ಕರಾವಳಿ

ಸಮುದ್ರಕ್ಕೆ ಹರಿಯುವ ನದಿ ನೀರು ತಡೆಹಿಡಿದು ಹೇಗೆ ಬಳಸಬಹುದು : ಕಾರ್ಯಾಗಾರ

Pinterest LinkedIn Tumblr

ಮಂಗಳೂರು, ಫೆಬ್ರವರಿ.8: ಸಮುದ್ರಕ್ಕೆ ಹರಿಯುವ ನದಿ ನೀರನ್ನು ಅಳಿವೆಬಾಗಿಲುಗಳ ಬಳಿ ಹೊಸತಂತ್ರಜ್ಞಾನದ ಮೂಲಕ ‘ತಡೆಹಿಡಿದು’ ಕುಡಿಯಲು ಮತ್ತು ಕೃಷಿಗೆ ಬಳಕೆ ಮಾಡುವ ಪ್ರಸ್ತಾವವೊಂದನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ನ ಎನರ್ಜಿ ಮತ್ತು ಮೆಕಾನಿಕಲ್ ಸೈನ್ಸಸ್ನ ಅಧ್ಯಕ್ಷ ಪ್ರೊ. ಟಿ.ಜಿ. ಸೀತಾರಾಮ ಹೇಳಿದರು.

ಡಾ. ಬಿ.ಆರ್.ಶೆಟ್ಟಿಯವರ ಬಿಆರ್‌ಎಸ್ ರಿಕ್ರಿಯೇಶನ್ ಪ್ರೈ.ಲಿ. ಇದರ ವತಿಯಿಂದ ಮಂಗಳವಾರ ನಗರದ ಖಾಸಗಿ ಹೊಟೇಲ್ನಲ್ಲಿ ‘ಸಮುದ್ರಕ್ಕೆ ಹರಿಯುವ ನೆರೆನೀರನ್ನು ತಡೆಹಿಡಿದು ಹೇಗೆ ಬಳಸಬಹುದು?’ ಎಂಬುದರ ಬಗ್ಗೆ ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ದ.ಕ.ಜಿಲ್ಲೆಯಲ್ಲಿ ನೀರಿನ ಕೊರತೆಯಿಲ್ಲ. ಆದರೆ ಅದನ್ನು ಬಳಸಿಕೊಳ್ಳಬೇಕಾದ ತಂತ್ರಜ್ಞಾನದಲ್ಲಿ ಕೊರತೆಯಿದೆ.

ಇದಕ್ಕೆ ಪರಿಹಾರ ಏನು? ಎಂಬುದರ ಬಗ್ಗೆ ಯೋಚಿಸದೆ ನೀರಿನ ಕೊರತೆಯಿದೆ ಎನ್ನುವುದು ಸರಿಯಲ್ಲ. ಮಂಗಳೂರಿನ 5 ಲಕ್ಷ ಜನರಿಗೆ ದಿನಕ್ಕೆ ಪ್ರತಿಯೊಬ್ಬರಿಗೆ 150 ಲೀ. ನೀರಿನಂತೆ ವರ್ಷಕ್ಕೆ 1 ಟಿಎಂಸಿ ನೀರು ಸಾಕು. ಈ ನೀರಿಗಾಗಿ ಅಲೆದಾಡುವ ಬದಲು ಸಮುದ್ರಕ್ಕೆ ಹರಿಯುವ ನದಿ ನೀರನ್ನು ತಡೆಹಿಡಿಯಬಹುದಾಗಿದೆ. ಅಂದರೆ ಅಳಿವೆಬಾಗಿಲು ಬಳಿ 14 ಕಿ.ಮೀ. ಉದ್ದದಲ್ಲಿ ಆಧುನಿಕ ತಂತ್ರಜ್ಞಾನ ಬಳಸಿ ತಡೆಗೋಡೆ ನಿರ್ಮಿಸಿ ನೀರನ್ನು ತಡೆಹಿಡಿಯಬಹುದು. ಹೀಗೆ ತಡೆಹಿಡಿದ ನೀರಿನಲ್ಲಿ ಶೇ.10ನ್ನು ಕುಡಿಯಲು ಬಳಸಿದರೆ ಉಳಿದವುಗಳನ್ನು ಕೃಷಿ-ಕೈಗಾರಿಕೆಗಳಿಗೆ ಬಳಸಬಹುದು ಎಂದು ಪ್ರೊ.ಟಿ.ಜಿ.ಸೀತಾರಾಮ ವಿವರಿಸಿದರು.

