ಗಲ್ಫ್

ಕೆಸಿಎಫ್ ಐದನೇ ವರ್ಷಾಚರಣೆ ಪ್ರಯುಕ್ತ ಮಾ.30ರಂದು ದುಬೈನಲ್ಲಿ ‘ಕರ್ನಾಟಕ ಫ್ಯಾಮಿಲಿ ಫೆಸ್ಟ್-18’

Pinterest LinkedIn Tumblr

ದುಬೈ: ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆಸಿಎಫ್) ಐದನೇ ವರ್ಷಾಚರಣೆಯ ಪ್ರಯುಕ್ತ ಗಲ್ಫ್ ಅನಿವಾಸಿ ಕನ್ನಡಿಗರ ‘ಕರ್ನಾಟಕ ಫ್ಯಾಮಿಲಿ ಫೆಸ್ಟ್-18’  ಮಾ. 30 ರಂದು ಅಜ್ಮಾನ್ ಗಲ್ಫ್ ಮೆಡಿಕಲ್ ಯೂನಿವರ್ಸಿಟಿ (ತುಂಬೆ ಮೈದಾನ) ಯಲ್ಲಿ ನಡೆಯಲಿದೆ.

ಅಂದು ಬೆಳಗ್ಗೆ 8 ರಿಂದ ರಾತ್ರಿ 10ರವರೆಗೆ ಸಾಂಸ್ಕೃತಿಕ  ಕಾರ್ಯಕ್ರಮಗಳು ಮತ್ತು ಆಟೋಟ ಸ್ಪರ್ಧೆಗಳು ನಡೆಯಲಿದೆ.

ಖಿರಾಅತ್, ಬುರ್ದಾ, ಆಧ್ಯಾತ್ಮಿಕತೆ, ಭಾಷಣ ಸ್ಪರ್ಧೆಗಳು, ಆಟೋಟಗಳು, ಐತಿಹಾಸಿಕ ಪ್ರವಾಸ, ಆರೋಗ್ಯ ತರಬೇತಿ, ಹಾಡು, ಚಿತ್ರಕಲೆ (ಡ್ರಾಯಿಂಗ್), ಪ್ರಬಂಧ, ಚಿಣ್ಣರಲೋಕ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ದುಬೈ ನಲ್ಲಿ ಈ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಪ್ರಚಾರ ಕರಪತ್ರವನ್ನು ಹಿರಿಯ ಉದ್ಯಮಿ ಹಾಜಿ ಅಬ್ದುಲ್ ರಝಾಕ್ ಅವರು ಬಿಡುಗಡೆಗೊಳಿಸಿದರು. ನಂತರ ವಿವರಣೆ ನೀಡಿದ ಸ್ವಾಗತ ಸಮಿತಿ ಸಂಚಾಲಕರಾದ ಅಬ್ದುಲ್ ರಹೀಮ್ ಕೊಡಿ ಅವರು ಕಾರ್ಯಕ್ರಮದ ಅಂಗವಾಗಿ ಬೆಳಗ್ಗೆ 8ರಿಂದ ನಡೆಯುವ ಸಮಾರಂಭವು ದಾರುಲ್ ಹುದಾ ಬೆಳ್ಳಾರೆ ಅಧ್ಯಕ್ಷ ಅಸೈಯದ್ ಹಸನ್ ಅಹ್ದಲ್ ತಂಙಳ್ ಅವರ ಪ್ರಾರ್ಥನೆಯೊಂದಿಗೆ ಆರಂಭ ಗೊಳ್ಳಲಿದ್ದು, ಕೆಸಿಎಫ್ ಯುಎಇ ಸಮಿತಿ ಕೋಶಾಧಿಕಾರಿ ಅಬ್ದುಲ್ ಜಲೀಲ್ ನಿಝಾಮಿ ಎಮ್ಮೆಮಾಡು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ದುಬೈ ಉದ್ಯಮಿ ಹರೀಷ್ ಶೇರಿಗಾರ್, ಬಿಸಿಎಫ್ ದುಬೈ ಉಪಾಧ್ಯಕ್ಷ ಅಬ್ದುಲ್ ಲತೀಫ್ ಮುಲ್ಕಿ, ಶೈಖ್ ಕುನಾಲ್ ಮುನೀರ್ (ದುಬೈ), ಗಲ್ಫ್ ಇಷಾರ ಪ್ರಧಾನ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ, ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿಯ ಸಂಘಟನಾ ಕಾರ್ಯದರ್ಶಿ ಪಿಎಂಹೆಚ್ ಅಬ್ದುಲ್ ಹಮೀದ್, ಅಲ್ ರಾಬಿಹ ಗ್ರೂಪ್ ಅಜ್ಮಾನ್ ಇದರ ಮುಹಮ್ಮದ್ ಇಕ್ಬಾಲ್ ಸಿದ್ದಕಟ್ಟೆ ಭಾಗವಹಿಸಲಿದ್ದಾರೆ.

