ಗಲ್ಫ್

ಮಾದರಿಯಾಗಿ ಜೀವಿಸಿ : ನೌಫಾಲ್ ಸಖಾಫಿ ಕಳಸ ಕರೆ

Pinterest LinkedIn Tumblr

ಕೇವಲ ಮನುಷ್ಯ ವರ್ಗಕ್ಕೆ ಮಾತ್ರವಲ್ಲ ಸಕಲ ಜೀವ ಸಂಕುಲಗಳ ಮೇಲೆ ಕರುಣೆ ಹಾಗೂ ಪ್ರೀತಿ ತೋರಲು ಅಂತ್ಯ ಪ್ರವಾದಿ ಮುಹಮ್ಮದ್ ಸಲ್ಲಲ್ಲಾಹು ಅಲೈಹಿ ವಸಲ್ಲಮರು ನಮಗೆ ಅನುಕರಣೀಯ ಮಾದರಿಯಾಗಿದ್ದಾರೆ ಎಂದು ಪ್ರವಾದಿ ಮುಹಮ್ಮದ್ (ಸ.) ರ ಜೀವನ ಚರಿತ್ರೆಯನ್ನು ಎಳೆ ಎಳೆಯಾಗಿ ವಿವರಿಸಿದ ಕರ್ನಾಟಕದ ಯುವ ಸುನ್ನೀ ವಿದ್ವಾಂಸ ಹಾಗೂ ಪ್ರಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ ಎಲ್ಲರೂ ಪ್ರವಾದಿ (ಸ.) ರನ್ನು ಮಾದರಿಯಾಗಿಸಿ ಜೀವಿಸಿದರೆ ಎಲ್ಲೆಲ್ಲೂ ಶಾಂತಿ ಸುಭಿಕ್ಷೆ ನೆಲೆಸುವುದೆಂದು ನುಡಿದರು.

ಅವರು ಕೆ ಸಿ ಎಫ್ ಅಲ್ ಐನ್ ಪ್ರಾಂತದ ವತಿಯಿಂದ ಜರಗಿದ ಮೆಹಫಿಲೇ ಮುಸ್ತಫಾ (ಸ) ಎಂಬ ಘೋಷವಾಕ್ಯದಲ್ಲಿ ನಡೆದ “ಸಹಿಷ್ಣುತೆಯ ಸಂದೇಶವಾಹಕ” ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿ ಪ್ರವಚನಗೈದರು.

ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತಿ ನಿರ್ಭರ ದುಆ ನಡೆಸಿದ ಉಳ್ಳಾಲ ಖಾಝಿಯಾಗಿರುವ ಸಯ್ಯದ್ ಕೂರ ತಂಗಳ್ ಅವರು ಸುನ್ನತ್ ಜಮಾಅತ್ ನ ದೃಢ ತಳಹದಿಯಲ್ಲಿ ನೆಲೆ ನಿಂತು ಜನರೊಟ್ಟಿಗೆ ಪರಸ್ಪರ ಪ್ರೀತಿ ವಿಶ್ವಾಸದೊಂದಿಗೆ ಬಾಳುವಂತೆ ಉಪದೇಶಿಸಿದರು.ಸಯ್ಯದ್ ಕೂರ ತಂಗಳ್ ಹಾಗೂ ಮುಹಮ್ಮದ್ ಹನೀಫಿ ಲತೀಫಿ ಇವರನ್ನು ಪ್ರಾಂತ ಸಮಿತಿಯ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಅಸ್ಸುಫ್ಫ ಪರೀಕ್ಷೆಯಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ತಂಗಳರು ಪ್ರಶಸ್ತಿ ಪತ್ರ ವಿತರಿಸಿದರು.

ಮುಹಮ್ಮದ್ ಹನೀಫಿ ಲತೀಫಿ ಉಸ್ತಾದರು ಈ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಪ್ರಾಂತ ಅಧ್ಯಕ್ಷರಾದ ಮುಸ್ತಾಕ್ ಮುಹಮ್ಮದ್ ತುಂಬೆ ವಹಿಸಿದ್ದರು.ಮೀಲಾದ್ ಸ್ವಾಗತ ಸಮಿತಿಯ ಅಧ್ಯಕ್ಷರಾದ ಅಬ್ದುರ್ರಜ್ಜಾಕ್ ಹಾಜಿ ಸ್ವಾಗತಿಸಿದರು. ಯು.ಎ. ಇ. ಕೆ ಸಿ ಎಫ್ ನ ರಾಷ್ಟ್ರೀಯ ನಾಯಕರುಗಳು ಅತಿಥಿಗಳಾಗಿ ಭಾಗವಹಿಸಿದ್ದರು. ಮೀಲಾದ್ ಸ್ವಾಗತ ಸಮಿತಿಯ ಕಾರ್ಯದರ್ಶಿಯಾದ ಅಬ್ದುರ್ರಹೀಮ್ ಸಕಲೇಶಪುರ ಕೊನೆಯಲ್ಲಿ ವಂದನಾರ್ಪಣೆಗೈದರು.

Comments are closed.