಟಿಯಂಗಡಿಗಳು, ಐಸ್’ಕ್ಯಾಂಡಿಗಳು, ಗೋಳಿ ಸೋಡಾ ಪಾನೀಯಗಳು ಬಾಂಧವ್ಯದ ಸಂತೆಯಲ್ಲಿ ಲಭ್ಯವಿದ್ದವು. ಬಿಸಿಬಿಸಿ ಖರಿದ ತಿಂಡಿಗಳು, ನ್ಯಾಯ ಬೆಲೆ ಅಂಗಡಿ ಮತ್ತು ಬೆಂಡಿ ಚಾಕಲೇಟುಗಳು ನಾಲಗೆಗೆ ಬಾಲ್ಯದ ರುಚಿ ನೀಡಿದವು.
ಮರಳುನಾಡಿನಲ್ಲಿ ತಯಾರಿಸಿ ಪ್ರದರ್ಶನಕ್ಕಿಟ್ಟ ಊರ ಅಂಚೆ ಪೆಟ್ಟಿಗೆಯನ್ನು ಕಂಡ ನೆರೆದ ಜನಸಮೂಹ ಒಂದು ಕ್ಷಣ ಅಶ್ಚರ್ಯಚಕಿತರಾಗಿ ಅದರ ಬಳಿ ನಿಂತು ಸೆಲ್ಫಿ ತೆಗೆಯುವುದರಲ್ಲಿ ಮಗ್ನರಾದರು.

ಮಕ್ಕಳ ಕಲರವ
ಮಕ್ಕಳ ಆಟೋಟದೊಂದಿಗೆ ಪ್ರಾರಂಭಗೊಂಡ ಬಾಂಧವ್ಯವು, ಮರಳುನಾಡಿನಲ್ಲಿ ಮಕ್ಕಳು ಕಾಣದ, ಕೇಳದ ಊರ ಗ್ರಾಮೀಣ ಆಟೋಟ ಸ್ಪರ್ದೆಯಲ್ಲಿ ಮಕ್ಕಳೊಂದಿಗೆ ಪೋಷಕರೂ ಉತ್ಸಾಹದಿಂದ ಪಾಲ್ಗೊಂಡರು. ಮಕ್ಕಳ ಆಟೋಟ ಸ್ಪರ್ದೆಯಲ್ಲಿದ್ದಂತಹ ಆಟೋಟಗಳನ್ನು ಈಗಿನ ಪೋಷಕರು ಶಾಲಾ ದಿನಗಳಲ್ಲಿ ತಮ್ಮ ಸ್ನೇಹಿತರೊಂದಿಗೆ ಮುನಿಸಿಕೊಂಡ ಆಟವಾಗಿದ್ದು , ಮಕ್ಕಳೊಂದಿಗೆ ಹೆತ್ತವರೂ ಮಕ್ಕಳಂತಾದರು.
ಅದೇ ರೀತಿ ಮಹಿಳೆಯರಿಗಾಗಿ ಮಹಿಳೆಯರಿಂದಲೇ ಆಟೋಟ ಸ್ಫರ್ಧೆಯನ್ನೂ ಆಯೋಜಿಸಲಾಗಿತ್ತು.

ಟೀಮ್ ಬಾಂಧವ್ಯ ನಿರಂತರ ತಯಾರಿ ನಡೆಸಿ ಹಸಿರು ಮೈದಾನದಲ್ಲಿ ತಾಳೆಗರಿಯ ತಟ್ಚಿ ಹೊಟೇಲು, ಹಳೆ ಶೈಲಿಯ ಗೂಡಂಗಡಿ, ಎಳನೀರು, ಬಾಲ್ಯದ ತಿಂಡಿತಿನಿಸುಗಳು, ಎಣ್ಣೆಯಲ್ಲಿ ಕರಿದ ವಿವಿಧ ತಿಂಡಿತಿನಿಸುಗಳನ್ನು ಸಾರ್ವಜನಿಕರಿಗೆ ಉಣಬಡಿಸಿದೆ. ಮರಳುನಾಡಿನಲ್ಲಿ ಅಪರೂಪ ಎನಿಸಿರುವ ಮಲ್ಲಿಗೆ, ಸೇವಂತಿಗೆ, ಗುಲಾಬಿಗಳು ಬಾಂಧವ್ಯದ ಮಾರುಕಟ್ಟೆಯಲ್ಲಿ ವಿಶೇಷ ಆಕರ್ಷಣೆಯಾಗಿತ್ತು.