ಭವಿಷ್ಯದ ಹಿತದೃಷ್ಟಿಯಿಂದ 25 ಟಿಎಂಸಿ ನೀರು ಸಂಗ್ರಹ ಯೋಜನೆಗೆ ಸುಮಾರು 3,500 ಕೋ.ರೂ. ಬೇಕಾಗಬಹುದು. ನದಿ ಜೋಡಣೆ, ನದಿತಿರುವು ಇತ್ಯಾದಿ ದುಬಾರಿ ವೆಚ್ಚದ ಯೋಜನೆಗಳಾಗಿವೆ. ಈಗಾಗಲೆ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ಈ ಹೊಸ ಯೋಜನೆ ಯಶಸ್ವಿಯಾಗಿದೆ. ಭಾರತದಲ್ಲಿ 5 ಸಾವಿರ ಅಣೆಕಟ್ಟುಗಳಿವೆ. ಆ ಪೈಕಿ ಕರ್ನಾಟಕದಲ್ಲಿ 234 ಅಣೆಕಟ್ಟುಗಳಿವೆ. ಅಲ್ಲಲ್ಲಿ ಅಣೆಕಟ್ಟು ಕಟ್ಟುವುದಕ್ಕಿಂತ ನದಿನೀರನ್ನು ತಡೆಗಟ್ಟಿ ಸದ್ಬಳಕೆ ಮಾಡಬಹುದಾಗಿದೆ ಎಂದು ಸೀತಾರಾಮ ಹೇಳಿದರು.

ಕೇವಲ 4 ತಿಂಗಳಲ್ಲಿ ಗುರುಪುರ, ಕುಮಾರಧಾರ, ನೇತ್ರಾವತಿ ನದಿಯಿಂದ 120 ಟಿಎಂಸಿ ನೀರು ಸಮುದ್ರ ಪಾಲಾಗುತ್ತಿವೆ. ರಾಜ್ಯದ 6 ಕೋಟಿ ಜನರಿಗೆ 90 ಟಿಎಂಸಿ ನೀರಿನ ಅಗತ್ಯವಿದೆ. ಹಾಗಾಗಿ ನೇತ್ರಾವತಿ ನದಿಯ ನೀರನ್ನೇ ರಾಜ್ಯಕ್ಕೆ ಬಳಸಬಹುದಾಗಿದೆ. ಈ ಯೋಜನೆಯ ಪ್ರಸ್ತಾವನೆಯನ್ನು ಸರಕಾರಕ್ಕೆ ಸಲ್ಲಿಸಲಾಗಿದೆ. ಯೋಜನೆ ಜಾರಿಗೊಳಿಸುವುದಿದ್ದರೂ ಇದಕ್ಕೆ ಸಂಬಂಧಿಸಿದ ಡಿಪಿಆರ್ ಅನ್ನು ಸರಕಾರವೇ ತಯಾರಿಸಬೇಕಾಗಿದೆ ಎಂದು ಹೇಳಿದರು.

