ಗಲ್ಫ್

ವ್ಯಾಟ್ ಜಾರಿಗೊಳಿಸಿದ ಸೌದಿ, ಯುಎಇ

Pinterest LinkedIn Tumblr

ದುಬೈ: ದೀರ್ಘ ಸಮಯದಿಂದ ತೆರಿಗೆ ಮುಕ್ತ ಆರ್ಥಿಕ ನೀತಿಯನ್ನು ಅನುಸರಿಸುತ್ತಿದ್ದ ಸೌದಿ ಅರೇಬಿಯ ಹಾಗೂ ಯುಎಇ , ಇದೇ ಮೊದಲ ಬಾರಿಗೆ ಸೋಮವಾರದಿಂದ ಮೌಲ್ಯ ವರ್ಧಿತ ತೆರಿಗೆ (ವ್ಯಾಟ್) ಪದ್ಧತಿಯನ್ನು ಜಾರಿಗೆ ತಂದಿದೆ.

ಸೌದಿಯಲ್ಲಿ ವ್ಯಾಟ್ ಹೇರಿಕೆಯಿಂದಾಗಿ ಪೆಟ್ರೋಲ್ ದರದಲ್ಲಿ ಶೇ.127 ರಷ್ಟು ಏರಿಕೆಯಾಗಿದೆ. ಆದರೆ ಡೀಸೆಲ್ ಹಾಗೂ ಸೀಮೆಎಣ್ಣೆ ಮೇಲಿನ ತೆರಿಗೆ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ಇತರ ನಾಲ್ಕು ಗಲ್ಫ್ ರಾಷ್ಟ್ರಗಳಾದ ಬಹರೈನ್, ಕುವೈತ್, ಒಮಾನ್ ಹಾಗೂ ಕತರ್ ಕೂಡಾ ವ್ಯಾಟ್ ಜಾರಿಗೊಳಿಸಲು ತಾವು ಬದ್ಧರಾಗಿರುವುದಾಗಿ ತಿಳಿಸಿವೆಯಾದರೂ, 2019ರ ಬಳಿಕ ಅದನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿವೆ. ಸೌದಿ ಅರೇಬಿಯದಲ್ಲಿ ಪೆಟ್ರೋಲ್ ತೆರಿಗೆಯಲ್ಲಿ ಏರಿಕೆಯಾಗುತ್ತಿರುವುದು ಕಳೆದ ಎರಡು ವರ್ಷಗಳಲ್ಲಿ ಇದು ಎರಡನೆ ಸಲವಾಗಿದೆ.

   ಕಳೆದ ತಿಂಗಳು ಸೌದಿ ಸರಕಾರವು ವಿದ್ಯುತ್ ಪೂರೈಕೆಯ ಮೇಲಿನ ಸಬ್ಸಿಡಿಯನ್ನು ಕಡಿತಗೊಳಿಸಿದ್ದರಿಂದ, ವಿದ್ಯುತ್‌ದರದಲ್ಲಿ ತೀವ್ರ ಏರಿಕೆಯಾಗಿದೆ.ಕಳೆದ ನಾಲ್ಕು ವಿತ್ತ ವರ್ಷಗಳಲ್ಲಿ ಸೌದಿ ಅರೇಬಿಯದ ಬಜೆಟ್‌ನಲ್ಲಿ ಒಟ್ಟು 260 ಶತಕೋಟಿ ಡಾಲರ್ ಕೊರತೆ ಕಂಡುಬಂದಿದೆ. ವರ್ಷದಿಂದ ವರ್ಷಕ್ಕೆ ಸಾರ್ವಜನಿಕ ಸಾಲ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೌದಿ ಅರೇಬಿಯ ಕಳೆದ ನಾಲ್ಕು ವರ್ಷಗಳಲ್ಲಿ ತನ್ನ ವಿತ್ತಸಂಗ್ರಹ (ರಿಸರ್ವ್)ದಿಂದ 250 ಶತಕೋಟಿ ಡಾಲರ್‌ಗಳನ್ನು ತೆಗೆದಿದ್ದು, ಇದರಿಂದಾಗಿ ಅದರ ಒಟ್ಟು ವಿತ್ತಸಂಗ್ರಹವು 490 ಶತಕೋಟಿ ಡಾಲರ್‌ಗೆ ಕುಸಿದಿದೆ. ಈ ಮಧ್ಯೆ ಅದು ಅಂತಾರಾಷ್ಟ್ರೀಯ ಹಾಗೂ ದೇಶೀಯ ಮಾರುಕಟ್ಟೆಗಳಿಂದ 100 ಶತಕೋಟಿ ಡಾಲರ್ ಸಾಲವನ್ನು ಕೂಡಾ ಪಡೆದುಕೊಂಡಿದೆ.

Comments are closed.