ಸಭಾ ಕಾರ್ಯಕ್ರಮ
ಬಾಂಧವ್ಯ ಕಾರ್ಯಕ್ರಮದ ಅಂಗವಾಗಿ ಬಾಂಧವ್ಯ ಕಲಾವಿದರಿಂದ ಕಿರುಪ್ರಹಸನ ಪ್ರದರ್ಶಿಸಲಾಯಿತು. ರಾತ್ರಿ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಟೀಮ್ ಬಾಂಧ್ಯವದ ನಿರ್ದೇಶಕ ಅಬ್ದುಲ್ ಸಲಾಮ್ ತುಂಬೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪತ್ರಕರ್ತ ಫಯಾಝ್ ಎನ್. ಮಾತನಾಡಿ, ಅನಿವಾಸಿಗ ಭಾರತೀಯರ ನಡುವೆ ಬಾಂಧವ್ಯ ಗಟ್ಟಿಗೊಳಿಸುವಲ್ಲಿ ಇಂತಹ ಕಾರ್ಯಕ್ರಮವು ಯಶಸ್ವಿಯಾಗಿದೆ. ಇಂತಹ ಪ್ರಯತ್ನವು ಸಾಗರದಾಚೆಗೂ ವ್ಯಾಪಿಸಬೇಕಾಗಿದೆ. ಭಾರತ ದೇಶದಲ್ಲಿ ಸರ್ವ ಭಾರತೀಯರ ನಡುವೆ ಬಾಂಧವ್ಯ ಗಟ್ಟಿಗೊಂಡರೆ ಮಾತ್ರ ಜಾತ್ಯತೀತ ಸ್ವರೂಪವು ಉಳಿಯುವುದು. ದೇಶದ ಜಾತ್ಯತೀತ ಪರಂಪರೆಯನ್ನು ಉಳಿಸುವುದು ಮತ್ತು ಅದಕ್ಕೆ ಮಾರಕವಾಗಿರುವ ಫ್ಯಾಷಿಸಮನ್ನು ಸೋಲಿಸುವುದು ನಮ್ಮೆಲ್ಲರ ಜವಾಬ್ಧಾರಿಯಾಗಿದೆ ಎಂದರು. ವೇದಿಕೆಯಲ್ಲಿ ಪ್ರವಾಸಿ ಫೋರಮ್ ಕರ್ನಾಟಕ ಘಟಕದ ಅಧ್ಯಕ್ಷ ಮುಹಮ್ಮದ್ ಅನ್ವರ್, ಇಂಡಿಯನ್ ಸೋಶಿಯಲ್ ಫೋರಮ್ ನ ಕರ್ನಾಟಕ ಚಾಪ್ಟರ್ ಉಪಾಧ್ಯಕ್ಷ ಸಯ್ಯದ್ ಮೊಹಿದಿನ್ ಸಾಹೇಬ್ ಸಾಸ್ತಾನ್ ಉಪಸ್ಥಿತರಿದ್ದರು. ಟೀಂ ಬಾಂಧವ್ಯದ ಸಲಹೆಗಾರರಾದ ರಿಯಾಝ್ ಗಂಗೊಳ್ಳಿ ಸ್ವಾಗತಿಸಿ, ಫೈಝಲ್ ಕಲ್ಲಡ್ಕ ಧನ್ಯವಾದ ಸಲ್ಲಿಸಿದರು. ಝಕರಿಯ ಬಪ್ಪಳಿಗೆ ಕಾರ್ಯಕ್ರಮ ನಿರೂಪಿಸಿದರು.

ಸಾಧಕರಿಗೆ ಸನ್ಮಾನ
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗುರುತಿಸಿ ಬಾಂಧವ್ಯದ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉದಯೋನ್ಮುಖ ಕವಿ, ಸಾಹಿತಿ ಅನ್ಸಾರ್ ಕಾಟಿಪಳ್ಳ, ಮಗಳನ್ನು ಐಎಎಸ್ ಪರೀಕ್ಷೆಗೆ ತರಬೇತುಗೊಳಿಸಿರುವ ಯೂಸುಫ್ ಮೂಡಬಿದ್ರೆ, ಸಾಮಾಜಿಕ ಕಾರ್ಯಕರ್ತರಾದ ಹಫೀಝ್ ಪಾಣೆಮಂಗಳೂರು, ಮೊಹಿದ್ದೀನ್ ಪಡುಬಿದ್ರೆ, ಜಾಫರ್ ಕಲ್ಲಡ್ಕ ಮುಂತಾದವರನ್ನು ಸನ್ಮಾನಿಸಲಾಯಿತು.

ಪ್ರಾನ್ ಲಿಚ್ಚಿ ಕಂಪೆನಿ ಮತ್ತು ಬಾರಿಕ್ ಗ್ರೂಪ್ ಈ ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿ ಸಹಕರಿಸಿತ್ತು.

ವರದಿ: ಅಬ್ದುಲ್ ಮುಬಾರಕ್ ಕಾರಾಜೆ

Comments are closed.