ನಂತರ ನಡೆಯುವ ಪ್ರತಿಭೋತ್ಸವ ಸಮಾರಂಭದಲ್ಲಿ ಜೂನಿಯರ್, ಸೀನಿಯರ್, ಜನರಲ್ ವಿಭಾಗಗಳಲ್ಲಿ ಯುಎಇಯ ವಿವಿಧ ಝೋನ್ ಗಳಿಂದ ಆಯ್ಕೆಯಾದ ಪ್ರತಿಭೆಗಳ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಪ್ರಯುಕ್ತ ಖಿರಾಅತ್, ಭಾಷಣ, ಹಾಡು, ಪ್ರಬಂಧ ಸ್ಪರ್ಧೆ, ರಸಪ್ರಶ್ನೆ, ಚಿತ್ರಕಲಾ ಸ್ಪರ್ಧೆಗಳು ನಡೆಯಲಿದ್ದು, ಶೈಕ್ಷಣಿಕ ವಿಚಾರಗೋಷ್ಠಿ, ಆರೋಗ್ಯ ವಿಚಾರ ಸಂಕಿರಣ, ಆಧ್ಯಾತ್ಮಿಕ ಶಿಬಿರ, ಪಾಕಶಾಸ್ತ್ರ, ದಫ್ಫ್ ಸ್ಪರ್ಧೆ ಗಳು ಕಾರ್ಯಕ್ರಮಕ್ಕೆ ಆಕರ್ಷಣೆ ನೀಡಲಿದೆ. ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕವಾಗಿ ಹಲವು ಸ್ಪರ್ಧೆಗಳು ನಡೆಯಲಿದೆ.

ಸಂಜೆ 8 ಘಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಖ್ಯಾತ ಉದ್ಯಮಿ, ಸಮಾಜ ಸೇವಕರೂ, ತುಂಬೆ ಗ್ರೂಪ್ ಸ್ಥಾಪಕರಾದ ಡಾ. ತುಂಬೆ ಮೊಯಿದೀನ್ ಹಾಜಿ ಭಾಗವಹಿಸಲಿದ್ದು, ಕೆಸಿಎಫ್ ಯುಎಇ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸಅದಿ ಅಧ್ಯಕ್ಷತೆ ವಹಿಸಲಿದ್ದಾರೆ. ಹಿರಿಯ ಉದ್ಯಮಿಗಳಾದ ಬಿಎಂ ಅಶ್ರಫ್ ಮೊಹಿಯುದ್ದೀನ್ ಸಮಾರಂಭವನ್ನು ಉದ್ಘಾಟಿಸಲಿದ್ದು, ಉಜಿರೆ ಮಲ್ಜಹ್ ಸಂಸ್ಥೆಯ ಜನರಲ್ ಮ್ಯಾನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಉದ್ಯಮಿ ಅಬ್ದುಲ್ ರಝಾಕ್ ಹಾಜಿ, ಕರ್ನಾಟಕ ಎಂ ಆರ್ ಫೋರಮ್ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಶೈಖ್ ಅಮಲ್ ಮುನೀರ್ ದುಬೈ, ಹಾಜಿ ಬಿಕೆ ಫೈಝಲ್, ಬಿಎಂ ಶಬ್ಬಾರ್ ಸೇರಿದಂತೆ ಯುಎಇಯಲ್ಲಿರುವ ಹಿರಿಯ ಉದ್ಯಮಿಗಳು, ಧಾರ್ಮಿಕ ಮುಖಂಡರುಗಳು, ಸಾಮಾಜಿಕ ನಾಯಕರು ಭಾಗವಹಿಸಲಿದ್ದು, ಯುಎಇಯಲ್ಲಿರುವ ಎಲ್ಲಾ ಅನಿವಾಸಿ ಕನ್ನಡಿಗರು ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಕೆಸಿಎಫ್ ಯುಎಇ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಾಜೂರು, ಫ್ಯಾಮಿಲಿ ಫೆಸ್ಟ್ ಸ್ವಾಗತ ಸಮಿತಿಯ ಅಧ್ಯಕ್ಷ ಮುಹಮ್ಮದ್ ಇಕ್ಬಾಲ್ ಸಿದ್ದಕಟ್ಟೆ, ಕಾರ್ಯಾಧ್ಯಕ್ಷ ನವಾಝ್ ಕೋಟೆಕಾರ್, ಸ್ವಾಗತ ಸಮಿತಿ ಕೋಶಾಧಿಕಾರಿ ಖಾದರ್ ಸಾಲೆತ್ತೂರು,  ಕೆಸಿಎಫ್ ಯುಎಇ ಪಬ್ಲಿಶಿಂಗ್ ವಿಭಾಗದ ಅಧ್ಯಕ್ಷ ಹಾಜಿ ಝೈನುದ್ದೀನ್ ಬೆಳ್ಳಾರೆ, ಸಮದ್ ಬಿರಲಿ ಉಪಸ್ಥಿತರಿದ್ದರು.

Comments are closed.