ಗಲ್ಫ್

4500 ಕೈದಿಗಳನ್ನು ಬಿಡುಗಡೆ ಮಾಡಿಸಿದ ಉದ್ಯಮಿ ಫಿರೋಝ್

Pinterest LinkedIn Tumblr

ದುಬೈ: ಪ್ಯೂರ್ ಗೋಲ್ಡ್ ಗ್ರೂಪ್ ಅಧ್ಯಕ್ಷ ಫಿರೋಝ್ ಮರ್ಚಂಟ್ ಅವರು ಗುಜರಾತ್ ಮೂಲದವರು. ಖ್ಯಾತ ಉದ್ಯಮಿಯಾಗಿರುವ ಅವರು ಇಲ್ಲಿಯ ತನಕ ವಿವಿಧ ಜೈಲುಗಳಲ್ಲಿ ಕೊಳೆಯುತ್ತಿದ್ದ 4500 ವಲಸಿಗ ಕೈದಿಗಳಿಗೆ ಅವರ ಸಾಲಗಳನ್ನು ತೀರಿಸಿ ಬಿಡುಗಡೆಯ ಭಾಗ್ಯವೊದಗಿಸಿದ್ದಾರೆ. ಇದೀಗ ಅವರು ಸಂಯುಕ್ತ ಅರಬ್ ಸಂಸ್ಥಾನದ ಕಾರಾಗೃಹಗಳಲ್ಲದೆ ಇತರ ದೇಶಗಳ ಕಾರಾಗೃಹಗಳಲ್ಲೂ ಸಣ್ಣಪುಟ್ಟ ತಪ್ಪುಗಳಿಗಾಗಿ ಜೈಲು ಶಿಕ್ಷೆಗೊಳಗಾಗಿ ಬಿಡುಗಡೆಗಾಗಿ ಹಣವಿಲ್ಲದೆ ಸಂಕಷ್ಟದಲ್ಲಿರುವ ಕೈದಿಗಳಿಗೂ ಸಹಾಯ ಮಾಡ ಬಯಸಿದ್ದಾರೆ.

ಅವರು ಇಲ್ಲಿಯ ತನಕ 4500 ಕೈದಿಗಳ ಬಿಡುಗಡೆಗೆ ಸಹಾಯ ಮಾಡಿದ್ದಾರೆಂದು ಅರಿತ ನಂತರ ಅವರಿಗೆ ಸಹಾಯಕ್ಕಾಗಿ ಮನವಿಗಳ ಮಹಾಪೂರವೇ ಹರಿದು ಬರುತ್ತಿದೆ.

ಸದ್ಯ ಅವರು ಈ ವರ್ಷದಲ್ಲಿ ವಲಸಿಗ ಕೈದಿಗಳನ್ನು ಬಿಡುಗಡೆ ಮಾಡುವ ಸಲುವಾಗಿ ಅವರ ಪಟ್ಟಿಯನ್ನು ಸಿದ್ಧಪಡಿಸಲು ಕೈದಿಗಳನ್ನು ಸ್ವತಹ ಭೇಟಿಯಾಗಿ ಅವರ ಸಮಸ್ಯೆ ಅರಿಯುವ ಪ್ರಯತ್ನ ಮಾಡುತ್ತಿದ್ದಾರೆ. ‘‘ನನ್ನ ಮೊದಲ ಆದ್ಯತೆ ಸಂಯುಕ್ತ ಅರಬ್‌ ಸಂಸ್ಥಾನದಲ್ಲಿರುವ ವಲಸಿಗ ಕೈದಿಗಳನ್ನು ಬಿಡುಗಡೆ ಮಾಡುವುದಕ್ಕಾಗಿ. ನಂತರ ಉಳಿದ ರಾಷ್ಟ್ರಗಳತ್ತ ನನ್ನ ಗಮನ ಹರಿಸುತ್ತೇನೆ,’’ ಎಂದು ಅವರು ಹೇಳುತ್ತಾರೆ.