ಸಮುದ್ರಕ್ಕೆ ಹರಿಯುವ ನೆರೆನೀರನ್ನು ಬಳಕೆ ಮಾಡದಿದ್ದರೆ ಅದು ವ್ಯಯವಾಗಲಿದೆ. ಪ್ರವಾಹದ ನೀರನ್ನು ತಡೆಹಿಡಿದರೆ ಪರಿಸರಕ್ಕೆ ಹಾನಿಯಿಲ್ಲ, ನದಿಹರಿವಿಗೂ ತೊಂದರೆಯಿಲ್ಲ, ಮೀನುಗಾರಿಕೆಗೂ ಬಾಧಕವಿಲ್ಲ, ನದಿತಿರುವಿನ ಪ್ರಶ್ನೆಯೂ ಉದ್ಭವಿಸುವುದಿಲ್ಲ. ಜನರಿಗೆ, ಆಸ್ತಿಪಾಸ್ತಿಗೆ ಹಾನಿಯಿಲ್ಲ, ಪುನವರ್ಸತಿಯ ಪ್ರಶ್ನೆಯೂ ಉದ್ಭವಿಸುವುದಿಲ್ಲ, ನಗರ-ಹಳ್ಳಿಗಳಿಗೂ ಸಮಸ್ಯೆಯಿಲ್ಲ, ಕುಡಿಯುವ ನೀರು ಸಹಿತ ಕೃಷಿ-ಕೈಗಾರಿಕೆಗೆ ಯಥೇಚ್ಛ ನೀರು ಲಭಿಸಲಿದೆ, ಹೊಸ ಮೀನುಗಾರಿಕಾ ಬಂದರು ಸ್ಥಾಪನೆಗೆ ಅವಕಾಶ ಸಿಗಲಿದೆ, ಸೋಲಾರ್ ಪವರ್ ಯೋಜನೆ ಅನುಷ್ಠಾನಗೊಳಿಸಬಹುದು, ಜಲಕ್ರೀಡೆಗಳಿಗೂ ಅವಕಾಶ ನೀಡಬಹುದು, ಮರಳು ಸಂಗ್ರಹಗೊಂಡಲ್ಲಿ ಅದನ್ನೂ ಬಳಕೆ ಮಾಡಬಹುದು ಎಂದರು.

ಯೋಜನೆ ವಿರುದ್ಧ ಅಪಸ್ವರ : ಪ್ರೊ. ಟಿ.ಜಿ.ಸೀತಾರಾಮ ಪ್ರಾತ್ಯಕ್ಷಿತೆಯೊಂದಿಗೆ ಯೋಜನೆಯ ಬಗ್ಗೆ ಮಾಹಿತಿ ನೀಡಿದ ಬಳಿಕ ನಡೆದ ಪ್ರಶ್ನೋತ್ತರ ಸಂದರ್ಭ ಎನ್‌ಐಟಿಕೆ ನಿವೃತ್ತ ಪ್ರೊ. ಎಸ್. ಜಿ. ಮಯ್ಯ ಈ ಯೋಜನೆಯನ್ನೇ ಖಂಡಿಸಿದರು. ಇದೊಂದು ಅವೈಜ್ಞಾನಿಕ ಯೋಜನೆಯಾಗಿದೆ. ನೇತ್ರಾವತಿ ನದಿಯಲ್ಲಿ ಸಾಕಷ್ಟು ನೀರಿದೆ ಎಂದು ಯಾವ ಆಧಾರದಲ್ಲಿ ಹೇಳುತ್ತೀರಿ? ಅರ್ಥಹೀನ ಮಾತುಗಳ ಮೂಲಕ ಜಿಲ್ಲೆಯ ಜನರನ್ನು ಯಾಕೆ ಗೊಂದಲಕ್ಕೆ ಸಿಲುಕಿಸುತ್ತೀರಿ? ಎಂದು ಪ್ರಶ್ನಿಸಿ ತೀವ್ರ ತರಾಟೆಗೆ ತೆಗೆದುಕೊಂಡರು.

ವರದಿ ಕೃಪೆ : ವಾರ್ತಾಭಾರತಿ

Comments are closed.