ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಜ.9: ಇಲ್ಲಿ ಕೇಳುತ್ತಿದ್ದದ್ದು ಕೇವಲ ನಗೆಯ ಅಲೆ…ಯುಎಇಯಲ್ಲಿರುವ ಜನ ಬಿದ್ದುಬಿದ್ದು ನಕ್ಕಿದ್ದೇ ನಕ್ಕಿದ್ದು. ಈ ರೀತಿ ಜನರನ್ನು ತುದಿಗಾಲಲ್ಲಿ ನಿಂತು ನಗುವಂತೆ ಮಾಡಿದ ವ್ಯಕ್ತಿ ಯಾರು ಗೊತ್ತಾ ! ಹಾಸ್ಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಬಾಲಿವುಡ್ ನಟ ಜಾನಿ ಲಿವರ್ ಹಾಗೂ ಅವರ ಪುತ್ರಿ ಜಮಿ ಲಿವರ್.
ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ಹಾಡುಗಾರರೂ ಆಗಿರುವ ಹರೀಶ್ ಶೇರಿಗಾರ್ ಸಾರಥ್ಯದಲ್ಲಿ ದುಬೈಯ ಇಂಡಿಯನ್ ಹೈಸ್ಕೂಲ್ನ ಶೇಖ್ ರಶೀದ್ ಆಡಿಟೋರಿಯಂನಲ್ಲಿ ಮೂರನೇ ಬಾರಿಗೆ ಶುಕ್ರವಾರ ಸಂಜೆ ಮೂಡಿಬಂದ ‘ಧೂಮ್ ಧಮಾಕ-2016’ ಕಾಮಿಡಿ ಶೋ ನಗೆಯ ಹಬ್ಬದಂತೆ ಭಾಸವಾಯಿತು. ಜಾನಿ ಲಿವರ್ರ ಹಾಸ್ಯವಂತೂ ಕಾರ್ಯಕ್ರಮದ ಆರಂಭದಿಂದ ಕೊನೆಯ ವರೆಗೆ ಜನ ಸಭಾಂಗಣದಿಂದ ಹೊರಹೊಗದಂತೆ ಮಾಡಿತು. ಜಾನಿ ಲಿವರ್ನ ಕಾರ್ಯಕ್ರಮ ನೋಡಲು ಜನ ಮುಗಿಬಿದ್ದ ಕಾರಣ ಸಭಾಂಗಣ ಸಂಪೂರ್ಣ ತುಂಬಿತ್ತು.
ಜಾನಿ ಲಿವರ್ರ ಪ್ರತಿಯೊಂದು ಹಾಸ್ಯದಲ್ಲಿಯೂ ಸಾಮಾಜಿಕ ಕಳಕಳಿಯನ್ನು ಬಿತ್ತುವ ಸಂದೇಶವಿತ್ತು. ಸಮಾಜದಲ್ಲಿ ನಡೆಯುವ ವಿಷಯಗಳನ್ನು ತಮ್ಮ ಹಾಸ್ಯದ ಮೂಲಕ ವ್ಯಕ್ತಪಡಿಸಿದ ರೀತಿಯಂತೂ ಅದ್ಭುತವಾಗಿತ್ತು. ಈ ಮೂಲಕ ಬಹಳ ಯಶಸ್ವಿಯಾಗಿ ನಡೆದ ‘ಧೂಮ್ ಧಮಾಕ-2016’ನ್ನು ವೀಕ್ಷಿಸಿದ ಜನ ಸಂತಸವನ್ನು ಹಂಚಿಕೊಂಡರು.
ಹಾಸ್ಯದ ಹೊನಲುಹರಿಸಿದ ನಟ ಜಾನಿ ಲಿವರ್ ಹಾಗೂ ಪುತ್ರಿ ಜಮಿ ಲಿವರ್, ಜನರನ್ನು ತಮ್ಮ ಆಸನಬಿಟ್ಟು ಕದಡದಂತೆ ಮಾಡಿತು. ಜಾನಿ ಲಿವರ್ ವೇದಿಕೆಗೆ ಬರುತ್ತಿದ್ದಂತೆ ಜನರ ಸೀಟಿ-ಕೈ ಚಪ್ಪಾಳೆ, ಅಭಿಮಾನದ ಜೈಕಾರ ಮೊಳಗಿದವು. ಜಾನಿಯ ಒಂದೊಂದು ಹಾಸ್ಯದ ಮಾತಿಗೂ ಜನ ಹೊಟ್ಟೆ ತುಂಬಾ ನಕ್ಕರು.
