ಗಲ್ಫ್

ನಟಿ ಶ್ರೀದೇವಿ ಸಾವಿಗೆ ಹೊಸ ತಿರುವು ! ಮರಣೋತ್ತರ ಪರೀಕ್ಷೆ ವರದಿಯಲ್ಲಿ ಏನಿದೆ…?

Pinterest LinkedIn Tumblr

ದುಬೈ: ದುಬೈನಲ್ಲಿ ಶನಿವಾರ ರಾತ್ರಿ ನಿಗೂಢವಾಗಿ ಸಾವನ್ನಪ್ಪಿರುವ ಶ್ರೀದೇವಿ ಸಾವಿನ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಶ್ರೀದೇವಿ ಆಕಸ್ಮಿಕವಾಗಿ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟಿದ್ದಾರೆಯೇ ಹೊರತು ಹೃದಯಾಘಾತದಿಂದಲ್ಲ ಎಂದು ಮರಣೋತ್ತರ ಪರೀಕ್ಷೆ ವರದಿ ದೃಢಪಡಿಸಿದೆ. ಜತೆಗೆ ಶ್ರೀದೇವಿ ಮೃತದೇಹದಲ್ಲಿ ಆಲ್ಕೋಹಾಲ್ ಅಂಶವೂ ಪತ್ತೆ ಯಾಗಿದೆ.

ಭಾನುವಾರ ಶ್ರೀದೇವಿ ಮೃತ ದೇಹವನ್ನು ಮರ ಣೋತ್ತರ ಪರೀಕ್ಷೆಗೆ ಒಳ ಪಡಿಸಲಾಗಿತ್ತು. ಸೋಮವಾರ ಈ ವರದಿ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಪಾಸ್​ಪೋರ್ಟ್ ಸಂಖ್ಯೆಯ ಜತೆಗೆ ಶ್ರೀದೇವಿ ಬೋನಿ ಕಪೂರ್ ಅಯ್ಯಪ್ಪನ್ ಎಂಬ ಸಂಪೂರ್ಣ ಹೆಸರಿನೊಂದಿಗೆ, ‘ಆಕಸ್ಮಿಕವಾಗಿ ಬಾತ್​ಟಬ್​ನಲ್ಲಿ ಮುಳುಗಿ ಮೃತಪಟ್ಟಿದ್ದಾರೆ’ ಎಂದು ಉಲ್ಲೇಖಿಸಲಾಗಿದೆ. ಜತೆಗೆ ಶ್ರೀದೇವಿ ಆಕಸ್ಮಿಕ ಸಾವಿನ ಹಿಂದೆ ದುಷ್ಕೃತ್ಯದ ಅನುಮಾನಗಳಿಲ್ಲ ಎಂದೂ ಉಲ್ಲೇಖಿಸಲಾಗಿದೆ.

ಈ ಮರಣೋತ್ತರ ಪರೀಕ್ಷಾ ವರದಿ ಬಗ್ಗೆಯೇ ಅನುಮಾನ ವ್ಯಕ್ತವಾಗುತ್ತಿದೆ. ಶ್ರೀದೇವಿ ಬಾತ್​ಟಬ್​ನಲ್ಲಿ ಆಕಸ್ಮಿಕವಾಗಿ ಮುಳುಗಿದರೋ ಅಥವಾ ಬಲವಂತವಾಗಿ ಮುಳುಗಿಸಲಾಗಿದೆಯೋ ಎಂಬುದು ಸ್ಪಷ್ಟವಾಗುವುದಿಲ್ಲ. ಅಲ್ಲದೆ, ವರದಿಗೆ ಡೈರೆಕ್ಟರ್ ಆಫ್ ಪ್ರಿವೆಂಟಿವ್ ಮೆಡಿಸಿನ್ ಸಹಿ ಹಾಕಿದ್ದಾರೆ. ಅಲ್ಲದೆ, ‘Accidental Drowning’ ಬದಲು ‘Accidental Drawning’ ಎಂದು ತಪ್ಪಾಗಿ ಬರೆಯಲಾಗಿದೆ. ಇದೆಲ್ಲವನ್ನು ಗಮನಿಸಿದರೆ, ಒಟ್ಟಾರೆ ಪ್ರಕರಣದ ಹಿಂದೆ ಯಾವುದೋ ಷಡ್ಯಂತ್ರ ಅಡಗಿರುವ ಶಂಕೆ ವ್ಯಕ್ತವಾಗುತ್ತಿದೆ.