ಈ ವರ್ಷ ಅವರು ತಮ್ಮ ಈ ಕಾರ್ಯಕ್ಕಾಗಿ ಒಂದು ಮಿಲಿಯನ್ ಡಾಲರ್ ಮೀಸಲಿರಿಸಿದ್ದಾರೆ. ಮುಂದಿನ ಕೆಲ ವಾರಗಳಲ್ಲಿ ಅಜ್ಮಾನ್, ಶಾರ್ಜಾ, ಉಮ್ಮ್ ಅಲ್ ಖುವೈನ್ ಹಾಗೂ ಫುಜಿರಾಹ್ ದಿಂದ ಇನ್ನೂ ಹಲ ಕೈದಿಗಳ ಬಿಡುಗಡೆಗೆ ಅವರು ಪ್ರಯತ್ನಿಸುತ್ತಿದ್ದಾರೆ. ಬಿಡುಗಡೆಯಾದವರಲ್ಲಿ ಹೆಚ್ಚಿನವರು ಪುರುಷರಾಗಿದ್ದರೆ ಕೆಲವು ಮಹಿಳೆಯರು ಮತ್ತು ಮಕ್ಕಳೂ ಬಿಡುಗಡೆಯ ಭಾಗ್ಯ ಕಂಡಿದ್ದಾರೆ.

ಈ ವರ್ಷದ ಆರಂಭದಿಂದ ಅವರು ಅಜ್ಮಾನ್ ಕೇಂದ್ರ ಕಾರಾಗೃಹದಿಂದ ಸುಮಾರು 132 ಕೈದಿಗಳ ಬಿಡುಗಡೆಗೆ ಕ್ರಮ ಕೈಗೊಂಡಿದ್ದು ಅವರ ಬಾಕಿ ಆಸ್ಪತ್ರೆ ಬಿಲ್, ಶಾಲಾ, ಕಾಲೇಜು ಫೀಸ್‌ಹಾಗೂ ಇತರ ಬಾಕಿ ಹಣವನ್ನು ಪಾವತಿಸಿ ಅವರಿಗೆ ತಮ್ಮ ಊರುಗಳಿಗೆ ಮರಳಲು ರಿಟರ್ನ್ ಟಿಕೆಟ್ ನೀಡಿ ಸಹಕರಿಸುತ್ತಿದ್ದಾರೆ.

ಫಿರೋಝ್ ಅವರು ಗುಲಾಮ್ ಹುಸೈನ್ ಎಂಬ ಸಣ್ಣ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರ ಪುತ್ರರಾಗಿದ್ದು ತಮ್ಮಹೆತ್ತವರ ಒಂಬತ್ತು ಮಕ್ಕಳಲ್ಲಿ ಒಬ್ಬರಾಗಿದ್ದಾರೆ. ತೀರಾ ಬಡ ಕುಟುಂಬದ ಅವರು 11 ವರ್ಷದವರಿರುವಾಗಲೇ ಶಾಲೆ ತೊರೆದಿದ್ದರು. ಕೆಲ ವರ್ಷಗಳ ಕಾಲ ತಂದೆಗೆ ಅವರ ಉದ್ಯಮದಲ್ಲಿ ಸಹಕರಿಸಿದ ಮರ್ಚೆಂಟ್ ನಂತರ ದುಬೈಗೆ1980ರ ದಶಕದಲ್ಲಿ ಬಂದು ಚಿನ್ನದ ಬ್ರೋಕರ್ ಆಗಿದ್ದರು. ಅವರ ಪರಿಶ್ರಮದ ಜೀವನದಿಂದಾಗ ಅವರು ನಂತರ ಪ್ಯೂರ್ ಗೋಲ್ಡ್ ಎಂಬ ರಿಟೇಲ್ ಜುವೆಲ್ಲರಿ ಸಂಸ್ಥೆಯನ್ನು ಸ್ಥಾಪಿಸಿದ್ದರು. ಪ್ರಸಕ್ತ ಈ ಸಂಸ್ಥೆಗೆ ಭಾರತ, ಶ್ರೀಲಂಕಾ, ಸಿಂಗಾಪುರ, ಫ್ರಾನ್ಸ್,ಓಮನ್, ಸೌದಿ ಅರೇಬಿಯಾ ಸಹಿತ ವಿವಿಧೆಡೆ 125 ಅತ್ಯಾಧುನಿಕ ಮಳಿಗೆಗಳಿವೆ.

Comments are closed.