ವಿವಿಧ ಭಂಗಿಯ ಹಾಸ್ಯವನ್ನು ತನ್ನ ಹಾಸ್ಯಭರಿತ ನಟನಾ ಕೌಶಲ್ಯದ ಮೂಲಕ ಜಾನಿಲಿವರ್ ಜನರನ್ನು ರಂಜಿಸಿದರು. ಡ್ಯಾನ್ಸ್ ಎಂಬುದು ಒಂದು ರೀತಿಯ ಹುಟುಕಾಟ ನಡೆಸುವಂಥದ್ದು, ಹಿಂದಿನಿಂದ ಇಲ್ಲಿಯ ವರೆಗೆ ಸಿನೆಮಾ ನಟರು ತಮ್ಮ ಡ್ಯಾನ್ಸ್ ಮೂಲಕ ಹುಟುಕಾಡುವ ರೀತಿಯನ್ನು ತಮ್ಮದೇ ಹಾಸ್ಯಶೈಲಿಯಲ್ಲಿ ತೋರಿಸಿದ ಜಾನಿಲಿವರ್, ನೆರೆದವರನ್ನು ನಗೆಗಡಲಲ್ಲಿ ತೇಲುವಂತೆ ಮಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ತುಳುವಿನಲ್ಲಿ ಎಂಚ ಉಲ್ಲರ್…ಪೂರಕುಲು ಸೌಖ್ಯತಾ(ಹೇಗಿದ್ದೀರಿ…ಎಲ್ಲರೂ ಸೌಖ್ಯವಾಗಿದ್ದೀರಲ್ಲ) ಎಂದು ತಮ್ಮ ಹಾಸ್ಯದ ಮಾತನ್ನು ಮುಂದುವರಿಸಿದ ಜಾನಿ ಲಿವರ್, ಕುಟುಕರ, ಮಹಿಳೆ ಹಾಗೂ ಪುರುಷರ ದಿನನಿತ್ಯದ ಆಗುಹೋಗುಗಳ ಬಗ್ಗೆ ಹಾಸ್ಯಭರಿತ ನಟನೆಯ ಮೂಲಕ ಹೊಟ್ಟೆ ತುಂಬಾ ನಗಿಸಿದರು.
ಜಾನಿ ಲಿವರ್ನೊಂದಿಗೆ ಪುತ್ರಿ ಜಮಿ ಲಿವರ್ ಹಾಗೂ ಗೌರವ್ ಶರ್ಮ ತಾವೂ ಕೂಡಾ ಹಾಸ್ಯದ ವಿಷಯದಲ್ಲಿ ಕಮ್ಮಿ ಇಲ್ಲ ಎಂಬುದ್ನು ಸಾಭೀತುಪಡಿಸಿದರು. ಇದಕ್ಕೂ ಮೊದಲು ಅಂತಾರಾಷ್ಟ್ರೀಯ ಖ್ಯಾತ ನೃತ್ಯ ಪಟುಗಳಾದ ಪ್ರಥಮ ಪ್ರಸಾದ್ ರಾವ್ ಮತ್ತು ಸೂರ್ಯ ಎನ್.ರಾವ್ ಅವರ ಸಮ್ಮಿಲನ ನೃತ್ಯರೂಪಕ ಕೂಡಾ ಪ್ರದರ್ಶನಗೊಂಡಿತು. ಜೊತೆಗೆ ಗಾಯಕರಾದ ಹರೀಶ್ ಶೇರಿಗಾರ್, ಅಕ್ಷತಾ ರಾವ್, ವಿಜಯ ಭಟ್ ತಮ್ಮ ಸುಮಧುರ ಕಂಠದ ಮೂಲಕ ಹಾಡಿ ನೆರೆದವರನ್ನು ಉಲ್ಲಾಸಭರಿತರನ್ನಾಗಿಸಿದರು.
ದೀಪ ಬೆಳಗಿಸುವ ಮೂಲಕ ‘ಧೂಮ್ ಧಮಾಕ-2016’ಕ್ಕೆ ಚಾಲನೆ
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ‘ಧೂಮ್ ಧಮಾಕ-2016’ ಕ್ಕೆ ಚಾಲನೆ ನೀಡಿದರು. ಗಣ್ಯರು ಹಾಗೂ ಉದ್ಯಮಿಗಳಾದ ಅಬ್ದುಲ್ ಗಫಾರ್, ಮೆಹ್ತಾ, ಧರ್ಮೇಶ್ ಪಟೇಲ್, ವಿಜಯ್ ನೆಹ್ಲಾನಿ, ನರೇನ್ ಸವ್ಲಾನಿ, ಸುನಿಲ್ ಗ್ರೋವರ್, ಮೈಕಲ್, ರೇಡಿಯೋ ಸ್ಪೈಸ್ನ ಹರ್ಮನ್ ಲೂಯಿಸ್, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಅಬುಧಾಬಿ ಕರ್ನಾಟಕ ಸಂಘದ ಸರ್ವೋತಮ ಶೆಟ್ಟಿ, ಕಾರ್ಯಕ್ರಮದ ಆಯೋಜಕರಾದ ಹರೀಶ್ ಶೇರಿಗಾರ್ ಹಾಗೂ ಅವರ ಧರ್ಮಪತ್ನಿ ಶರ್ಮಿಳಾ ಶೇರಿಗಾರ್, ಮಕ್ಕಳಾದ ಅಕ್ಷತಾ ಶೇರಿಗಾರ್ ಮತ್ತು ಅಂಶುಲ್ ಶೇರಿಗಾರ್ ಈ ವೇಳೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ರೇಡಿಯೋ ಸ್ಪೈಸ್ನ ಆರ್.ಜೆ.ವೇದ್, ಆರ್.ಜೆ.ಕರೀಮ ಹಾಗೂ ಅರ್ಲ್ ಜೋಸೆಫ್ ಅಚ್ಚುಕಟ್ಟಾಗಿ ನಿರೂಪಿಸಿದರು.