3 ತಾಸು ವಿಚಾರಣೆ: ವಿದೇಶಿ ಪ್ರಜೆಯೊಬ್ಬರು ತಮ್ಮ ರಾಷ್ಟ್ರದಲ್ಲಿ ಆಕಸ್ಮಿಕವಾಗಿ ಮೃತಪಟ್ಟಿದ್ದಾರೆ ಎಂಬುದು ಮರಣೋತ್ತರ ಪರೀಕ್ಷೆಯಲ್ಲಿ ಖಚಿತವಾದ ಹಿನ್ನೆಲೆಯಲ್ಲಿ ಇದರ ತನಿಖೆಯನ್ನು ದುಬೈ ಸಾರ್ವಜನಿಕ ಅಭಿಯೋಜಕರಿಗೆ ವಹಿಸಲಾಗಿದೆ. ಈಗಾಗಲೇ ತನಿಖೆ ಆರಂಭಿಸಿರುವ ಅಭಿಯೋಕರು ಶ್ರೀದೇವಿಯನ್ನು ಜೀವಂತವಾಗಿ ಕೊನೆಯ ಬಾರಿಗೆ ನೋಡಿದ ಅವರ ಪತಿ ಬೋನಿ ಕಪೂರ್ ಅವರನ್ನು 3 ತಾಸು ವಿಚಾರಣೆಗೊಳಪಡಿಸಿದ್ದಾರೆ. ಹಾಗೇ ಹೋಟೆಲ್ ಸಿಬ್ಬಂದಿಯ ವಿಚಾರಣೆ ನಡೆಸಿದ್ದಾರೆ. ಶನಿವಾರ ರಾತ್ರಿ ಭೋಜನಕ್ಕಾಗಿ ಪತಿ ಬೋನಿ ಕಪೂರ್ ಜತೆ ಹೋಟೆಲ್​ಗೆ ತೆರಳಲು ಸಿದ್ಧರಾಗಲು ಶೌಚಗೃಹಕ್ಕೆ ತೆರಳಿದ್ದ ಶ್ರೀದೇವಿ ಹೃದಯಸ್ತಂಭನಕ್ಕೆ ಒಳಗಾಗಿ ಮೃತಪಟ್ಟಿದ್ದಾಗಿ ಹೇಳಲಾಗುತ್ತಿತ್ತು.

ಬೋನಿ ಕಪೂರ್ ಹೇಳಿದ್ದೇನು?: ಶನಿವಾರ ದುಬೈಗೆ ಮರಳಿದ್ದೆ. ಅವರ ಹೋಟೆಲ್ ಕೋಣೆಗೆ ಹೋಗಿ 15 ನಿಮಿಷ ಮಾತನಾಡಿದ್ದೆ. ಭೋಜನಕ್ಕಾಗಿ ಹೋಟೆಲ್​ಗೆ ಹೋಗಲು ನಿರ್ಧರಿಸಿದ ಬಳಿಕ ತಯಾರಾಗುವುದಾಗಿ ಹೇಳಿ ಶೌಚಗೃಹಕ್ಕೆ ತೆರಳಿದ್ದರು. 15 ನಿಮಿಷ ಕಳೆದರೂ ಶೌಚಗೃಹದಿಂದ ಹೊರಬರದಿದ್ದಾಗ, ಬಾಗಿಲು ಬಡಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಾರದ್ದರಿಂದ ಅನುಮಾನಗೊಂಡು ಬಾಗಿಲು ಮುರಿದು ಒಳಹೋದೆ. ಶ್ರೀದೇವಿ ಬಾತ್​ಟಬ್​ನಲ್ಲಿ ಬಿದ್ದಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದೆ. ಆದರೆ, ಹೋಟೆಲ್​ಗೆ ಬಂದ ವೈದ್ಯಕೀಯ ಮತ್ತು ಅರೆವೈದ್ಯಕೀಯ ಸಿಬ್ಬಂದಿ, ಶ್ರೀದೇವಿ ಮೃತಪಟ್ಟಿದ್ದಾಗಿ ಹೇಳಿದರು ಎಂದು ತಿಳಿಸಿದರು.

Comments are closed.